
ವಿದೇಶದಿಂದ ಆದಾಯ ಬರುತ್ತಿದ್ದರೂ ಅಥವಾ ಆಸ್ತಿಗಳನ್ನು ಹೊಂದಿದ್ದರೂ ಅದನ್ನು ರಹಸ್ಯವಾಗಿಟ್ಟಿರುವ ವಿದ್ಯಾರ್ಥಿಗಳು, ಯುವ ವೃತ್ತಿಪರರು, ಟೆಕ್ ನೌಕರರು, ಸ್ಥಳಾಂತರಗೊಂಡ ಎನ್‌ಆರ್‌ಐಗಳಂತಹ ಸಣ್ಣ ತೆರಿಗೆದಾರರು ಹಾಗೂ ಮತ್ತಿತರರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಬಾರಿಯ ಕ್ರಮವಾಗಿ ಆರು ತಿಂಗಳ ವಿದೇಶಿ ಆಸ್ತಿ ಘೋಷಣೆ ಯೋಜನೆಯನ್ನು ಪ್ರಕಟಿಸಿದ್ದಾರೆ. ವಿದೇಶದಿಂದ ಬರುತ್ತಿರುವ ಆದಾಯ ಅಥವಾ ಮಾಡಿಟ್ಟಿರುವ ಆಸ್ತಿಯನ್ನು ಘೋಷಿಸಿಕೊಂಡರೆ ತೆರಿಗೆ ಅಧಿಕಾರಿಗಳ ವಿಚಾರಣೆಯಿಂದ ಬಚಾವಾಗಬಹುದಾಗಿದೆ.
1. ವಿದೇಶದಿಂದ ಗಳಿಸುತ್ತಿರುವ ಆದಾಯ ಅಥವಾ ಅಲ್ಲಿ ಮಾಡಿರುವ ಆಸ್ತಿಯನ್ನು ಈವರೆಗೆ ಘೋಷಿಸಿಕೊಳ್ಳದೇ ಇರುವವರು
2. ಸಾಗರೋತ್ತರ ಆದಾಯವನ್ನು ಈಗಾಗಲೇ ಘೋಷಿಸಿ/ತೆರಿಗೆ ಪಾವತಿಸಿದ್ದರೂ ವಿದೇದಲ್ಲಿರುವ ಆಸ್ತಿಯನ್ನು ಘೋಷಣೆ ಮಾಡದೆ ಬಚ್ಚಿಟ್ಟುಕೊಂಡಿರುವವರು.
ಮೊದಲನೆ ವರ್ಗದಲ್ಲಿ ಬರುವವರು, 1 ಕೋಟಿ ರು.ವರೆಗಿನ ಆದಾಯ/ಆಸ್ತಿಯನ್ನು ಘೋಷಿಸಿಕೊಳ್ಳಬಹುದು. ಅದಕ್ಕೆ ಆಸ್ತಿಯ ಶೇ.30ರಷ್ಟು ಮುಕ್ತ ಮಾರುಕಟ್ಟೆ ಮೌಲ್ಯ ಅಥವಾ ಬಚ್ಚಿಟ್ಟ ಆದಾಯದ ಶೇ.30ರಷ್ಟು ಮೊತ್ತವನ್ನು ತೆರಿಗೆಯಾಗಿ ಕಟ್ಟಬೇಕು. ಇದರ ಜತೆಗೆ ಹೆಚ್ಚುವರಿ ಆದಾಯ ತೆರಿಗೆ ರೂಪದಲ್ಲಿ ಶೇ.30ರಷ್ಟನ್ನು ಪಾವತಿಸಬೇಕು. ಇಷ್ಟು ಕೆಲಸ ಮಾಡಿದರೆ ತೆರಿಗೆ ಅಧಿಕಾರಿಗಳ ವಿಚಾರಣೆಯಿಂದ ರಕ್ಷಣೆ ಸಿಗಲಿದೆ.
ಎರಡನೆಯ ವರ್ಗದಲ್ಲಿ ಬರುವವರು, ಯೋಜನೆಯ ಲಾಭ ಪಡೆಯಲು ಅವರ ಆಸ್ತಿ ಮೌಲ್ಯ 5 ಕೋಟಿ ರು. ಒಳಗೆ ಇರಬೇಕು. 1 ಲಕ್ಷ ರು.ಗಳನ್ನು ಸರ್ಕಾರಕ್ಕೆ ಪಾವತಿಸಿದರೆ ದಂಡ ಹಾಗೂ ವಿಚಾರಣೆ ಎರಡರಿಂದಲೂ ಪಾರಾಗಬಹುದು ಎಂದು ನಿರ್ಮಲಾ ಅವರು ತಿಳಿಸಿದ್ದಾರೆ.
