ಒಂದೇ ದಿನ ಶೇ. 40ರಷ್ಟು ಕುಸಿದ ಟಾಟಾ ಮೋಟಾರ್ಸ್‌ ಷೇರು, ಆದ್ರೆ ಚಿಂತೆ ಪಡೋ ಅಗತ್ಯವಿಲ್ಲ!

Published : Oct 14, 2025, 06:49 PM IST
Tata Motors Share Price

ಸಾರಾಂಶ

Tata Motors Share Price Drops 40% After Demerger ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ವಿಭಾಗಗಳನ್ನು ಬೇರ್ಪಡಿಸಿದ ನಂತರ, ಅದರ ಷೇರುಗಳ ಮೌಲ್ಯದಲ್ಲಿ ಸುಮಾರು 40% ಕುಸಿತ ಕಂಡಿದೆ. ಈ ಕುಸಿತವು ಡೀಮರ್ಜರ್‌ ಯೋಜನೆಯ ತಾಂತ್ರಿಕ ಹೊಂದಾಣಿಕೆಯಾಗಿದೆ.

ಮುಂಬೈ (ಅ.14): ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನ ವ್ಯವಹಾರವು ಪ್ರಯಾಣಿಕ ವಾಹನ ವಿಭಾಗದಿಂದ ಬೇರ್ಪಟ್ಟ ನಂತರ, ಮಂಗಳವಾರ ಟಾಟಾ ಮೋಟಾರ್ಸ್ ಷೇರುಗಳಲ್ಲಿ ಭಾರಿ ಕುಸಿತ ಕಂಡಿದ್ದು, ಷೇರುಗಳ ಮೌಲ್ಯದಲ್ಲಿ ಸುಮಾರು ಶೇ 40 ರಷ್ಟು ಕುಸಿತ ಕಂಡಿದೆ. ಮಂಗಳವಾರದಿಂದ ಟಾಟಾ ಮೋಟಾರ್ಸ್‌ನ ಷೇರುಗಳು 399 ರೂಪಾಯಿಂದ ವಹಿವಾಟು ಆರಂಭಿಸಿದವು. ಇದು ಸೋಮವಾರದ ಅಂತ್ಯದ ವೇಳೆ ಟಾಟಾ ಮೋಟಾರ್ಸ್‌ ಷೇರಿನ 660.90 ಬೆಲೆಗಿಂತ ಶೇ. 40ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ಕಂಪನಿಯ ಮೌಲ್ಯ 1.45 ಲಕ್ಷ ಕೋಟಿಯಷ್ಟಾಗಿದೆ.

ಟಾಟಾ ಮೋಟಾರ್ಸ್‌ ಷೇರು ಕುಸಿದಿದ್ದು ಏಕೆ?

ತನ್ನ ವಾಣಿಜ್ಯ ವಾಹನ ವ್ಯವಹಾರದ ಪ್ರತ್ಯೇಕತೆಯಿಂದಾಗಿ ತಾಂತ್ರಿಕ ಹೊಂದಾಣಿಕೆಯಲ್ಲಿ ಈ ಇಳಿಕೆ ಕಂಡುಬಂದಿದೆ ಎಂದು ಕಂಪನಿ ಹೇಳಿದೆ. ಒಂದು ಕಂಪನಿಯನ್ನು ಎರಡು ಕಂಪನಿಗಳನ್ನಾಗಿ ಮಾಡುವ ಡೀಮರ್ಜರ್‌ ಯೋಜನೆಯಡಿಯಲ್ಲಿ, ಹೂಡಿಕೆದಾರರು ಅಕ್ಟೋಬರ್ 14 ರಂದು ಹೊಂದಿದ್ದ ಪ್ರತಿ ಟಾಟಾ ಮೋಟಾರ್ಸ್ ಷೇರಿಗೆ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಲಿಮಿಟೆಡ್ (TMLCV) ನ ಒಂದು ಷೇರನ್ನು ಪಡೆಯುತ್ತಾರೆ. ಟಾಟಾ ಮೋಟಾರ್ಸ್ ಷೇರು ಬೆಲೆಯಲ್ಲಿನ ಕುಸಿತವು ವಾಣಿಜ್ಯ ವಾಹನ ವ್ಯವಹಾರದ ಪ್ರತ್ಯೇಕತೆಯನ್ನು ತೋರಿಸುತ್ತದೆ. ಇದರಿಂದ ಹೂಡಿಕೆದಾರರಿಗೆ ಯಾವುದೇ ನಷ್ಟವಿಲ್ಲ. ಅವರ ಹೂಡಿಕೆ ಮೌಲ್ಯ ಅಷ್ಟೇ ಇರುತ್ತದೆ.

