ಬ್ಯಾಂಕ್‌ನಲ್ಲಿ ಚಿನ್ನವಿಟ್ಟು ಬಡ್ಡಿ ಗಳಿಸಿ, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

By Suvarna News  |  First Published Jun 24, 2021, 5:49 PM IST

ಬ್ಯಾಂಕ್‌ನಲ್ಲಿ ಚಿನ್ನದೊಡವೆ ಅಡವಿಟ್ರೆ ಸಾಲ ಕೊಡ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಹಣದಂತೆ ಚಿನ್ನವನ್ನು ಕೂಡ ಠೇವಣಿಯಿಟ್ಟು ಬಡ್ಡಿ ಪಡೆಯಬಹುದು ಎಂಬ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.ಈ ಅವಕಾಶ ನೀಡಿರೋ ಜಿಎಂಎಸ್‌ ಬಗ್ಗೆ ಇಲ್ಲಿದೆ ಮಾಹಿತಿ. 


ಭಾರತೀಯ ಹೆಣ್ಣುಮಕ್ಕಳಿಗೂ ಬಂಗಾರಕ್ಕೂ ಬಿಡಿಸಲಾಗದ ನಂಟು.ನಾಮಕರಣದಿಂದ ಹಿಡಿದು ಮದುವೆ ತನಕ ಪ್ರತಿ ಕಾರ್ಯಕ್ರಮಕ್ಕೂ ಹೆಣ್ಣಿಗೆ ಒಡವೆ ಅಲಂಕಾರ ಅಗತ್ಯ. ಚಿನ್ನದೊಡವೆ ಭಾರತೀಯ ಸಂಸ್ಕೃತಿಯ ಭಾಗವೇ ಆಗಿದೆ ಎಂದರೆ ತಪ್ಪಿಲ್ಲ.ಏಕೆಂದ್ರೆ ಭಾರತೀಯರಿಗೆ ಚಿನ್ನ ಹೂಡಿಕೆಯ ಸಾಧನವಷ್ಟೇ ಅಲ್ಲ,ಬದಲಿಗೆ ಭಾವನೆಗಳ ತೋರಣವೂ ಹೌದು. ಮದುವೆಗೆ ಅಪ್ಪ ಮಾಡಿಸಿದ ಎರಡೆಳೆಯ ಬಂಗಾರದ ಸರ ಮಗಳಿಗೆ ಉಳಿದೆಲ್ಲ ಒಡವೆಗಳಿಗಿಂತ ಪ್ರಿಯ.ಇಲ್ಲಿ ಅಪ್ಪ ಎಂಬ ಭಾವನಾತ್ಮಕ ಕೊಂಡಿ ಆ ಬಂಗಾರದ ಸರದೊಂದಿಗೆ ಬೆರೆತಿದೆ.ಇನ್ನು ನಾನಾ ವಿನ್ಯಾಸದ ಬಂಗಾರದ ಒಡವೆಗಳನ್ನು ನೋಡಿದ ತಕ್ಷಣ ನನಗೂ ಬೇಕೆಂಬ ಆಸೆಯಿಂದ ಆಭರಣಗಳ ಖಜಾನೆಯನ್ನೇ ಹೊಂದಿರೋ ಮಹಿಳೆಯರೂ ಇದ್ದಾರೆ. ಹೀಗಾಗಿ ಚಿನ್ನದ ದಾಸ್ತಾನಿನ ವಿಷಯಕ್ಕೆ ಬಂದ್ರೆ ಭಾರತ ಸಮೃದ್ಧ ರಾಷ್ಟ್ರ. ಇದು ರಾಜ-ಮಹಾರಾಜರ ಆಳ್ವಿಕೆ ಕಾಲದಿಂದಲೂ ಸಾಬೀತಾಗಿರೋ ವಿಷಯ. 