- ನಿಯಮ, ತೆರಿಗೆ ರಿಟರ್ನ್ ಫಾರ್ಮ್‌ಗಳು ಶೀಘ್ರದಲ್ಲೇ ಪ್ರಕಟ
ಆದಾಯ ತೆರಿಗೆ ಸಂಗ್ರಹಕ್ಕೆ ಕಳೆದ 60 ವರ್ಷಗಳಿಂದ ಕೇಂದ್ರ ಸರ್ಕಾರ ಬಳಸುತ್ತಿದ್ದ ಆದಾಯ ತೆರಿಗೆ ಕಾಯ್ದೆ- 1961 ಇನ್ನು ಇತಿಹಾಸದ ಪುಟಗಳಿಗೆ ಸೇರಲಿದೆ. 2026ರ ಏಪ್ರಿಲ್ 1ರಿಂದ ಆದಾಯ ತೆರಿಗೆ ಕಾಯ್ದೆ- 2025 ಅನ್ನು ಜಾರಿಗೆ ತರಲಾಗುತ್ತದೆ. ಅತ್ಯಂತ ಸರಳವಾಗಿರುವ ಹೊಸ ನಿಯಮಗಳು ಹಾಗೂ ತೆರಿಗೆ ರಿಟರ್ನ್ ಫಾರ್ಮ್‌ಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಇದರಿಂದ ತೆರಿಗೆದಾರರು ಹೊಸ ನಿಯಮಗಳನ್ನು ತಿಳಿದುಕೊಳ್ಳಲು ಸಹಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ನೇರ ತೆರಿಗೆ ಸಂಹಿತೆಯನ್ನು ದಾಖಲೆ ಸಮಯದಲ್ಲಿ ಸಿದ್ಧಪಡಿಸಲಾಗಿದೆ. ತೆರಿಗೆ ರಿಟರ್ನ್ ಫಾರ್ಮ್‌ಗಳನ್ನು ಮರು ವಿನ್ಯಾಸಗೊಳಿಸಲಾಗಿದೆ. ಅವು ಯಾವ ರೀತಿ ಇವೆಯೆಂದರೆ, ಶ್ರೀಸಾಮಾನ್ಯ ನಾಗರಿಕರೂ ಯಾವುದೇ ಪ್ರಯಾಸವಿಲ್ಲದೆ ತೆರಿಗೆ ಪಾವತಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೊಸ ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಗಳನ್ನೂ ಮಾಡಲಾಗಿಲ್ಲ. ನೇರ ತೆರಿಗೆ ಕಾಯ್ದೆಗಳನ್ನು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಮಾಡಲಾಗಿದೆ. ತನ್ಮೂಲಕ ವ್ಯಾಜ್ಯಗಳು ತಗ್ಗುವಂತೆ ಕ್ರಮ ಕೈಗೊಳ್ಳಲಾಗಿದೆ. 1961ರ ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ ಸಂಪುಟ ಹಾಗೂ ಸೆಕ್ಷನ್‌ಗಳು ಇದರಲ್ಲಿ ಅರ್ಧದಷ್ಟು ಕಡಿಮೆ ಇವೆ.
‘ಅಸೆಸ್‌ಮೆಂಟ್ ಇಯರ್’ (ತೆರಿಗೆ ಪರಿಶೀಲನಾ ವರ್ಷ) ಹಾಗೂ ‘ಪ್ರೀವೀಯಸ್ ಇಯರ್’ (ಹಿಂದಿನ ವರ್ಷ) ಎಂಬ ಪದಗಳನ್ನು ತೆಗೆದು ‘ತೆರಿಗೆ ವರ್ಷ’ ಎಂದು ಬದಲಿಸಲಾಗಿದೆ. ಗಡುವು ಮುಗಿದ ಬಳಿಕವೂ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಿ ಟಿಡಿಎಸ್ ಮರಳಿಸುವಂತೆ ಸರ್ಕಾರಕ್ಕೆ ಹಕ್ಕು ಮಂಡಿಸುವ ಅವಕಾಶವನ್ನು ತೆರಿಗೆದಾರರಿಗೆ ಇದು ಕಲ್ಪಿಸುತ್ತದೆ. ಅದಕ್ಕೆ ಯಾವುದೇ ದಂಡ ಇರುವುದಿಲ್ಲ.
