
ಮುಂಬೈ (ಆ.12) ಟಾಟಾ ಗ್ರೂಪ್ ಕೋಲಾಹಲ ಇದೀಗ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ಟಾಟಾ ಸನ್ಸ್ ಚೇರ್ಮೆನ್ ಎನ್ ಚಂದ್ರಶೇಖರನ್ ದಿಢೀರ್ ರಾಜೀನಾಮೆಯಿಂದ ಟಾಟಾ ಗ್ರೂಪ್ ಷೇರುಗಳು ಪಾತಾಳಕ್ಕೆ ಕುಸಿದಿದೆ. ಟಾಟಾ ಕನ್ಸೆಲ್ಟನ್ಸಿ ಸರ್ವೀಸ್ (ಟಿಸಿಎಸ್), ಟಾಟಾ ಮೋಟಾರ್ಸ್ ಸೇರಿದಂತೆ ಟಾಟಾ ಗ್ರೂಪ್‌ನ ವಿವಿಧ ಕಂಪನಿಗಳ ಷೇರುಗಳು ಶೇಕಡಾ 4ರಷ್ಟು ಕುಸಿತ ಕಂಡಿದೆ. ಟಾಟಾ ಸಂಸ್ಥೆಯಲ್ಲಿ ನಡೆದ ಬೆಳವಣಿಗೆ ಹೂಡಿಕೆದಾರರ ಆತಂಕ ಹೆಚ್ಚಿಸಿದೆ.
ಟಾಟಾ ಗ್ರೂಪ್ ಅಡಿಯಲ್ಲಿರುವ ಟಾಟಾ ಮೋಟಾರ್ಸ್, ಟಿಸಿಎಸ್ ದೈತ್ಯ ಕಂಪನಿಗಳಾಗಿ ಬೆಳೆದು ನಿಂತಿದೆ. ಇದೀಗ ಈ ಎರಡೂ ಕಂಪನಿಗಳ ಷೇರುಗಳು ಕುಸಿತ ಕಂಡಿದೆ. ಟಾಟಾ ಗ್ರೂಪ್‌ನ ಲಿಸ್ಟೆಡ್ ಕಂಪನಿಗಳ ಷೇರುಗಳ ಕುಸಿತದಿಂದ ಮಾರುಕಟ್ಟೆ ಬಂಡವಾಳ ( Market Cap) 44 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಷೇರು ಮೌಲ್ಯದಲ್ಲಿ ಶೇಕಡಾ 4.8ರಷ್ಟು ಕುಸಿತ ಕಂಡಿದೆ. ಆರಂಭದಲ್ಲೇ ಟಿಸಿಎಸ್ ಷೇರುಗಳು ಕುಸಿತ ಕಂಡಿದೆ. ಎನ್‌ಎಸ್‌ಇ (NSE) ಪೇಟೆಯಲ್ಲಿ ಟಿಸಿಎಸ್ ಷೇರು ಮೌಲ್ಯ 2,322 ರೂಪಾಯಿಗೆ ಇಳಿಕೆಯಾಗಿದೆ.ಟೇಜಾಸ್ ನೆಟ್‌ವರ್ಕ್ಸ್ ಷೇರು ಶೇ. 2.17, ಟಾಟಾ ಮೋಟಾರ್ಸ್ ಶೇ. 1.65 ರಿಂದ ಶೇ. 3.3 ರಷ್ಟು, ಟಾಟಾ ಕಮ್ಯುನಿಕೇಷನ್ಸ್ ಶೇ. 1.25, ಟಾಟಾ ಎಲ್ಕ್ಸಿ ಶೇ. 1.19 ಹಾಗೂ ಟಾಟಾ ಪವರ್ ಷೇರು ಶೇ. 1.09 ರಷ್ಟು ಕುಸಿತ ಕಂಡಿವೆ. ಇದರ ಜೊತೆಗೆ ಟಾಟಾ ಸ್ಟೀಲ್, ಇಂಡಿಯನ್ ಹೊಟೆಲ್, ವೋಲ್ಟಾಸ್, ಟ್ರೆಂಟ್ ಕಂಪನಿಗಳ ಷೇರು ಇಳಿಕೆಯಾಗಿದೆ.
ಟಾಟಾ ಸನ್ಸ್ ಸಂಸ್ಥೆ ಚೇರ್ಮೆನ್ ಎನ್ ಚಂದ್ರಶೇಖರನ್ ಕಳೆದ 40 ವರ್ಷಗಳಿಂದ ಟಾಟಾ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಟಾಟಾ ಟ್ರಸ್ಟ್ ಹಾಗೂ ಟಾಟಾ ಸನ್ಸ್ ನಡುವಿ ಜಟಾಪಟಿ, ಅಸಮಾಧಾನಗಳ ನಡುವೆ ಎನ್ ಚಂದ್ರಶೇಖರನ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಫೆಬ್ರವರಿ 2027ರ ವರೆಗೆ ಎನ್ ಚಂದ್ರಶೇಖರನ್ ಅವಧಿ ಇದೆ. ಆದರೆ ಇದಕ್ಕೂ ಮೊದಲೇ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ತಮ್ಮ ರಾಜೀನಾಮೆಯಲ್ಲಿ ಶೀಘ್ರವೇ ಉತ್ತರಾಧಿಕಾರಿ ನೇಮಕ ಮಾಡಬೇಕು ಎಂದ ಮನವಿ ಮಾಡಿದ್ದಾರೆ. ಅಧಿಕಾರದಲ್ಲಿ ಮುಂದುವರಿಯುತ್ತಿಲ್ಲ. ಕೊನೆ ಕ್ಷಣದಲ್ಲಿ ಗೊಂದಲ ನಿರ್ಮಾಣವಾಗಬಾರದು. ಕಂಪನಿಗೆ ಉತ್ತರಾಧಿಕಾರ ನೇಮಕಕ್ಕೆ ಕಾಲವಕಾಶ ಇದೆ ಎಂದು ಎನ್ ಚಂದ್ರಶೇಖರನ್ ಹೇಳಿದ್ದಾರೆ.
ಕಳೆದ 10 ವರ್ಷಗಳಿಂದ ಎನ್ ಚಂದ್ರಶೇಖರನ್ ಟಾಟಾ ಸನ್ಸ್ ಚೇರ್ಮೆನ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಟಾಟಾ ಸನ್ಸ್ ಹಲವು ಮೈಲಿಗಲ್ಲು ಸಾಧಿಸಿದೆ. ಟಾಟಾ ಸನ್ಸ್‌ನಿಂದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಮರು ವಶಕ್ಕೆ ಪಡೆದಿತ್ತು. ಟಾಟಾ ಡಿಜಿಟಲ್ ಹಾಗೂ ಸೆಮಿಕಂಡಕ್ಟರ್ ಕ್ಷೇತಕ್ಕೆ ಕಾಲಿಟ್ಟಿರುವುದು ಎನ್ ಚಂದ್ರಶೇಖನ್ ಮಾರ್ಗದರ್ಶನದಲ್ಲಿ ಅನ್ನೋದು ಗಮನಾರ್ಹ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.