ಆನ್‌ಲೈನ್‌ನಲ್ಲೇ ಪರ್ಸನಲ್‌ ಲೋನ್ ಸೌಲಭ್ಯ

Latest Videos

undefined

ಚಿನ್ನ ದಾಸ್ತಾನಿನಲ್ಲಿ ಏರಿಕೆ
ಕಳೆದ ಕೆಲವು ದಶಕಗಳಿಂದ ಭಾರತದ ಮನೆಗಳಲ್ಲಿರೋ ಚಿನ್ನದ ದಾಸ್ತಾನಿನಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ ಎಂದು ಹಿರಿಯ ತೆರಿಗೆ ಸಲಹೆಗಾರ ಭಾರ್ಗವ್‌ ಸೆಲರ್ಕ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಭಾರತ ಸರ್ಕಾರ ಈ ಹಿಂದೆಯೇ ಗಮನಿಸಿದ್ದು,ನಿಷ್ಕ್ರಿಯವಾಗಿ ಮನೆಯಲ್ಲಿರೋ ಚಿನ್ನವನ್ನು ಉತ್ಪಾದಕ ಚಟುವಟಿಕೆಗೆ ಬಳಸಿಕೊಳ್ಳೋ ಮೂಲಕ ಭಾರತದ ಬಂಗಾರದ ಆಮದು ಪ್ರಮಾಣ ತಗ್ಗಿಸಲು ಯೋಚಿಸಿತು. ಇದಕ್ಕಾಗಿಯೇ 2015 ರಲ್ಲಿ ಚಿನ್ನ ನಗದೀಕರಣ ಯೋಜನೆಯನ್ನು (ಜಿಎಂಎಸ್‌) ಪರಿಚಯಿಸಿತು. ಆದ್ರೆ ಈ ಯೋಜನೆ ಇನ್ನೂ ನಿರೀಕ್ಷಿತ ಯಶಸ್ಸು ಕಂಡಿಲ್ಲ.

ಏನಿದು ಚಿನ್ನ ನಗದೀಕರಣ?
ಒಬ್ಬ ವ್ಯಕ್ತಿ ತನ್ನ ಬಳಿ ಯಾವುದೇ ರೂಪದಲ್ಲಿರೋ ಚಿನ್ನ(ಗಟ್ಟಿ, ನಾಣ್ಯ, ಆಭರಣ)ವನ್ನು ಬ್ಯಾಂಕ್‌ನ ಜಿಎಂಎಸ್ ಖಾತೆಯಲ್ಲಿಟ್ಟು, ಅದರ ಮೌಲ್ಯಕ್ಕೆ ಬಡ್ಡಿ ಪಡೆಯಬಹುದು. ಆದ್ರೆ ಆಭರಣದ ಬೆಲೆ ನಿಗದಿಪಡಿಸೋವಾಗ ಅದರಲ್ಲಿರೋ ಹರಳುಗಳು ಹಾಗೂ ಇತರ ಲೋಹಗಳನ್ನು ಪರಿಗಣಿಸೋದಿಲ್ಲ. ಜಿಎಂಎಸ್‌ ಖಾತೆಯಿಂದ ನೀವು ಗಳಿಸೋ ಬಡ್ಡಿ ಅಥವಾ ಹಣಕ್ಕೆ ಆದಾಯ ತೆರಿಗೆ ವಿನಾಯ್ತಿ ಇದೆ.

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಇಎಂಐ ಆಯ್ಕೆ ಮಾಡಿದ್ರಾ?

