
ನವದೆಹಲಿ(ಜೂ.24): ಇತ್ತೀಚಿನ ವರ್ಷಗಳಲ್ಲಿ ಭಾರಿ ಜನಪ್ರಿಯವಾಗಿರುವ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿ ಖರೀದಿ ವ್ಯವಹಾರದ ಮೇಲೆ ಶೇ.1ರಷ್ಟುಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಮಾಡುವ ವ್ಯವಸ್ಥೆ ಜು.1ರಿಂದ ಜಾರಿಗೆ ಬರಲಿದೆ.
ಕಳೆದ ಫೆಬ್ರವರಿಯಲ್ಲಿ ಮಂಡನೆ ಮಾಡಿದ್ದ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ರಿಪ್ಟೋಕರೆನ್ಸಿ ಖರೀದಿ ವ್ಯವಹಾರದ ಮೇಲೆ ಶೇ.1ರಷ್ಟುಟಿಡಿಎಸ್ ಹಾಗೂ ಶೇ.30ರಷ್ಟುತೆರಿಗೆ ವಿಧಿಸುವುದಾಗಿ ಘೋಷಿಸಿದ್ದರು. ಅದು ಈಗ ಜಾರಿಗೆ ಬರುತ್ತಿದೆ.
ಯಾವುದೇ ವ್ಯಕ್ತಿ ಕ್ರಿಪ್ಟೋಕರೆನ್ಸಿ ಖರೀದಿಗೆ ಹಣ ಪಾವತಿಸಿದರೆ ಆ ಸಂದರ್ಭದಲ್ಲಿ ಶೇ.1ರಷ್ಟುಟಿಡಿಎಸ್ ಕಡಿತ ಮಾಡಬೇಕು. ಖರೀದಿದಾರರೇ ಟಿಡಿಎಸ್ ಮುರಿದುಕೊಂಡಿದ್ದರೆ, ಮಾರಾಟಗಾರರು ಪಾವತಿಸಬೇಕಾಗಿಲ್ಲ. ಆದರೆ ಈ ಸಂಬಂಧ ಖರೀದಿದಾರರಿಂದ ಮಾರಾಟಗಾರರು ಘೋಷಣೆ ಪತ್ರ ಪಡೆದುಕೊಳ್ಳಬೇಕು ಎಂದು ಕೇಂದ್ರ ನೇರ ತೆರಿಗೆ ಮಂಡಳಿ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ರೀತಿ ಕಡಿತಗೊಳಿಸುವ ಟಿಡಿಎಸ್ ಅನ್ನು 30 ದಿನದೊಳಗೆ ಸರ್ಕಾರಕ್ಕೆ ಪಾವತಿಸಬೇಕು. ಒಂದು ವೇಳೆ ಎಕ್ಸ್‌ಚೇಂಜ್‌ಗಳಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟು ನಡೆದರೆ, ಎಕ್ಸ್‌ಚೇಂಜ್‌ಗಳೇ ಟಿಡಿಎಸ್ ಕಡಿತ ಮಾಡಬೇಕು ಎಂದು ಸೂಚಿಸಲಾಗಿದೆ.
ಆದರೆ ಹಣಕಾಸು ವರ್ಷವೊಂದರಲ್ಲಿ ಒಬ್ಬ ನಿರ್ದಿಷ್ಟವ್ಯಕ್ತಿ ಜತೆ 50 ಸಾವಿರ ರು. ಮೀರದ ಬಿಟ್‌ಕಾಯಿನ್ ವ್ಯವಹಾರ ಮಾಡಿದ್ದರೆ ಅಥವಾ ನಿರ್ದಿಷ್ಟವ್ಯಕ್ತಿಗಳಲ್ಲದವರ ಜತೆ 10 ಸಾವಿರ ರು.ಗೂ ಹೆಚ್ಚು ವಹಿವಾಟು ನಡೆಸಿಲ್ಲವಾದರೆ ಟಿಡಿಎಸ್ ಕಡಿತ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.