ಬಂಗಾರದ ಬೆಟ್ಟ, 148 ಟನ್ ಗೋಲ್ಡನ್ ಸೀಕ್ರೆಟ್! ಮಣ್ಣಿನಡಿ ನೂರಾರು ಟನ್ ಚಿನ್ನ ಹೂತಿಟ್ಟಿದ್ಯಾರು..? ಎಲ್ಲಿದೆ ಆ ಬೆಟ್ಟ?

Published : Jun 20, 2026, 02:00 PM IST
gold reserves

ಸಾರಾಂಶ

ಸ್ವಿಟ್ಜರ್‌ಲೆಂಡ್‌ನ ಪರಮಾಣು ನಿರೋಧಕ ಬಂಕರ್‌ನಲ್ಲಿ ಟೆಥರ್ ಎಂಬ ಕ್ರಿಪ್ಟೋ ಕಂಪನಿಯು 148 ಟನ್ ಚಿನ್ನವನ್ನು ರಹಸ್ಯವಾಗಿ ಸಂಗ್ರಹಿಸಿದೆ. ಜಾಗತಿಕ ಯುದ್ಧದ ಭೀತಿ ಮತ್ತು ಡಾಲರ್ ಮೌಲ್ಯ ಕುಸಿತದಂತಹ ಆರ್ಥಿಕ ಅಸ್ಥಿರತೆಯಿಂದ ತನ್ನ ಸಂಪತ್ತನ್ನು ರಕ್ಷಿಸಿಕೊಳ್ಳಲು, ಈ ಕಂಪನಿಯು ಚಿನ್ನವನ್ನು ರಕ್ಷಾಕವಚವಾಗಿ ಬಳಸಿಕೊಳ್ಳುತ್ತಿದೆ.

ಸ್ವಿಟ್ಜರ್‌ಲೆಂಡ್‌ನ ಹಿಮ ಪರ್ವತಗಳ ಸಾಲಿನಲ್ಲಿ ಒಂದು ರಹಸ್ಯ ಜಾಗ. ಆ ಜಾಗದಲ್ಲಿ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಕಾಣುವಂತಹ ಒಂದು ಪರಮಾಣು ನಿರೋಧಕ ಬಂಕರ್ ಇದೆ. ಆ ಬಂಕರ್ ಈಗ ಇಡೀ ಜಗತ್ತಿನ ಗಮನ ಸೆಳೀತಾ ಇದೆ. ಆ ಬಂಕರ್‌ನಲ್ಲಿ ಯಾವುದೋ ದೇಶದ ರಹಸ್ಯಗಳೂ ಇಲ್ಲ, ಯಾವ ದೇಶದ ಸೈನಿಕರೂ ಅಡಗಿಲ್ಲ. ಸಾಮಾನ್ಯನಾಗಿ ಬಂಕರ್'ಗಳನ್ನು ಯುದ್ಧಕ್ಕೆ ಅಂತ ನಿರ್ಮಿಸಲಾಗಿರತ್ತೆ. ಸೈನಿಕರ ಅಡಗುದಾಣಗಳಾಗಿ, ಸೈನಿಕರಿಗೆ ಆಶ್ರಯತಾಣಗಳನ್ನಾಗಿ ಈ ಬಂಕರ್'ಗಳನ್ನು ಬಳಸಲಾಗತ್ತೆ. ಆದ್ರೆ ಈ ನ್ಯೂಕ್ಲಿಯರ್ ಬಂಕರ್ ಇದ್ಯಲ್ಲಾ. ಇಲ್ಲಿ ರಾಶಿ ರಾಶಿ ಚಿನ್ನ ಇದೆ. ಚಿನ್ನದ ಇಟ್ಟಿಗೆಗಳಿವೆ. ಚಿನ್ನದ ಗಟ್ಟಿಗಳಿವೆ. ಹಾಗಾದ್ರೆ ಯಾರದ್ದು ಈ ಚಿನ್ನ? ಈ ಸ್ವರ್ಣ ಸಂಪತ್ತಿಗೆ ಯಾರು ಒಡೆಯ? ನೂರಾರು ಟನ್ ಚಿನ್ನವನ್ನು ಪರ್ವತದ ಅಡಿಯಲ್ಲಿರೋ ಬಂಕರ್'ಗಳಲ್ಲಿ ಅಡಗಿಸಿಟ್ಟಿರೋ ಚಿನ್ನದ ರಾಜ ಯಾರು ಗೊತ್ತಾ?