ಅಪಘಾತ ವಿಮೆಯ ಬಡ್ಡಿ
ಮೇಲೆ ಏ.1ರಿಂದ ತೆರಿಗೆ ಇಲ್ಲ
ಮೋಟಾರು ಅಪಘಾತ ವಿಮೆಗಳ ನ್ಯಾಯಾಧಿಕರಣ ನಿರ್ಧರಿಸುವ ಪರಿಹಾರದ ಮೇಲಿನ ಬಡ್ಡಿ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆ ಬಡ್ಡಿಗೆ ಟಿಡಿಎಸ್ ಕೂಡ ಇರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಇದು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಅಪಘಾತ ವಿಮೆ ಪ್ರಕರಣಗಳಲ್ಲಿ ನ್ಯಾಯಾಧಿಕರಣಗಳು ಪರಿಹಾರ ಮೊತ್ತ ನಿಗದಿಪಡಿಸುತ್ತವೆ. ಜತೆಗೆ ಆ ಪರಿಹಾರದ ಹಣವನ್ನು ಪೂರ್ವಾನ್ವಯವಾಗುವಂತೆ ಬಡ್ಡಿ ಸೇರಿಸಿ ನೀಡುವಂತೆ ಘೋಷಿಸುತ್ತವೆ. ಪರಿಹಾರ ಮೊತ್ತಕ್ಕೆ ತೆರಿಗೆ ವಿನಾಯಿತಿ ಇತ್ತು. ಆದರೆ ಬಡ್ಡಿ ಮೇಲೆ ಇರಲಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
1988ರ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಯಾವುದೇ ವ್ಯಕ್ತಿ ಅಪಘಾತದಲ್ಲಿ ಸಾವಿಗೀಡಾದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೆ, ಅವರು ಅಥವಾ ಅವರ ಉತ್ತರಾಧಿಕಾರಿಗಳಿಗೆ ನ್ಯಾಯಾಧಿಕರಣ ಪರಿಹಾರವನ್ನು ನಿರ್ಧರಿಸುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾದವರ ಕುಟುಂಬ ವರ್ಗ ನೋವಿನಲ್ಲಿರುತ್ತದೆ. ಅಂಥವರಿಗೆ ಸಿಗುವ ಪರಿಹಾರದ ಹಣದ ಬಡ್ಡಿಯ ಮೇಲೆ ತೆರಿಗೆ ವಿನಾಯತಿ ನೀಡಲು ಉದ್ದೇಶಿಸಲಾಗಿದೆ ಎಂದು ಬಜೆಟ್ ದಾಖಲೆ ಹೇಳುತ್ತದೆ.
ವಿದೇಶ ಪ್ರವಾಸ ಇನ್ನು ಅಗ್ಗ
ದೇಶಗಳನ್ನು ಸುತ್ತಲು ಬಯಸುವವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆನಂದಕರ ಸುದ್ದಿ ನೀಡಿದ್ದಾರೆ. ಟೂರ್ ಪ್ಯಾಕೇಜ್‌ಗಳ ಮೂಲಕ ವಿದೇಶಕ್ಕೆ ತೆರಳುವವರಿಗೆ ವಿಧಿಸಲಾಗುತ್ತಿದ್ದ ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್) ಮೊತ್ತವನ್ನು ಶೇ.5 ಹಾಗೂ ಶೇ.20ರಿಂದ ಶೇ.2ಕ್ಕೆ ಇಳಿಸಿದ್ದಾರೆ.
