
ಬೆಂಗಳೂರು(ಮಾ.30): ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸರ್ಕಾರವು ಬದ್ಧವಾಗಿದ್ದು, ಮೋಟಾರು ವಾಹನ ತೆರಿಗೆ ಹೊರತುಪಡಿಸಿದರೆ ತೆರಿಗೆ ಸಂಗ್ರಹವು ನಿಗದಿತ ಗುರಿಗಿಂತ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.
ಮಂಗಳವಾರ ಇಲಾಖಾವಾರು ಅನುದಾನ(Grants) ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಮೋಟಾರು ವಾಹನ ತೆರಿಗೆ(Tax) ಸಂಗ್ರಹ ಹೊರತುಪಡಿಸಿದರೆ ಉಳಿದ ತೆರಿಗೆ ಸಂಗ್ರಹವು ನಿರೀಕ್ಷೆಗಿಂತ ಹೆಚ್ಚು ಸಂಗ್ರಹವಾಗಿದೆ. 7,500 ಕೋಟಿ ರು.ಗಿಂತ ಹೆಚ್ಚು ತೆರಿಗೆ ಸಂಗ್ರಹಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ, 9,500 ಕೋಟಿ ರು. ನಷ್ಟು ತೆರಿಗೆ ಸಂಗ್ರಹವಾಗಿದೆ. ಕೋವಿಡ್‌ನಿಂದಾಗಿ(Covid-19) 21-22ನೇ ಆರ್ಥಿಕ ಸಾಲಿನ ಮೊದಲ ಐದು ತಿಂಗಳು ತೆರಿಗೆ ಸಂಗ್ರಹಣೆ ಉತ್ತಮವಾಗಿರಲಿಲ್ಲ. ನಂತರದ ತಿಂಗಳಲ್ಲಿ ತೆರಿಗೆ ಸಂಗ್ರಹಣೆ ಹೆಚ್ಚಳವಾಗಿದೆ. ಆರ್ಥಿಕ ಶಿಸ್ತಿಗೆ ಒತ್ತು ನೀಡಿ ತೆರಿಗೆ ಸಂಗ್ರಹದಲ್ಲಿ ದಕ್ಷತೆ ತೋರಿದ ಪರಿಣಾಮ ಗುರಿ ಮೀರಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಹೇಳಿದರು.
26 ಲಕ್ಷ ಕೋಟಿ ರು. ಪೆಟ್ರೋಲ್ ತೆರಿಗೆ ಲೆಕ್ಕ ಕೊಡಿ: ಕೇಂದ್ರಕ್ಕೆ ಕಾಂಗ್ರೆಸ್ ಸವಾಲು!
ತೆರಿಗೆ ಸಂಗ್ರಹದಲ್ಲಿನ ಕೊರತೆಗಳನ್ನು ಸರಿಪಡಿಸಲು ಕೈಗೊಂಡ ಕ್ರಮಗಳಿಂದ ನಿಗದಿತ ಗುರಿ ಮೀರಿ ಆದಾಯ ಸಂಗ್ರಹ ಮಾಡಲಾಗಿದೆ. ಸ್ಟ್ಯಾಂಪ್ ಡ್ಯೂಟಿಯಲ್ಲಿ(Stamp Duty) ಶೇ.10ರಷ್ಟು ರಿಯಾಯಿತಿ(Discount) ನೀಡಿದ್ದರಿಂದ 100 ಕೋಟಿ ರು. ಹೆಚ್ಚು ಆದಾಯ ಸಂಗ್ರಹವಾಗಿದೆ. ತೆರಿಗೇತರ ಆದಾಯ ಹೆಚ್ಚಳಕ್ಕೂ ಗಮನ ನೀಡಲಾಗಿದೆ. ನಾಲ್ಕು ಸಾವಿರ ಕೋಟಿ ರು. ತೆರಿಗೆಯೇತರ ಆದಾಯ ಗುರಿಯನ್ನು ಹೊಂದಲಾಗಿದ್ದು, ಆರು ಸಾವಿರ ಕೋಟಿ ರು. ತೆರಿಗೆಯೇತರ ಆದಾಯವನ್ನು ಸಂಗ್ರಹಿಸಲಾಗಿದೆ. ಮಾರಾಟವಾಗದೆ ಉಳಿದಿದ್ದ ಕಬ್ಬಿಣದ ಅದಿರನ್ನು ಮಾರಾಟ ಮಾಡಿ 500 ಕೋಟಿ ರು. ಸಂಗ್ರಹಿಸಲಾಗಿದೆ. ಅಂತೆಯೇ ಬಾಕಿ ಇದ್ದ ಅರಣ್ಯ ಇಲಾಖೆಯ(Forest Department) ಅನುಮತಿಯನ್ನು ನೀಡಿ ಗಣಿ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಪರಿಣಾಮ ತೆರಿಗೇತರ ಆದಾಯ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
