ಕಲಬೆರಕೆ ವಿರುದ್ದ ದೇಸಿ ಪರ ಆಹಾರೋತ್ಪನ್ನ ತಯಾರಿಸಿ ಯಶಸ್ಸು ಕಂಡ ಶ್ವೇತಾ

By Santosh Naik  |  First Published Aug 10, 2023, 5:12 PM IST

ಅಕ್ಷಮಾಲಾ ಬ್ರ್ಯಾಂಡ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ಮಹಿಳೆ ಶ್ವೇತಾ ಮಂಜುನಾಥ್‌. ಕೊರೋನಾ ಕಾಲದಲ್ಲಿ ಆರಂಭವಾಗಿದ್ದ ಇವರ ಉದ್ಯಮ ಇಂದು ದೊಡ್ಡದಾಗಿ ಬೆಳೆದಿದೆ.
 


ವರದಿ: ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾಸನ (ಆ.10): ಆಧುನಿಕ, ಕಲಬೆರಕೆ ಆಹಾರೋತ್ಪನ್ನಗಳಿಗೆ ಪರ್ಯಾಯವಾಗಿ ನಮ್ಮ ಆಹಾರ ಸಂಸ್ಕೃತಿ ಭಾಗವಾಗಿರುವ ದೇಸಿ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ತೊಡಗಿರುವ ಈ.ಆರ್. ಶ್ವೇತಾ ಮಂಜುನಾಥ್ ಅವರ ಕಿರು ಉದ್ಯಮ ಹಾಸನದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಆಹಾರದಿಂದ ಆರೋಗ್ಯ ಎನ್ನುವುದು ಶ್ವೇತಾ ಅವರ ಅಕ್ಷಮಾಲ ಉದ್ಯಮದ ಟ್ಯಾಗ್ ಲೈನ್. ಅದು ಅವರ ಉತ್ಪನ್ನಗಳ ಉದ್ದೇಶವೂ ಹೌದು. ಕಲಬೆರಕೆ ವಿರುದ್ಧ ದೇಸೀ ಪರ ಅನ್ನುವಂತೆ ಆಹಾರೋತ್ಪನ್ನ ತಯಾರಿಸುತ್ತಿದ್ದಾರೆ. ಪತ್ರಕರ್ತೆಯಾಗಿದ್ದ ಶ್ವೇತಾ, ಉದ್ಯಮಿಯಾಗಬೇಕು ಎಂದು ತೀರ್ಮಾನಿಸಿದಾಗ ಆರಿಸಿಕೊಂಡಿದ್ದು ಆಹಾರ ಉದ್ಯಮ. ಅಡುಗೆಯಲ್ಲಿ ಆಸಕ್ತಿ ಹೊಂದಿದ್ದ ಅವರ  ಆಲೋಚನೆಗೆ ಹಮ್ ಶೈನ್ ಸೋಲಾರ್ ಸಿಸ್ಟಂ ಸಂಸ್ಥೆಯ ಮಾಲೀಕ ಹಂಸರಾಜ್ ನೀರೆರೆದರು. ಹೀಗೆ ಹಲವು ಅಧ್ಯಯನ, ತರಬೇತಿ ನಂತರ ಮೂರು ವರ್ಷಗಳ ಹಿಂದೆ ದೇಸೀ ಆಹಾರೋತ್ಪನ್ನಗಳಾದ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿಗಳನ್ನು ತಯಾರಿಸಲು ಆರಂಭಿಸಿದರು. 