ವಿದೇಶದಲ್ಲಿರುವ ಮಕ್ಕಳಿಗೆ ಪೋಷಕರು ಕಳಿಸುವ ಹಣಕ್ಕೆ ತೆರಿಗೆ ಕಡಿತ
ವ್ಯಾಸಂಗ ಹಾಗೂ ವೈದ್ಯಕೀಯ ಉದ್ದೇಶಕ್ಕಾಗಿ ವಿದೇಶದಲ್ಲಿರುವ ಮಕ್ಕಳಿಗೆ ಲಿಬರಲೈಸ್ಡ್ ರೆಮಿಟ್ಟೆನ್ಸ್ ಸ್ಕೀಂ (ಎಲ್‌ಆರ್‌ಎಸ್)ನಡಿ ಪೋಷಕರು ಕಳುಹಿಸುವ ಹಣಕ್ಕೆ ಈವರೆಗೆ ಶೇ.5ರಷ್ಟು ತೆರಿಗೆ ಇತ್ತು. ಅದನ್ನು ಈಗ ಶೇ.2ಕ್ಕೆ ಇಳಿಸಲಾಗಿದೆ.
ತೆರಿಗೆ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕಿಲ್ಲ
ಕಡಿಮೆ ಅಥವಾ ಶೂನ್ಯ ತೆರಿಗೆ ಕಡಿತ ಪ್ರಮಾಣಪತ್ರ ಪಡೆಯಲು ಇನ್ನು ಮುಂದೆ ಅಸೆಸ್ಸಿಂಗ್ ಅಧಿಕಾರಿಯ ಬಳಿ ಅರ್ಜಿ ಸಲ್ಲಿಸಬೇಕಿಲ್ಲ. ಅದರ ಬದಲಿಗೆ ಸ್ವಯಚಾಲಿತ ಪ್ರಕ್ರಿಯೆಯಲ್ಲಿಯೇ ಅದನ್ನು ಪಡೆಯಬಹುದಾಗಿದೆ. ಮತ್ತೊಂದೆಡೆ, ಹಲವು ಕಂಪನಿಗಳಲ್ಲಿ ಷೇರುಗಳನ್ನು ಹೊಂದಿರುವ ಹೂಡಿಕೆದಾರಿಂದ 15ಜಿ ಹಾಗೂ ಅರ್ಜಿ ಎಚ್ ಅರ್ಜಿಗಳನ್ನು ಸ್ವೀಕರಿಸುವಂತೆ ಡಿಪಾಸಿಟರಿಗಳಿಗೆ ಸೂಚಿಸುವ ವ್ಯವಸ್ಥೆ ಕಲ್ಪಿಸುವುದಾಗಿ ನಿರ್ಮಲಾ ತಿಳಿಸಿದ್ದಾರೆ.
ಪರಿಷ್ಕೃತ ತೆರಿಗೆ ರಿಟರ್ನ್ ಸಲ್ಲಿಸಲು ಡಿ.31ರ ಬದಲು ಮಾ.31ರವರೆಗೆ ಅವಕಾಶ
ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸದ್ಯ ಡಿಸೆಂಬರ್ 31ರವರೆಗೆ ಅವಕಾಶವಿದೆ. ಒಂದಷ್ಟು ಶುಲ್ಕ ಪಾವತಿಸುವ ಮೂಲಕ ಮಾರ್ಚ್ 31ರವರೆಗೂ ಪರಿಷ್ಕೃತ ತೆರಿಗೆ ರಿಟರ್ನ್ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ, ಐಟಿಆರ್ 1 ಹಾಗೂ ಐಟಿಆರ್ 2 ಮೂಲಕ ತೆರಿಗೆ ರಿಟರ್ನ್ ಸಲ್ಲಿಸುವ ವೈಯಕ್ತಿಕ ತೆರಿಗೆದಾರರು ಇನ್ನು ಮುಂದೆಯೂ ಜುಲೈ 31ರೊಳಗೆ ಸಲ್ಲಿಕೆ ಮಾಡಬೇಕು. ಆಡಿಟ್ ರಹಿತ ಉದ್ಯಮಗಳು ಅಥವಾ ಟ್ರಸ್ಟ್‌ಗಳು ಆ.31ರವರೆಗೂ ರಿಟರ್ನ್ ಸಲ್ಲಿಕೆ ಮಾಡಬಹುದಾಗಿದೆ.
