ಹೆಲ್ಪ್ ಮಾಡ್ಬೇಕಾದ ಬ್ಯಾಂಕ್‌ಗಳೇಕೆ 'ಹೆಲ್ಪ್ ಅಸ್' ಅಂತಿವೆ?

By Web DeskFirst Published Dec 24, 2018, 4:41 PM IST
Highlights

ಲಕ್ಷಾಂತರ ಕೋಟಿ ರೂ. ಆಸ್ತಿ ಹೊಂದಿರುವ ಬ್ಯಾಂಕ್‌ಗಳಿಗೆ ಸರ್ಕಾರ ಏಕೆ ಹಣ ನೀಡಬೇಕು? ಬೇರೆ ದೇಶದಲ್ಲೂ ಹೀಗೆ ಮಾಡುತ್ತಾರೆಯೇ? ವಿಸ್ತೃತ ಮಾಹಿತಿ ಇಲ್ಲಿದೆ. ಪ್ರಮುಖವಾಗಿ ಸುಸ್ತಿ ಸಾಲ ಯದ್ವಾತದ್ವಾ ಏರಿರುವುದರ ಎಫೆಕ್ಟ್ ಇದು. ದೇಶದಲ್ಲಿ 21 ರಾಷ್ಟ್ರೀಕೃತ ಬ್ಯಾಂಕ್‌ಗಳಿವೆ. ಇವು 8.5 ಲಕ್ಷ ಕೋಟಿ ರೂ. ಕೆಟ್ಟ ಸಾಲದ ಸಮಸ್ಯೆ ಎದುರಿಸುತ್ತಿವೆ.

ಬೆಂಗಳೂರು(ಡಿ.24): ಸಂಕಷ್ಟದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ 83,000 ಕೋಟಿ ರು. ನೆರವು ನೀಡುವುದಾಗಿ ಘೋಷಿಸಿದೆ. ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿದ್ದ ರಾಷ್ಟ್ರೀಕೃತ ಬ್ಯಾಂಕುಗಳು, ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಡಿವಿಡೆಂಡ್ ನೀಡುತ್ತಿದ್ದವು. ಈಗ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರವೇ ಅವುಗಳಿಗೆ ಪ್ರತಿ ವರ್ಷ ಪ್ಯಾಕೇಜ್ ನೀಡಿ ಜೀವದ್ರವ್ಯ ತುಂಬುತ್ತಿದೆ.

ಎಲ್ಲರಿಗೂ ಹಣ ನೀಡುವ ಬ್ಯಾಂಕ್‌ಗಳಿಗೇ ಏಕೆ ಬಡತನ ಬಂದಿದೆ?:

ಲಕ್ಷಾಂತರ ಕೋಟಿ ರೂ. ಆಸ್ತಿ ಹೊಂದಿರುವ ಬ್ಯಾಂಕ್‌ಗಳಿಗೆ ಸರ್ಕಾರ ಏಕೆ ಹಣ ನೀಡಬೇಕು? ಬೇರೆ ದೇಶದಲ್ಲೂ ಹೀಗೆ ಮಾಡುತ್ತಾರೆಯೇ? ವಿಸ್ತೃತ ಮಾಹಿತಿ ಇಲ್ಲಿದೆ. ಪ್ರಮುಖವಾಗಿ ಸುಸ್ತಿ ಸಾಲ ಯದ್ವಾತದ್ವಾ ಏರಿರುವುದರ ಎಫೆಕ್ಟ್ ಇದು. ದೇಶದಲ್ಲಿ 21 ರಾಷ್ಟ್ರೀಕೃತ ಬ್ಯಾಂಕ್‌ಗಳಿವೆ. ಇವು 8.5 ಲಕ್ಷ ಕೋಟಿ ರೂ. ಕೆಟ್ಟ ಸಾಲದ ಸಮಸ್ಯೆ ಎದುರಿಸುತ್ತಿವೆ.

