
ಮುಂಬೈ (ಸೆ.6): ದೇಶದ ದೈತ್ಯ ಉದ್ಯಮ ಸಮೂಹ 'ಟಾಟಾ ಸನ್ಸ್' (Tata Sons) ಪ್ರಸ್ತುತ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಎರಡನೇ ಅವಧಿಯು 2027ರ ಫೆಬ್ರವರಿ 20ರಂದು ಕೊನೆಗೊಳ್ಳಲಿದ್ದು, ಅವರ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆ ಈಗಾಗಲೇ ಕಾವು ಪಡೆದುಕೊಂಡಿದೆ. ವರದಿಗಳ ಪ್ರಕಾರ, ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಮೂವರು ಪ್ರಮುಖ ದಿಗ್ಗಜರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಟಾಟಾ ಸ್ಟೀಲ್ ಸಿಇಒ ಟಿ.ವಿ. ನರೇಂದ್ರನ್, ಟಾಟಾ ಸನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹಾಗೂ ಗ್ರೂಪ್ ಸಿಎಫ್‌ಒ ಸೌರಭ್ ಅಗರ್‌ವಾಲ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ಎಂಡಿ ಹಾಗೂ ಸಿಇಒ ಆಶಿಶ್ ಚೌಹಾಣ್ ಈ ರೇಸ್‌ನ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
ಅಂತಿಮ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲವಾದರೂ, ಈ ನಿರ್ಣಾಯಕ ಆಯ್ಕೆಯಲ್ಲಿ ಟಾಟಾ ಸನ್ಸ್ ಆಡಳಿತ ಮಂಡಳಿ (Board) ಹಾಗೂ 'ಟಾಟಾ ಟ್ರಸ್ಟ್' (Tata Trusts) ಪ್ರಮುಖ ಪಾತ್ರ ವಹಿಸಲಿವೆ.
ಟಾಟಾ ಗ್ರೂಪ್‌ನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದ ಅಪಾರ ಅನುಭವ ಹೊಂದಿರುವ ಟಿ.ವಿ. ನರೇಂದ್ರನ್, ಚಂದ್ರಶೇಖರನ್ ಅವರ ಉತ್ತರಾಧಿಕಾರಿಯಾಗಲು ಅತ್ಯಂತ ಬಲವಾದ 'ಆಂತರಿಕ ಸ್ಪರ್ಧಿ' (Internal Contender) ಎಂದು ಪರಿಗಣಿತರಾಗಿದ್ದಾರೆ. 1988ರಲ್ಲಿ ಟಾಟಾ ಸ್ಟೀಲ್ ಸೇರಿದ ಇವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಪ್ರಸ್ತುತ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಾಗತಿಕ ಕಚ್ಚಾವಸ್ತುಗಳ ಏರಿಳಿತ, ಬೃಹತ್ ಬಂಡವಾಳ ಹೂಡಿಕೆ ಹಾಗೂ ಯುರೋಪ್ ಕಾರ್ಯಾಚರಣೆಯ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಹೆಗ್ಗಳಿಕೆ ಇವರಿಗಿದೆ.
