* ಇಂಧನದ ಬೆಲೆ ಸಾರ್ವಕಾಲಿಕ ಗರಿಷ್ಠ
* ಲಂಕಾ: ಪೆಟ್ರೋಲ್ 420 ರು.ಗೆ, ಡೀಸೆಲ್ 400 ರು.ಗೆ ಏರಿಕೆ!
* ಕಂಗೆಟ್ಟಿದ್ದ ಜನತೆಗೆ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಶಾಕ್!
ಕೊಲಂಬೊ(ಮೇ.25): ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾ ಮಂಗಳವಾರ ಇಂಧನ ಬೆಲೆಯನ್ನು ಮತ್ತಷ್ಟುಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 420 ರು. ಹಾಗೂ ಡೀಸೆಲ್ ಬೆಲೆ 400 ರು. ಗೆ ಏರಿಸಿದೆ. ಈ ಮೂಲಕ ದೇಶದಲ್ಲಿ ಇಂಧನದ ಬೆಲೆ ಸಾರ್ವಕಾಲಿಕ ಗರಿಷ್ಠಕ್ಕೆ ತಲುಪಿದೆ.
ಶ್ರೀಲಂಕಾದ ಕ್ಯಾಬಿನೆಟ್ ಅನುಮತಿಯೊಂದಿಗೆ ಇಂಧನದ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಒಂದೇ ಬಾರಿಗೆ ಕ್ರಮವಾಗಿ 82 ರು. (ಶೇ.24.3ರಷ್ಟು) ಹಾಗೂ 111 ರು.ನಷ್ಟು(ಶೇ.38.4ರಷ್ಟು) ಏರಿಕೆ ಮಾಡಲಾಗಿದೆ ಎಂದು ಶ್ರೀಲಂಕಾದ ಶಕ್ತಿ ಸಚಿವ ಕಾಂಚಾಣ ವಿಜೇಶೇಖರ ಘೋಷಿಸಿದ್ದಾರೆ.
ಮತ್ತಷ್ಟು ಬಿಗಡಾಯಿಸಿದ ಶ್ರೀಲಂಕಾ ಪರಿಸ್ಥಿತಿ, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ!
ಆಮದು, ಸಾಗಾಣಿಕೆ, ತೆರಿಗೆ ಮೊದಲಾದ ವೆಚ್ಚಗಳನ್ನು ಸೇರಿಸಿ ಇಂಧನದ ಬೆಲೆಯನ್ನು ಪರಿಷ್ಕರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದು ಈಗಾಗಲೇ ಹಣದುಬ್ಬರದಿಂದ ಹೆಣಗಾಡುತ್ತಿರುವ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಲಂಕೆಗೆ ಭಾರತವೇ ಪೆಟ್ರೋಲ್, ಡೀಸೆಲ್ ಪೂರೈಸುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹಿಂತೆಗೆತ
ಹಿಂದೆಂದೂ ಕಂಡಿರದ ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಜಾರಿಗೊಳಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ಶನಿವಾರ ಹಿಂಪಡೆಯಾಗಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಾಗಿದೆ ಎಂದು ಅಧ್ಯಕ್ಷೀಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದ ಕಾರಣದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ.
Sri Lanka Crisis ಪೆಟ್ರೋಲ್,ಆಹಾರವಿಲ್ಲ, ಲಂಕಾ ಪ್ರಧಾನಿ ರಾನಿಲ್ ಭಾಷಣ, ಏನ್ ಮಾಡ್ಬೋದು ಹೇಳಿ ಎಂದ ಜನ!
ಮೇ 6ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಅಧ್ಯಕ್ಷ ಗೋಟಬಯ ರಾಜಪಕ್ಷೆ ಅವರು ತುರ್ತು ಪರಿಸ್ಥಿತಿ ಹೇರಿದ್ದರು. ಇದು ಸುಮಾರು 2 ವಾರಗಳ ಕಾಲ ಜಾರಿಯಲ್ಲಿತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರತಿಭಟನಾ ಕಾರರನ್ನು ಬಂಧಿಸುವ ಮತ್ತು ವಶಕ್ಕೆ ಪಡೆಯುವ ಮುಕ್ತ ಅಧಿಕಾರವನ್ನು ಪೊಲೀಸರಿಗೆ ನೀಡಲಾಗುತ್ತದೆ.
ಲಂಕಾಗೆ ಭಾರತದಿಂದ 40 ಸಾವಿರ ಟನ್ ಡೀಸೆಲ್
ಕೆಟ್ಟಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಗೆ ಕ್ರೆಡಿಟ್ ಲೈನ್ ಸೌಲಭ್ಯದಡಿ ಭಾರತ ಶನಿವಾರ ಮತ್ತೆ 40 ಸಾವಿರ ಟನ್ ಡೀಸೆಲ್ ಪೂರೈಕೆ ಮಾಡಿದೆ. ಇದೇ ವೇಳೆ, ಅಕ್ಕಿ, ಔಷಧದಂಥ ಅಗತ್ಯ ವಸ್ತುಗಳನ್ನೂ ಪ್ರತ್ಯೇಕವಾಗಿ ನೀಡಿದೆ.
‘ಕ್ರೆಡಿಟ್ ಲೈನ್ ಅಡಿಯಲ್ಲಿ ಮತ್ತೆ 40 ಸಾವಿರ ಟನ್ ಡೀಸೆಲ್‌ನ್ನು ಶ್ರೀಲಂಕಾಗೆ ಪೂರೈಕೆ ಮಾಡಲಾಗಿದೆ. ಇದು ಶನಿವಾರ ಕೊಲಂಬೋಗೆ ತಲುಪಿದೆ’ ಎಂದು ಶ್ರೀಲಂಕಾದ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ಶ್ರೀಲಂಕಾ ವಿದೇಶಿ ವಿನಿಮಯಗಳು ಇತ್ತೀಚಿಗೆ ತೀವ್ರವಾಗಿ ಕುಸಿತ ಕಂಡ ನಂತರ ಭಾರತವು ತನ್ನ ಸಾಲದ ಪ್ರಮಾಣವನ್ನು 38 ಸಾವಿರ ಕೋಟಿ ರು.ಗೆ ಹೆಚ್ಚಳ ಮಾಡಿತ್ತು.
ಅಗತ್ಯ ವಸ್ತು:
ಅಲ್ಲದೇ ಶುಕ್ರವಾರ ಅಗತ್ಯ ಸಾಮಾಗ್ರಿಗಳಾದ ಅಕ್ಕಿ, ಔಷಧ ಮತ್ತು ಹಾಲಿನ ಪುಡಿಯನ್ನು ಹೊತ್ತ ಹಡಗು ಭಾರತದಿಂದ ಶ್ರೀಲಂಕಾಗೆ ಹೊರಟಿದೆ. ಇದು ಭಾನುವಾರ ಕೊಲಂಬೋ ತಲಪುವ ಸಾಧ್ಯತೆ ಇದೆ. 9 ಸಾವಿರ ಮೆಟ್ರಿಕ್ ಟನ್ ಅಕ್ಕಿ, 200 ಮೆಟ್ರಿಕ್ ಟನ್ ಹಾಲಿನ ಪುಡಿ, 24 ಮೆಟ್ರಿಕ್ ಟನ್ ಜೀವರಕ್ಷಕ ಔಷಧಗಳನ್ನು ಭಾರತ ಪೂರೈಕೆ ಮಾಡಿದೆ.