ಹೊಸ ಸಂಸತ್ ಭವನ ನಿರ್ಮಾಣ ಹೊಣೆ ಟಾಟಾಗೆ!

By Kannadaprabha NewsFirst Published Sep 17, 2020, 7:42 AM IST
Highlights

ಹೊಸ ಸಂಸತ್‌ ಭವನ ನಿರ್ಮಿಸುವ ಗುತ್ತಿಗೆ ಟಾಟಾ ಕಂಪನಿಗೆ| 861.9 ಕೋಟಿ ರು.ಗೆ ಗುತ್ತಿಗೆ ಪಡೆದ ಟಾಟಾ ಪ್ರಾಜೆಕ್ಟ್ ಲಿ.| 865 ಕೋಟಿಗೆ ಬಿಡ್‌ ಸಲ್ಲಿಸಿದ್ದ ಎಲ್‌ ಆ್ಯಂಡ್‌ ಟಿಗೆ ಸೋಲು

ನವದೆಹಲಿ(ಸೆ.17): ರಾಷ್ಟ್ರ ರಾಜಧಾನಿಯಲ್ಲಿ ದೇಶಕ್ಕೆ ಹೊಸ ಸಂಸತ್‌ ಭವನ ನಿರ್ಮಿಸುವ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಗುತ್ತಿಗೆ ಪ್ರತಿಷ್ಠಿತ ಟಾಟಾ ಪ್ರಾಜೆಕ್ಟ್ ಲಿ. ಕಂಪನಿಗೆ ಲಭಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಅಂತಿಮ ಸುತ್ತಿನ ಬಿಡ್‌ ಸಲ್ಲಿಕೆ ಪ್ರಕ್ರಿಯೆಯಲ್ಲಿ ಬುಧವಾರ ಟಾಟಾ ಕಂಪನಿ 861.90 ಕೋಟಿ ರು.ಗೆ ಹಾಗೂ ಎಲ್‌ ಆ್ಯಂಡ್‌ ಟಿ ಕಂಪನಿ 865 ಕೋಟಿ ರು.ಗೆ ಬಿಡ್‌ ಸಲ್ಲಿಸಿದ್ದವು. ನಿಯಮದಂತೆ ಕಡಿಮೆ ಬಿಡ್‌ ಸಲ್ಲಿಸಿದ ಕಂಪನಿಗೆ ಗುತ್ತಿಗೆ ದೊರೆತಿದೆ. ಅದಕ್ಕೂ ಮುನ್ನ ತಾಂತ್ರಿಕ ಸುತ್ತಿನಲ್ಲಿ ಮೂರು ಕಂಪನಿಗಳು ಆಯ್ಕೆಯಾಗಿದ್ದವು. ಆದರೆ, ಕೊನೆಗೆ ಎರಡೇ ಕಂಪನಿಗಳು ಫೈನಾನ್ಷಿಯಲ್‌ ಬಿಡ್‌ ಸಲ್ಲಿಸಿದ್ದವು. ಬಿಡ್‌ ಗೆದ್ದ ಕಂಪನಿಗೆ ಶೀಘ್ರದಲ್ಲೇ ಅಧಿಕೃತ ಕಾರ್ಯಾದೇಶ ಲಭ್ಯವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈಗಿರುವ ಸಂಸತ್‌ ಭವನದ ಸಮೀಪದಲ್ಲೇ ಹೊಸ ಸಂಸತ್‌ ಭವನ ನಿರ್ಮಾಣವಾಗಲಿದೆ. 21 ತಿಂಗ ಅವಧಿಯೊಳಗೆ ನಿರ್ಮಾಣ ಕಾರ್ಯ ಮುಗಿಸಲು ಗುರಿ ನಿಗದಿಪಡಿಸಿಕೊಳ್ಳಲಾಗಿದೆ.

ಹೊಸ ಸಂಸತ್‌ ಕಟ್ಟಡ ಹೇಗಿರಲಿದೆ?

ಹೊಸ ಸಂಸತ್‌ ಭವನ ಮೂರು ಅಂತಸ್ತಿನ ಕಟ್ಟಡವಾಗಿರಲಿದ್ದು, ತ್ರಿಕೋಣಾಕಾರದಲ್ಲಿರಲಿದೆ. ಸದ್ಯ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದ ನಂತರ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಕಟ್ಟಡ ಒಟ್ಟು 60,000 ಚದರ ಮಿಟೀರ್‌ ವಿಸ್ತೀರ್ಣ ಹೊಂದಿರಲಿದ್ದು, ಪಾರ್ಲಿಮೆಂಟ್‌ ಹೌಸ್‌ ಎಸ್ಟೇಟ್‌ನ 118ನೇ ನಂ. ಪ್ಲಾಟ್‌ನಲ್ಲಿ ನಿರ್ಮಾಣವಾಗಲಿದೆ.

ಮೋದಿ ಸರ್ಕಾರ ರೂಪಿಸಿರುವ ಸೆಂಟ್ರಲ್‌ ವಿಸ್ತಾ ರಿ-ಡೆವಲಪ್‌ಮೆಂಟ್‌ ಯೋಜನೆಯ ಮೊದಲ ಭಾಗವಾಗಿ ಹೊಸ ಸಂಸತ್‌ ಭವನ ನಿರ್ಮಾಣವಾಗುತ್ತಿದೆ. ನಂತರದ ಹಂತದಲ್ಲಿ ಕೇಂದ್ರ ಸರ್ಕಾರದ ಮುಖ್ಯ ಸಚಿವಾಲಯಗಳು ಇರುವ ನಾತ್‌ರ್‍ ಬ್ಲಾಕ್‌ ಮತ್ತು ಸೌತ್‌ ಬ್ಲಾಕ್‌ ಕಟ್ಟಡಗಳನ್ನು ವಸ್ತು ಸಂಗ್ರಹಾಲಯ ಮಾಡಲಾಗುತ್ತದೆ. ಆಗ ಆಡಳಿತಾತ್ಮಕ ಕಚೇರಿಗಳಿಗಾಗಿ ಹೊಸ ಕಟ್ಟಡ ನಿರ್ಮಾಣವಾಗಲಿದ್ದು, ಅದಕ್ಕೆ ನೆಲಮಹಡಿಯಲ್ಲಿ ಮೆಟ್ರೋ ರೈಲ್ವೆ ಸಂಪರ್ಕ ಕೂಡ ಇರಲಿದೆ.

click me!