ಗೃಹಸಾಲದ ಬಡ್ಡಿದರ ಇಳಿಕೆ ಮಾಡಿದ ಎಸ್ ಬಿಐ; ಯಾರಿಗೆಲ್ಲ ಸಿಗಲಿದೆ ಪ್ರಯೋಜನ?

By Suvarna NewsFirst Published Jan 30, 2023, 12:02 PM IST
Highlights

ನಿರಂತರ ರೆಪೋ ದರ ಏರಿಕೆ ಪರಿಣಾಮ ಗೃಹಸಾಲದ ಬಡ್ಡಿದರದಲ್ಲಿ ಭಾರೀ ಏರಿಕೆಯಾಗಿದೆ. ಈ ನಡುವೆ ಎಸ್ ಬಿಐ ಕಡಿಮೆ ಬಡ್ಡಿದರದಲ್ಲಿ ಗ್ರಾಹಕರಿಗೆ ಗೃಹಸಾಲ ಒದಗಿಸಲು ಮುಂದಾಗಿದ್ದು, ಬಡ್ಡಿದರವನ್ನು 30ರಿಂದ 40 ಬೇಸಿಸ್ ಪಾಯಿಂಟ್ಸ್ ತಗ್ಗಿಸಿದೆ.
 

ನವದೆಹಲಿ (ಜ.30):  ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಕಡಿಮೆ ಬಡ್ಡಿದರದಲ್ಲಿ ಗ್ರಾಹಕರಿಗೆ ಗೃಹಸಾಲ ಒದಗಿಸಲು ಮುಂದಾಗಿದೆ. ಗೃಹಸಾಲದ ಬಡ್ಡಿದರವನ್ನು 30ರಿಂದ 40 ಬೇಸಿಸ್ ಪಾಯಿಂಟ್ಸ್ ತಗ್ಗಿಸಿದೆ. ಈ ವಿಶೇಷ ಆಫರ್ 2023ರ ಮಾರ್ಚ್ 31ರ ತನಕ ಇರಲಿದೆ. ಗೃಹಸಾಲ ಪಡೆಯಲು ಬಯಸುವ ಗ್ರಾಹಕರನ್ನು ಈ ಸೌಲಭ್ಯ ಬಳಸಿಕೊಳ್ಳಬಹುದು. ಈ ವಿಶೇಷ ಆಫರ್ ಕಾರಣಕ್ಕೆ ಗ್ರಾಹಕರಿಗೆ ಶೇ.8.60 ಬಡ್ಡಿದರದಲ್ಲಿ ಗೃಹಸಾಲ ಸಿಗಲಿದೆ. ಎಸ್ ಬಿಐ ಗೃಹಸಾಲದ ಬಡ್ಡಿದರ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಬದಲಾಗುತ್ತದೆ ಎಂಬುದನ್ನು ಕೂಡ ಗಮನಿಸೋದು ಅಗತ್ಯ. ಇನ್ನು ಎಸ್ ಬಿಐ ಸ್ಟಾಂಡರ್ಡ್ ಹಾಗೂ ಟಾಪ್ -ಅಪ್ ಗೃಹಸಾಲದ ಪ್ರೊಸೆಸಿಂಗ್ ಶುಲ್ಕವನ್ನು ಕೂಡ ರದ್ದುಗೊಳಿಸಿದೆ. ಈ ಹಿಂದೆ ಕೂಡ ಎಸ್ ಬಿಐ ಹಾಲಿಡೇ ಆಫರ್ ಘೋಷಿಸಿತ್ತು. ಇದು 2022ರ ಅಕ್ಟೋಬರ್ 4ರಿಂದ 2023ರ ಜನವರಿ 31ರ ತನಕ ಜಾರಿಯಲ್ಲಿತ್ತು. ಈಗ ಮತ್ತೊಮ್ಮೆ ಇಂಥದ್ದೇ ಆಫರ್ ಅನ್ನು ಎಸ್ ಬಿಐ ನೀಡಲು ಮುಂದಾಗಿದೆ. ಹಾಗಾದ್ರೆ ಗೃಹಸಾಲಗಳ ಮೇಲಿನ ಹೊಸ ಬಡ್ಡಿದರ ಎಷ್ಟಿದೆ? ಇಲ್ಲಿದೆ ಮಾಹಿತಿ.

