₹6825 ಕೋಟಿ ಹೂಡಿಕೆಗೆ ಒಪ್ಪಿಗೆ: ದೇವನಹಳ್ಳಿ, ಗೌರಿಬಿದನೂರು, ಕೊಚನಹಳ್ಳಿಯಲ್ಲಿ ಬಂಡವಾಳ

Published : Nov 10, 2026, 10:39 AM IST
MB Patil

ಸಾರಾಂಶ

ರಾಜ್ಯದಲ್ಲಿ ₹6,825 ಕೋಟಿ ಬಂಡವಾಳ ಹೂಡಿಕೆಯ 147 ಕೈಗಾರಿಕಾ ಯೋಜನೆಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ 18,600 ಉದ್ಯೋಗಗಳು ಸೃಷ್ಟಿಯಾಗಲಿದ್ದು, ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಿಗೂ ಹೆಚ್ಚು ಒತ್ತು ನೀಡಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರಿನ ಆಚೆಗೂ ಕೈಗಾರಿಕಾ ಬೆಳವಣಿಗೆಗೆ ವೇಗ ನೀಡಲು ಒಟ್ಟು ₹6,825 ಕೋಟಿ ರು. ಬಂಡವಾಳ ಹೂಡಿಕೆಯ 147 ಕೈಗಾರಿಕಾ ಯೋಜನೆಗಳಿಗೆ ಸೋಮವಾರ ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಿದ ಯೋಜನೆಗಳ ಮೂಲಕ ರಾಜ್ಯದಾದ್ಯಂತ 18,600 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಸಭೆ ಬಳಿಕ ಮಾತನಾಡಿದ ಸಚಿವ ಪಾಟೀಲ್‌, ಅನುಮೋದನೆ ಪಡೆದ ಯೋಜನೆಗಳ ಪೈಕಿ 131 ಯೋಜನೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೂಡಿಕೆ ಆಗಲಿದ್ದು, ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದರು.

ಪ್ರಮುಖ ಹೂಡಿಕೆಗಳು

ಪ್ರಮುಖ ಹೂಡಿಕೆಗಳ ಪೈಕಿ ದೇವನಹಳ್ಳಿ ಬಳಿ ಅದ್ವೈತ್‌ ಟೆಕ್‌ನ ₹380 ಕೋಟಿ ವೆಚ್ಚದ ಐಟಿ ಹಾಗೂ ಐಟಿಇಎಸ್‌ ಪಾರ್ಕ್‌ ನಿರ್ಮಾಣ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಒಎಫ್‌ಬಿ ಟೆಕ್‌ ಲಿಮಿಟೆಡ್‌ನ ₹ 245 ಕೋಟಿ ವೆಚ್ಚದ ಕಂಟೇನರ್‌ ಗಾಜಿನ ಘಟಕ ನಿರ್ಮಾಣ, ಮೈಸೂರು ಜಿಲ್ಲೆಯ ಕೊಚನಹಳ್ಳಿಯಲ್ಲಿ ಎಫ್‌ಐಇಎಂ ಇಂಡಸ್ಟ್ರೀಸ್‌ನ ₹ 183 ಕೋಟಿ ಮೊತ್ತದ ಎಲೆಕ್ಟ್ರಾನಿಕ್‌ ಘಟಕಗಳ ತಯಾರಿಕೆ, ಬಳ್ಳಾರಿ ಜಿಲ್ಲೆಯ ಬೆಳಗಲ್ಲುವಿನಲ್ಲಿ ಅನಂತ್‌ ಸ್ಟೀಲ್ಸ್‌ನ ₹ 119.41 ಕೋಟಿ ಮೊತ್ತದ ಉಕ್ಕಿನ ಸರಳುಗಳ ತಯಾರಿಕೆ ಘಟಕಗಳು ಸೇರಿವೆ.

ಸಭೆಯಲ್ಲಿ ₹50 ಕೋಟಿಗೂ ಅಧಿಕ ಬಂಡವಾಳ ಹೂಡಿಕೆಯ 36 ಪ್ರಮುಖ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ ₹4,507.71 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 12,074 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಅವರು ವಿವರಿಸಿದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಖುಷ್ಬೂ ಜಿ.ಚೌಧರಿ, ಕೆಐಎಡಿಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಸೇರಿ ಹಲವರು ಹಾಜರಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅಕ್ಕಿ ಮೂಟೆ 26KGಯೇ ಯಾಕೆ ಪ್ಯಾಕ್ ಮಾಡ್ತಾರೆ? ಇದರ ಹಿಂದೆ ಇಷ್ಟೊಂದು ದೊಡ್ಡ ಪ್ಲ್ಯಾನ್ ಇದೆಯಾ?
ಚೀನಾ ಹೂಡಿದ ರಹಸ್ಯ ಜಾಲದಲ್ಲಿ ಅಮೆರಿಕದ AI ತಂತ್ರಜ್ಞಾನ ಲೋಕದ 63ರ ಸಿಇಒ, ಡೇಟಿಂಗ್ ನೆರಳಲ್ಲಿ ಗೂಢಚಾರಿಕೆ!