"ಕಂಪನಿಯ ಅರ್ಹ ಷೇರುದಾರರನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಅಕ್ಟೋಬರ್ 14, 2025 ರ ಮಂಗಳವಾರವನ್ನು 'ದಾಖಲೆ ದಿನಾಂಕ' ಎಂದು ನಿಗದಿಪಡಿಸಿದೆ ಮತ್ತು ದಾಖಲೆ ದಿನಾಂಕದಂದು (ಯೋಜನೆಯ ಅಡಿಯಲ್ಲಿ ಷೇರು ಅರ್ಹತೆ ಅನುಪಾತದ ಪ್ರಕಾರ) ಅವರು TML ನಲ್ಲಿ ಹೊಂದಿರುವ ಪ್ರತಿ 1 (ಒಂದು) ಷೇರಿಗೆ (ಪ್ರತಿಯೊಂದು ಸಂಪೂರ್ಣವಾಗಿ ಪಾವತಿಸಿದ ರೂ. 2/- ಮುಖಬೆಲೆ) TMLCV ಯಲ್ಲಿ 1 (ಒಂದು) ಪಾಲನ್ನು (ಪ್ರತಿಯೊಂದು ಸಂಪೂರ್ಣವಾಗಿ ಪಾವತಿಸಿದ ರೂ. 2/- ಮುಖಬೆಲೆ) ಹಂಚಿಕೆ ಮಾಡಲಾಗುತ್ತದೆ" ಎಂದು ಟಾಟಾ ಮೋಟಾರ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್

ಟಾಟಾ ಮೋಟಾರ್ಸ್, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (TMPVL) ಎಂಬ ಹೊಸ ಹೆಸರಿನಲ್ಲಿ ಲಿಸ್ಟ್‌ ಆಗಲಿದೆ. ಇದು ಕಂಪನಿಯ ಪ್ರಯಾಣಿಕ ವಾಹನ, ಎಲೆಕ್ಟ್ರಿಕ್‌ ವಾಹನ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ (JLR) ವ್ಯವಹಾರಗಳನ್ನು ನಿರ್ವಹಿಸುತ್ತದೆ.

ಹೊಸದಾಗಿ ರೂಪುಗೊಂಡ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಲಿಮಿಟೆಡ್ (ಟಿಎಂಎಲ್‌ಸಿವಿ) ಕಂಪನಿ ನಿಯಂತ್ರಕ ಅನುಮೋದನೆಗಳನ್ನು ಪೂರ್ಣಗೊಳಿಸಿದ ನಂತರ ಟಾಟಾ ಮೋಟಾರ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗುತ್ತದೆ. ಸದ್ಯಕ್ಕೆ, ವಿನಿಮಯ ಕೇಂದ್ರಗಳು ಲಿಸ್ಟಿಂಗ್‌ ಅನುಮೋದನೆ ನೀಡುವವರೆಗೆ TMLCV ಷೇರುಗಳು ವಹಿವಾಟು ನಡೆಸುವುದಿಲ್ಲ, ಈ ಪ್ರಕ್ರಿಯೆಯು ಸಾಮಾನ್ಯವಾಗಿ 45-60 ದಿನಗಳನ್ನು ತೆಗೆದುಕೊಳ್ಳುತ್ತದೆ.

ಕಂಪನಿಯ ಹಳೆಯ ಡೈರೆಕ್ಟಿವ್‌ ಕಾಂಟ್ರಾಕ್ಟ್‌ಗಳು ಸೋಮವಾರ ಮುಕ್ತಾಯಗೊಂಡವು ಮತ್ತು TMPVL ಗಾಗಿ ಹೊಸ F&O ಒಪ್ಪಂದಗಳು ಮಂಗಳವಾರ ವಹಿವಾಟು ಪ್ರಾರಂಭವಾದವು. TMLCV ತಕ್ಷಣವೇ F&O ವಹಿವಾಟಿಗೆ ಲಭ್ಯವಿರುವುದಿಲ್ಲ.

ಭಯಪಡುವ ಅಗತ್ಯವಿಲ್ಲ

ದಾಖಲೆ ದಿನಾಂಕದಂದು ಷೇರುಗಳನ್ನು ಹೊಂದಿರುವ ಹೂಡಿಕೆದಾರರಿಗೆ, ಹಂಚಿಕೆ ಹೀಗಿದೆ:

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ 100 ಷೇರುಗಳು (ಟಾಟಾ ಮೋಟಾರ್ಸ್‌ನಿಂದ ಮರುನಾಮಕರಣ ಮಾಡಲಾಗಿದೆ).

ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಲಿಮಿಟೆಡ್‌ನ 100 ಷೇರುಗಳು (ಹೊಸದಾಗಿ ಪಟ್ಟಿ ಮಾಡಲಾದ ಘಟಕ).

ಮುಂದಿನ ನಾಲ್ಕರಿಂದ ಆರು ವಾರಗಳಲ್ಲಿ, ನವೆಂಬರ್ ಮಧ್ಯದ ವೇಳೆಗೆ TMLCV ಷೇರುಗಳ ಲಿಸ್ಟಿಂಗ್‌ ನಿರೀಕ್ಷಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!