ಕೆಟ್ಟ ಸಾಲ ಅಂದರೆ ಸಾಲ ಪಡೆದವರು ಬ್ಯಾಂಕಿಗೆ ಮರುಪಾವತಿ ಮಾಡದಿರುವ ಹಣ. ವಿಜಯ್ ಮಲ್ಯ ಮರುಪಾವತಿ ಮಾಡದ 9 ಸಾವಿರ ಕೋಟಿ ರೂ. ನೀರವ್ ಮೋದಿ ಟೋಪಿ ಹಾಕಿದ 14 ಸಾವಿರ ಕೋಟಿ ರೂ.ಗಳೆಲ್ಲ ಸುಸ್ತಿ ಸಾಲಗಳು. ಇದಕ್ಕೆ ಎನ್‌ಪಿಎ (ನಾನ್ ಪರ್ಫಾರ್ಮಿಂಗ್ ಅಸೆಟ್) ಎಂದೂ ಹೇಳುತ್ತಾರೆ.

ಮೋದಿ ಸರ್ಕಾರ ಬರುವವರೆಗೆ ಸುಸ್ತಿ ಸಾಲವನ್ನು ಹೊರಗಿಟ್ಟು ಬ್ಯಾಂಕ್‌ಗಳು ಪ್ರತಿ ತ್ರೈಮಾಸಿಕದಲ್ಲಿ ಬ್ಯಾಲೆನ್ಸ್ ಶೀಟ್ ತೋರಿಸುತ್ತಿದ್ದವು. ಹಾಗಾಗಿ ಎಲ್ಲ ಬ್ಯಾಂಕ್‌ಗಳೂ ಲಾಭದಲ್ಲಿದ್ದಂತೆ ತೋರುತ್ತಿತ್ತು. ಆದರೆ, ಒಳಗೊಳಗೇ ಸುಸ್ತಿಸಾಲದ ಹುಳುಕು ವ್ರಣವಾಗಿ ಬ್ಯಾಂಕ್‌ಗಳು ನಷ್ಟದಲ್ಲಿ ಮುಳುಗಿದ್ದವು.

ಹೀಗಾಗಿ ಬ್ಯಾಂಕ್‌ಗಳ ನಿಜವಾದ ಆರ್ಥಿಕ ಚಿತ್ರಣ ಎಲ್ಲರಿಗೂ ತಿಳಿಯಲಿ ಮತ್ತು ಅದನ್ನು ಸರಿಪಡಿಸುವ ಪ್ರಕ್ರಿಯೆಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆ ಬ್ಯಾಂಕ್‌ಗಳು ಸುಸ್ತಿಸಾಲವನ್ನೂ ಲೆಕ್ಕಕ್ಕೆ ಪರಿಗಣಿಸಿಯೇ ಬ್ಯಾಲೆನ್ಸ್ ಶೀಟ್ ತೋರಿಸಬೇಕು ಎಂದು ನಿಯಮ ರೂಪಿಸಿತು. ಅಂದಿನಿಂದ ಬ್ಯಾಂಕ್‌ಗಳ ನಿಜವಾದ ಬಣ್ಣ ಬಯಲಾಗತೊಡಗಿತು. ಅವುಗಳನ್ನು ಆರ್ಥಿಕವಾಗಿ ಮೇಲೆತ್ತಲು ಕೇಂದ್ರ ಸರ್ಕಾರ 2014ರಿಂದ ಪ್ರತಿ ವರ್ಷ ಬ್ಯಾಂಕ್‌ಗಳಿಗೆ ಆರ್ಥಿಕ ಪ್ಯಾಕೇಜ್ ನೀಡುತ್ತಾ ಬಂದಿದೆ.

ಇಲ್ಲಿಯವರೆಗೆ ಬ್ಯಾಂಕ್‌ಗಳಿಗೆ ಕೇಂದ್ರ ಕೊಟ್ಟಿದ್ದೇಷ್ಟು?:

ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ನಷ್ಟದಿಂದ ಮೇಲೆತ್ತಲು 2015ರ ಬಜೆಟ್ ನಲ್ಲಿ ಇಂದ್ರಧನುಷ್ ಎಂಬ ಯೋಜನೆ ಘೋಷಿಸಲಾಯಿತು. ಅದರಲ್ಲಿ, ಬ್ಯಾಂಕ್‌ಗಳ ಆಡಳಿತದಲ್ಲಿ ಬದಲಾವಣೆ ತರುವುದು, ಸುಸ್ತಿಸಾಲ ಕಡಿಮೆ ಮಾಡುವುದು, ನೌಕರರು ಚುರುಕಾಗಿ ಕೆಲಸ ಮಾಡುವಂತೆ ಮಾಡಲು ಅವರಿಗೂ ಬ್ಯಾಂಕಿನ ಷೇರು ನೀಡುವುದು ಹಾಗೂ ಮುಂದಿನ 4 ವರ್ಷ ಒಟ್ಟು 70,000 ಕೋಟಿ ರೂ.. ನೀಡುವುದು ಮುಂತಾದವು ಸೇರಿದ್ದವು.

ಆದರೆ, ಕೇಂದ್ರ ಸರ್ಕಾರ ಅಷ್ಟು ಹಣ ನೀಡಿದ ಮೇಲೂ ಬ್ಯಾಂಕ್‌ಗಳ ಸ್ಥಿತಿ ಸುಧಾರಿಸದೆ ಇರುವುದರಿಂದ ಮತ್ತೆ 83,000 ಕೋಟಿ ರೂ. ಮೆಗಾ ಪ್ಯಾಕೇಜ್ ಘೋಷಿ ಸಿದೆ. 2014ಕ್ಕಿಂತ ಮುಂಚೆ ಬ್ಯಾಂಕ್‌ಗಳು ಸಾವಿರಾರು ಕೋಟಿ ರೂ. ಲಾಭ ತೋರಿಸುತ್ತಿದ್ದಾಗಲೂ ಕೇಂದ್ರ ಸರ್ಕಾರ ಬ್ಯಾಂಕ್‌ಗಳ ನಷ್ಟ ತುಂಬಿಕೊಡಲು ಹಣ ನೀಡುತ್ತಿತು.

ಬ್ಯಾಂಕ್‌ಗಳಿಗೆ ಸರ್ಕಾರವೇಕೆ ಪ್ಯಾಕೇಜ್ ನೀಡಬೇಕು?:

ನಷ್ಟದಲ್ಲಿರುವ ಬ್ಯಾಂಕ್‌ಗಳಿಗೆ ಸರ್ಕಾರ ನೀಡುವ ನೆರವಿನ ಹಣವನ್ನು ಬಂಡವಾಳ ಮರುಪೂರಣ ಎನ್ನುತ್ತಾರೆ. ಕೇಂದ್ರ ಸರ್ಕಾರ ಹಣ ನೀಡುತ್ತಿರುವುದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮಾತ್ರ. ನಮ್ಮ ದೇಶದಲ್ಲಿರುವ 21 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೇ.51ಕ್ಕಿಂತ ಹೆಚ್ಚು ಷೇರು ಕೇಂದ್ರ ಸರ್ಕಾರದ್ದಿರುವುದರಿಂದ ಕೇಂದ್ರ ಸರ್ಕಾರವೇ ಈ ಬ್ಯಾಂಕ್‌ಗಳಿಗೆ ಮಾಲಿಕ.

ನಷ್ಟವಾದರೆ ಖಾಸಗೀಕರಣ ಏಕೆ ಮಾಡಿಲ್ಲ?:

1969ರವರೆಗೆ ನಮ್ಮ ದೇಶದಲ್ಲಿದ್ದ ಬ್ಯಾಂಕ್‌ಗಳೆಲ್ಲ ಖಾಸಗಿ ಬ್ಯಾಂಕ್‌ಗಳೇ ಆಗಿದ್ದವು. ಅವು ಸರ್ಕಾರದ ಯೋಜನೆಗಳಿಗೆ ಪೂರಕವಾಗಿ ಕೆಲಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದರು. ಇಂದು ದೇಶದಲ್ಲಿ ಶೇ.70ರಷ್ಟು ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳು ನೀಡುತ್ತವೆ. ದೇಶದ ಅಭಿವೃದ್ಧಿಗೆ ಈ ಸಾಲ ಬಹಳ ಮುಖ್ಯ.