ಪ್ರಕ್ರಿಯೆ ಹೇಗಿರುತ್ತೆ?
ಯಾವುದೇ ಭಾರತೀಯ ಜಿಎಂಎಸ್‌ ಖಾತೆಯಲ್ಲಿ ಚಿನ್ನವಿಟ್ಟು ಅದರ ಮೌಲ್ಯಕ್ಕೆ ಬಡ್ಡಿ ಪಡೆಯಬಹುದು.  ಚಿನ್ನ ನಗದೀಕರಣ ಬಯಸೋ ವ್ಯಕ್ತಿ ಮೊದಲು ಮಾಡಬೇಕಾದ ಕೆಲಸವೆಂದ್ರೆ ಸಂಗ್ರಹ ಹಾಗೂ ಪರಿಶುದ್ಧತೆ ಪರೀಕ್ಷಾ ಕೇಂದ್ರ (ಸಿಪಿಟಿಸಿ)ಕ್ಕೆ ಚಿನ್ನದೊಂದಿಗೆ ಭೇಟಿ ನೀಡಿ ಅದರ ಪರಿಶುದ್ಧತೆ ಪರೀಕ್ಷಿಸೋದು. ಹೌದು, ಸಿಪಿಟಿಸಿ ಚಿನ್ನದ ಶುದ್ಧತೆ ಪರೀಕ್ಷಿಸೋ ಜೊತೆ ಎಷ್ಟು ಮೌಲ್ಯ ನಿಗದಿಪಡಿಸಬಹುದೆಂಬ ಸಲಹೆ ಕೂಡ ನೀಡುತ್ತದೆ. ಸಿಪಿಟಿಸಿ ಸಲಹೆಯಲ್ಲಿ ನೀಡಿರೋ ಮೌಲ್ಯವನ್ನು ಪರಿಗಣಿಸಿ ಬ್ಯಾಂಕ್ ಅಷ್ಟು ಮೊತ್ತದ ಹಣವನ್ನು ಜಿಎಂಎಸ್ ಖಾತೆಯಲ್ಲಿ ಜಮಾ ಮಾಡಿ, ಗ್ರಾಹಕನಿಗೆ ಠೇವಣಿ ಪ್ರಮಾಣಪತ್ರ ನೀಡುತ್ತದೆ. ಜಿಎಂಎಸ್‌ ಖಾತೆಗಳು ಕೆವೈಸಿ ನಿಯಮಗಳಿಗೊಳಪಡೋ ಕಾರಣ ಉಳಿತಾಯ ಖಾತೆ, ಸಾಲ ನೀಡಿಕೆಗೆ ಸಂಬಂಧಿಸಿ ಅನುಸರಿಸೋ ನಿಯಮಗಳು ಇದಕ್ಕೂ ಅನ್ವಯಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಬ್ಯಾಂಕ್‌ ಗ್ರಾಹಕರಿಂದ ನೇರವಾಗಿ ಚಿನ್ನ ಪಡೆದು, ಅವರಿಗೆ ಠೇವಣಿ ಪ್ರಮಾಣಪತ್ರ ನೀಡುತ್ತದೆ. 
 

ನಿರೀಕ್ಷಿತ ಯಶಸ್ಸು ಗಳಿಸಿಲ್ಲ ಏಕೆ?
ಚಿನ್ನ ಅತ್ಯಂತ ಸುರಕ್ಷಿತ ಹೂಡಿಕೆ ಎಂಬ ಭಾವನೆ ಭಾರತೀಯರಲ್ಲಿದೆ.  ಹಣದುಬ್ಬರದ ಸಮಯದಲ್ಲಿ ಇದು ಅತ್ಯಂತ ಪರಿಣಾಮಕಾರಿ ಹೂಡಿಕೆ ಆಯ್ಕೆ ಎಂಬುದು ಅವರ ಅಭಿಪ್ರಾಯ ಕೂಡ. ಹೀಗಾಗಿ ಜಿಎಂಎಸ್‌ ಆಕರ್ಷಕ ಹಾಗೂ ಲಾಭದಾಯಕ ಲಕ್ಷಣಗಳನ್ನು ಹೊಂದಿದ್ರೂ ನಿರೀಕ್ಷಿತ ವೇಗ ಪಡೆದುಕೊಳ್ಳಲಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಯೋಜನೆ ಕುರಿತು ಜನರಿಗೆ ಸರಿಯಾದ ಮಾಹಿತಿ ಇಲ್ಲದಿರೋದು, ಕಡಿಮೆ ಬಡ್ಡಿ ದರ ಹಾಗೂ ಚಿನ್ನವನ್ನು ಆಭರಣದ ರೂಪದಲ್ಲಿ ಮನೆಯಲ್ಲೇ ಕೂಡಿಟ್ಟುಕೊಳ್ಳಬೇಕೆಂಬ ಬಯಕೆ. 