ರೆಗ್ಯುಲರ್ ಗೃಹಸಾಲದ ಮೇಲೆ 30-40 ಬೇಸಿಸ್ ಪಾಯಿಂಟ್ಸ್
ಗೃಹಸಾಲದ ಮೇಲೆ ಎಸ್ ಬಿಐ 30 ಹಾಗೂ 40 ಬಿಪಿಎಸ್ ನಡುವೆ ಡಿಸ್ಕೌಂಟ್ಸ್ ನೀಡಿದೆ. ಆದರೆ, ಈ ಬಡ್ಡಿದರ 700 ಹಾಗೂ 800 ಬಿಪಿಎಸ್ ನಡುವೆ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಮಾತ್ರ ಅನ್ವಯಿಸುತ್ತದೆ. ಕನಿಷ್ಠ 800 ಬಿಪಿಎಸ್ ಹೊಂದಿರೋರಿಗೆ  ಗೃಹಸಾಲದ ಆಫರ್ ದರ ಶೇ.8.60 ಇರಲಿದೆ. ಇದು ಸರ್ವೇಸಾಮಾನ್ಯ ಬಡ್ಡಿದರ ಶೇ.8.90ಕ್ಕಿಂತ 30 ಬಿಪಿಎಸ್ ಕಡಿಮೆ ಇರಲಿದೆ. 700 ರಿಂದ 749 ಹಾಗೂ 750 ರಿಂದ 799 ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ  40 ಬೇಸಿಸ್ ಪಾಯಿಂಟ್ಸ್ ವಿನಾಯ್ತಿ ಸಿಗಲಿದೆ. ಇದರಿಂದ ಶೇ.9 ಹಾಗೂ ಶೇ.9.10 ಬಡ್ಡಿದರ ಕ್ರಮವಾಗಿ ಶೇ. 8.60 ಹಾಗೂ ಶೇ.8.70ಕ್ಕೆ ಇಳಿಕೆಯಾಗಲಿದೆ. 

ಮನೆ ಖರೀದಿ ಯೋಚನೆ ಇದೆಯಾ? ಡೌನ್ ಪೇಮೆಂಟ್ ಗೆ ಉಳಿತಾಯ ಮಾಡಲು ಇಲ್ಲಿವೆ ಟಿಪ್ಸ್

ಇನ್ನು  650 ಹಾಗೂ 699ರ ನಡುವೆ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಈ ಹಿಂದಿನಂತೆ ಶೇ.9.20 ಬಡ್ಡಿದರದಲ್ಲಿ ಗೃಹಸಾಲ ಸಿಗಲಿದೆ. ಇನ್ನು 550 ಹಾಗೂ 649ರ ನಡುವೆ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಕೂಡ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಿಲ್ಲ. ಮಹಿಳಾ ಸಾಲಗಾರರಿಗೆ ಬಡ್ಡಿದರದಲ್ಲಿ ಹೆಚ್ಚುವರಿ 5 ಬಿಪಿಎಸ್ ಡಿಸ್ಕೌಂಟ್ ಸಿಗಲಿದೆ. ಇನ್ನು ಎಸ್ ಬಿಐಯಲ್ಲಿ ವೇತನ ಖಾತೆ ಹೊಂದಿರೋರಿಗೆ ಕೂಡ ಗೃಹಸಾಲದ ಬಡ್ಡಿದರದ ಮೇಲೆ  5 ಬಿಪಿಎಸ್ ಡಿಸ್ಕೌಂಟ್ ಸಿಗಲಿದೆ.  

ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ; LIC, SBIಯಲ್ಲಿನ ನಿಮ್ಮ ಹೂಡಿಕೆಗೂ ಅಪಾಯ ಇದೆಯಾ?

ಟಾಪ್-ಅಪ್ ಸಾಲದ ಮೇಲೆ 30 ಬಿಪಿಎಸ್ ಡಿಸ್ಕೌಂಟ್
700 ಹಾಗೂ ಅದಕ್ಕಿಂತ ಮೇಲ್ಪಟ್ಟ ಅಥವಾ 800ಕ್ಕೆ ಸರಿಸಮನಾದ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಎಸ್ ಬಿಐ 30ಬಿಪಿಎಸ್ ಡಿಸ್ಕೌಂಟ್ ಘೋಷಿಸಿದೆ. ಹೀಗಾಗಿ  800ಕ್ಕೆ ಸರಿಸಮನಾದ ಅಥವಾ ಅದಕ್ಕಿಂತ ಮೇಲ್ಪಟ್ಟ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಶೇ.9 ಬಡ್ಡಿದರದಲ್ಲಿ ಗೃಹಸಾಲ ಸಿಗಲಿದೆ. ಇನ್ನು 750 ಹಾಗೂ 799 ನಡುವೆ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಶೇ.9.10 ಬಡ್ಡಿದರಲ್ಲಿ ಗೃಹಸಾಲ ದೊರೆಯಲಿದೆ. 700-749 ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಬಡ್ಡಿದರ ಶೇ.9.50ರಿಂದ ಶೇ.9.20ಕ್ಕೆ ಇಳಿಕೆ ಮಾಡಲಾಗಿದೆ. ಇನ್ನು  650 ಹಾಗೂ 699, 550 ಹಾಗೂ 649 ನಡುವೆ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಹಾಗೂ NTC/NO CIBIL/-1 ಸ್ಕೋರ್ ಹೊಂದಿರೋರಿಗೆ ಕ್ರಮವಾಗಿ ಶೇ.9.60, ಶೇ. 9.90 ಹಾಗೂ ಶೇ.9.50 ಬಡ್ಡಿದರ ನೀಡಲಾಗುತ್ತದೆ. 
 

click me!