Latest Videos

ಹಳ್ಳಿ ಹುಡುಗರು ಹುಟ್ಟುಹಾಕಿದ ಬ್ರಿವೆರಾ ಟೆಕ್ನಾಲಜಿ ಈಗ ಕೋಟಿ ರೂಪಾಯಿ ವಹಿವಾಟು!

By Suvarna NewsFirst Published Aug 10, 2023, 4:27 PM IST
Highlights

ಕೋವಿಡ್ ಸಂದರ್ಭದಲ್ಲಿ ಹಳ್ಳಿ ಹುಡುಗರು ಆರಂಭಿಸಿದ ಕಂಪನಿ ಇದೀಗ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಲಾಕ್‌ಡೌನ್‌ನಿಂದ ಆತಂಕಗೊಂಡ ಮುಂದೇನು ಅಂತಾ ಯೋಚಿಸುತ್ತಿದ್ದ ಹುಡುಗರ ಗುಂಪು ಇದೀಗ ಹೊಸ ಅಧ್ಯಾಯ ತೆರೆದಿದ್ದಾರೆ.  ಅಷ್ಟಕ್ಕೂ ಸಣ್ಮ ಮಟ್ಟದಲ್ಲಿ ಆರಂಭಗೊಂಡ ಕಂಪನಿಯ ಯಶಸ್ಸಿನ ಗುಟ್ಟೇನು?

ಆತ್ಮಭೂಷಣ್, ಕನ್ನಡ ಪ್ರಭ, ಮಂಗಳೂರು

ಗ್ರಾಮೀಣ ಭಾಗದ ಇಬ್ಬರು ಟೆಕ್ಕಿಗಳು ಸೇರಿ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಸ್ಟಾರ್ಟ್ಅಪ್ ಕಂಪನಿಯೊಂದು ಈಗ ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿ, ಬೃಹತ್ ಆಗಿ ಅಭಿವೃದ್ಧಿ ಹೊಂದಿದ್ದು, ಕೋಟ್ಯಂತರ ರು. ಮೊತ್ತದ ವಹಿವಾಟು ನಡೆಸುತ್ತಿದೆ. 

2013ರಲ್ಲಿ ಮಂಗಳೂರಿನಲ್ಲಿ ಆರಂಭವಾದ `ಬ್ರಿವೆರಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್' ಹೆಸರಿನ ಸ್ಟಾರ್ಟ್ಅಪ್ ಕಂಪನಿ ಪ್ರಸಕ್ತ ಕಾರ್ಪೊರೇಟ್ ಕಂಪನಿಗಳಿಗೆ ತಾಂತ್ರಿಕ ಅಗತ್ಯಗಳನ್ನು ಪೂರೈಸುತ್ತಿದೆ. ಅಲ್ಲದೆ ಬೇರೆಡೆಯಲ್ಲೂ ತನ್ನ ಶಾಖೆಯನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯ ಹಿಂದಿನ ಸಾಹಸಗಾಥೆ ದ.ಕ.ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶ ಸುಳ್ಯ ತಾಲೂಕಿನ ಗುತ್ತಿಗಾರಿನ ಪುಚ್ಚಪ್ಪಾಡಿ ನಿವಾಸಿ ವೇಣುಗೋಪಾಲ ಪಿ.ಕೆ. ಹಾಗೂ ವೆಂಕಟೇಶ್ ಪಿ.ವಿ. ಇವರಿಬ್ಬರ ನಿರ್ದೇಶಕತ್ವದಲ್ಲಿ ಬ್ರಿವೆರಾ ಟೆಕ್ ಕಂಪನಿ ಕೆಲವು ನಿರ್ದಿಷ್ಟ ಉಪಕರಣಗಳಿಗೆ ತಾಂತ್ರಿಕತೆ ಪೂರೈಸುವ ಕರ್ನಾಟಕದ ಏಕೈಕ ಸ್ಟಾರ್ಟ್ಅಪ್ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ.