ಹಣ ಕಂಡ್ರೆ ಹೆಣವೂ ಬಾಯಿ ಬಿಡತ್ತೆ ಅನ್ನೋ ಮಾತಿದೆ. ಆದ್ರೆ ಈಗ ಚಿನ್ನ ಕಂಡ್ರೆ ಹೆಣ ಬಾಯಿ ಬಿಡತ್ತೆ ಅನ್ನೋ ಹಾಗಾಗಿದೆ. ಕಾರಣ, ಚಿನ್ನಕ್ಕೆ ಬಂದಿರೋ ಬೆಲೆ. ಈಗ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ ಹದಿನಾಲ್ಕೂವರೆ ಸಾವಿರ ರೂಪಾಯಿ. ಚಿನ್ನ ಖರೀದಿ ಮಾಡೋದೇ ಸಾಹಸ ಅನ್ನೋ ಕಾಲ ಬಂದಿದೆ. ಈಗ ಕೆಜಿಗಟ್ಟಲೆ ಚಿನ್ನ ಇದ್ದವನೇ ಸಾಹುಕಾರ. ಚಿನ್ನಕ್ಕೆ ಬಂದಿರೋ ಚಿನ್ನದ ಬೆಲೆಯನ್ನು ನೋಡಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡ್ತಾ ಇದ್ದವರೀಗ ಚಿನ್ನದ ಮೇಲೆ ಹೂಡಿಕೆ ಮಾಡ್ತಿದ್ದಾರೆ.

ಹಣ ಖರ್ಚಾಗಿ ಹೋಗತ್ತೆ, ಆದ್ರೆ ಚಿನ್ನ ಯಾವತ್ತೂ ಕರಗಲ್ಲ. ಈ ಕಾರಣಕ್ಕೆ ದೊಡ್ಡ ದೊಡ್ಡ ದೇಶಗಳೇ ಚಿನ್ನದ ಕೋಟೆ ಕಟ್ತಾ ಇವೆ. ಅಮೆರಿಕ ಮತ್ತು ಚೀನಾ ಮಧ್ಯೆ ಚಿನ್ನಕ್ಕಾಗಿ ದೊಡ್ಡ ಅಂತರ್ಯುದ್ಧವೇ ನಡೆಯುತ್ತಿದೆ. ಚೀನಾ ಅಂತೂ ಜಗತ್ತಿನ ಯಾವ ದೇಶದಲ್ಲೂ ಇಲ್ಲದಷ್ಟು ಚಿನ್ನವನ್ನು ರಹಸ್ಯವಾಗಿ ಶೇಖರಣೆ ಮಾಡ್ತಾ ಇದೆ. ಹೀಗಿರೋವಾಗ ಒಂದು ಖಾಸಗಿ ಕಂಪನಿ, ಹಿಮಪರ್ವತಗಳ ಬೆಟ್ಟದ ತಪ್ಪಲಲ್ಲಿ ಒಂದೂವರೆ ಲಕ್ಷ ಕೆ.ಜಿ ಚಿನ್ನವನ್ನು ಅಡಗಿಸಿಟ್ಟಿದ್ರೆ ಹೇಗಿರತ್ತೆ ಹೇಳಿ. ಅಂಥಾ ಒಂದು ಸುದ್ದಿ ಸ್ವಿಟ್ಜರ್ಲೆಂಡ್'ನ ಆ ಹಿಮಪರ್ತವ ಬೆಟ್ಟಗಳ ಸಾಲಿನಿಂದ ನುಗ್ಗಿ ಬಂದಿದೆ.

