ಬಲಿಷ್ಠ ಭಾರತಕ್ಕೆ ಕರ್ನಾಟಕದ ಕೊಡುಗೆ ಬೇಕು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

By Kannadaprabha NewsFirst Published Sep 30, 2022, 2:00 AM IST
Highlights

ದೇಶದ ಮೂಲೆ ಮೂಲೆಗೂ ತಲುಪುವಂತಹ ತಂತ್ರಜ್ಞಾನಗಳ ಆವಿಷ್ಕಾರ ಆಗಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಕೇಂದ್ರವಾಗಿರುವ ಕರ್ನಾಟಕದ ಜವಾಬ್ದಾರಿ ಹೆಚ್ಚಿನದಾಗಿದೆ ಎಂದ ನಿರ್ಮಲಾ ಸೀತಾರಾಮನ್‌ 

ಬೆಂಗಳೂರು(ಸೆ.30):  ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿರುವ ಭಾರತ 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಪಾತ್ರ ಬಹುದೊಡ್ಡದು. ಈ ಹಿನ್ನೆಲೆಯಲ್ಲಿ ಹೊಸ ‘ಆವಿಷ್ಕಾರ’ಗಳಿಗೆ ಒತ್ತು ನೀಡಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕರೆ ನೀಡಿದರು.

ಗುರುವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯ (ಎಫ್‌ಕೆಸಿಸಿಐ) 105ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ 25 ವರ್ಷ ಅಮೃತ ಕಾಲವಾಗಿದ್ದು, ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿಗೂ ಎಲ್ಲ ಸೌಲಭ್ಯ ಸಿಗಲು ಡಿಜಿಟಲೀಕರಣ ಆಗಬೇಕು. ಈ ನಿಟ್ಟಿನಲ್ಲಿ ಹೊಸ ಬಗೆಯ ಸ್ಟಾರ್ಟ್‌ಅಪ್‌ಗಳ ಆವಿಷ್ಕಾರ ಆಗಬೇಕು. ಉದ್ಯೋಗ ನೀಡುವ, ಉದ್ಯೋಗ ಒದಗಿಸುವ ಕೆಲಸ ಆಗಬೇಕು. ಉತ್ಪಾದನೆ ಹೆಚ್ಚಾಗಿ ದೇಶದ ಮೂಲೆ ಮೂಲೆಗೂ ತಲುಪುವಂತಹ ತಂತ್ರಜ್ಞಾನಗಳ ಆವಿಷ್ಕಾರ ಆಗಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಕೇಂದ್ರವಾಗಿರುವ ಕರ್ನಾಟಕದ ಜವಾಬ್ದಾರಿ ಹೆಚ್ಚಿನದಾಗಿದೆ ಎಂದರು.

ಬ್ಯಾಂಕ್‌ಗಳು ಸ್ಥಳೀಯ ಭಾಷೆ ಮಾತನಾಡುವವರನ್ನು ನೇಮಿಸಬೇಕು: Nirmala Sitharaman

ಎಫ್‌ಕೆಸಿಸಿಐ ಅಧ್ಯಕ್ಷ ಡಾ. ಐ.ಎಸ್‌. ಪ್ರಸಾದ್‌, ಉಪಾಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ, ಹಿರಿಯ ಉಪಾಧ್ಯಕ್ಷ ರಮೇಶ್‌ ಚಂದ್ರ ಲಹೋಟಿ, ಹಿಂದಿನ ಅಧ್ಯಕ್ಷ ಡಾ. ಪೆರಿಕಲ್‌ ಎಂ. ಸುಂದರ್‌ ಉಪಸ್ಥಿತರಿದ್ದರು.

ಕೋವಿಡ್‌ನಿಂದಾಗಿ ಎಲ್ಲ ದೇಶಗಳಂತೆ ಭಾರತ ಸಹ ಅನೇಕ ಸಮಸ್ಯೆ ಎದುರಿಸಿ, ಸಾಕಷ್ಟುಚೇತರಿಸಿಕೊಂಡಿದೆ. ಆದರೆ ಅಭಿವೃದ್ಧಿ ಹೊಂದಿದ ಅನೇಕ ದೇಶಗಳು ಇನ್ನೂ ಅನೇಕ ಸಮಸ್ಯೆಗಳಿಂದ ಹೊರ ಬಂದಿಲ್ಲ, ಹಣದುಬ್ಬರ, ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿವೆ. ಆದರೆ ಭಾರತ ತಂತ್ರಜ್ಞಾನ ಬಳಸಿಕೊಂಡು ಪಾರದರ್ಶಕವಾಗಿ, ಅಗತ್ಯವುಳ್ಳವರಿಗೆ ನೆರವು ನೀಡಿತು. ಕೋವಿನ್‌ ಆ್ಯಪ್‌ ಮೂಲಕ ಲಸಿಕೆ ನೀಡಿತು. ಲಸಿಕೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಿತು ಎಂದರು.