ಹಲಸಿನ‌ ಮೌಲ್ಯವರ್ಧಿತ ಉತ್ಪನ್ನಗಳಿಗಿರುವ ಬೇಡಿಕೆ ಅರಿತ ಸ್ಟಾರ್ಟ್ ಅಪ್ ಉದ್ಯಮಿ ಶ್ವೇತಾಗೆ ಹಲಸಿನ ಹಪ್ಪಳ, ಚಟ್ ಪಟ್, ಚಿಪ್ಸ್ ಮುಂತಾದ ಉತ್ಪನ್ನಗಳನ್ನು ತಯಾರಿಸುವ ಯತ್ನಕ್ಕೆ ಹಲಸು ಬೆಳೆ ಕ್ರಾಂತಿಗೆ ಬೆನ್ನೆಲುಬಾಗಿ ನಿಂತಿರುವ ಶ್ರೀ ಪಡ್ರೆ ಅವರ ಸಲಹೆ, ಸಹಕಾರ ದೊರೆಯಿತು. ಅದರ ಫಲವಾಗಿ ಈಗ ಅಕ್ಷಮಾಲ ಕಿರು ಉದ್ಯಮ 35ಕ್ಕೂ ಹೆಚ್ಚು ಬಗೆಯ ಸಾಂಪ್ರದಾಯಿಕ ಆಹಾರೋತ್ಪನ್ನಗಳನ್ನು ತಯಾರಿಸುವ ಯಶಸ್ವಿ ಉದ್ಯಮವಾಗಿ ಬೇರೂರುತ್ತಿದೆ. ಹಪ್ಪಳ ತಯಾರಿಕೆಗೆ ಮುನ್ನ ರಾಜ್ಯದ ಹಲವಾರು ಹಪ್ಪಳ ತಯಾರಕರನ್ನು ಭೇಟಿ ಮಾಡಿ ಸಲಹೆ ಪಡೆದ ಅವರು ಕೃತಕ ಪ್ರಿಸರ್ವೇಟಿವ್ ಗಳಿಲ್ಲದೆ ಹಪ್ಪಳ ತಯಾರಿಕೆ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಗಳಿಂದ ಚಿಂತಿತರಾಗಿದ್ದರು.

ಹಪ್ಪಳ ತಯಾರಿಕೆ ಯಂತ್ರಕ್ಕೆ ತಕ್ಕಂತೆ ಕಚ್ಚಾ ಪದಾರ್ಥ ಬ್ಲೆಂಡ್ ಮಾಡುವ ದಾರಿ ಕಾಣದೆ ಹಲವಾರು ದಿನಗಳ ನೂರಾರು ಕೆಜಿ ಹಪ್ಪಳದ ಹಿಟ್ಟು ಹಾಳಾಗುವುದರಿಂದ ಉಂಟಾಗುತ್ತಿದ್ದ ನಷ್ಟವನ್ನು ಮೌನವಾಗಿ ಭರಿಸಬೇಕಾಯಿತು. ಸ್ವಯಂ ಸಂಶೋಧನೆ, ಪ್ರಯತ್ನದ ಫಲವಾಗಿ ಕಡೆಗೂ ಒಂದು ದಿನ ಅವರು ರಾಸಾಯನಿಕ ಮಿಶ್ರಣ ಮಾಡದೆ ಹದವಾದ ಹಪ್ಪಳದ ಹಿಟ್ಟು ತಯಾರಿಸಲು ಯಶಸ್ವಿಯಾದರು. ಅದನ್ನೇ ಅಕ್ಕಿ, ರಾಗಿ, ಜೋಳ, ಹಲಸು, ಗೆಣಸು, ಹುರುಳಿ, ಉದ್ದು ಹಾಗೂ ಸಿರಿಧಾನ್ಯಗಳು ಸೇರಿದಂತೆ ಹಲವು  ಬೇಳೆಕಾಳುಗಳಿಗೂ ವಿಸ್ತರಿಸಿದ್ದು, ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ದೊಡ್ಡ ಬ್ರ್ಯಾಂಡ್‌ ಮಾಡಿದ್ದಾರೆ.