ಇಳಿಸಂಜೇಲಿ ಹೆತ್ತವರ ನೆಮ್ಮದಿ ಜೀವನಕ್ಕೆ ಮಕ್ಕಳೇನು ಮಾಡ್ಬಹುದು?

ಜನಪ್ರಿಯಗೊಳಿಸೋದು ಹೇಗೆ?
ಕೇಂದ್ರ ಸರ್ಕಾರದ ಕೆಲವು ಯೋಜನೆಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದವು. ಇದಕ್ಕೆ ತಾಜಾ ಉದಾಹರಣೆ ಜನ್‌ಧನ್‌ ಯೋಜನೆ. ಆದ್ರೆ ಜಿಎಂಎಸ್‌ ಮಾತ್ರ ನಿರೀಕ್ಷಿತ ವೇಗ ಪಡೆದುಕೊಳ್ಳಲೇ ಇಲ್ಲ. ಹೀಗಾಗಿ ಈ ಯೋಜನೆಯನ್ನು ಇನ್ನೂ ಒಂದಿಷ್ಟು ಜನಸ್ನೇಹಿಯನ್ನಾಗಿ ಮಾಡೋ ಜೊತೆ ಹೆಚ್ಚು ಪ್ರಚಾರ ನೀಡಿದ್ರೆ ನಿಧಾನವಾಗಿ ಯಶಸ್ಸು ಗಳಿಸಬಲ್ಲದು. ಬಡ್ಡಿ ದರವನ್ನು ಶೇ. 4- ಶೇ. 5ಕ್ಕೇರಿಸೋದ್ರಿಂದ ಜನ ಈ ಯೋಜನೆಯತ್ತ ಆಸಕ್ತಿ ತೋರಬಹುದು. ಅಲ್ಲದೆ, ಕೋವಿಡ್‌ ಸೇರಿದಂತೆ ಸಂಕಷ್ಟದ ಸಮಯದಲ್ಲಿ ಚಿನ್ನವನ್ನು ಜಾಸ್ತಿ ವೇಸ್ಟೇಜ್‌ ಕಡಿತವಿಲ್ಲದೆ ಮಾರಾಟ ಮಾಡೋ ಅವಕಾಶವನ್ನು ಕೂಡ ಕಲ್ಪಿಸೋದು ಒಳ್ಳೆಯದು. ಹಾಗೆಯೇ ಜಿಎಂಎಸ್‌ ಪ್ರಮಾಣಪತ್ರದ ಟ್ರೇಡಿಂಗ್‌ಗೆ ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ರೆ ಜಿಎಂಎಸ್‌ ಜನಪ್ರಿಯತೆ ಗಳಿಸೋ ಸಾಧ್ಯತೆಯಿದೆ. ನಿರೀಕ್ಷಿತ ಬದಲಾವಣೆಗಳೊಂದಿಗೆ ಈ ಯೋಜನೆಯನ್ನು ಪ್ರಚಾರ ಪಡಿಸಿದ್ರೆ, ಪ್ರಸ್ತುತ ಕೊರೋನಾ ಕಾರಣಕ್ಕೆ ಆರ್ಥಿಕ ಸಂಕಷ್ಟದಲ್ಲಿರೋ ಅನೇಕ ಕುಟುಂಬಗಳಿಗೆ ವರದಾನವಾಗೋದ್ರಲ್ಲಿ ಅನುಮಾನವಿಲ್ಲ. 
 

click me!