
ನವದೆಹಲಿ (ಸೆ.30): ಔಷಧಗಳ ನೈಜ ಖರೀದಿ ವೆಚ್ಚ (Procurement Cost) ಹಾಗೂ ಮಾರುಕಟ್ಟೆಯಲ್ಲಿ ನಿಗದಿಪಡಿಸುವ ಗರಿಷ್ಠ ಚಿಲ್ಲರೆ ಬೆಲೆ (MRP) ನಡುವಿನ ಅತಿಯಾದ ವ್ಯತ್ಯಾಸವನ್ನು ಎಂದು ಹಗಲು ದರೋಡೆ ಎಂದಿರುವ ಸುಪ್ರೀಂ ಕೋರ್ಟ್, ಈ ಅಪಾರದರ್ಶಕ ದರಗಳಿಂದಾಗಿ ಸಾಮಾನ್ಯ ರೋಗಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದರೆ, ಖಾಸಗಿ ಆಸ್ಪತ್ರೆಗಳು ಹಾಗೂ ಮಧ್ಯವರ್ತಿಗಳು ಕೋಟಿ ಕೋಟಿ ಹಣವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಔಷಧಗಳ ಬೆಲೆ ನಿಯಂತ್ರಣವನ್ನು ಬಿಗಿಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಈ ಅಕ್ರಮಗಳನ್ನು ಎತ್ತಿ ತೋರಿಸಿದ್ದು, "ಎಲ್ಲಾ ಔಷಧಗಳ ಎಂಆರ್‌ಪಿ ಮೇಲೆ ಗರಿಷ್ಠ ಶೇ. 16ರಷ್ಟು ಲಾಭದ (Margin) ಮಿತಿಯನ್ನು ಏಕೆ ಕಡ್ಡಾಯಗೊಳಿಸಬಾರದು?" ಎಂದು ಕೇಂದ್ರ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದೆ.
ವಿಚಾರಣೆ ವೇಳೆ ನ್ಯಾಯಪೀಠವು ಔಷಧಗಳ ನೈಜ ಬೆಲೆ ಹಾಗೂ ಎಂಆರ್‌ಪಿ ನಡುವಿನ ಆಘಾತಕಾರಿ ವ್ಯತ್ಯಾಸವನ್ನು ಉದಾಹರಣೆ ಸಹಿತ ವಿವರಿಸಿತು. ಮಾರುಕಟ್ಟೆಯಲ್ಲಿ ₹22,437 ಎಂಆರ್‌ಪಿ ಹೊಂದಿರುವ ಇಂಜೆಕ್ಷನ್ ಒಂದರ ನೈಜ ಚಿಲ್ಲರೆ ಖರೀದಿ ವೆಚ್ಚ (Price to Retailer) ಕೇವಲ ₹3,520 ಮಾತ್ರ ಎಂದಿದೆ. ₹27,000 ಎಂಆರ್‌ಪಿ ಇರುವ ಅತ್ಯಂತ ಜೀವರಕ್ಷಕ ಕ್ಯಾನ್ಸರ್ ಔಷಧಿಯು ಚಿಲ್ಲರೆ ವ್ಯಾಪಾರಿಗೆ ಸಿಗುವುದು ಕೇವಲ ಇಂಥದ್ದೇ ದರದಲ್ಲಿ ಎಂದು ಹೇಳಿದೆ.
"ಖರೀದಿ ದರಕ್ಕಿಂತ 10 ಪಟ್ಟು ಹೆಚ್ಚಿನ ಹಣ ಎಲ್ಲಿಗೆ ಹೋಗುತ್ತಿದೆ? ಈ ಬೃಹತ್ ಮೊತ್ತದ ಹಣ ಯಾರ ಜೇಬು ಸೇರುತ್ತಿದೆ? ಸಾರ್ವಜನಿಕರ ಮೇಲಿನ ಈ ದೌರ್ಜನ್ಯ ನಿಜಕ್ಕೂ ಎದೆನಡುಗಿಸುವ ಮಾರಣಹೋಮ" ಎಂದು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ತೀವ್ರ ಕಳವಳ ವ್ಯಕ್ತಪಡಿಸಿದರು.
ರೋಗಿಗಳನ್ನು ಆಸ್ಪತ್ರೆಯ ಒಳಗಿರುವ ಫಾರ್ಮಸಿಗಳಿಂದಲೇ ಔಷಧಗಳನ್ನು ಖರೀದಿಸುವಂತೆ ಬಲವಂತಪಡಿಸುವ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳ ದಂಧೆಯನ್ನು ಸುಪ್ರೀಂ ಕೋರ್ಟ್ ಕಟುವಾಗಿ ವಿಮರ್ಶಿಸಿತು.