ಖಾಸಗಿ ಬ್ಯಾಂಕ್‌ಗಳು ಲಾಭವನ್ನೊಂದೇ ನೋಡುತ್ತವೆ. ಹಾಗಾಗಿ ಕೇಂದ್ರ ಸರ್ಕಾರ ನಾಲ್ಕೈದು ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸಿ ದೊಡ್ಡ ದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳನ್ನೇ ಸೃಷ್ಟಿಸುತ್ತಿದೆಯೇ ಹೊರತು ಖಾಸಗೀಕರಣ ಮಾಡುತ್ತಿಲ್ಲ.

ಕೊಟ್ಟ ಹಣ ವಾಪಸ್ ಬರುತ್ತದೆಯೇ?:

ಕೇಂದ್ರ ಸರ್ಕಾರ ಬ್ಯಾಂಕ್‌ಗಳಿಗೆ ನೀಡುವುದು ಜನರ ತೆರಿಗೆ ಹಣ. ಬ್ಯಾಂಕ್‌ಗಳು ಜನರಿಗೆ ಸಾಲ ನೀಡಿದರೆ ಹೇಗೆ ವಸೂಲಿ ಮಾಡುತ್ತವೆಯೋ ಹಾಗೆಯೇ ಕೇಂದ್ರ ಸರ್ಕಾರ ಬ್ಯಾಂಕ್‌ಗಳಿಗೆ ನೀಡುವ ಹಣ ಮುಂದೊಂದು ದಿನ ಸರ್ಕಾರಕ್ಕೆ ವಾಪಸ್ ಬರುತ್ತದೆಯ? ೨೦೦೨ರಲ್ಲಿ ಯುಟಿಐ ಬ್ಯಾಂಕ್ ದಿವಾಳಿಯಾಗುತ್ತಿದ್ದಾಗ ಸರ್ಕಾರ 14,500 ಕೋಟಿ ರೂ.. ನೀಡಿ ಹೂಡಿಕೆದಾರರನ್ನು ಕಾಪಾಡಿತ್ತು.

ನಂತರ ಯುಟಿಐ ಇಬ್ಭಾಗವಾಗಿ ಒಂದು ಭಾಗ ಮ್ಯೂಚುವಲ್ ಫಂಡ್ ಆಯಿತು, ಇನ್ನೊಂದು ಭಾಗ ಖಾಸಗಿ ಒಡೆತನದ ಎಕ್ಸಿಸ್ ಬ್ಯಾಂಕ್ ಆಯಿತು. ಈಗಲೂ ಎಕ್ಸಿಸ್ ಬ್ಯಾಂಕಿನಲ್ಲಿ ಸರ್ಕಾರದ ಷೇರುಗಳಿವೆ. ಅದನ್ನು ಮಾರಾಟ ಮಾಡಿದರೆ ಕೇಂದ್ರ ಸರ್ಕಾರ ೧೫ ವರ್ಷದ ಹಿಂದೆ ಹಾಕಿದ್ದ ಬಂಡವಾಳ ವಾಪಸ್ ಸಿಗುತ್ತದೆ. ಹಾಗಂತ

ಈಗ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರ್ಕಾರ ನೀಡುತ್ತಿರುವ ಹಣ ವಾಪಸ್ ಬರುತ್ತದೆ ಎಂದು ಖಚಿತವಾಗಿ ಹೇಳಲಾಗದು.

ನಷ್ಟಕ್ಕೆ ಇದೆ ಮತ್ತೊಂದು ಕಾರಣ:

ಬ್ಯಾಂಕ್‌ಗಳ ನಷ್ಟದಲ್ಲಿ ಆರ್ಥಿಕ ಹಾಗೂ ಆಡಳಿತಾತ್ಮಕ ಕಾರಣಗಳ ಪಾಲು ಎಷ್ಟಿದೆಯೋ ಅಷ್ಟೇ ಈ ಬ್ಯಾಂಕ್‌ಗಳ ನೌಕರರ ಕಾರ್ಯದಕ್ಷತೆಯ ಕೊರತೆಯೂ ಇದೆ. ಆದರೂ ರಾಷ್ಟ್ರೀಕೃತ ಬ್ಯಾಂಕ್‌ಗಳು 2018ರಲ್ಲಿ ತಮ್ಮ ನೌಕರರ ವೇತನವನ್ನು ಸರಾಸರಿ ಶೇ.9.7ರಷ್ಟು ಹೆಚ್ಚಿಸಿವೆ. ಇಂದು ನಮ್ಮ ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರ ಸರಾಸರಿ ವೇತನ (ನೌಕರರಿಗೆ ಬ್ಯಾಂಕು ಮಾಡುವ ಖರ್ಚು- ಸಿಟಿಸಿ) ವರ್ಷಕ್ಕೆ 11.48 ಲಕ್ಷ ರೂ. ಇದೆ.

ಈ ವೇಳೆ ಖಾಸಗಿ ಬ್ಯಾಂಕ್‌ಗಳ ನೌಕರರ ವೇತನ ಶೇ.2.6ರಷ್ಟು ಹೆಚ್ಚಾಗಿದೆ ಮತ್ತು ಅವರ ವೇತನ 7.7 ಲಕ್ಷ ರೂ. ಇದೆ. ಹಗರಣಪೀಡಿತ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೌಕರರ ವೇತನ 2018ರಲ್ಲಿ ಶೇ.64.5ರಷ್ಟು ಏರಿಕೆಯಾಗಿದ್ದು, ಅಲ್ಲಿನ ನೌಕರರ ಸರಾಸರಿ ವೇತನ ವರ್ಷಕ್ಕೆ 12.32 ಲಕ್ಷ ರೂ. ಇದೆ. ಇದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೇ ಅತಿಹೆಚ್ಚು.

ಡಿವಿಡೆಂಡ್ ನೀಡಿದ್ದು ಎರಡೇ ಬ್ಯಾಂಕ್:

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸರ್ಕಾರ ಅತಿದೊಡ್ಡ ಷೇರುದಾರನಾಗಿರುವುದರಿಂದ ಪ್ರತಿ ವರ್ಷ ಬರುವ ಲಾಭದಲ್ಲಿ ಸರ್ಕಾರಕ್ಕೆ ಅವು ಡಿವಿಡೆಂಡ್ ನೀಡಬೇಕು. ನಾಲ್ಕೈದು ವರ್ಷಗಳ ಹಿಂದಿನವರೆಗೂ ಪ್ರತಿಯೊಂದು ರಾಷ್ಟ್ರೀಕೃತ ಬ್ಯಾಂಕ್ ನೂರಾರು ಅಥವಾ ಸಾವಿರಾರು ಕೋಟಿ ರೂ.ಗಳ ಡಿವಿಡೆಂಡ್ (ಲಾಭಾಂಶ) ಅನ್ನು ಸರ್ಕಾರಕ್ಕೆ ನೀಡುತ್ತಿದ್ದವು.

2013ರಲ್ಲಿ ಬ್ಯಾಂಕ್‌ಗಳು ಒಟ್ಟು 6,500 ಕೋಟಿ ರೂ. ನೀಡಿದ್ದವು. 2018ರಲ್ಲಿ ಲಾಭದಲ್ಲಿರುವ ಎರಡೇ ಎರಡು ಬ್ಯಾಂಕ್‌ಗಳಾದ ಇಂಡಿಯನ್ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಮಾತ್ರ ಡಿವಿಎಡೆಂಡ್ (ಒಟ್ಟು 444 ಕೋಟಿ) ನೀಡಿವೆ.

ಇನ್ನುಳಿದ ಬ್ಯಾಂಕ್‌ಗಳಿಗೆ ಸರ್ಕಾರವೇ ಹಣ ನೀಡುತ್ತಿದೆ. ಇನ್ನು ಆರ್‌ಬಿಐ ಈ ವರ್ಷ ಕೇಂದ್ರ ಸರ್ಕಾರಕ್ಕೆ ಅತಿಹೆಚ್ಚು ಡಿವಿಡೆಂಡ್ 50 ಸಾವಿರ ಕೋಟಿ ರೂ. ನೀಡಿದೆ.

click me!