ಈ ದಾಖಲೆಗಳಿದ್ರೆ ಸಾಕು, ಅಂಚೆ ಕಚೇರಿಲೂ ಸಿಗುತ್ತೆ ಪಾಸ್‌ಪೋರ್ಟ್!

By Suvarna News  |  First Published Jul 29, 2021, 6:40 PM IST

ಇನ್ನು ಮುಂದೆ ಪಾಸ್‌ಪೋರ್ಟ್‌ ಪಡೆಯಲು ದೂರದಲ್ಲಿರೋ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ದಿನಗಟ್ಟಲೇ ಸಮಯ ವ್ಯಯಿಸಬೇಕಾದ ಅಗತ್ಯವಿಲ್ಲ. ಸಮೀಪದ ಅಂಚೆಕಚೇರಿಯಲ್ಲೇ ಸಿಗಲಿದೆ ಪಾಸ್‌ಪೋರ್ಟ್.


ಪಾಸ್ಪೋರ್ಟ್‌ ನಮಗೆ ಅತ್ಯಗತ್ಯವಾಗಿ ಬೇಕಾಗಿರೋ ದಾಖಲೆಗಳಲ್ಲೊಂದು. ನೇಪಾಳ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರಕ್ಕೆ ಭೇಟಿ ನೀಡಬೇಕಾದ್ರೂ ಪಾಸ್‌ಪೋರ್ಟ್‌ ಬೇಕೇಬೇಕು. ವಾಹನ ಚಲಾಯಿಸಲು ಹೇಗೆ ಡ್ರೈವಿಂಗ್‌ ಲೈಸೆನ್ಸ್‌ ಅಗತ್ಯವೋ ಹಾಗೆಯೇ ದೇಶದ ಹೊರಗೆ ಅಧಿಕೃತವಾಗಿ ಭೇಟಿ ನೀಡಲು ನಮ್ಮ ಸರ್ಕಾರದಿಂದ ಅನುಮತಿಯ ಜೊತೆಗೆ ಭದ್ರತೆಯನ್ನೂ ಒದಗಿಸೋ ದಾಖಲೆಯೇ ಪಾಸ್‌ಪೋರ್ಟ್‌. ದೇಶದೊಳಗೆ ಕೂಡ ಪಾಸ್‌ಪೋರ್ಟ್‌ನ್ನು ನೀವು ನಿಮ್ಮ ಗುರುತು ಚೀಟಿಯನ್ನಾಗಿ ಬಳಸಬಹುದು ಕೂಡ. ಇಷ್ಟು ದಿನ ಪಾಸ್‌ಪೋರ್ಟ್‌ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ರೂ ಕೂಡ ನಗರಕ್ಕೋ ಅಥವಾ ಜಿಲ್ಲೆಗೋ ಒಂದರಂತೆ ದೂರದಲ್ಲಿರೋ ಸೇವಾಕೇಂದ್ರಗಳಿಗೆ ಭೇಟಿ ನೀಡೋದು ಕಡ್ಡಾಯವಾಗಿತ್ತು. ಹೌದು, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳ ಮೂಲಕ ಪಾಸ್‌ಪೋರ್ಟ್‌ ವಿತರಣೆಗೆ ಅವಕಾಶ ನೀಡಿತ್ತು. ಆದ್ರೆ ಇನ್ನು ಮುಂದೆ ಅಂಚೆ ಕಚೇರಿಗಳಲ್ಲಿಯೂ ಪಾಸ್‌ಪೋರ್ಟ್‌ ಪಡೆಯೋ ಅವಕಾಶ ಕಲ್ಪಿಸಲಾಗಿದೆ. 

ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲವೆ? 