ಕಳೆದ ಆಗಸ್ಟ್‌ 15 ರಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ಮೋದಿ ಅವರು ಘೋಷಿಸಿದ ‘ಪಂಚ ಪ್ರಾಣ’ ಪೈಕಿ 2047ರ ವೇಳೆಗೆ ಭಾರತ ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಹಾಗೂ ವಸಾಹತುಶಾಹಿ ಕಾನೂನುಗಳಿಂದ ಮುಕ್ತರಾಗಬೇಕು ಎಂದು ಹೇಳಿದ್ದಾರೆ. ‘ಜೈ ಜವಾನ್‌ ಜೈ ಕಿಸಾನ್‌, ಜೈ ವಿಜ್ಞಾನ’ದ ಜೊತೆಗೆ ‘ಜೈ ಅನುಸಂಧಾನ’ ಘೋಷಣೆ ಸೇರ್ಪಡೆಯಾಗಿದೆ. ಕರ್ನಾಟಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವುದರಿಂದ ಆವಿಷ್ಕಾರಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ. ನಮ್ಮ ಅನೇಕ ಸಮಸ್ಯೆಗಳ ಪರಿಹಾರಕ್ಕೆ ‘ಅನುಸಂಧಾನ’ ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಹೊಸ ಸ್ಟಾರ್ಟ್‌ಅಪ್‌ ಆರಂಭಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ಮಲಾ ಸೀತಾರಾಮನ್ ಭೇಟಿಯಾದ ಆರಗ ಜ್ಞಾನೇಂದ್ರ: ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ

ಕಿರುಧಾನ್ಯಗಳಿಗೆ ಮೌಲ್ಯವರ್ಧನೆ:

ಮುಂದಿನ ವರ್ಷವನ್ನು ‘ಕಿರುಧಾನ್ಯಗಳ ವರ್ಷ’ ಎಂದು ಆಚರಿಸಲಾಗುವುದು. ಭಾರತ ಕಿರುಧಾನ್ಯಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ರಫ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ಕಿರುಧಾನ್ಯಗಳಿಗೆ ತುಂಬಾ ಬೆಲೆ ಇದೆ. ಹಾಗಾಗಿ ಇವುಗಳ ಮೌಲ್ಯವರ್ಧಿಸುವ ಸ್ಟಾರ್ಚ್‌ಅಪ್‌ ಬರಬೇಕಾಗಿದೆ. ವಿದೇಶಗಳಿಗೆ ರಫ್ತು ಆಗಬೇಕು, ಆ ಮೂಲಕ ರೈತರ ಆದಾಯ ಹೆಚ್ಚಾಗುವಂತಾಗಬೇಕು. ಈ ನಿಟ್ಟಿನಲ್ಲಿ ಎಫ್‌ಕೆಸಿಸಿಐ ಸೇರಿದಂತೆ ವ್ಯಾಪಾರಿಗಳು, ಚಾರ್ಟೆಡ್‌ ಅಕೌಂಟೆಂಟ್‌ ಮುಂತಾದವರು ಕೈ ಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಕರ್ನಾಟಕದಲ್ಲಿ ಜಿ-20 ಸಮಾವೇಶ

ಮುಂದಿನ ವರ್ಷದಿಂದ 20 ದೇಶಗಳ ‘ಜಿ-20’ ಸಂಘಟನೆಯ ಅಧ್ಯಕ್ಷತೆಯನ್ನು ಭಾರತ ವಹಿಸಲಿದ್ದು, ಪ್ರಧಾನಿ ಮೋದಿ ಅವರು ಜಿ-20 ಸಮಾವೇಶವನ್ನು ದೆಹಲಿಯಿಂದ ಹೊರಗೆ ದೇಶದ ವಿವಿಧ ಕಡೆ ನಡೆಸಲು ಉದ್ದೇಶಿಸಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ನಡೆಯಲಿರುವ ಸಮಾವೇಶದಲ್ಲಿ ಜಿ-20 ದೇಶಗಳ ಅನೇಕ ಸಂಸ್ಥೆಗಳು ಭಾಗಿಯಾಗಲಿವೆ. ಹೀಗಾಗಿ ಎಫ್‌ಕೆಸಿಸಿಐ ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳು, ಕರ್ನಾಟಕದ ಕರಕುಶಲ ವಸ್ತುಗಳು ಸೇರಿದಂತೆ ಸಾಂಪ್ರದಾಯಕ ಉತ್ಪನ್ನಗಳ ಪ್ರದರ್ಶಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಆ ಮೂಲಕ ‘ಕರ್ನಾಟಕ ಬ್ರ್ಯಾಂಡ್‌’ ಪರಿಚಯಿಸುವ ಕೆಲಸ ಮಾಡಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಲಹೆ ನೀಡಿದರು.
 

click me!