
ನವದೆಹಲಿ: ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದು, ‘ ಇದೊಂದು ಐತಿಹಾಸಿಕ ಬಜೆಟ್. 2047ರ ವಿಕಸಿತ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಲಿದೆ’ ಎಂದು ಶ್ಲಾಘಿಸಿದ್ದಾರೆ.
ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತಕ್ಕೆ ಈ ಬಜೆಟ್ ಪೂರಕ ಎಂದು ಬಣ್ಣಿಸಿರುವ ಪ್ರಧಾನಿ, ‘ಇದೊಂದು ಐತಿಹಾಸಿಕ ಬಜೆಟ್ ಆಗಿದ್ದು, 140 ಕೋಟಿ ಭಾರತೀಯರ ಆಕಾಂಕ್ಷೆ ಪ್ರತಿಬಿಂಬಿಸುತ್ತದೆ. ವಿಕಸಿತ ಭಾರತಕ್ಕೆ ಮಾರ್ಗಸೂಚಿ ಜತೆಗೆ ಮಹಿಳಾ ಶಕ್ತಿ ಸಬಲೀಕರಣಕ್ಕೆ ಪೂರಕವಾಗಿದೆ. 2047ರ ವಿಕಸಿತ ಭಾರತ ಈಡೇರಿಕೆಗೆ ಈ ಬಜೆಟ್ ಗಟ್ಟಿ ಅಡಿಪಾಯ ಹಾಕಿಕೊಡಲಿದೆ. ಈ ವರ್ಷ ಭಾರತದ ಸುಧಾರಣೆಗಳಿಗೆ ಹೊಸ ಶಕ್ತಿ ಮತ್ತು ಹೊಸ ವೇಗ ನೀಡಲಿದೆ. ಈ ಬಜೆಟ್ ಭಾರತದ ಶಕ್ತಿ ಜಾಗತಿಕವಾಗಿ ಬಲ ಪಡಿಸಲಿದೆ. ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಬೇಕಿದೆ. ಇದು ಕೋಟ್ಯಂತರ ಭಾರತೀಯರ ಸಂಕಲ್ಪ’ ಎಂದರು.
ಇದು ಯುವಶಕ್ತಿ ಬಜೆಟ್ ಎಂದು ಪುನರುಚ್ಚರಿಸಿದ ಪ್ರಧಾನಿ , ‘ ದೇಶದ ಶ್ರೇಷ್ಠ ಬಂಡವಾಳ ಎಂದರೆ ಅಲ್ಲಿನ ನಾಗರಿಕರು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ಅವರ ಸಾಮರ್ಥ್ಯ ಹೆಚ್ಚಿಸಲು ಅಭೂತಪೂರ್ವ ಹೂಡಿಕೆ ಮಾಡಿದೆ. ಬಜೆಟ್ ಮೂಲಕ ವಿವಿಧ ವಲಯಗಳ ನಾಯಕರು, ನಾವೀನ್ಯಕಾರರು, ಸೃಷ್ಟಿಕರ್ತರನ್ನು ಸಿದ್ಧಪಡಿಸಲಿದೆ. ವೈದ್ಯಕೀಯ ಕೇಂದ್ರಗಳು, ಮಿತ್ರ ಆರೋಗ್ಯ ವೃತ್ತಿಪರರು, ''''ಕಿತ್ತಳೆ ಆರ್ಥಿಕತೆ''''ಯ ಪ್ರಚಾರ , ಗೇಮಿಂಗ್, ಪ್ರವಾಸೋದ್ಯಮ ಮತ್ತು ಖೇಲೋ ಇಂಡಿಯಾ ಮಿಷನ್‌ನ ಪ್ರೋತ್ಸಾಹದ ಮೂಲಕ ಯುವಕರಿಗೆ ಹೊಸ ಅವಕಾಶಗಳು ನೀಡುತ್ತಿದೆ’ ಎಂದು ಹೇಳಿದರು.
