ಬೆಂಗಳೂರಿನ ರಾಜಮುಡಿ 48 ಬಗೆ ಅಕ್ಕಿಯ ರಫ್ತುದಾರ: ಇಲ್ಲಿದೆ ನಾಗೇಂದ್ರ ಕುಮಾರ್ ಯಶೋಗಾಥೆ

Published : Jul 24, 2025, 11:13 AM IST
nagendra kumar

ಸಾರಾಂಶ

ರಾಜಮುಡಿ ಅಕ್ಕಿಯಲ್ಲಿ ಒಳ್ಳೆ ಫೈಬರ್ ಇರುತ್ತೆ ಎಂಬ ಮಾತು ಕೇಳಿ ಆ ಅಕ್ಕಿ ಹುಡುಕಾಟಕ್ಕೆ ಇಳಿದಾಗ ನಮ್ಮ ಸಾಂಪ್ರದಾಯಿಕ ಅಕ್ಕಿ ವೈವಿಧ್ಯದ ಅರಿವಾಗಿದೆ. 5 ಲಕ್ಷಕ್ಕೂ ಹೆಚ್ಚು ಬಗೆಯ ಅಕ್ಕಿಗಳಿವೆ.

ಪಾಲಿಶ್ ಮಾಡಿದ ಅಕ್ಕಿಯಲ್ಲಿ ಫೈಬರ್ ಇರಲ್ಲ. ನೀವೋ ಬರೀ ಅನ್ನ ತಿನ್ನುತ್ತೀರಿ. ಅದಕ್ಕೆ ನಿಮಗೆ ಅಜೀರ್ಣ ಸಮಸ್ಯೆ. ಫೈಬರ್ ಇರುವ ಅಕ್ಕಿ ಬಳಸಿ ಎಂಬ ಡಾಕ್ಟರ್ ಸಲಹೆ ಹಿಡಿದು ಯಾವ ಅಕ್ಕಿಯಲ್ಲಿ ಫೈಬರ್ ಇದೆ? ಯಾವ ಅಕ್ಕಿ ಆರೋಗ್ಯಕರ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟ ವ್ಯಕ್ತಿ ಈಗ ಅಕ್ಕಿ -ಆಹಾರ ಧಾನ್ಯಗಳ ಉದ್ಯಮಿ ಆಗಿ ಬೆಳೆದು ನಿಂತಿದ್ದಾರೆ. ರಾಜಮುಡಿ ಎಂಬ ಅಕ್ಕಿಯ ಹೆಸರನ್ನೇ ತಮ್ಮ ಕಂಪನಿಯ, ಬ್ರ್ಯಾಂಡ್ ಹೆಸರಾಗಿ ಬೆಳಸಿ ನಿಲ್ಲಿಸಿದ್ದಾರೆ. ರಾಜಮುಡಿ ಆರ್ಗ್ಯಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಕಟ್ಟಿ ನಿಲ್ಲಿಸಿರುವ ಬೆಂಗಳೂರಿನ ನಾಗೇಂದ್ರ ಕುಮಾರ್ ಮೂಲತಃ ಸಾಫ್ಟ್ವೇರ್ ಇಂಜಿನಿಯರ್.

