ಯೂಟ್ಯೂಬ್ ಕೇವಲ ಮನರಂಜನೆಗಲ್ಲ. ಅದನ್ನು ನಾವು ಹೇಗೆ ಬಳಸಿಕೊಳ್ತೇವೆ ಎನ್ನುವುದು ಮುಖ್ಯ. ಅಲ್ಲಿನ ವಿಡಿಯೋಗಳನ್ನು ನೋಡಿ, ಕಲಿತು ಅದನ್ನು ನಮ್ಮ ಅನುಕೂಲಕ್ಕೆ ಬಳಸಿಕೊಂಡ್ರೆ ಲಾಭ ನಿಶ್ಚಿತ ಎಂಬುದಕ್ಕೆ ಈತ ಉತ್ತಮ ಉದಾಹರಣೆ.
ಒಂದು ಮೊಬೈಲ್.. ಜಿಬಿ ಲೆಕ್ಕದಲ್ಲಿ ಡೇಟಾ ಇದ್ರೂ ಜನರಿಗೆ ಸಮಯ ಕಳೆಯೋದು ಕಷ್ಟವಲ್ಲ. ಯುಟ್ಯೂಬ್, ಇನ್ಸ್ಟಾಗ್ರಾಮ್, ಎಕ್ಸ್ ಅಂತ ಒಂದಾದ್ಮೇಲೆ ಒಂದರಂತೆ ಸಾಮಾಜಿಕ ಜಾಲತಾಣ ವೀಕ್ಷಿಸುತ್ತಾ ಜನರು ಸಮಯ ದೂಡುತ್ತಾರೆ. ಯೂಟ್ಯೂಬನ್ನು ಅನೇಕರು ಮನರಂಜನೆ ಸಾಧನವೆಂದುಕೊಂಡಿದ್ದಾರೆ. ಮತ್ತೆ ಕೆಲವರು ಯೂಟ್ಯೂಬ್ ಮೂಲಕ ಹಣ ಗಳಿಕೆ ಮಾಡುತ್ತಿದ್ದಾರೆ. ಇನ್ನು ಕೆಲವರು ಯೂಟ್ಯೂಬ್ ಮೂಲಕ ಮಾಹಿತಿ ಪಡೆದು ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಸಂಪಾದಿಸುತ್ತಾರೆ.
ಯೂಟ್ಯೂಬ್ (YouTube) ನಲ್ಲಿ ದಿನಕ್ಕೆ ನೂರಾರು ವಿಡಿಯೋ ಅಪ್ಲೋಡ್ ಆಗ್ತಿರುತ್ತದೆ. ಹೊಸ ಬ್ಯುಸಿನೆಸ್ (Business) ಶುರು ಮಾಡೋದು ಹೇಗೆ, ಯಾವ ಬ್ಯುಸಿನೆಸ್ ಗೆ ಎಷ್ಟು ಹೂಡಿಕೆ (investment) ಮಾಡಬೇಕು, ಯಾವ ವ್ಯಾಪಾರ ಲಾಭದಾಯಕ, ಯಾವ ವ್ಯಾಪಾರಕ್ಕೆ ಏನೆಲ್ಲ ದಾಖಲೆ ಬೇಕು ಹೀಗೆ ಯೂಟ್ಯೂಬಿನಲ್ಲಿ ಸಾಕಷ್ಟು ವಿಡಿಯೋಗಳನ್ನು ನೋಡ್ಬಹುದು. ಈ ವಿಡಿಯೋ ನೋಡಿ ಸುಮ್ಮನೆ ಸ್ಕ್ರಾಲ್ ಮಾಡುವ ಬದಲು ಅದರಲ್ಲಿ ನಿಮಗೆ ಯಾವುದು ಬೆಸ್ಟ್ ಎಂದು ಪರಿಶೀಲಿಸಿ, ಆ ವ್ಯಾಪಾರ ಶುರು ಮಾಡಿದ್ರೆ ನೀವೂ ಲಾಭ ಗಳಿಸಬಹುದು. ಅದಕ್ಕೆ ಈ ವ್ಯಕ್ತಿ ಉತ್ತಮ ನಿದರ್ಶನ.
ಯಾರ ಹಂಗಿಲ್ಲದೆ ಸ್ವಂತ ಉದ್ಯಮ ಪ್ರಾರಂಭಿಸೋ ಯೋಚನೆ ನಿಮಗಿದ್ರೆ, ಈ 5 ವಿಚಾರಗಳನ್ನು ಮರೆಯಬೇಡಿ!