ಈ ಬಜೆಟ್ ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಿಸಲಿದೆ ಎಂದಿರುವ ಪ್ರಧಾನಿ, ‘ ಭಾರತವನ್ನು ವಿಶ್ವದ ಡೇಟಾ ಸೆಂಟರ್ ಕೇಂದ್ರವನ್ನಾಗಿ ಮಾಡಲು ಪ್ರಮುಖ ತೆರಿಗೆ ರಿಯಾಯಿತಿ ಘೋಷಿಸಲಾಗಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಪ್ರವಾಸೋದ್ಯಮ ಉತ್ತೇಜನಕ್ಕೆ, ವಿವಿಧ ರಾಜ್ಯಗಳಲ್ಲಿ ಸಮತೋಲಿತ ಅಭಿವೃದ್ಧಿಗೆ ಅಡಿಪಾಯ ಹಾಕಲಾಗಿದೆ’ ಎಂದರು.
ಮಹಿಳಾ ಸಬಲೀಕರಣ, ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದಿರುವ ಪ್ರಧಾನಿ, ‘ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಪೂರಕ ವಾತಾವರಣ, ಪ್ರತಿ ಜಿಲ್ಲೆಯಲ್ಲಿಯೂ ಬಾಲಕಿಯರಿಗಾಗಿ ಹೊಸ ಹಾಸ್ಟೆಲ್ ನಿರ್ಮಿಸಿ ಅವರ ಶಿಕ್ಷಣಕ್ಕೆ ದಾರಿ ಮಾಡಿ ಕೊಡಲಾಗುತ್ತಿದೆ. ಜತೆಗೆ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಜತೆ ಜತೆಯಲ್ಲಿಯೇ ತೆಂಗಿನಕಾಯಿ, ಗೋಡಂಬಿ, ಕೋಕೋ ಮತ್ತು ಶ್ರೀಗಂಧ ಉತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ. ಹಳ್ಳಿಗಳು, ಬಡವರು ಮತ್ತು ರೈತರ ಕಲ್ಯಾಣಕ್ಕಾಗಿ ಮೀಸಲಾಗಿರುವ ಬಜೆಟ್. ಈ ಬಜೆಟ್ ಅಪಾರ ಅವಕಾಶಗಳ ಹೆದ್ದಾರಿಯಾಗಿದ್ದು, ಇದು ವರ್ತಮಾನದ ಕನಸುಗಳನ್ನು ನನಸಾಗಿಸುತ್ತದೆ. ಭಾರತದ ಉಜ್ವಲ ಭವಿಷ್ಯದ ಅಡಿಪಾಯ ಬಲಪಡಿಸುತ್ತದೆ’ ಎಂದು ಬಣ್ಣಿಸಿದ್ದಾರೆ.
ಮುಂದುವರೆದಂತೆ, ‘ ಸರಕು ಸಾಗಣೆ ಕಾರಿಡಾರ್, ದೇಶಾದ್ಯಂತ ಜಲಮಾರ್ಗಗಳ ವಿಸ್ತರಣೆ, ಹೈಸ್ಪೀಡ್ ರೈಲು ಕಾರಿಡಾರ್, ಟೈಯರ್ -2 ಮತ್ತು ಟೈಯರ್ -3 ನಗರಗಳ ಅಭಿವೃದ್ಧಿಗೆ ವಿಶೇಷ ಗಮನ, ಮತ್ತು ನಗರಗಳಿಗೆ ಬಲವಾದ ಆರ್ಥಿಕ ಅಡಿಪಾಯವನ್ನು ಒದಗಿಸಲು ಪುರಸಭೆಯ ಬಾಂಡ್‌ಗಳ ಪ್ರಚಾರ ಸೇರಿದಂತೆ ಮೂಲಸೌಕರ್ಯವನ್ನು ಬಲಪಡಿಸಲು ಬಜೆಟ್ ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಇದು ಭಾರತದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.