ಪೌಷ್ಟಿಕ ಆಹಾರೋತ್ಪನ್ನಗಳ ವಿಭಾಗಕ್ಕೂ ಪದಾರ್ಪಣೆ: ಮೊದಲು ಹಪ್ಪಳದಂತಹ ಕುರುಕಲು ತಿಂಡಿಗಳ ವಿಭಾಗಕ್ಕೆ ಸೀಮಿತವಾಗಿದ್ದ ಅಕ್ಷಮಾಲ ಈಗ ಸಾಂಪ್ರದಾಯಿಕ ಪೌಷ್ಟಿಕ ಆಹಾರ ತಯಾರಿಕೆಯನ್ನೂ ಆರಂಭಿಸಿ ಯಶ ಕಂಡಿದೆ. ಮಕ್ಕಳಿಗಾಗಿ ವಿಶೇಷವಾಗಿ ತಯಾರಿಸಿದ ಚಾಕೋಲೇಟ್, ವೆನಿಲ್ಲಾ, ಒಣಶುಂಠಿ ಫ್ಲೇವರ್ ನ ರಾಗಿ ಮಾಲ್ಟ್, ರಾಗಿ ಸರಿಗಳು ಗ್ರಾಹಕರ ಮೆಚ್ಚುಗೆ ಸಂಪಾದಿಸಿವೆ.

ಇಲ್ಲಿ ಸಿಗುವ ಉತ್ಪನ್ನಗಳು: ವಿವಿಧ ಬಗೆಯ ಹಪ್ಪಳಗಳು, ಮೂರು ಫ್ಲೇವರ್‌ಗಳ ರಾಗಿ ಮಾಲ್ಟ್, ಹಲಸಿನ ಚಟ್ ಪಟ್, ವಿವಿಧ ಬಗೆಯ ಉಪ್ಪಿನಕಾಯಿ, ಚಿಪ್ಸ್ ಗಳು, ಜೋಳ ಹಾಗೂ ಸಜ್ಜಿಗೆಯ ಖಡಕ್ ರೊಟ್ಟಿ ಇವರ ಕಂಪನಿಯಲ್ಲಿ ಸಿಗುತ್ತದೆ.

ಮಾರುಕಟ್ಟೆಯೇ ಸವಾಲು: ನಮ್ಮ ಜನರಿಗೆ ಆರೋಗ್ಯಕರವಾದ ತಿನಿಸುಗಳ ಬಗ್ಗೆ, ನಮ್ಮ ಸಾಂಪ್ರದಾಯಿಕ ಆಹಾರದ ಬಗ್ಗೆ ಭಾರಿ ಒಲವಿದೆ. ಆದರೆ ನಮ್ಮಂತಹ ಉತ್ಪಾದಕರಿಗೆ ಮಾರ್ಕೆಟಿಂಗ್ ದೊಡ್ಡ ಸವಾಲು. ಹೆಚ್ಚು ಲಾಭಾಂಶ ಕೊಡುತ್ತಾರೆ ಎಂಬ ಕಾರಣಕ್ಕಾಗಿ ದೊಡ್ಡ ವರ್ತಕರು ಕೆಲವು ಉತ್ಪನ್ನಗಳನ್ನು ಅವುಗಳ ಗುಣಮಟ್ಟವನ್ನು ಅಲಕ್ಷಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಲಾಭ ವ್ಯಾಪಾರದ ಧರ್ಮವಾಗಿರುವುದರಿಂದ ಗುಣಮಟ್ಟದ ಕಾರಣಕ್ಕಾಗಿ ಕಡಿಮೆ ಬೆಲೆಗೆ ಉತ್ಪನ್ನ ಮಾರಾಟ ಮಾಡಲಾಗದೆ ಪರದಾಡಬೇಕಾಗುತ್ತದೆ. ನಮ್ಮ ಸಾಂಪ್ರದಾಯಿಕ ಪದ್ಧತಿಯಿಂದ ತಯಾರಿಸಿದ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಿಯೇ ನಮ್ಮದೇ ಗ್ರಾಹಕ ವರ್ಗ ಸೃಷ್ಟಿಸಿಕೊಳ್ಳಲು ಸಾಧ್ಯವಾಗಿದೆ. ಹಲವು ಸಾವಯವ ಉತ್ಪನ್ನಗಳ ಮಾರಾಟಗಾರರೂ ಈ ವಿಷಯದಲ್ಲಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎನ್ನುತ್ತಾರೆ ಶ್ವೇತಾ.