ವಾರಕ್ಕೆ ಎರಡು ಟನ್ ಚಿನ್ನ ನುಂಗುತ್ತಿದ್ದಾನೆ ಸ್ವರ್ಣಾಸುರ..!

ಸ್ವಿಟ್ಜರ್ಲೆಂಡ್'ನ ಆ ಪರ್ವತದ ತಪ್ಪಲಲ್ಲಿರೋ ರಹಸ್ಯ ಬಂಕರ್'ನಲ್ಲಿ 148 ಟನ್ ಚಿನ್ನವನ್ನುಅಡಗಿಸಿಡಲಾಗಿದೆ ಅಂತ ನಾವಾಗ್ಲೇ ಹೇಳಿದ್ವಲ್ಲಾ. ಈ ಚಿನ್ನದ ಗಟ್ಟಿಗಳ ಒಡೆಯ ಯಾವುದೋ ಶ್ರೀಮಂತ ದೇಶವೂ ಅಲ್ಲ. ಯಾವ ರಾಜಮನೆತನವೂ ಅಲ್ಲ. ಅದರ ಮಾಲೀಕ ಒಂದು ಪ್ರೈವೇಟ್ ಕ್ರಿಪ್ಟೋ ಕಂಪನಿ. ಅಚ್ಚರಿಯಾದ್ರೂ ಇದು ಸತ್ಯ. ಇವನು ಟನ್'ಗಟ್ಟಲೆ ಚಿನ್ನ ನುಂಗುತ್ತಿರೋ ಸ್ವರ್ಣಾಸುರ. ಆ ಚಿನ್ನದ ರಾಕ್ಷಸನ ಹೆಸರು ಟೆಥರ್ ಅಂತ. ಟೆಥರ್ ಅಂದ್ರೆ ಒಂದು ಕ್ರಿಪ್ಟೋ ಕಂಪನಿ. ಅಂದ್ರೆ ಡಿಜಿಟಲ್ ಕರೆನ್ಸಿಗಳ ಉದ್ಯಮ ನಡೆಸುವ ಕಂಪೆನಿ. ಸ್ವಿಟ್ಜರ್ಲೆಂಡ್'ನ ಪರ್ವತಗಳ ಒಡಲಲ್ಲಿ 148 ಟನ್ ಚಿನ್ನವನ್ನು ಅಡಗಿಸಿಟ್ಟಿರೋದು ಇದೇ ಟೆಥರ್ ಕಂಪನಿ. ಈ ಗೋಲ್ಡನ್ ಸೀಕ್ರೆಟನ್ನು ಬಯಲು ಮಾಡಿರೋದು ಬೇರಾರೂ ಅಲ್ಲ, ಸ್ವತಃ ಟೆಥರ್ ಕಂಪನಿಯ ಸಿಇಒ ಪಾವೊಲೊ ಅರ್ಡೊಯಿನೊ.

