
ನವದೆಹಲಿ(ಜೂ.26): ಕೊರೋನಾ ಚಿಕಿತ್ಸೆ ಮಾಡಿದ ವೆಚ್ಚ ಮತ್ತು ಅದಕ್ಕಾಗಿ ಸ್ವೀಕರಿಸಿದ ನೆರವಿನ ಹಣಕ್ಕೆ ತೆರಿಗೆ ವಿನಾಯ್ತಿ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಕ್ರಮದ ಅನ್ವಯ, ಯಾವುದೇ ಕಂಪನಿ ಅಥವಾ ವ್ಯಕ್ತಿ ಇನ್ನೊಬ್ಬರ ಕೊರೋನಾ ಚಿಕಿತ್ಸೆಗೆ ನೀಡಿದ ಹಣಕ್ಕೆ ಸರ್ಕಾರ ವಿನಾಯಿತಿ ನೀಡಲಿದೆ. ಅದೇ ರೀತಿ ಯಾವುದೇ ವ್ಯಕ್ತಿ ಕೊರೋನಾ ಚಿಕಿತ್ಸೆಗೆಂದು ಇತರರಿಂದ ಹಣವನ್ನು ಸ್ವೀಕರಿಸಿದ್ದರೆ ಅದಕ್ಕೂ ಕೂಡಾ ಪೂರ್ಣ ತೆರಿಗೆ ವಿನಾಯ್ತಿ ಸಿಗಲಿದೆ.
ಅದೇ ರೀತಿಯ ಯಾವುದೇ ವ್ಯಕ್ತಿ ಕೋವಿಡ್‌ಗೆ ಬಲಿಯಾದ ಸಂದರ್ಭದಲ್ಲಿ, ಅವರ ಕುಟುಂಬ ಸದಸ್ಯರಿಗೆ ಯಾರಾದರೂ ನೆರವಿನ ಹಣ ನೀಡಿದ್ದರೆ ಅದಕ್ಕೂ ತೆರಿಗೆ ವಿನಾಯಿತಿ ಸಿಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಲವು ತೆರಿಗೆದಾರರು ಕೊರೋನಾ ಚಿಕಿತ್ಸೆಗಾಗಿ ಉದ್ಯೋಗದಾತರಿಂದ ಹಣಕಾಸು ನೆರವು ಪಡೆದುಕೊಂಡಿದ್ದು, ಈ ಹಣಕ್ಕೆ 2019-20ನೇ ಸಾಲಿನಲ್ಲಿ ತೆರಿಗೆಯಿಂದ ವಿನಾಯಿತಿ ದೊರೆಯಲಿದೆ ಎಂದು ಹೇಳಿದ್ದಾರೆ.
ಪಾನ್- ಆಧಾರ್ ಗಡುವು ಮುಂದೂಡಿಕೆ:
ಇದೇ ವೇಳೆ ಕೇಂದ್ರ ಸರ್ಕಾರ ಆಧಾರ್- ಪಾನ್ ನಂಬರ್ ಸಂಯೋಜನೆಗ ವಿಧಿಸಿದ್ದು ಗಡುವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಿದೆ. ಹೀಗಾಗಿ 2021 ಸೆ.30 ಪಾನ್- ಆಧಾರ್ ಸಂಯೋಜನೆಗೆ ಕೊನೆಯ ದಿನವಾಗಿದೆ. ಜೊತೆಗೆ ವಿವಾದ್ ಸೆ ವಿಶ್ವಾಸ್ ನೇರ ತೆರಿಗೆ ವಿವಾದ ಪರಿಹಾರ ಯೋಜನೆಯನ್ನು ಆದಾಯ ತೆರಿಗೆ ಇಲಾಖೆ ಆ.31ರವರೆಗೆ ವಿಸ್ತರಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.