ಯುಪಿಐ ಜೊತೆಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡೋದು ಅಗತ್ಯವೇ? ಇದ್ರಿಂದ ಲಾಭವೇನು, ನಷ್ಟವೇನು?

By Suvarna News  |  First Published Nov 7, 2023, 2:46 PM IST

ಅನೇಕ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಅನ್ನು ಯುಪಿಐಗೆ ಲಿಂಕ್ ಮಾಡುವ ಮೂಲಕ ಪಾವತಿಗೆ ಅವಕಾಶ ಕಲ್ಪಿಸಿವೆ. ಆದರೆ, ಈ ಪಾವತಿ ವಿಧಾನದಿಂದ ಪ್ರಯೋಜನದ ಜೊತೆಗೆ ಹಾನಿಯೂ ಇದೆ ಎನ್ನುತ್ತಾರೆ ತಜ್ಞರು. 
 


Business Desk: ಡಿಜಿಟಲ್ ಪಾವತಿ ಹಾಗೂ ಹಣದ ವರ್ಗಾವಣೆ ಪ್ರಕ್ರಿಯೆಯನ್ನು ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಸರಳಗೊಳಿಸಿದೆ. ದೇಶದಲ್ಲಿ ಯುಪಿಐ ಪಾವತಿ ಭಾರೀ ಜನಪ್ರಿಯತೆ ಗಳಿಸಿದ್ದು, ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಮಾಲ್ ಗಳ ತನಕ ಎಲ್ಲ ಕಡೆ ಪಾವತಿಗೆ ಯುಪಿಐ ಬಳಕೆಯಾಗುತ್ತಿದೆ.  ವರದಿಗಳ ಪ್ರಕಾರ ಯುಪಿಐ ಪಾವತಿ ಜನಪ್ರಿಯತೆ ಗಳಿಸಿದ್ದು, ಇತರ ಎಲ್ಲ ಪಾವತಿ ವಿಧಾನಗಳಿಗಿಂತ ಮುಂದಿದೆ. 2023ರಲ್ಲಿ ಕೂಡ ಈ ಟ್ರೆಂಡ್ ಮುಂದುವರಿದಿದೆ. ಯುಪಿಐ ವಹಿವಾಟಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, 2022ರ ಜನವರಿಯಲ್ಲಿ 4.6 ಬಿಲಿಯನ್ ಇದ್ದ ವಹಿವಾಟು 2023ರ ಜೂನ್ ನಲ್ಲಿ 9.3 ಬಿಲಿಯನ್ ಗೆ ಏರಿಕೆಯಾಗಿದೆ. ಇನ್ನು ಇಲ್ಲಿಯ ತನಕ ನಿಮ್ಮ ಡೆಬಿಟ್ ಕಾರ್ಡ್ ಅಥವಾ ಬ್ಯಾಂಕ್ ಉಳಿತಾಯ ಖಾತೆಯಿಂದ ಮಾತ್ರ ಹಣವನ್ನು ನಿಮ್ಮ ಯುಪಿಐ ಖಾತೆಗೆ ವರ್ಗಾಯಿಸಲು ಅವಕಾಶವಿತ್ತು. ಆದರೆ, ಈಗ ಆರ್ ಬಿಐ ಕ್ರೆಡಿಟ್ ಕಾರ್ಡ್ ಗಳನ್ನು ಯುಪಿಐ ಜೊತೆಗೆ ಲಿಂಕ್ ಮಾಡಲು ಅವಕಾಶ ಕಲ್ಪಿಸಿದೆ. ಕೆಲವು ಬ್ಯಾಂಕ್ ಗಳು ಈಗಾಗಲೇ ಈ ವ್ಯವಸ್ಥೆ ಪರಿಚಯಿಸಿವೆ. ಆದರೆ, ಇದರಿಂದ ಪ್ರಯೋಜನದ ಜೊತೆಗೆ ಹಾನಿಯೂ ಇದೆ ಎನ್ನುತ್ತಾರೆ ಹಣಕಾಸು ತಜ್ಞರು. 