Latest Videos

undefined

ಎಷ್ಟು ಅಂಚೆಕಚೇರಿಗಳಲ್ಲಿ ಸೌಲಭ್ಯ
ಅಂಚೆ ಇಲಾಖೆ ನೀಡಿದ ಮಾಹಿತಿ ಅನ್ವಯ ದೇಶಾದ್ಯಂತ 424 ಅಂಚೆಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಸ್ಥಾಪಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಯನ್ನೂ ಈ ಹಿಂದಿನಂತೆಯೇ ಆನ್ಲೈನ್ ಮೂಲಕವೇ ಸಲ್ಲಿಸಬೇಕು.  ಪಾಸ್ಪೋರ್ಟ್ ಸೇವಾ ಕೇಂದ್ರದ ಅಧಿಕೃತ ವೆಬ್ಸೈಟ್ https://www.passportindia.gov.in/  ಭೇಟಿ ನೀಡಿ, ಅರ್ಜಿ ಭರ್ತಿಗೊಳಿಸಿ, ಶುಲ್ಕ ಪಾವತಿಸಬೇಕು. ಆ ಬಳಿಕ ಮುದ್ರಿತ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ನಿಮಗೆ ನಿಗದಿಪಡಿಸಿದ ದಿನಾಂಕದಂದು ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ಹೊಂದಿರೋ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬೇಕು. ಈ ಅಂಚೆ ಕಚೇರಿಗಳು, ಪಾಸ್ಪೋರ್ಟ್ ಸೇವಾ ಕೇಂದ್ರಗಳಂತೆಯೇ ಕಾರ್ಯನಿರ್ವಹಿಸಲಿದ್ದು, ನಿಮ್ಮ ಅರ್ಜಿ ಹಾಗೂ ವೈಯಕ್ತಿಕ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಆ ಬಳಿಕ ನಿಮ್ಮ ಪಾಸ್ಪೋರ್ಟ್ಗೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮಾಡಲಾಗುತ್ತದೆ. ಪಾಸ್ಪೋರ್ಟ್ ನಿಮಗೆ ನೀಡೋ ಮುನ್ನ ಪೊಲೀಸ್ ಪರಿಶೀಲನೆ ಕೂಡ ನಡೆಯುತ್ತದೆ. ಇದಕ್ಕೆ ನೀವು ಪಾಸ್ಪೋರ್ಟ್ ಸೇವಾ ಕೇಂದ್ರದ ವೆಬ್ಸೈಟ್ನಲ್ಲೇ ಅರ್ಜಿ ಸಲ್ಲಿಸಲು ಅವಕಾಶವಿದೆ. ನಿಗದಿತ ದಿನಾಂಕದಂದು ನಿಮ್ಮ ಮನೆಯಿರೋ ಪ್ರದೇಶ ವ್ಯಾಪ್ತಿಯ ಪೊಲೀಸ್ ಠಾಣೆಯ ಸಿಬ್ಬಂದಿ ನಿಮ್ಮನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತಾರೆ. 

ಆದಾಯ ತೆರಿಗೆ ಭಾರ ತಗ್ಗಿಸೋ ಮಾರ್ಗಗಳು ಯಾವುವು?

ಯಾವೆಲ್ಲ ದಾಖಲೆಗಳು ಅಗತ್ಯ?
 ಹೊಸದಾಗಿ ಪಾಸ್ಪೋರ್ಟ್ಗೆ ಸಲ್ಲಿಸೋವಾಗ ಈ ಕೆಳಗಿನ ದಾಖಲೆಗಳನ್ನು ಹೊಂದಿರೋದು ಅಗತ್ಯ.
-ನಿಮ್ಮ ಫೋಟೋ ಹೊಂದಿರೋ ಯಾವುದೇ ರಾಷ್ಟ್ರೀಯ, ಖಾಸಗಿ ಅಥವಾ ಗ್ರಾಮೀಣ ಬ್ಯಾಂಕ್ ಖಾತೆಯ ಪಾಸ್ಬುಕ್ ಪ್ರತಿ. 
-ವೋಟರ್ ಐಡಿ
-ಆಧಾರ್ ಕಾರ್ಡ್
-ವಿದ್ಯುತ್ ಬಿಲ್
-ಬಾಡಿಗೆ ಒಪ್ಪಂದ ಪತ್ರ
-ವಾಹನ ಚಾಲನಾ ಪರವಾನಗಿ
-ಪ್ಯಾನ್ ಕಾರ್ಡ್
-ಲ್ಯಾಂಡ್ಲೈನ್ ಅಥವಾ ಪೋಸ್ಟ್ಪೇಯ್ಡಿ ಮೊಬೈಲ್ ಬಿಲ್
-ಅಡುಗೆ ಅನಿಲ ಸಂಪರ್ಕದ ದೃಢೀಕರಣ ಪತ್ರ
-ಸಂಗಾತಿಯ ಪಾಸ್ಪೋರ್ಟ್ ಪ್ರತಿ
-ಪ್ರತಿಷ್ಠಿತ ಕಂಪನಿಯಲ್ಲಿ ನೀವು ಉದ್ಯೋಗಿಯಾಗಿದ್ರೆ ಅಲ್ಲಿನ ಮುಖ್ಯಸ್ಥರು ಸಂಸ್ಥೆಯ ಲೆಟರ್ಹೆಡ್ನಲ್ಲಿ ನೀಡಿರೋ ದೃಢೀಕರಣ ಪತ್ರ
- ಜನನ ಪ್ರಮಾಣ ಪತ್ರ ಅಥವಾ ಶಾಲೆಯ ವರ್ಗಾವಣೆ ಪತ್ರ ಅಥವಾ ಎಸ್ಎಸ್ಎಲ್ಸಿ ಅಂಕಪಟ್ಟಿ
-18 ವರ್ಷದೊಳಗಿನವರಿಗಾದ್ರೆ ಹೆತ್ತವರ ಪಾಸ್ಪೋರ್ಟ್ ಮೂಲಪ್ರತಿ ಹಾಗೂ ಸ್ವದೃಢೀಕರಣ ಹೊಂದಿರೋ ನಕಲು ಪ್ರತಿ ಅಗತ್ಯ