"ಕಾರ್ಪೊರೇಟ್ ಆಸ್ಪತ್ರೆಗಳು ತಮ್ಮದೇ ಮೆಡಿಕಲ್ ಸ್ಟೋರ್‌ನಲ್ಲಿ ಔಷಧ ಖರೀದಿಸುವಂತೆ ರೋಗಿಗಳಿಗೆ ಬಾಧ್ಯತೆ ಹೇರುತ್ತವೆ. ಒಂದು ವೇಳೆ ರೋಗಿಯ ಸಂಬಂಧಿಕರು ಹೊರಗಿನಿಂದ ಕಡಿಮೆ ದರಕ್ಕೆ ಅದೇ ಔಷಧ ತಂದರೆ, 'ಚಿಕಿತ್ಸೆಯ ಭರವಸೆ ನೀಡಲಾಗುವುದಿಲ್ಲ' ಎಂದು ಹೆದರಿಸಲಾಗುತ್ತದೆ. ಅಷ್ಟೇ ಏಕೆ, ಬಿಲ್ ಪಾವತಿಯಾಗದಿದ್ದರೆ ಮೃತದೇಹವನ್ನೂ ಹೊರಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ! ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ರೋಗಿ ಏನು ತಾನೆ ಮಾಡಲು ಸಾಧ್ಯ?" ಎಂದು ನ್ಯಾಯಪೀಠ ಅಸಹಾಯಕ ಸ್ಥಿತಿಯನ್ನು ಬಿಚ್ಚಿಟ್ಟಿತು.
ಔಷಧ ಬೆಲೆ ನಿಯಂತ್ರಣ ಆದೇಶದ (DPCO) ವ್ಯಾಪ್ತಿಯಿಂದ ಹಲವು ಪ್ರಮುಖ ಔಷಧಗಳನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿದ ಪೀಠವು, ಜೀವರಕ್ಷಕ ಸಾಧನಗಳು ಹಾಗೂ ಔಷಧಗಳು 'ಅಗತ್ಯ ಸರಕುಗಳ ಕಾಯ್ದೆ'ಯ (Essential Commodities Act) ಅಡಿಯಲ್ಲೇ ಬರುತ್ತವೆ. ಹೀಗಿರುವಾಗ ಅವುಗಳನ್ನು ಬೆಲೆ ನಿಯಂತ್ರಣದಿಂದ ಹೊರಗಿಟ್ಟಿರುವುದೇಕೆ? "ಡಿಪಿಸಿಒ ನಿಯಮಾವಳಿಯಂತೆ ಎಲ್ಲಾ ರೀತಿಯ ಔಷಧಗಳ ಎಂಆರ್‌ಪಿ ಮೇಲೆಯೂ ಶೇ. 16ರಷ್ಟು ಮಾರ್ಜಿನ್ ಮಿತಿಯನ್ನು ಕಡ್ಡಾಯವಾಗಿ ಏಕೆ ಜಾರಿಗೆ ತರಬಾರದು? ಅಂತಿಮವಾಗಿ ಖಾಸಗಿ ಆಸ್ಪತ್ರೆಗಳು ಲಾಭ ಮಾಡಿಕೊಳ್ಳುತ್ತಿದ್ದರೆ, ಸಾಮಾನ್ಯ ತೆರಿಗೆದಾರ ಹಾಗೂ ರೋಗಿ ಮಾತ್ರ ಸರ್ವಸ್ವವನ್ನೂ ಕಳೆದುಕೊಳ್ಳುತ್ತಿದ್ದಾನೆ" ಎಂದು ಸುಪ್ರೀಂ ಕೋರ್ಟ್ ಖಾರವಾಗಿ ನುಡಿಯಿತು.
ವಿಚಾರಣೆಯಲ್ಲಿ ಭಾಗವಹಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸುಪ್ರೀಂ ಕೋರ್ಟ್ ನೀಡಿರುವ ಏಕರೂಪದ ಶೇ. 16ರಷ್ಟು ಲಾಭದ ಮಿತಿಯ ಸಲಹೆಯು "ತರ್ಕಬದ್ಧವಾಗಿದೆ" (Logical) ಎಂದು ಒಪ್ಪಿಕೊಂಡರು ಹಾಗೂ ಈ ವಿಷಯವಾಗಿ ಸಮತೋಲಿತ ಪರಿಹಾರ ಕಂಡುಕೊಳ್ಳಲು ಸರ್ಕಾರವು ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಪ್ರಸ್ತುತ ಜಾರಿಯಲ್ಲಿರುವ ನಿಯಂತ್ರಣ ಚೌಕಟ್ಟನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಕಿಶನ್ ಚಂದ್ ಜೈನ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ಹಿಂದಿನ ವಿಚಾರಣೆ ವೇಳೆಯೂ ಸುಪ್ರೀಂ ಕೋರ್ಟ್, ಈ ದರ ವ್ಯತ್ಯಾಸವನ್ನು "ಹಗಲು ದರೋಡೆ" (Broad daylight dacoity) ಹಾಗೂ ರೋಗಿಗಳ ಮೇಲಿನ "ಸಂಪೂರ್ಣ ದೌರ್ಜನ್ಯ" ಎಂದು ಕರೆದಿತ್ತು. ಪ್ರಸ್ತುತ ವಿಚಾರಣೆಯನ್ನು ಮುಂದೂಡಿರುವ ಪೀಠವು, ಅಕ್ಟೋಬರ್ ಎರಡನೇ ವಾರದಲ್ಲಿ ಹೆಚ್ಚಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.