ಚಂದ್ರಶೇಖರನ್ ಅವರ ನೇತೃತ್ವದಲ್ಲೇ 2017ರಲ್ಲಿ ಗ್ರೂಪ್ ಸಿಎಫ್‌ಒ ಆಗಿ ಟಾಟಾ ಸನ್ಸ್ ಸೇರಿದ ಸೌರಭ್ ಅಗರ್‌ವಾಲ್, ಪ್ರಸ್ತುತ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹಾಗೂ ಗ್ರೂಪ್ ಸಿಎಫ್‌ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಐಟಿ ರೂರ್ಕಿ ಮತ್ತು ಐಐಎಂ ಕಲ್ಕತ್ತಾದ ಹಳೆಯ ವಿದ್ಯಾರ್ಥಿಯಾಗಿರುವ ಇವರು, 1995ರಲ್ಲಿ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಕ್ಷೇತ್ರದಿಂದ ವೃತ್ತಿಜೀವನ ಆರಂಭಿಸಿದರು. ಡಿಎಸ್‌ಪಿ ಮೆರಿಲ್ ಲಿಂಚ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಹಾಗೂ ಆದಿತ್ಯ ಬಿರ್ಲಾ ಗ್ರೂಪ್‌ಗಳಲ್ಲಿ ಹಿರಿಯ ಹುದ್ದೆಗಳಲ್ಲಿದ್ದ ಇವರು, ಟಾಟಾ ಸನ್ಸ್‌ನಲ್ಲಿ ಸಾಂಪ್ರದಾಯಿಕ ಹಣಕಾಸು ನಿರ್ವಹಣೆಯ ಜೊತೆಗೆ ಬಂಡವಾಳ ಹಂಚಿಕೆ, ಹೂಡಿಕೆ ನಿರ್ಧಾರ ಹಾಗೂ ಗ್ರೂಪ್ ಪೋರ್ಟ್‌ಫೋಲಿಯೋ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಟಾಟಾ ಕ್ಯಾಪಿಟಲ್, ಟಾಟಾ ಪ್ಲೇ, ಟಾಟಾ ಎಐಎ, ಟಾಟಾ ಎಐಜಿ, ಟಾಟಾ ಪವರ್ ರಿನ್ಯೂವಬಲ್, ಟಾಟಾ 1mg ಹಾಗೂ ಬಿಗ್‌ಬಾಸ್ಕೆಟ್ ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ.
ಈ ರೇಸ್‌ನಲ್ಲಿ ಪ್ರಮುಖ 'ಡಾರ್ಕ್ ಹಾರ್ಸ್' (ಅನಿರೀಕ್ಷಿತ ಅಭ್ಯರ್ಥಿ) ಆಗಿ ಹೊರಹೊಮ್ಮಿರುವ ಆಶಿಶ್ ಚೌಹಾಣ್, ಪ್ರಸ್ತುತ ಎನ್‌ಎಸ್‌ಇ (NSE) ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಆಗಿದ್ದಾರೆ. ಕ್ಯಾಪಿಟಲ್ ಮಾರ್ಕೆಟ್, ತಂತ್ರಜ್ಞಾನ ಹಾಗೂ ಹಣಕಾಸು ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು 1990ರ ದಶಕದಲ್ಲಿ ಎನ್‌ಎಸ್‌ಇ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಸಿಇಒ ಆಗಿ ಕಾರ್ಯನಿರ್ವಹಿಸಿ, 2022ರಲ್ಲಿ ಮತ್ತೆ ಎನ್‌ಎಸ್‌ಇಗೆ ಮರಳಿದರು. ಐಐಟಿ ಬಾಂಬೆ ಹಾಗೂ ಐಐಎಂ ಕಲ್ಕತ್ತಾ ಪದವೀಧರರಾದ ಇವರು ಐಡಿಬಿಐ ಬ್ಯಾಂಕ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲೂ ಸೇವೆ ಸಲ್ಲಿಸಿದ್ದಾರೆ.
ಏರ್ ಇಂಡಿಯಾ ಅಪ್‌ಡೇಟ್, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಇವಿ (ಎಲೆಕ್ಟ್ರಿಕ್ ವಾಹನ) ಹಾಗೂ ಡಿಜಿಟಲ್ ಉದ್ಯಮಗಳಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಮಾಡುತ್ತಿರುವ ಈ ಹಂತದಲ್ಲಿ ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಟಾಟಾ ಸನ್ಸ್‌ನ ಸಂಭಾವ್ಯ ಐಪಿಒ/ಲಿಸ್ಟಿಂಗ್, ಬಂಡವಾಳ ಹಂಚಿಕೆ ಹಾಗೂ ಕಾರ್ಪೊರೇಟ್ ಆಡಳಿತದಂತಹ ಪ್ರಮುಖ ನಿರ್ಧಾರಗಳು ಹೊಸ ನಾಯಕನ ಹೆಗಲೇರಲಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.