ಟೆಥರ್ ಅನ್ನೋದು ಡಿಜಿಟಲ್ ಕರೆನ್ಸಿ ಬ್ಯುಸಿನೆಸ್ ಮಾಡೋ ಕ್ರಿಪ್ಟೋ ಕರೆನ್ಸಿ ಕಂಪನಿ. ಈಗ ನಿಮ್ಗೊಂದು ಪ್ರಶ್ನೆ ಹುಟ್ಟತ್ತೆ. ಈ ಕ್ರಿಪ್ಟೋ ಕರೆನ್ಸಿ ಕಂಪನಿ ಚಿನ್ನದ ಹಿಂದೆ ಬಿದ್ದಿದ್ದೇಕೆ..? ಇಡೀ ಜಗತ್ತು ಡಿಜಿಟಲ್ ಕರೆನ್ಸಿ ಹಿಂದೆ ಬಿದ್ದಿದ್ದರೆ, ಜಗತ್ತಿನ ಅತಿದೊಡ್ಡ ಕ್ರಿಪ್ಟೋ ಸ್ಟೇಬಲ್‌ಕಾಯಿನ್ ಕಂಪನಿ ಟೆಥರ್ ಮಾತ್ರ ಭೂಮಿಯ ಮೇಲಿರೋ ಚಿನ್ನವನ್ನೆಲ್ಲ ಸದ್ದಿಲ್ಲದೆ ಬಾಚಿಕೊಳ್ಳುತ್ತಿದೆ. ಈ ಕಂಪನಿ ಎಷ್ಟು ವೇಗವಾಗಿ ಚಿನ್ನ ಖರೀದಿಸುತ್ತಿದೆ ಅಂದ್ರೆ, ಚೀನಾ ಮತ್ತು ಕಜಕಸ್ತಾನದಂತಹ ದೊಡ್ಡ ದೇಶಗಳೇ ಇವತ್ತು ಈ ಕಂಪನಿಯ ಮುಂದೆ ಮಂಕಾಗಿವೆ. ವಾರಕ್ಕೆ ಬರೋಬ್ಬರಿ ಎರಡು ಟನ್ ಚಿನ್ನವನ್ನ ತನ್ನ ಖಜಾನೆಗೆ ಟೆಥರ್‌ ಕಂಪನಿ ತುಂಬಿಸಿಕೊಳ್ಳುತ್ತಿದೆ.

ಚಿನ್ನ ಬೇಟೆಗೆ ಇಳಿದದ್ದೇಕೆ ಕ್ರಿಪ್ಟೋ ಕರೆನ್ಸಿ ಕಂಪನಿ..?

ಡಿಜಿಟಲ್ ಕರೆನ್ಸಿ ಉದ್ಯಮ ನಡೆಸುತ್ತಿರೋ ದೈತ್ಯ ಕಂಪನಿಯೊಂದು ಚಿನ್ನದ ಹಿಂದೆ ಬಿದ್ದಿದೆ ಅಂದ್ರೆ ಕುತೂಹಲ ಮೂಡೋದು ಸಹಜ. ವಾರಕ್ಕೆ ಎರಡು ಟನ್ ಚಿನ್ನವನ್ನು ಬೇಟೆಯಾಡ್ತಾ ಇರೋ ಟೆಥರ್ ಕಂಪನಿ ಆ ಚಿನ್ನವನ್ನು ನ್ಯೂಕ್ಲಿಯರ್ ಬಂಕರ್'ನಲ್ಲಿ ರಹಸ್ಯವಾಗಿ ಇಡ್ತಾ ಇದೆ. ಹಾಗಾದ್ರೆ ಈ ಟೆಥರ್ ಕಂಪನಿ ಅಷ್ಟೊಂದು ಪ್ರಮಾಣದಲ್ಲಿ ಬಂಗಾರವನ್ನು ಖರೀದಿಸುತ್ತಿರುವ ಗುಟ್ಟೇನು? ಅಸಲಿಗೆ ಒಂದು ಕ್ರಿಪ್ಟೋ ಕಂಪನಿಗೆ ಇಷ್ಟೊಂದು ಚಿನ್ನ ಯಾಕೆ ಬೇಕು? ಇಲ್ಲೇ ಇರೋದು ನೋಡಿ ಅಸಲಿ ಮ್ಯಾಟರ್.