ರಾಜಮುಡಿ ಅಕ್ಕಿಯಲ್ಲಿ ಒಳ್ಳೆ ಫೈಬರ್ ಇರುತ್ತೆ ಎಂಬ ಮಾತು ಕೇಳಿ ಆ ಅಕ್ಕಿ ಹುಡುಕಾಟಕ್ಕೆ ಇಳಿದಾಗ ನಮ್ಮ ಸಾಂಪ್ರದಾಯಿಕ ಅಕ್ಕಿ ವೈವಿಧ್ಯದ ಅರಿವಾಗಿದೆ. 5 ಲಕ್ಷಕ್ಕೂ ಹೆಚ್ಚು ಬಗೆಯ ಅಕ್ಕಿಗಳಿವೆ. ಅದರಲ್ಲಿ ಉಳಿದಿರೋದನ್ನ ತಿಳಿಯೋಣ ಎಂದು ಅಧ್ಯಯನಕ್ಕೆ ಇಳಿದಿದ್ದಾರೆ ನಾಗೇಂದ್ರ ಕುಮಾರ್. ಇವರಂತೆ ಸಾಂಪ್ರದಾಯಿಕ ಅಕ್ಕಿ ಬಳಸುವ ಬಂಧು -ಮಿತ್ರರು ಸೇರಿ ಮೊದಲ ಬಾರಿಗೆ 2016ರಲ್ಲಿ ಹಾಸನದ ರೈತರೊಬ್ಬರಲ್ಲಿ 250 ಕೆಜಿ ಅಕ್ಕಿ ಬೆಳೆದುಕೊಡುವ ಒಪ್ಪಂದ ಮಾಡಿಕೊಂಡಿದ್ದಾರೆ. ಅದಕ್ಕೆ ಬಿತ್ತನೆ ವೇಳೆಯೇ ರೇಟ್ ಫಿಕ್ಸ್ ಮಾಡಿಕೊಂಡು, ಯಾವುದೇ ರಸಾಯನಿಕ ಬಳಸದೇ ಬೆಳೆಯಬೇಕೆಂದು ಕರಾರು ಮಾಡಿದ್ದಾರೆ. ಹೀಗೆ ಶುರುವಾದ ಅಕ್ಕಿ ಹುಡುಕಾಟ ಈಗ ವಾರ್ಷಿಕ 300 ಟನ್ ಅಕ್ಕಿ ಮಾರುವ ಹಂತಕ್ಕೆ ಬಂದಿದೆ ರಾಜಮುಡಿ ಆರ್ಗ್ಯಾನಿಕ್ಸ್.

ರಾಜಮುಡಿ ಆರ್ಗ್ಯಾನಿಕ್ಸ್ನ ವಾರ್ಷಿಕ ವಹಿವಾಟು 7 ಕೋಟಿ ರೂಪಾಯಿ ತಲುಪಿದೆ. ಇದನ್ನು 40 ಕೋಟಿ ರೂ.ಗೆ ಏರಿಸಲು ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ರಾಜಮುಡಿ, ಮಧು ಸಣ್ಣ, ಕೆಂಪಕ್ಕಿ, ಗಂಡಸಾಲೆ, ಇಂದ್ರಾಯಿನಿ ಹೀಗೆ 48 ಬಗೆಯ ಸಾಂಪ್ರದಾಯಿಕ ಅಕ್ಕಿ ರಾಜಮುಡಿ ಆರ್ಗ್ಯಾನಿಕ್ಸ್ನಲ್ಲಿ ದೊರೆಯುತ್ತಿದೆ. ಹಾಸನ, ಮಂಡ್ಯ, ಕೊಪ್ಪಳ ಹೀಗೆ ಬಹುತೇಕ ಜಿಲ್ಲೆಗಳ 1 ಸಾವಿರಕ್ಕೂ ಹೆಚ್ಚು ರೈತರು ರಾಜಮುಡಿ ಆರ್ಗ್ಯಾನಿಕ್ಸ್ ಮಾರ್ಗದರ್ಶನದಲ್ಲಿ ರಸಾಯನಿಕ ಬಳಸದೆ ಭತ್ತ, ಬೇಳೆಕಾಳುಗಳು, ಎಣ್ಣೆಕಾಳು, ಸಿರಿಧಾನ್ಯ, ಮಸಾಲೆ ಪದಾರ್ಥಗಳು, ಗಿಡಮೂಲಿಕೆಗಳನ್ನು ಬೆಳೆದು ಕೊಡುತ್ತಿದ್ದಾರೆ. 1200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ರಾಜಮುಡಿ ಆರ್ಗ್ಯಾನಿಕ್ಸ್ನ ಅಗತ್ಯ ಬೆಳೆ ಬೆಳೆಯಲಾಗುತ್ತಿದೆ ಎಂದು ರಾಜಮುಡಿ ಆರ್ಗ್ಯಾನಿಕ್ಸ್ನ ಸಿಇಓ ನಾಗೇಂದ್ರ ಕುಮಾರ್, ಕನ್ನಡಪ್ರಭಕ್ಕೆ ವಿವರಿಸಿದರು. ಇವರು ಬೆಂಗಳೂರು ಐಐಎಂನಲ್ಲೂ ವೈಎಲ್ಪಿ ಕೋರ್ಸ್ ಮುಗಿಸಿದ್ದಾರೆ.

