*ಸಾವರಿನ್ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಲು ಆ.26ರ ತನಕ ಅವಕಾಶ
*ಬಾಂಡ್ ವಿತರಣೆ ಬೆಲೆ ಪ್ರತಿ ಗ್ರಾಂಗೆ 5,197ರೂ. ನಿಗದಿ
*ಆನ್ ಲೈನ್ ನಲ್ಲಿ ಖರಿದಿಸಿದ್ರೆ ಪ್ರತಿ ಗ್ರಾಂ ಚಿನ್ನಕ್ಕೆ 5,147ರೂ.
ನವದೆಹಲಿ (ಆ.22): 2022-23ನೇ ಸಾಲಿನ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ ಎರಡನೇ ಸರಣಿಯ ಚಂದಾದಾರಿಕೆ ಇಂದಿನಿಂದ (ಆ.22) ಪ್ರಾರಂಭವಾಗಿದೆ. ಆಗಸ್ಟ್ 26ರ ತನಕ ಒಟ್ಟು 5 ದಿನಗಳ ಕಾಲ ನಡೆಯಲಿದೆ. ಸಾವರಿನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5,197ರೂ. ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ. ಈ ಸಾಲಿನ ಸಾವರಿನ್ ಗೋಲ್ಡ್ ಬಾಂಡ್ ಯೊಜನೆಯ ಮೊದಲನೇ ಸರಣೆ ಚಂದಾದಾರಿಕೆ ಜೂನ್ 20-24ರ ತನಕ ನಡೆದಿತ್ತು. ಇನ್ನು ಈ ಬಾರಿ ಆನ್ ಲೈನ್ ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಗೆ ಅರ್ಜಿ ಸಲ್ಲಿಸಿದ್ರೆ ಹಾಗೂ ಡಿಜಿಟಲ್ ಪಾವತಿ ಮಾಡಿದ್ರೆ ಪ್ರತಿ ಗ್ರಾಂಗೆ 50ರೂ. ಡಿಸ್ಕೌಂಟ್ ಸಿಗಲಿದೆ. 'ಭಾರತ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೆ ಸಮಾಲೋಚಿಸಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಡಿಜಿಟಲ್ ಪಾವತಿ ಮಾಡುವ ಹೂಡಿಕೆದಾರರಿಗೆ ಸಾಮಾನ್ಯ ಬೆಲೆಗಿಂತ ಕಡಿಮೆ ಅಂದ್ರೆ ಪ್ರತಿ ಗ್ರಾಂಗೆ 50ರೂ. ಡಿಸ್ಕೌಂಟ್ ನೀಡಲು ನಿರ್ಧರಿಸಿದೆ. ಇಂಥ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್ ವಿತರಣೆ ಬೆಲೆ ಪ್ರತಿ ಗ್ರಾಂ ಚಿನ್ನಕ್ಕೆ 5,147ರೂ. ಆಗಿರಲಿದೆ' ಎಂದು ಆರ್ ಬಿಐ ತಿಳಿಸಿದೆ.
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಅಂದ್ರೇನು?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದ್ದು, ಇದು ಭೌತಿಕವಲ್ಲದ ಚಿನ್ನದ ಮೇಲೆ ಹೂಡಿಕೆ (Invest)ಮಾಡಲು ಅವಕಾಶ ಕಲ್ಪಿಸುತ್ತದೆ. ಅಂದರೆ ಚಿನ್ನದ ಗಟ್ಟಿ, ನಾಣ್ಯ ಅಥವಾ ಆಭರಣಗಳ ಮೇಲೆ ಹೂಡಿಕೆ ಮಾಡೋ ಬದಲು ಭೌತಿಕ ಸ್ವರೂಪದಲ್ಲಿರದ ಚಿನ್ನದ ಮೇಲೆ ಹೂಡಿಕೆ ಮಾಡೋದು. ಭೌತಿಕ ಚಿನ್ನದ ಬೇಡಿಕೆಯನ್ನು ತಗ್ಗಿಸೋ ಜೊತೆಗೆ ಸ್ವ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯವಾಗಿ ಬದಲಾಯಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ 2015ರ ನವೆಂಬರ್ನಲ್ಲಿಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಾಂಡ್ ಗಳನ್ನು ವಿತರಿಸುತ್ತದೆ.