ಕಳೆದ 2 ವರ್ಷಗಳಲ್ಲಿ ಭಾರತದಿಂದ 1,240.6 ಮಿಲಿಯನ್ ಡಾಲರ್ ಆಯುಷ್, ಗಿಡಮೂಲಿಕೆ ಉತ್ಪನ್ನ ರಫ್ತು: ಕೇಂದ್ರ ಸರ್ಕಾರ

ಬ್ರಿವೆರಾ ಟೆಕ್ನಾಲಜಿ ಕಂಪನಿ ಆರಂಭದಲ್ಲಿ ಸ್ಟೆಬಿಲೈಸರ್ ವೋಲ್ಟೇಜ್ ನಿರ್ವಹಣೆಯ ಮದರ್ ಬೋರ್ಡ್ ತಾಂತ್ರಿಕತೆಯ ವಿನ್ಯಾಸ ಮಾಡಿತ್ತು. ಬಳಿಕ ವೇಯಿಂಗ್ ಸ್ಕೇಲ್ ಮದರ್ ಬೋರ್ಡಲ್ಲೂ ಇವರದ್ದೇ ವಿನ್ಯಾಸ. ಇವರದೇ ಮದರ್ ಬೋರ್ಡ್ ವಿನ್ಯಾಸದಲ್ಲಿ ವಿವಿಧ ಕಂಪನಿಗಳು ಸ್ಟೆಬಿಲೈಸರ್ ಹಾಗೂ ವೇಯಿಂಗ್ ಸ್ಕೇಲ್ ರೂಪಿಸುತ್ತಿದ್ದವು. ಆದರೆ ಕೊರೋನಾ ಕಾಲದ ವೈದ್ಯಕೀಯ ಉಪಕರಣದ (Medical Equipments) ಅಗತ್ಯತೆಯನ್ನು ಪೂರೈಸುವಲ್ಲಿ ನೆರವಾದ ಇವರ ತಾಂತ್ರಿಕತೆ ಇಡೀ ಕಂಪನಿಯ ಅದೃಷ್ಟ ಖುಲಾಯಿಸುವಂತೆ ಮಾಡಿತು.

ಕೊರೋನಾ ಕಾಲದಲ್ಲಿ ಹೆಚ್ಚಾದ ಡಿಮಾಂಡ್:
ಕೊರೋನಾ ಕಾಲದ ಎರಡು ವರ್ಷ ಈ ಸ್ಟಾರ್ಟ್ಅಪ್ ಕಂಪನಿಗೆ ಬಿಡುವಿಲ್ಲದ ಕೆಲಸ. ಕೋವಿಡ್ ವೇಳೆ ಸ್ಯಾನಿಟೈಸರ್ ಹಾಗೂ ಥರ್ಮಾಮೀಟರ್‌ಗೆ ಎಲ್ಲಿಲ್ಲದ ಬೇಡಿಕೆ. ಈ ಸ್ಯಾನಿಟೈಸರ್ ಹಾಗೂ ಥರ್ಮಾಮೀಟರ್ (ಕಾಂಟಾಕ್ಟ್ ಲೆಸ್)ಗೆ ಅಗತ್ಯವಾದ ಮದರ್ ಬೋರ್ಡ್ ರಚಿಸಿದ್ದು ಇದೇ ಕಂಪನಿ. ಇದರ ಮದರ್ ಬೋರ್ಡ್ ಪಂಜಾಬ್ ಹೊರತುಪಡಿಸಿದರೆ, ಕರ್ನಾಟಕದಲ್ಲಿ ಇವರದ್ದೇ ಕಂಪನಿ ಪೂರೈಸಿದೆ. 