ಕೊಪ್ಪಳದಲ್ಲಿ ಒಂದು ರೈಸ್ ಮಿಲ್ ಗುತ್ತಿಗೆಗೆ ಪಡೆಯಲಾಗಿದೆ. ಅಲ್ಲದೇ ಬೆಂಗಳೂರು ಜ್ಞಾನಭಾರತಿ ಸಮೀಪದ ನಾಗದೇವನಹಳ್ಳಿಯಲ್ಲಿ ಉಳಿದ ವಸ್ತುಗಳ ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕ ಮಾಡಿದ್ದೇವೆ. 2022ರಲ್ಲಿ ಕಪೆಕ್ನ ಪಿಎಂಎಫ್ಇ ಯೋಜನೆಯ ಸಹಾಯದಿಂದ ಇದಕ್ಕೆ ಉದ್ಯಮದ ರೂಪ ನೀಡಿದೆವು. ನಾಗದೇವನಹಳ್ಳಿಯಲ್ಲೇ ಒಂದು ಔಟ್ಲೆಟ್ ಮಾಡಿದ್ದೇವೆ. 100ಕ್ಕೂ ಹೆಚ್ಚು ರಾಜಮುಡಿ ಆರ್ಗ್ಯಾನಿಕ್ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. www.rajamudi.com ಎಂಬ ನಮ್ಮ ವೆಬ್ಸೈಟ್ ಮೂಲಕವೇ ನಮ್ಮ ಪ್ರಮುಖ ವ್ಯವಹಾರ ನಡೆಯುತ್ತಿದೆ.

ವೆಬ್ಸೈಟ್ ಮೂಲಕವೇ ನಮಗೆ 5 ಸಾವಿರ ನೊಂದಾಯಿತ ಗ್ರಾಹಕರಿದ್ದಾರೆ. ಭಾರತದೊಳಗಿನ ಎಲ್ಲ ರಾಜ್ಯಗಳನ್ನು ತಲುಪಿದ್ದೇವೆ. ಅಮೆರಿಕಾ, ಕೆನಡಾ, ಯೂರೋಪ್ ನ ಕೆಲ ರಾಷ್ಟ್ರಗಳು ಸೇರಿದಂತೆ 6 ರಾಷ್ಟ್ರಗಳಿಂದ ನಮ್ಮ ಅಕ್ಕಿ ಮತ್ತು ಇತರೆ ಉತ್ಪನ್ನಗಳಿಗೆ ಬೇಡಿಕೆ ಇದೆ. ಮುಂದಿನ ಎರಡು ವರ್ಷಗಳಲ್ಲಿ ಯುರೋಪ್ನ ಎಲ್ಲಾ ರಾಷ್ಟ್ರಗಳು ಸೇರಿ ಕನಿಷ್ಠ 40 ರಾಷ್ಟ್ರಗಳನ್ನು ತಲುಪುವ ಗುರಿ ನಮ್ಮದು. ಇದಕ್ಕಾಗಿ ಐರ್ಲೆಂಡ್ನಲ್ಲಿ ಔಟ್ಲೆಟ್ ಮತ್ತು ನೆದರ್ಲ್ಯಾಂಡ್ನಲ್ಲಿ ದಾಸ್ತಾನು ಕೇಂದ್ರ ಸ್ಥಾಪಿಸುವ ಯೋಚನೆ ಇದೆ. ಈಗಾಗಲೇ ಅರಬ್ ರಾಷ್ಟ್ರಗಳಲ್ಲೂ ಬೇಡಿಕೆ ಶುರುವಾಗಿದೆ ಎಂದು ತಮ್ಮ ಭವಿಷ್ಯದ ಯೋಜನೆ, ಯೋಚನೆ ಹಂಚಿಕೊಂಡರು ನಾಗೇಂದ್ರಕುಮಾರ್.