ಕ್ರಿಪ್ಟೋ ಕರೆನ್ಸಿ ಕಂಪನಿಯೊಂದು ಚಿನ್ನದ ಬೇಟೆಗೆ ಇಳಿಯೋದಕ್ಕೆ ಕಾರಣವೂ ಇದೆ. ಜಗತ್ತಿನಾದ್ಯಂತ ಈಗ ಯುದ್ಧದ ಭೀತಿ ಇದೆ. ಇರಾನ್ ಮೇಲೆ ಅಮೆರಿಕ ದಂಡೆತ್ತಿ ಹೋಗೋದಕ್ಕೆ ರೆಡಿಯಾಗಿ ನಿಂತಿದೆ. ಅದಕ್ಕೂ ಮೊದ್ಲೇ ವೆನೆಜುವೆಲಾ ಅಧ್ಯಕ್ಷನನ್ನು ಅವನ ದೇಶಕ್ಕೇ ನುಗ್ಗಿ ಹೆಡೆಮುರಿ ಕಟ್ಕೊಂಡು ಬಂದಿದ್ದಾನೆ ಜಗತ್ತಿನ ದೊಡ್ಡಣ್ಣ. ಅತ್ತ ರಷ್ಯಾ ಉಕ್ರೇನ್ ಯುದ್ಧ ಭೀತಿ. ಇತ್ತ ಉತ್ತರ ಕೊರಿಯಾದ ಸರ್ವಾಧಿಕಾರಿ ತನ್ನ ಶಸ್ತ್ರಾಸ್ತ್ರಗಳನ್ನು ಸಿದ್ಧ ಮಾಡಿಕೊಳ್ತಾ ಇದ್ದಾನೆ. ಡ್ರ್ಯಾಗನ್ ದೇಶ ಚೀನಾ ಅಂತೂ ಪಕ್ಕದ ತೈವಾನ್ ಅನ್ನು ಕಬ್ಜಾ ಮಾಡಿಕೊಳ್ಳೋದಕ್ಕೆ ಪ್ಲಾನ್ ಮಾಡ್ತಿದೆ. ಪಾಕಿಸ್ತಾನದ ಕಥೆಯಂತೂ ಕೇಳೋದೇ ಬೇಡ. ಅತ್ತ ತಾಲಿಬಾನಿಗಳ ಕಾಟ, ಇತ್ತ ಬಲೂಚಿಗಳ ಆಕ್ರಮಣ. ಇದ್ರ ಮಧ್ಯೆ ಪ್ರಪಂಚದ ಬಹುತೇಕ ದೇಶಗಳಲ್ಲಿ ಅಂತರ್ಯುದ್ಧ. ಇಂಥಾ ಸಂದರ್ಭದಲ್ಲಿ ಅದೆಷ್ಟು ಸಂಪತ್ತಿದ್ರೂ ಕರಗಿ ಹೋಗತ್ತೆ.. ಕರೆನ್ಸಿ ಮೌಲ್ಯ ಕುಸಿಯೋದು ಕಾಮನ್. ಈಗ ಡಾಲರ್ ಕುಸಿಯುತ್ತಿರೋ ಕಾರಣ ಕೋಟಿಗಳ ಕೋಟೆಗಳೇ ಅಲುಗಾಡ್ತಾ ಇವೆ. ಇಂಥಾ ಸಂದರ್ಭದಲ್ಲಿ ಸಂಪತ್ತಿನ ಸಾಮ್ರಾಜ್ಯವನ್ನು ಉಳಿಸಿಕೊಳ್ಳೋದು ಹೇಗೆ..? ಅದಕ್ಕೆ ಅಂತ ಈ ಟೆಥರ್ ಕಂಪನಿ ಕಂಡುಕೊಂಡಿರೋ ದಾರಿಯೇ ಸ್ವರ್ಣ ಸಾಮ್ರಾಜ್ಯ..!

ಡಾಲರ್ ಕುಸಿದರೂ ಟೆಥರ್ ಸೇಫ್; ಇದು ಸ್ವರ್ಣ ರಹಸ್ಯ..!

ಟೆಥರ್ ಅನ್ನೋ ಜಗತ್ತಿನ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ಕಂಪನಿ ರಹಸ್ಯ ಸುರಂಗದೊಳಗೆ ನೂರಾರು ಟನ್'ಗಳ ಲೆಕ್ಕದಲ್ಲಿ ಚಿನ್ನವನ್ನು ಗುಡ್ಡೆ ಹಾಕಲು ಕಾರಣ, ಭದ್ರತೆ. ಅಮೆರಿಕದ ಡಾಲರ್ ಮೌಲ್ಯ ಕುಸಿದರೆ ತೊಂದರೆಯಾಗ್ಬಾರ್ದು ಅನ್ನೋ ಹಾಗೆ ಚಿನ್ನವನ್ನು ರಕ್ಷಾಕವಚವಾಗಿ ಬಳಸಲಾಗ್ತಾ ಇದೆ. ದೇಶ-ದೇಶಗಳ ಜೊತೆ ಜೊತೆಗೆ ಇಂತಹ ಖಾಸಗಿ ಕಂಪನಿಗಳೂ ಚಿನ್ನದ ಖರೀದಿಗೆ ಜಿದ್ದಿಗೆ ಬಿದ್ದಿರೋ ಕಾರಣ, ಚಿನ್ನದ ಬೆಲೆಯೂ ಏರಿಕೆಯಾಗ್ತಾ ಇದೆ.

