Income Tax Return: ಇ-ಫೈಲಿಂಗ್ ಫೋರ್ಟಲ್ ತಾಂತ್ರಿಕ ಸಮಸ್ಯೆಗಳ ವಿರುದ್ಧ ತೆರಿಗೆದಾರರ ದೂರು; ಗಡುವು ವಿಸ್ತರಣೆಗೆ ಒತ್ತಾಯ

By Suvarna NewsFirst Published Dec 28, 2021, 6:03 PM IST
Highlights

*ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕ
*ಇ-ಫೈಲಿಂಗ್ ಫೋರ್ಟಲ್ ನಲ್ಲಿ ತಾಂತ್ರಿಕ ತೊಂದರೆಯಿಂದ ತೆರಿಗೆದಾರರಿಗೆ ಸಮಸ್ಯೆ
*ಟ್ವಿಟರ್ ನಲ್ಲಿ ಪೋರ್ಟಲ್ ಬಗ್ಗೆ ಅಸಮಾಧಾನ ಹೊರಹಾಕಿ ತೆರಿಗೆದಾರರ ಟ್ವೀಟ್ 
 *ಗಡುವು ವಿಸ್ತರಣೆಗೆ ಆಗ್ರಹಿಸಿದ ಹ್ಯಾಶ್ ಟ್ಯಾಗ್  ಟ್ವಿಟರ್ ನಲ್ಲಿ ಟ್ರೆಂಡಿಂಗ್

Business Desk: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆಗೆ ಇನ್ನು ಮೂರು ದಿನಗಳ ಕಾಲಾವಕಾಶವಷ್ಟೇ ಇದ್ದು, ಅನೇಕ ತೆರಿಗೆದಾರರು (Taxpayers) ಐಟಿ ಪೋರ್ಟಲ್ (Portal) ಮೂಲಕ ಐಟಿಆರ್ ಫೈಲ್ ಮಾಡಲು ಪ್ರಯತ್ನಿಸಿ ಸೋತಿದ್ದಾರೆ. ಐಟಿ ಪೋರ್ಟಲ್ ನಲ್ಲಿನ ತಾಂತ್ರಿಕ ತೊಂದರೆಗಳ ಕಾರಣಕ್ಕೆ ಐಟಿಆರ್(ITR) ಸಲ್ಲಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ತೆರಿಗೆದಾರರು ಟ್ವೀಟರ್ ನಲ್ಲಿ(Twitter) ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 2020-21ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. 

ಈ ಹಿಂದೆ ಸರ್ಕಾರ 2020-21ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರ ಗಡುವು ನೀಡಿತ್ತು. ಆದ್ರೆ ಐಟಿಆರ್ ಪೋರ್ಟಲ್ ನಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ತೆರಿಗೆದಾರರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಗಡುವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಿತ್ತು.ಆದ್ರೆ ಈಗಲೂ ಕೂಡ ಪೋರ್ಟಲ್ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ತೊಂದರೆ ಎದುರಾಗುತ್ತಿದೆ ಎಂದು ತೆರಿಗೆದಾರರು ದೂರಿದ್ದಾರೆ. ಅಲ್ಲದೆ, ಐಟಿ ರಿಟರ್ನ್ಸ್ ಸಲ್ಲಿಕೆ ಗಡುವವನ್ನು ಇನ್ನೂ ಮುಂದೂಡುವಂತೆ ಆಗ್ರಹಿಸಿದ್ದಾರೆ.

IT Return 2021: ಈ 5 ಮಾಹಿತಿಗಳನ್ನು ಉಲ್ಲೇಖಿಸದಿದ್ರೆ ತೊಂದರೆ ಗ್ಯಾರಂಟಿ!