ಗುಣಮಟ್ಟದ ಆಹಾರ ಮತ್ತು ಆನ್ಲೈನ್, ಸಾಮಾಜಿಕ ಜಾಲತಾಣವೇ ನಮ್ಮ ಮಾರ್ಕೆಟಿಂಗ್ನ ಪ್ರಮುಖ ಅಸ್ತ್ರ. ನಮ್ಮೊಂದಿಗಿರುವ ರೈತರಿಗೂ ಒಳ್ಳೆಯ ಲಾಭ ಸಿಗುತ್ತಿದೆ. ಬಿತ್ತನೆಗೂ ಮೊದಲೇ ದರ ಗ್ಯಾರಂಟಿ ನೀಡುವುದರಿಂದ ಅವರಿಗೆ ನಿಶ್ಚಿತ ಲಾಭವು ಸಿಗುತ್ತಿದೆ. ಈವರೆಗೆ 2 ಕೋಟಿ ರೂಪಾಯಿವರೆಗೂ ಬಂಡವಾಳ ಹೂಡಿದ್ದೇವೆ. ಕಪೆಕ್ನಿಂದ ಮೊದಲ ಹಂತದ ಸಾಲ, ಸಬ್ಸಿಡಿ ಜೊತೆಗೆ ಮಾರ್ಕೆಂಟಿಗ್ಗೆ ಅನುಕೂಲ ಸಿಕ್ಕಿದೆ. ಎಕ್ಸಿಬಿಷನ್ಗಳಲ್ಲಿ ಅವರು ನೀಡಿದ ಉಚಿತ ಮಳಿಗೆಗಳಿಂದ ಹೊಸ ಹೊಸ ಗ್ರಾಹಕರು ಸಿಗಲು ಕಾರಣವಾಯಿತು.

ಮುಂದೆ ನೇರವಾಗಿ ಹೋಟೆಲ್ಗಳು, ಆಹಾರ ಕಂಪನಿಗಳಿಗೆ ಒದಗಿಸುವ ಕುರಿತು ಚಿಂತನೆ ನಡೆಸಿದ್ದೇವೆ. ವಿದೇಶಿ ವಹಿವಾಟು ನಡೆಸಲು ನಮಗೆ ಟೆಸ್ಟ್ ಮತ್ತು ಸರ್ಟಿಫಿಕೇಶನ್ಗಳಿಗೆ ಹೆಚ್ಚು ಖರ್ಚಾಯಿತು. ಅಮೆರಿಕಾ, ಅರಬ್ ರಾಷ್ಟ್ರಗಳು, ಯೂರೋಪ್ ಹೀಗೆ ಬಹುತೇಕ 40ಕ್ಕೂ ಹೆಚ್ಚು ದೇಶಗಳಿಗೆ ಕಳುಹಿಸಬಲ್ಲ ಸರ್ಟಿಫಿಕೇಶನ್ ಪಡೆದುಕೊಂಡಿದ್ದೇವೆ. ಇನ್ನಷ್ಟು ಹೊಸ ಉತ್ಪನ್ನಗಳು ಸದ್ಯದಲ್ಲೇ ಸೇರ್ಪಡೆಯಾಗಲಿವೆ. ಪ್ರಸ್ತುತ 30 ಜನರಿಗೆ ನೇರ ಉದ್ಯೋಗ ಹಾಗೂ ಸಾವಿರಕ್ಕೂ ಹೆಚ್ಚು ರೈತರಿಗೆ ನಿಶ್ಚಿತ ಲಾಭವನ್ನ ರಾಜಮುಡಿ ಆರ್ಗ್ಯಾನಿಕ್ಸ್ ನೀಡುತ್ತಿದೆ ಎಂದು ನಾಗೇಂದ್ರ ಸಂತಸ ವ್ಯಕ್ತಪಡಿಸಿದರು. ರಾಜಮುಡಿ ಆರ್ಗ್ಯಾನಿಕ್ಸ್ ಉತ್ಪನ್ನಗಳಿಗೆ ಸಂಪರ್ಕಿಸಿ –- 9900051516

15 ಲಕ್ಷ ರೂ. ಸಬ್ಸಿಡಿ ಪಡೆಯಿರಿ: ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!