ಕೋವಿಡ್ ಆರಂಭದ ಕೆಲವೇ ದಿನಗಳಲ್ಲಿ ಇವರ ತಾಂತ್ರಿಕತೆಗೆ ಬೇಡಿಕೆ ಬರಲಾರಂಭಿಸಿದ್ದು, ಮೊದಮೊದಲು ಇವರದ್ದೇ ನೆಟ್‌ವರ್ಕ್ ಮೂಲಕ ಪೂರೈಸುತ್ತಿದ್ದರು. ಬಳಿಕ ಮೆಡಿಕಲ್ ಸಪ್ಲಾಯ್ ಮೂಲಕ ಎಲ್ಲೆಡೆಗೆ ಕಳುಹಿಸಲಾಗುತ್ತಿತ್ತು. ಸುಮಾರು 30 ಸಾವಿರಕ್ಕೂ ಅಧಿಕ ಸ್ಯಾನಿಟೈಸರ್‌ಗಳ ತಾಂತ್ರಿಕತೆಯನ್ನು ಬೇರೆ ಬೇರೆ ಕಂಪನಿಗಳಿಗೆ ಪೂರೈಸಿದ್ದಾರೆ. ಮೂರು ಸೆಕೆಂಡ್‌ನಲ್ಲಿ ದ್ರವ ಕೈಗೆ ಸ್ಟ್ರೇ ಆಗುವ ಅಸ್ಟ್ರಾವೈಲೆಟ್ ಸ್ಯಾನಿಟೈಸರ್ ಪಿಸಿಬಿ ಹಾಗೂ ಸ್ಯಾನಿಟೈಸರ್ ತಂತ್ರಜ್ಞಾನ ಇವರದ್ದೇ. ಸೆಲೂನ್‌ಗಳಲ್ಲೂ ಇವರೇ ಸೃಷ್ಟಿಸಿದ ತಾಂತ್ರಿಕತೆಯ ಸ್ಯಾನಿಟೈಸರ್‌ಗಳು ಬಳಕೆಯಾಗಿರುವುದು ಗಮನಾರ್ಹ.
 
ಇವರದೇ ತಾಂತ್ರಿಕತೆ ಹೊಂದಿರುವ ಸುಮಾರು 25 ಸಾವಿರಕ್ಕೂ ಹೆಚ್ಚು ಸ್ವಯಂಚಾಲಿತ ಥರ್ಮಾಮೀಟರ್ ಮದರ್ ಬೋರ್ಡ್ ಕೂಡ ವೈದ್ಯಕೀಯ ರಂಗಕ್ಕೆ ಪೂರೈಕೆಯಾಗಿವೆ. ಕೋವಿಡ್ ಲಾಕ್‌ಡೌನ್ ಇದ್ದರೂ, ಇವರಿಗೆ ಮಾತ್ರ ಬಿಡುವಿಲ್ಲದ ಕೆಲಸ ಇರುತ್ತಿತ್ತು. ಮನೆಯಿಂದಲೇ ಕೆಲಸ ನಿರ್ವಹಿಸುವ ಆದೇಶ ಹೊರತೂ ವೈದ್ಯಕೀಯ ತುರ್ತು ಇದಾಗಿರುವುದರಿಂದ ಸಿಬ್ಬಂದಿ ಕೂಡ ಕಚೇರಿ ಬಂದೇ ಕಾರ್ಯನಿರ್ವಹಿಸಬೇಕಾಗಿತ್ತು. 

ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾಗೆ ಭಾರತೀಯ ಮೂಲದ ನೂತನ ಸಿಎಫ್ಒ; ಯಾರು ಈ ವೈಭವ್ ತನೇಜಾ?

