ಶಸ್ತ್ರಚಿಕಿತ್ಸೆಯ 5 ತಿಂಗಳ ಬಳಿಕ ಜಿಮ್ ಗೆ ಮರಳಿದ ಜುಕರ್ ಬರ್ಗ್, ಮಸ್ಕ್ ಗೆ ಟಾಂಗ್ ನೀಡಲು ಮಾತ್ರ ಮರೆಯಲಿಲ್ಲ!

By Suvarna News  |  First Published Apr 10, 2024, 12:33 PM IST

ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ಶಸ್ತ್ರಚಿಕಿತ್ಸೆಗೊಳಗಾದ 5 ತಿಂಗಳ ಬಳಿಕ ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಜುಕರ್ ಬರ್ಗ್, ಪ್ರತಿಸ್ಪರ್ಧಿ ಎಲಾನ್ ಮಸ್ಕ್ ಗೆ ಸಂಬಂಧಿಸಿ ಹೇಳಿಕೆಯೊಂದನ್ನು ಕೂಡ ನೀಡಿದ್ದಾರೆ. 


ನವದೆಹಲಿ (ಏ.10): ಶಸ್ತ್ರಚಿಕಿತ್ಸೆಗೆ ಒಳಗಾಗಿ 5 ತಿಂಗಳಾದ ಬಳಿಕ ಮೆಟಾದ ಮಾಲೀಕ ಮಾರ್ಕ್ ಜುಕರ್ ಬರ್ಗ್ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಕಳೆದ ವರ್ಷ ಕೇಜ್ ಫೈಟ್ ಗೆ ಆಹ್ವಾನಿಸಿದ್ದ ಟ್ವಿಟ್ಟರ್ ಬಾಸ್ ಎಲಾನ್ ಮಸ್ಕ್ ಗೆ ಟಾಂಗ್ ಕೂಡ ನೀಡಿದ್ದಾರೆ. ಮಾರ್ಕ್ ಜುಕರ್ ಬರ್ಗ್ ಐದು ತಿಂಗಳ ಹಿಂದೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸೋಮವಾರ (ಏ.9) ದೀರ್ಘಸಮಯದ ಅಂತರದ ಬಳಿಕ ಜುಕರ್ ಬರ್ಗ್ ಜಿಮ್ ನಲ್ಲಿ ಕಾಣಿಸಿಕೊಂಡಿದ್ದು, ವರ್ಕ್ ಔಟ್ ಮಾಡಿದ್ದಾರೆ. ಮಿಕ್ಸಡ್ ಮಾರ್ಷಿಯಲ್ ಆರ್ಟ್ ತರಬೇತಿ ಪಡೆಯುತ್ತಿರುವ ಮೆಟಾ ಸಿಇಒ ಮೊಣಕಾಲಿನ ಮೂಳೆಕಟ್ಟು ಹರಿದು ಹೋಗಿತ್ತು. ಈಗ 39 ವರ್ಷದ ಜುಕರ್ ಬರ್ಗ್ ವರ್ಕ್ ಔಟ್ ಸೀಸನ್ ವಿಡಿಯೋ ಹಂಚಿಕೊಂಡಿದ್ದಾರೆ.

'ಶಸ್ತ್ರಚಿಕಿತ್ಸೆಯ ಐದು ತಿಂಗಳ ಬಳಿಕ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದೇನೆ. ಹಾಗೆಯೇ ಸಾಮರ್ಥ್ಯವನ್ನು ಮರಳಿ ಪಡೆಯಲು ಪ್ರಾರಂಭಿಸಿದ್ದೇನೆ' ಎಂದು ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡು ಅದಕ್ಕೆ ಜುಕರ್ ಬರ್ಗ್  ಶೀರ್ಷಿಕೆ ಕೂಡ ನೀಡಿದ್ದಾರೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Mark Zuckerberg (@zuck)

 

'ಮುಂದಿನ ತಿಂಗಳುಗಳಲ್ಲಿ ತರಬೇತಿಗೆ ಮರಳಿ ಹೋಗಲು ಎದುರು ನೋಡುತ್ತಿದ್ದೇನೆ. ಎಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಋಣಿಯಾಗಿದ್ದೇನೆ' ಎಂದು ಜುಕರ್ ಬರ್ಗ್ ಹೇಳಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಫಾಲೋವರ್ಸ್ ಕಾಮೆಂಟ್ ಗಳಿಗೆ ನಿರಂತರವಾಗಿ ಪ್ರತಿಕ್ರಿಯಿಸುವ ಜುಕರ್ ಬರ್ಗ್, ಪ್ರತಿಸ್ಪರ್ಧಿ ಬಿಲಿಯನೇರ್ ಎಲಾನ್ ಮಸ್ಕ್ ಅವರಿಗೆ ಎದಿರೇಟು ನೀಡಲು ಅವಕಾಶ ಸಿಕ್ಕರೆ ಅದನ್ನು ತಪ್ಪಿಸಿಕೊಳ್ಳುವುದಿಲ್ಲ. 