ಅನಿವಾಸಿ ಭಾರತೀಯರಿಂದ
ಆಸ್ತಿ ಖರೀದಿ ಇನ್ನು ಸರಾಗ
ಅನಿವಾಸಿ ಭಾರತೀಯರಿಂದ ಆಸ್ತಿಯನ್ನು ಖರೀದಿಸಿದಾಗ ತೆರಿಗೆ ನಿಯಮಗಳನ್ನು ಪಾಲಿಸಲು ಪರದಾಡುತ್ತಿದ್ದ ಭಾರತೀಯರಿಗೆ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಳ್ಳೆಯ ಸುದ್ದಿ ನೀಡಿದ್ದಾರೆ. ಇನ್ನು ಮುಂದೆ ಅನಿವಾಸಿ ಭಾರತೀಯರ ಆಸ್ತಿ ಖರೀದಿಸುವ ಭಾರತೀಯ ನಾಗರಿಕರು ತೆರಿಗೆ ಕಡಿತ ಉದ್ದೇಶಕ್ಕಾಗಿ ‘ಟ್ಯಾನ್’ ಒದಗಿಸಬೇಕಿಲ್ಲ. ಪ್ಯಾನ್ ಸಾಕು ಎಂದು ಪ್ರಕಟಿಸಿದ್ದಾರೆ. ಹೊಸ ನಿಯಮ ಅ.1ರಿಂದ ಜಾರಿಗೆ ಬರಲಿದೆ.
ಭಾರತೀಯ ನಿವಾಸಿಗಳು ಅಥವಾ ಹಿಂದು ಅವಿಭಜಿತ ಕುಟುಂಬಗಳು ಆಸ್ತಿ ಖರೀದಿಸಿದಾಗ ಟಿಡಿಎಸ್ ಕಡಿತಕ್ಕಾಗಿ ಪ್ಯಾನ್ ಸಂಖ್ಯೆಯನ್ನು ತಿಳಿಸಿದರೆ ಸಾಕಾಗುತ್ತದೆ. ಆದರೆ ಅನಿವಾಸಿ ಭಾರತೀಯರಿಂದ ಆಸ್ತಿ ಖರೀದಿಸುವಾಗ ತೆರಿಗೆ ಪಾವತಿಗೆ ಟ್ಯಾನ್ ಒದಗಿಸಬೇಕಾಗುತ್ತದೆ. ಟ್ಯಾನ್ (ತೆರಿಗೆ ಕಡಿತ ಹಾಗೂ ಸಂಗ್ರಹ ಖಾತೆ ಸಂಖ್ಯೆ) ಅನ್ನು ಕಾರ್ಪೋರೆಟ್ ಕಂಪನಿಗಳಿಗೆ ಹಾಗೂ ಪ್ಯಾನ್ (ಶಾಶ್ವತ ಖಾತಾ ಸಂಖ್ಯೆ) ಅನ್ನು ವ್ಯಕ್ತಿಗಳಿಗೆ ಭಾರತದಲ್ಲಿ ನೀಡಲಾಗುತ್ತದೆ.
ವಿದೇಶಿಗರ ಆಸ್ತಿ ಖರೀದಿಸುವ ಒಂದೇ ಒಂದು ವ್ಯವಹಾರಕ್ಕೆ ನಾಗರಿಕರು ಟ್ಯಾನ್ ಪಡೆಯಬೇಕಿತ್ತು. ತೆರಿಗೆ ಪಾವತಿಸಿ, ತ್ರೈಮಾಸಿಕಕ್ಕೆ ಒಮ್ಮೆ ಟಿಡಿಎಸ್ ರಿಟರ್ನ್ ಸಲ್ಲಿಕೆ ಮಾಡಬೇಕಿತ್ತು. ಇದರಿಂದ ಅನಾವಶ್ಯಕ ತೊಂದರೆಯಾಗುತ್ತಿತ್ತು. ಹೀಗಾಗಿ ನಿಯಮದಲ್ಲಿ ಬದಲಾವಣೆ ತಂದಿರುವ ಕೇಂದ್ರ ಸರ್ಕಾರ, ಟ್ಯಾನ್ ಬದಲಿಗೆ ಆಸ್ತಿ ಖರೀದಿಸುವವರು ಪ್ಯಾನ್ ಸಂಖ್ಯೆ ನೀಡಿದರೆ ಸಾಕು. ಆ ಮೂಲಕವೇ ತೆರಿಗೆ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದೆ. ಇಬ್ಬರು ಭಾರತೀಯರ ನಡುವೆ ನಡೆಯುವ ವ್ಯವಹಾರಕ್ಕೆ ಈಗಾಗಲೇ ಈ ವ್ಯವಸ್ಥೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.