ಕ್ರೆಡಿಟ್ ಕಾರ್ಡ್-ಯುಪಿಐ ಜೋಡಣೆಯಿಂದ ಪ್ರಯೋಜನಗಳೇನು?
1.ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಜೊತೆಗೆ ಲಿಂಕ್ ಮಾಡೋದ್ರಿಂದ ಬಳಕೆದಾರರು ದಿನದ 24 ಗಂಟೆಯೂ ವಹಿವಾಟು ನಡೆಸಬಹುದು. ಅಲ್ಲದೆ, ಬ್ಯಾಂಕ್ ರಜಾದಿನಗಳಲ್ಲಿ ಕೂಡ ಯಾವುದೇ ಸಮಸ್ಯೆಯಿಲ್ಲದೆ ಹಣದ ಪಾವತಿ ಅಥವಾ ವರ್ಗಾವಣೆ ಮಾಡಬಹುದು. ಇನ್ನು ಯುಪಿಐ ಬಳಕೆಯಿಂದ ಬ್ಯಾಂಕಿಗೆ ಭೇಟಿ ನೀಡೋದು ಹಾಗೂ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಸಮಸ್ಯೆ ಕೂಡ ಇಲ್ಲ. ಯುಪಿಐಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡೋದ್ರಿಂದ ಖರೀದಿ ಬಳಿಕದ ಪಾವತಿ, ಯುಟಿಲಿಟಿ ಬಿಲ್ ಗಳ ಪಾವತಿ ಸೇರಿದಂತೆ ವಿವಿಧ ವಿಧದ ವಹಿವಾಟುಗಳನ್ನು ಸುಲಭವಾಗಿ ಮಾಡಿ ಮುಗಿಸಬಹುದು. ಇನ್ನು ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ ಯುಪಿಐ ಪಾವತಿ ಮಾಡಬಹುದು. ಈ ಹಿಂದೆ ಖಾತೆಯಲ್ಲಿ ಹಣವಿದ್ದರೆ ಮಾತ್ರ ಯುಪಿಐ ಪಾವತಿಗೆ ಅವಕಾಶವಿತ್ತು. ಈ ಸೌಲಭ್ಯದಿಂದ ಕ್ರೆಡಿಟ್ ಕಾರ್ಡ್ ಬಳಕೆ ಇನ್ನಷ್ಟು ಹೆಚ್ಚಲಿದೆ. ಜೊತೆಗೆ ಗ್ರಾಹಕರಿಗೆ ಇದರಿಂದ ವಿವಿಧ ರಿವಾರ್ಡ್ ಗಳು ಹಾಗೂ ಆಫರ್ ಗಳು ಕೂಡ ಸಿಗಲಿವೆ.

Tap to resize

Latest Videos

ಎಸ್ ಬಿಐ ಕಾರ್ಡ್ ಜೊತೆಗೆ ರಿಲಯನ್ಸ್ ರಿಟೇಲ್ ಒಪ್ಪಂದ; ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಬಿಡುಗಡೆ

2.ಸಾಂಪ್ರದಾಯಿಕ ವಿಧಾನಗಳಿಗಿಂತ ಕ್ರೆಡಿಟ್ ಕಾರ್ಡ್ ಗೆ ಲಿಂಕ್ ಆಗಿರುವ ಯುಪಿಐ ಬಳಸಿ ವಹಿವಾಟುಗಳನ್ನು ತ್ವರಿತವಾಗಿ ಮಾಡಿ ಮುಗಿಸಬಹುದು. ಇಲ್ಲಿ ಕಾರ್ಡ್ ಸಂಖ್ಯೆ ಹಾಗೂ ಸಿವಿವಿ ಮುಖ್ಯವಾಗಿರುತ್ತದೆ. 

3.ಎಲ್ಲ ಕಡೆಗೂ ಕ್ರೆಡಿಟ್ ಕಾರ್ಡ್ ಕೊಂಡುಹೋಗಬೇಕಾದ ಅಗತ್ಯವಿಲ್ಲ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು, ಯುಪಿಐ ಮೂಲಕ ಪಾವತಿ ಮಾಡಬಹುದು. 

ಹಾನಿಯೇನು?
1.ಕ್ರೆಡಿಟ್ ಕಾರ್ಡ್ ಇದ್ದರೆ ವೆಚ್ಚವೂ ಹೆಚ್ಚು. ಹೌದು, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಬಹುದು. ಇನ್ನು ಕ್ರೆಡಿಟ್ ಕಾರ್ಡ್ ಅನ್ನು ಯುಪಿಐಗೆ ಲಿಂಕ್ ಮಾಡಿದರೆ ಪಾವತಿ ಮಾಡೋದು ಇನ್ನೂ ಸುಲಭ. ಹೀಗಾಗಿ ಈ ವ್ಯವಸ್ಥೆಯಿಂದ ಅನಗತ್ಯ ವೆಚ್ಚ ಹೆಚ್ಚುವ ಸಾಧ್ಯತೆಯಿದೆ. ಇನ್ನು ಪಾವತಿ ಮಾಡೋದು ಸುಲಭವಾದ ಕಾರಣ ಮನಸ್ಸು ಬಯಸಿದ್ದನ್ನೆಲ್ಲ ಖರೀದಿಸುವ ಸಾಧ್ಯತೆಯಿದೆ. ಇದರಿಂದ ಕ್ರೆಡಿಟ್ ಕಾರ್ಡ್ ಬಿಲ್ ನಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಅಲ್ಲದೆ, ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸದಿದ್ರೆ ಸಾಲದ ಹೊರೆ ಹೆಚ್ಚುವ ಸಾಧ್ಯತೆ ಕೂಡ ಇದೆ.

ನೀವು ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿದ್ರೆ ಆರ್ ಬಿಐಗೆ ತಲೆನೋವು, ಯಾಕೆ ಗೊತ್ತಾ?

2.ಇನ್ನು ನೆಟ್ ವರ್ಕ್ ಸಮರ್ಪಕವಾಗಿಲ್ಲದ ಪ್ರದೇಶಗಳಲ್ಲಿ ವಹಿವಾಟುಗಳು ವಿಫಲವಾಗುವ ಸಾಧ್ಯತೆ ಹೆಚ್ಚು. ಹೀಗಿರುವಾಗ ಯುಪಿಐ ಬಳಕೆ ಕಷ್ಟವಾಗಬಹುದು. 

click me!