'ನಾನು ಹಿಂತಿರುಗಿ ಬಂದ ಬಳಿಕ ನಿಜವಾದ ಹೋರಾಟಗಾರರ ಜೊತೆಗೆ ಸ್ಪರ್ಧೆ ಮಾಡುತ್ತೇನೆ' ಎಂದು ಜುಕರ್ ಬರ್ಗ್ ಇನ್ ಸ್ಟಾಗ್ರಾಮ್ ಬಳಕೆದಾರರೊಬ್ಬರಿಗೆ ಪ್ರತಿಕ್ರಿಯಿಸಿದ್ದಾರೆ. ಈ ಬಳಕೆದಾರರ ಕಾಮೆಂಟ್ ಸೆಕ್ಷನ್ ನಲ್ಲಿ 'ಮೆಟಾ ಸಿಇಒ ಎಲಾನ್ ಮಸ್ಕ್ ಅವರನ್ನು ಮಂಗಳನಲ್ಲಿಗೆ ಒದೆಯಬೇಕಿತ್ತು' ಎಂದು ಕಾಮೆಂಟ್ ಮಾಡಿದ್ದರು. 

ಕಳೆದ ವರ್ಷದ ನವೆಂಬರ್ ನಲ್ಲಿ ಗಾಯದ ಬಗ್ಗೆ ಮಾಹಿತಿ ನೀಡಿದ್ದ ಜುಕರ್ ಬರ್ಗ್ 'ಸ್ಪರ್ಧಾತ್ಮಕ ಎಂಎಂಎ ಫೈಟ್ ಗೆ ತರಬೇತಿ ಪಡೆಯುತ್ತಿರುವ ವೇಳೆ ಅವರ ಮೂಳೆಕಟ್ಟು ಹರಿದಿದೆ' ಎಂದು ತಿಳಿಸಿದ್ದರು. ಈ ಸ್ಪರ್ಧೆ 2024ರ ಪ್ರಾರಂಭದಲ್ಲಿ ನಿಗದಿಯಾಗಿತ್ತು. ಕೋವಿಡ್ ಪೆಂಡಾಮಿಕ್ ವೇಳೆ ಜುಕರ್ ಬರ್ಗ್ ಮಿಕ್ಸಡ್ ಮಾರ್ಷಿಯಲ್ ಆರ್ಟ್ ಹಾಗೂ ಬ್ರೆಜಿಲಿಯನ್ ಜಿಯು-ಜಿಸ್ಟು ತರಬೇತಿ ಪಡೆಯಲು ಪ್ರಾರಂಭಿಸಿದ್ದರು. 

ಇನ್ನು ಜುಕರ್ ಬರ್ಗ್ ಎಲಾನ್ ಮಸ್ಕ್ ಅವರ ಕೇಜ್ ಮ್ಯಾಚ್ ಸವಾಲನ್ನು ಕೂಡ ಸ್ವೀಕರಿಸಿದ್ದರು. ಇಬ್ಬರು ಕೂಡ ಈ ಫೈಟ್ ಅನ್ನು ಗಂಭೀರವಾಗಿ  ತೆಗೆದುಕೊಂಡಿದ್ದರು ಎಂದು ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್ (ಯುಎಫ್ ಸಿ) ಅಧ್ಯಕ್ಷ ಡಾನಾ ವೈಟ್ ಮಾಹಿತಿ ನೀಡಿದ್ದರು. ಸವಾಲಿನ ಬೆನ್ನಲ್ಲೇ ಇಬ್ಬರು ಬಿಲಿಯನೇರ್ ಗಳು ಬಾಕ್ಸರ್ ಗಳಿಂದ ತರಬೇತಿ ಕೂಡ ಪಡೆದಿದ್ದರು. ಇನ್ನು ಕಳೆದ ಆಗಸ್ಟ್ ನಲ್ಲಿ ಮಸ್ಕ್ ತರಬೇತಿ ಫೈಟ್ ನಡೆಸುವ ಬಗ್ಗೆ ನೀಡಿದ ಆಫರ್ ಅನ್ನು ಜುಕರ್ ಬರ್ಗ್ ಸಾರ್ವಜನಿಕವಾಗಿ ನಿರಾಕರಿಸಿದ್ದರು. 

ಅನಂತ್-ರಾಧಿಕಾ ಮದ್ವೇಲಿ ಭಾಗಿಯಾದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಇವ್ರ ಮುಂದೆ ಅಂಬಾನಿ ಸಂಪತ್ತು ಲೆಕ್ಕಕ್ಕೇ ಇಲ್ಲ!

ಜುಕರ್ ಬರ್ಗ್ ಜೊತೆಗೆ ಎಲ್ಲಿ ಬೇಕಾದರೂ ಸ್ಪರ್ಧೆಗಿಳಿಯಲು ತಾನು ಸಿದ್ಧ ಎಂದು ಮಸ್ಕ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.  ಕಳೆದ ವಾರವಷ್ಟೇಮಾರ್ಕ್ ಜುಕರ್ ಬರ್ಗ್ ವಿಶ್ವದ ಮೂರನೇ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಜುಕರ್ ಬರ್ಗ್ ಸಂಪತ್ತು ಎಲಾನ್ ಮಸ್ಕ್ ಸಂಪತ್ತನ್ನು ಮೀರಿಸಿದೆ. 2020ರ ಬಳಿಕ ಇದೇ ಮೊದಲ ಬಾರಿಗೆ ಜುಕರ್ ಬರ್ಗ್ ಸಂಪತ್ತಿನಲ್ಲಿ ಮಸ್ಕ್ ಅವರನ್ನು ಹಿಂದಿಕ್ಕಿದ್ದಾರೆ. ಪ್ರಸ್ತುತ ಜುಕರ್ ಬರ್ಗ್ ಸಂಪತ್ತು 186.9 ಬಿಲಿಯನ್ ಡಾಲರ್ ಇದೆ. 

click me!