ನಮ್ಮಲ್ಲಿ ವ್ಯಾಪಾರದಲ್ಲಿ ಆಸಕ್ತಿ ಹೊಂದಿರುವವರ ಸಂಖ್ಯೆ ಸಾಕಷ್ಟಿದೆ. ಸ್ವಂತ ಕೆಲಸ ಮಾಡಬೇಕು ಎಂದು ಅನೇಕರು ಕನಸು ಕಾಣುತ್ತಾರೆ. ಆದ್ರೆ ಯಾವ ಕೆಲಸ ಮಾಡಬೇಕು ಹಾಗೆ ಹೀಗೆ ಮಾಡ್ಬೇಕು ಎನ್ನುವ ಬಗ್ಗೆ ಅವರಿಗೆ ಸೂಕ್ತ ಮಾಹಿತಿ ಇರೋದಿಲ್ಲ. ಶತ್ರುಘ್ನ ಯಾದವ್ ಪರಿಸ್ಥಿತಿಯೂ ಅದೇ ಆಗಿತ್ತು. ಅವರಿಗೆ ವ್ಯಾಪಾರ ಆರಂಭಿಸುವ ಆಸೆ ಇತ್ತು. ಆದ್ರೆ ಯಾವುದೆಂಬುದನ್ನು ಡಿಸೈಡ್ ಮಾಡಲು ಹೆಣಗಾಡುತ್ತಿದ್ದರು. ಅವರ ದಿಕ್ಕನ್ನು ಕೊನೆಗೂ ಯೂಟ್ಯೂಬ್ ವಿಡಿಯೋ ಬದಲಿಸಿತು.
ಶತ್ರುಘ್ನ ಯಾದವ್, ಬಂಕಾ ಜಿಲ್ಲೆಯ ಬಾದ್‌ಶಹಗಂಜ್ ಪ್ರದೇಶದ ನಿವಾಸಿ.ಒಂದು ದಿನ ಯೂಟ್ಯೂಬ್ ವಿಡಿಯೋ ನೋಡುವ ಸಮಯದಲ್ಲಿ ಬಿಸ್ಕತ್ ಮಾಡುವುದನ್ನು ನೋಡಿದ್ದಾರೆ. ಅದನ್ನು ಸರಿಯಾಗಿ ಅರಿತ ಶತ್ರುಘ್ನ ಯಾವದ್, ಬಿಸ್ಕತ್ ತಯಾರಿಗೆ ಆರಂಭಿಸಿದ್ದಾರೆ. ಶತ್ರುಘ್ನ ಯಾದವ್ ಅದಕ್ಕೆ ಸಾಕಷ್ಟು ಪರಿಶ್ರಮಪಟ್ಟಿದ್ದು, ಈಗ ಒಳ್ಳೆಯ ಲಾಭ ಬರ್ತಿದೆ. ಬಿಸ್ಕತ್ ತಯಾರಿಸುವ ಕಾರ್ಖಾನೆಗೆ ಐವತ್ತು ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂಬುದು ಶತ್ರುಘ್ನ ತಲೆಬಿಸಿಗೆ ಕಾರಣವಾಗಿತ್ತು. ಧೈರ್ಯ ಕಳೆದುಕೊಳ್ಳದ ಶತ್ರುಘ್ನ ಪ್ರಧಾನ ಮಂತ್ರಿ ಉದ್ಯಮಿ ಅಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿ ಮಂಜೂರಾದ ಬಳಿಕ 28 ಲಕ್ಷ ರೂಪಾಯಿ ಅವರ ಕೈ ಸೇರಿತ್ತು. ಇಷ್ಟೇ ಹಣದಲ್ಲಿ ಶತ್ರುಘ್ನ ಯಾದವ್ ಕಾರ್ಖಾನೆ ಶುರು ಮಾಡಿದ್ರು.
ಬಿಸ್ಕತ್ ಜೊತೆ ಅವರು ರಸ್ಕ್, ಚಪಾತಿ ಸೇರಿ ಬೇರೆ ಉತ್ಪನ್ನಗಳನ್ನು ಕೂಡ ತಯಾರಿಸುತ್ತಾರೆ. ಅವರ ಉತ್ಪನ್ನಕ್ಕೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟು ಬೇಡಿಕೆ ಇದೆ. ಶತ್ರುಘ್ನ ಯಾದವ್ ಬಿಸ್ಕತ್ ವ್ಯಾಪಾರದಿಂದಲೇ ತಿಂಗಳಿಗೆ ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸುತ್ತಾರೆ.
ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್.. ನಟನೆ ಬಿಟ್ಟು ಅಲ್ಲು ಅರ್ಜುನ್‌ನ 7 ಆದಾಯ ಮೂಲಗಳಿವು..
ಆರಕ್ಕಿಂತ ಹೆಚ್ಚು ಜನರಿಗೆ ಕೆಲಸ ನೀಡಿರುವ ಶತ್ರುಘ್ನ ಕಾರ್ಖಾನೆ ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಬಿಸ್ಕತ್ ತಯಾರಿಸುತ್ತದೆ. ಅದನ್ನು ಎರಡು ಮಶಿನ್ ಸಹಾಯದಿಂದ ತಯಾರಿಸಲಾಗುತ್ತದೆ. ಒಂದು ಪ್ಯಾಕೆಟ್ ಬಿಸ್ಕತ್ ನಲ್ಲಿ ಹನ್ನೆರಡು ಬಿಸ್ಕತ್ ಇರುತ್ತದೆ. ಅದನ್ನು ತಯಾರಿಸಲು ಶತ್ರುಘ್ನ ಎಂಟು ರೂಪಾಯಿ ಖರ್ಚು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಇದನ್ನು ಒಂಭತ್ತು ರೂಪಾಯಿಗೆ ಮಾರುತ್ತಾರೆ.