ಉದ್ಯೋಗ ಕಳೆದುಕೊಂಡ್ರಾ? ಮುಂದೆ ಲೈಫ್‌ ಹೇಗೆ ಅಂತೀರಾ?

ಅವಧಿ ಎಷ್ಟು?
ವಯಸ್ಕರ ಪಾಸ್ಪೋರ್ಟ್ ಅವಧಿ 10 ವರ್ಷ. ಇನ್ನು  18 ವರ್ಷದೊಳಗಿನವರು ಅಂದ್ರೆ ಅಪ್ರಾಪ್ತರಾಗಿದ್ರೆ ಅವರ ಪಾಸ್ಪೋರ್ಟ್ ಅವಧಿ 5 ವರ್ಷ ಅಥವಾ 18 ವರ್ಷ ಇವೆರಡರಲ್ಲಿ ಯಾವುದು ಬೇಗವೋ ಅದು. ಆದ್ರೆ 15-18 ವಯಸ್ಸಿನ ಅಪ್ರಾಪ್ತರು 10 ವರ್ಷ ವ್ಯಾಲಿಡಿಟಿ ಹೊಂದಿರೋ ಅಥವಾ 18 ವರ್ಷ ತಲುಪೋ ತನಕ ಇವೆರಡರಲ್ಲಿ ಯಾವುದಾದ್ರೂ ಒಂದು ಅವಧಿಯ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬಹುದು. 


ಪಾಸ್ಪೋರ್ಟ್ ವಿಧಗಳು
ಭಾರತದಲ್ಲಿ ಮೂರು ವಿಧದ ಪಾಸ್ಪೋರ್ಟ್ಗಳನ್ನು ವಿತರಿಸಲಾಗುತ್ತದೆ.
ಸಾಮಾನ್ಯ ಪಾಸ್ಪೋರ್ಟ್: ಇದು ಸಾಮಾನ್ಯವಾಗಿ ಎಲ್ಲರಿಗೂ ನೀಡುವಂತಹ ಪಾಸ್ಪೋರ್ಟ್. ಇದು 36/60 ಪುಟಗಳನ್ನೊಳಗೊಂಡಿರುತ್ತದೆ.
ರಾಜತಾಂತ್ರಿಕ ಪಾಸ್ಪೋರ್ಟ್: ಇದನ್ನು ಭಾರತ ಸರ್ಕಾರ ನಿರ್ದೇಶಿಸೋ ರಾಜತಾಂತ್ರಿಕ ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಆಫೀಸಿಯಲ್ ಪಾಸ್ಪೋರ್ಟ್ : ಭಾರತ ಸರ್ಕಾರದ ಸೇವೆಯಲ್ಲಿರೋ ವ್ಯಕ್ತಿಗಳನ್ನು ಕಾರ್ಯನಿಮಿತ್ತ ವಿದೇಶಗಳಿಗೆ ತೆರಳಲು ಈ ಪಾಸ್ಪೋರ್ಟ್ ನೀಡಲಾಗುತ್ತದೆ. 

click me!