ಯುಪಿಐ ವರ್ಗಾವಣೆಗಿಲ್ಲ ಶುಲ್ಕ: ಹಣಕಾಸು ಸಚಿವಾಲಯ ಸ್ಪಷ್ಟನೆ
ಯಾರು ಹೂಡಿಕೆ ಮಾಡಬಹುದು?
ಟ್ರಸ್ಟ್ ಗಳು, ವಿಶ್ವವಿದ್ಯಾಲಯಗಳು, ಚಾರಿಟೇಬಲ್ ಟ್ರಸ್ಟ್ ಗಳು, ಹಿಂದೂ ಅವಿಭಜಿತ ಕುಟುಂಬಗಳು (HUFs) ಸಾವರಿನ್ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದು. ಇದರೊಂದಿಗೆ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ 1999 ಅಡಿಯಲ್ಲಿ ವಿವರಿಸಿರುವ ಭಾರತೀಯ ನಿವಾಸಿ ಈ ಬಾಂಡ್ ಗಳಲ್ಲಿ ಹೂಡಿಕೆ ಮಾಡಬಹುದು.
ಬಡ್ಡಿ ಎಷ್ಟು?
ಈ ಯೋಜನೆಯಲ್ಲಿ ಹೂಡಿಕೆದಾರರು ವಾರ್ಷಿಕ ಶೇ.2.5 ರಷ್ಟು ಬಡ್ಡಿ (Interest) ಗಳಿಸಲಿದ್ದಾರೆ. 6 ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಕ್ಯಾಪಿಟಲ್ ಗೇನ್ಸ್ (Capital gains)ತೆರಿಗೆ ವಿನಾಯಿತಿಯೂ ಲಭ್ಯವಿದೆ. ಈ ಯೋಜನೆಯಡಿ ಚಿನ್ನವನ್ನು ಖರೀದಿಸಲು ಯಾವುದೇ ಜಿಎಸ್‌ಟಿ (GST) ಮತ್ತು ಮೇಕಿಂಗ್ ಶುಲ್ಕಗಳನ್ನು (Making Charges) ವಿಧಿಸಲಾಗೋದಿಲ್ಲ.
ಎಷ್ಟು ಅವಧಿ?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ 8 ವರ್ಷಗಳ ಅವಧಿಯದ್ದಾಗಿದೆ. 5 ವರ್ಷದ ಬಳಿಕ ಬಡ್ಡಿಪಾವತಿ ದಿನಾಂಕಗಳಂದು ನಿರ್ಗಮನ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ಹೂಡಿಕೆದಾರರು ಈ ಚಿನ್ನದ ಬಾಂಡ್ ಮೇಲೆ ಸಾಲ (Loan) ಪಡೆಯಲು ಕೂಡ ಅವಕಾಶವಿದೆ.
ಇನ್ಮುಂದೆ UPI ಪಾವತಿಗೆ ಶುಲ್ಕ? ಮಧ್ಯಸ್ಥಗಾರರ ಸಲಹೆ ಕೇಳಿದ ಆರ್‌ಬಿಐ
ಎಷ್ಟು ಬಾಂಡ್ ಖರೀದಿಸಬಹುದು?
ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬ ವಾರ್ಷಿಕ ಗರಿಷ್ಠ 4ಕೆ.ಜಿ.ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಟ್ರಸ್ಟ್ (Trust) ಹಾಗೂ ಅದೇ ಮಾದರಿಯ ಇತರ ಸಂಸ್ಥೆಗಳು ಗರಿಷ್ಠ 20ಕೆ.ಜಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 1ಗ್ರಾಂ ಚಿನ್ನ ಖರೀದಿಸಬೇಕು.