ಐಟಿಆರ್ ಫೈಲ್ ಮಾಡೋ ಸಮಯದಲ್ಲಿ ಪೋರ್ಟಲ್ ನಿರಂತರವಾಗಿ ಹ್ಯಾಂಗ್ ಆಗುತ್ತಿದೆ, ಹೀಗಾಗಿ ಗಡುವನ್ನು ಇನ್ನೂ ಕೆಲವು ದಿನಗಳ ಮುಂದೂಡುವಂತೆ ಸರ್ಕಾರವನ್ನು ಒತ್ತಾಯಿಸಿ ಅನೇಕ ಮಂದಿ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಇದ್ರಿಂದ ಟ್ವಿಟರ್ ನಲ್ಲಿ ಕಳೆದ ಎರಡು ದಿನಗಳಿಂದ #Extend_Due_Date_Immediately ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. 'ಡಿಸೆಂಬರ್ 31 ಸಾಫ್ಟ್ ವೇರ್ ಡೆವಲಪರ್ ಗೆ ವಿಸ್ತರಿಸಿದ ಗಡುವಾಗಿದೆಯೇ ಹೊರತು ತೆರಿಗೆ ಪಾವತಿದಾರರಿಗಲ್ಲ' ಎಂದು ಟ್ವೀಟರ್ ನಲ್ಲಿ ಒಬ್ಬರು ತೆರಿಗೆದಾರರು ಟ್ವೀಟ್ ಮಾಡಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಇ-ಫೈಲಿಂಗ್ (e-filling) ಪೋರ್ಟಲ್(Portal) ಅನ್ನು ಇನ್ಫೋಸಿಸ್(Infosys) ಸಂಸ್ಥೆ ಅಭಿವೃದ್ಧಿಪಡಿಸಿದೆ. 

ಹೊಸ ಐಟಿ ಫೋರ್ಟಲ್ ಬಗ್ಗೆ ತೆರಿಗೆದಾರರಿಂದ ದೂರುಗಳು ಬಂದಿರೋ ಹಿನ್ನೆಲೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ನೀಡಿರೋ ಅಂತಿಮ ಗಡುವನ್ನು ಡಿಸೆಂಬರ್ 31ರ ನಂತರವೂ ಇನ್ನಷ್ಟು ದಿನಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ ಎಂದು ವಿವಿಧ ಮಾಧ್ಯಮ ವರದಿಗಳು ಹೇಳಿವೆ.  ಆದಾಯ ತೆರಿಗೆ ಇಲಾಖೆ ನೀಡಿರೋ ಮಾಹಿತಿ ಪ್ರಕಾರ ಡಿಸೆಂಬರ್ 26ರ ತನಕ  4.50ಕೋಟಿಗೂ ಅಧಿಕ ಜನರು ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. 

e-filling Portal:ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಪೋರ್ಟಲ್ ನಲ್ಲಿ ತೊಂದ್ರೆ 
ಆದಾಯ ತೆರಿಗೆ ಇಲಾಖೆ ಜೂನ್ 7 ರಂದು ಪ್ರಾರಂಭಿಸಿದ ಇ-ಫೈಲಿಂಗ್ (e-filling) ಪೋರ್ಟಲ್ ನಲ್ಲಿ(Portal) ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದವು. ಈ ಸಮಸ್ಯೆಗಳ ಬಗ್ಗೆ ತೆರಿಗೆದಾರರು ದೂರುಗಳನ್ನು ಕೂಡ ನೀಡಿದ್ದಾರೆ. ಇದ್ರಿಂದ ಎಚ್ಚೆತ್ತ ಇಲಾಖೆ ಅದನ್ನು ಸರಿಪಡಿಸೋ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿತ್ತು. ಕೇಂದ್ರ ವಿತ್ತ ಸಚಿವೆ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಪೋರ್ಟಲ್ ಅಭಿವೃದ್ಧಿಪಡಿಸಿರೋ ಇನ್ಫೋಸಿಸ್ ಗೆ ಸಮನ್ಸ್ ನೀಡಿ ಸೆಪ್ಟೆಂಬರ್ 15ರೊಳಗೆ ಸರಿಪಡಿಸುವಂತೆ ಸೂಚಿಸಿದ್ದರು.  ಪೋರ್ಟಲ್ ನಲ್ಲಿನ ಸಮಸ್ಯೆಗಳ ಕಾರಣಕ್ಕೆ 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 30ರ ತನಕ ವಿಸ್ತರಿಸಲಾಗಿತ್ತು. ಆ ಬಳಿಕ ಮತ್ತೆ ಡಿಸೆಂಬರ್ 31ಕ್ಕೆ ವಿಸ್ತರಿಸಲಾಯಿತು. ಇನ್ಫೋಸಿಸ್ ಅಕ್ಟೋಬರ್ ನಲ್ಲಿ ಪೋರ್ಟಲ್ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಬಳಕೆದಾರರು ಆದಾಯ ತೆರಿಗೆ ಪೋರ್ಟಲ್ ಮೂಲಕ ಯಾವುದೇ ತೊಂದರೆಯಿಲ್ಲದೆ ತೆರಿಗೆ ಪಾವತಿಸಬಹುದು ಎಂದು ಹೇಳಿತ್ತು. 

click me!