Latest Videos

undefined

ಕೈಮಗ್ಗದಲ್ಲಿ ಬದುಕು ಕಟ್ಟಿಕೊಂಡು ಯಶಸ್ವಿಯಾದ ರಮಣಿ!

ಮಹಿಳೆಯರಿಗೆ ಉದ್ಯೋಗ: ಆರಂಭದಲ್ಲಿ ಮನೆಯಲ್ಲಿ ಅತ್ತೆ ಹಾಗೂ ತಾಯಿಯ ಸಹಾಯದೊಂದಿಗೆ ಆರಂಭವಾದ ಅಕ್ಷಮಾಲ ಕೇವಲ ಎರಡು ವರ್ಷಗಳಲ್ಲಿ ಹದಿನಾಲ್ಕು ಮಹಿಳೆಯರಿಗೆ ಉದ್ಯೋಗ ನೀಡಿದೆ. ನಿತ್ಯವೂ ಮಾಲೀಕಿ ಶ್ವೇತಾ ಸಹ ಕಾರ್ಮಿಕರೊಂದಿಗೆ ನಿಂತು ಅವರಂತೆಯೇ ತಾವೂ ದುಡಿಯುತ್ತಾರೆ. ಸ್ಥಳೀಯ ಮಹಿಳಾ ಉದ್ಯಮಿ ಎನ್ನುವ ಕಾರಣಕ್ಕಾಗಿ ಹಲವರು ಪ್ರಧಾನಿಯರವರ ವೋಕಲ್ ಫಾರ್ ಲೋಕಲ್ ಕರೆಯಂತೆ ಬೆಂಬಲಿಸುತ್ತಿದ್ದಾರೆ. ಸದ್ಯ ನಾಲ್ಕೈದು ಜಿಲ್ಲೆಗಳಲ್ಲಿ ಮಾರಾಟವಾಗುತ್ತಿರುವ ನಮ್ಮ ಉತ್ಪನ್ನಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಹಕರಿಗೂ ತಲುಪಿಸುವುದು, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ನನ್ನ ಗುರಿಯಾಗಿದೆ ಅನ್ನುತ್ತಾರೆ ಶ್ವೇತಾ.

ಹಳ್ಳಿ ಹುಡುಗರು ಹುಟ್ಟುಹಾಕಿದ ಬ್ರಿವೆರಾ ಟೆಕ್ನಾಲಜಿ ಈಗ ಕೋಟಿ ರೂಪಾಯಿ ವಹಿವಾಟು!

ಸ್ಟಾರ್ಟ್ ಅಪ್ ಉದ್ಯಮಿ ಶ್ವೇತಾ ಮಂಜುನಾಥ್ ರವರ ಯಶಸ್ವಿ ಉದ್ಯಮ ಗಮನಿಸಿ ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆಯೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸ್ಟಾರ್ಟ್ ಅಪ್ ಎಂಟರ್ಪ್ರೈಸ್ ಅವಾರ್ಡ್ ನೀಡಿ ಗೌರವಿಸಿದೆ.  ಅಂದು ಸಚಿವರಾಗಿದ್ದ ಎಂಟಿಬಿ ನಾಗರಾಜ್ ಅವಾರ್ಡ್ ವಿತರಿಸಿದ್ದರು. ಹಾಸನದ ಕಾರೆಕೆರೆ ಕೃಷಿ ವಿಶ್ವವಿದ್ಯಾಲಯದಲ್ಲಿ ವಸ್ತುಪ್ರದರ್ಶನ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ,ಅಕ್ಷಮಾಲಾ ಆಹಾರ ಪದಾರ್ಥದ ರುಚಿ ಸವಿದು ಶುಭಹಾರೈಸಿದ್ದರು. ಮಹಿಳೆಯರು ಉದ್ಯಮಿಗಳಾಗಬಹುದು, ಯಶಸ್ಸನ್ನು ಕಾಣಬಹುದು ಎಂಬುದಕ್ಕೆ ಶ್ವೇತಾ ಮಂಜುನಾಥ್ ಸಾಕ್ಷಿಯಾಗಿದ್ದಾರೆ.

click me!