ರಿಮೋಟ್ -ಆ್ಯಕ್ಷನ್ ತಾಂತ್ರಿಕತೆ:
ಕೊರೋನಾ ನಂತರದ ದಿನಗಳಲ್ಲಿ ಬೇರೆ ಕ್ಷೇತ್ರಗಳತ್ತ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿದ್ದು, ರಿಮೋಟ್ - ಆ್ಯಕ್ಷನ್ ಹಾಗೂ ಎಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಜಾರ್ಜರ್ ರೂಪಿಸುವಲ್ಲಿ ಮುಂದಾಗಿದ್ದಾರೆ. ಮುಖ್ಯವಾಗಿ ರಿಮೋಟ್‌ನಿಂದ ಸುತ್ತುವ ಎಲೆಕ್ಟ್ರಿಕ್ -ಫ್ಯಾನ್‌ಗಳಲ್ಲಿ ತಮ್ಮ ಕಂಪನಿಯ ತಾಂತ್ರಿಕತೆಯನ್ನು ಬಳಸಿದ್ದಾರೆ. ಕಾರ್ಪೊರೇಟ್ ಕಂಪನಿಯೊಂದು ಇವರ ತಾಂತ್ರಿಕತೆಯನ್ನು ಬಳಸಿ -ಫ್ಯಾನ್ ಉತ್ಪಾದಿಸಿ ಯಶಸ್ವಿ ಮಾರುಕಟ್ಟೆ ಮಾಡುತ್ತಿದೆ. ಇ-ಆಟೋರಿಕ್ಷಾಗಳಿಗೆ ಅವಶ್ಯವಾದ ಚಾರ್ಜರ್‌ನ ತಾಂತ್ರಿಕತೆ ರೂಪಿಸಿದ್ದು, ಎಲ್‌ಇಡಿ ಆ್ಯಸಿಡ್ ಬ್ಯಾಟರಿ ಮಾದರಿಯಲ್ಲಿ ಇದರ ಚಾರ್ಜರ್ ರೂಪಿಸಲಾಗುತ್ತಿದೆ. ಭವಿಷ್ಯದ ದಿನಗಳಲ್ಲಿ ಎಲೆಕ್ಟ್ರಿಕ್ ಗೀಸರ್‌ಗೆ ತಾಪಮಾನ ನಿಯಂತ್ರಿಸುವ ಡಿಜಿಟಲ್ ಸೊಲ್ಯೂಷನ್ (Digital Solution) ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ.
 
ಮಂಗಳೂರು ಹೊರತುಪಡಿಸಿದರೆ, ಮೈಸೂರಿನಲ್ಲಿ ಬ್ರಿವೆರಾ ಕಂಪನಿಯ ಶಾಖೆ ಇದೆ. ಸುಮಾರು 75ಕ್ಕೂ ಅಧಿಕ ಸಿಬ್ಬಂದಿ ದುಡಿಯುತ್ತಿದ್ದಾರೆ. ಕೋವಿಡ್‌ಗಿಂತ ಮೊದಲು ವಾರ್ಷಿಕ 7 ಕೋಟಿ ರು. ಇದ್ದ ವಹಿವಾಟು ಈಗ 44 ಕೋಟಿ ರು. ತಲುಪಿದೆ. ಆಫ್ರಿಕಾ, ನೇಪಾಳಗಳಲ್ಲೂ ಈ ಕಂಪನಿಯ ವಿದ್ಯುನ್ಮಾನ ಸಾಧನಗಳು ಮಾರುಕಟ್ಟೆ ಕಂಡುಕೊಂಡಿವೆ. 

ಸ್ಟಾರ್ಟ್ಅಪ್‌ನಲ್ಲಿ ಕೋವಿಡ್ ನಂತರ ಉತ್ತಮ ಬೆಳವಣಿಗೆಯಾಗುತ್ತಿದೆ. ಚೀನಾ ಬದಲು ಭಾರತದ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಜಿಎಸ್‌ಟಿಯಲ್ಲೂ ಸುಧಾರಣೆಯಾಗಿದ್ದು, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಇಂಡಸ್ಟ್ರಿಗೆ ಒಳ್ಳೆಯ ದಿನಗಳು ಬಂದಿವೆ. ಸ್ಪರ್ಧಾತ್ಮಕ ಯುಗದಲ್ಲಿ ಭಾರತೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಸಮಾಧಾನಕರ ಸಂಗತಿ. 
-ವೇಣುಗೋಪಾಲ ಪಿ.ಕೆ., ನಿರ್ದೇಶಕರು, ಬ್ರಿವೆರಾ ಟೆಕ್ನಾಲಜಿ ಪ್ರೈ.ಲಿ. ಮಂಗಳೂರು
 

click me!