2025ರ 4ನೇ ತ್ರೈಮಾಸಿಕ ಅವಧಿಯಲ್ಲಿ ಪೋಲೆಂಡ್ 35 ಟನ್ ಚಿನ್ನ ಖರೀದಿಸಿದ್ರೆ, ಬ್ರೆಜಿಲ್ 27 ಟನ್ ಚಿನ್ನ ಖರೀದಿ ಮಾಡಿದೆ. ಇದೇ ಅವಧಿಯಲ್ಲಿ ಟೆಥರ್ ಅನ್ನೋ ಖಾಸಗಿ ಕಂಪನಿ ಖರೀದಿಸಿರೋ ಚಿನ್ನ 26 ಟನ್. ಈ ಅವಧಿಯಲ್ಲಿ ಕಜಕಿಸ್ತಾನ್ 17 ಟನ್, ಇಂಡೋನೇಷ್ಯಾ 5 ಟನ್, ಚೀನಾ 4 ಟನ್, ಇರಾಕ್ 4 ಟನ್ ಚಿನ್ನ ಖರೀದಿಸಿದೆ. ಅಂದ್ರೆ ಕಳೆದ ವರ್ಷದ 4ನೇ ತ್ರೈಮಾಸಿಕ ಅವಧಿಯಲ್ಲಿ ಚಿನ್ನ ಖರೀದಿಸಿರುವ ದೇಶಗಳ ಪೈಕಿ ಪೋಲೆಂಡ್ ಮತ್ತು ಬ್ರೆಜಿಲ್ ಮೊದಲ ಎರಡು ಸ್ಥಾನಗಳಲ್ಲಿದ್ರೆ, ಖಾಸಗಿ ಕಂಪನಿಯಾಗಿರೋ ಟೆಥರ್ ಮೂರನೇ ಸ್ಥಾನದಲ್ಲಿದೆ. ಕುತೂಹಲದ ಸಂಗತಿ ಏನಂದ್ರೆ, ಟೆಥರ್ ಕಂಪನಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಒಂದು ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಖರೀದಿಸುವ ಪ್ಲಾನ್ ಹಾಕೊಂಡಿದೆ. ಅಲ್ಲಿಗೆ ಸ್ವಿಟ್ಜರ್ಲೆಂಡ್'ನ ಆ ಹಿಮಪರ್ವತಗಳ ಒಡಲಲ್ಲಿರೋ ನ್ಯೂಕ್ಲಿಯರ್ ಬಂಕರ್'ಗಳು ಮತ್ತಷ್ಟು ಟನ್ ಚಿನ್ನಗಳಿಂದ ತುಂಬೋದು ಗ್ಯಾರಂಟಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಾಮ ಮಂದಿರಕ್ಕೆ ನೀಡಿದ ಕಾಣಿಕೆ ಹಣ ಬ್ಯಾಂಕ್ ಖಾತೆ ಸೇರೋದು ಹೇಗೆ? ಇಲ್ಲಿದೆ ಹುಂಡಿ ಎಣಿಕೆಯ ಸಂಪೂರ್ಣ ಸಿಸ್ಟಮ್!
ಈ ಸಣ್ಣ ಅಭ್ಯಾಸಗಳು ಸೈಲೆಂಟ್ ಆಗಿ ನಿಮ್ಮನ್ನ ಶ್ರೀಮಂತರನ್ನಾಗಿ ಮಾಡುತ್ತೆ