4000 ಕೋಟಿ ರು. ಕಮ್ಮಿ ಸಾಲ ಮಾಡಿದ್ದೇವೆ
2022-23ನೇ ಆರ್ಥಿಕ ವರ್ಷದಲ್ಲಿ 67 ಸಾವಿರ ಕೋಟಿ ರು. ಸಾಲ ಪಡೆಯಲು ಅವಕಾಶ ಇದ್ದರೂ 63,100 ಕೋಟಿ ರು. ಸಾಲ ಪಡೆದು ನಾಲ್ಕು ಸಾವಿರ ಕೋಟಿ ರು. ಸಾಲ ಕಡಿಮೆ ಮಾಡಿದ್ದೇವೆ. ಮುಂದಿನ ದಿನದಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ ವಿತ್ತೀಯ ಕೊರತೆಗಳನ್ನು ಸರಿದೂಗಿಸಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಆದಾಯ ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಹೇಳಿದರು.
Supreme Court: ಇತರೆ ರಾಜ್ಯದ ಲಾಟರಿ ಮೇಲೆ ತೆರಿಗೆಗೆ ಕರ್ನಾಟಕ ಸರ್ಕಾರಕ್ಕೆ ಹಕ್ಕಿದೆ
21-22ನೇ ಸಾಲಿನಲ್ಲಿ ಆರ್ಥಿಕ ಕೊರತೆಯು 15 ಸಾವಿರ ಕೋಟಿ ರು. ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆರು ಸಾವಿರ ಕೋಟಿ ರು. ಮಾತ್ರ ಆರ್ಥಿಕ ಕೊರತೆಯಾಗಿದೆ. 22-23ನೇ ಸಾಲಿನಲ್ಲಿ ಆರ್ಥಿಕ ಕೊರತೆಯು 14 ಸಾವಿರ ಕೋಟಿ ರು. ಅಂದಾಜು ಮಾಡಲಾಗಿದೆ. ಇದನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿ
ಹುಬ್ಬಳ್ಳಿ: ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿಯಲ್ಲಿದೆ. ಕೈಗಾರಿಕೆ ಹಾಗೂ ಉದ್ದಿಮೆ ಸ್ಥಾಪನೆ ಮಾಡಲು ಹೆಚ್ಚಿನ ಸವಲತ್ತು ಹಾಗೂ ಸಹಾಯಧನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೀಡಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಸಹಾಯವನ್ನು ಘೋಷಿಸಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಎಫ್.ಎಂ.ಸಿಜಿ ಕ್ಲಸ್ಟರ್ (FMCG Cluster) ಸ್ಥಾಪನೆಗೆ ವಿಶೇಷ ಪ್ರೋತ್ಸಾಹ ನೀಡಿದ್ದು. ಒಂದು ಲಕ್ಷ ಉದ್ಯೋಗ (One Lakh Employment) ಅವಕಾಶಗಳು ಸೃಷ್ಠಿಯಾಗಲಿವೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.