ಭಾರತ್ ಪೇ ಮಾಜಿ ಮುಖ್ಯಸ್ಥ ಅಶ್ನೀರ್ ಗ್ರೋವರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಪತ್ನಿ ಮಾಧುರಿ ಜೈನ್ ಗ್ರೋವರ್ ಸಾಧನೆ ಬಗ್ಗೆ ಟ್ವೀಟ್ ಮಾಡಿದ್ದು, ದೇಶದಲ್ಲಿ ಅತೀಹೆಚ್ಚು ತೆರಿಗೆ ಪಾವತಿಸಿದ ಮಹಿಳಾ ತೆರಿಗೆದಾರರಲ್ಲಿ ನನ್ನ ಪತ್ನಿಯೂ ಸೇರಿದ್ದಾಳೆ ಎಂದು ಹೇಳಿದ್ದಾರೆ. ಮಾಧುರಿ ಗ್ರೋವರ್ ಈ ಆರ್ಥಿಕ ಸಾಲಿನಲ್ಲಿ 2.84 ಕೋಟಿ ರೂ. ಅಡ್ವಾನ್ಸ್ ತೆರಿಗೆ ಪಾವತಿಸಿದ್ದರೆ ಎಂದು ಗ್ರೋವರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ನವದೆಹಲಿ (ಮಾ.16): ಭಾರತ್ ಪೇ ಮಾಜಿ ಮುಖ್ಯಸ್ಥ ಅಶ್ನೀರ್ ಗ್ರೋವರ್ ತನ್ನ ಪತ್ನಿ ಮಾಧುರಿ ಜೈನ್ ಗ್ರೋವರ್ ಭಾರತದಲ್ಲಿ ಅತ್ಯಧಿಕ ತೆರಿಗೆ ಪಾವತಿಸಿದ ಮಹಿಳಾ ತೆರಿಗೆದಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ. ಮಾಧುರಿ ಗ್ರೋವರ್ ಈ ಆರ್ಥಿಕ ಸಾಲಿನಲ್ಲಿ 2.84 ಕೋಟಿ ರೂ. ಅಡ್ವಾನ್ಸ್ ತೆರಿಗೆ ಪಾವತಿಸಿದ್ದರೆ ಎಂದು ಗ್ರೋವರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಂದ ಹಾಗೇ ಗ್ರೋವರ್ ಈ ರೀತಿ ತನ್ನ ಪತ್ನಿಯನ್ನು ದೇಶದಲ್ಲಿ ಅತೀಹೆಚ್ಚು ತೆರಿಗೆ ಪಾವತಿಸುವ ಮಹಿಳೆಯರಲ್ಲಿ ಒಬ್ಬರು ಎಂದು ಹೊಗಳುತ್ತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಭಾರತ್ ಪೇ ಸಂಸ್ಥೆಯಲ್ಲಿ ಈ ಹಿಂದೆ ಉನ್ನತ ಸ್ಥಾನ ಹೊಂದಿದ್ದ ಮಾಧುರಿ ಜೈನ್ 1.15 ಕೋಟಿ ರೂ. ಅಡ್ವಾನ್ಸ್ ತೆರಿಗೆ ಪಾವತಿ ಮಾಡಿದ್ದರು ಎಂದು ಕಳೆದ ವರ್ಷ ಕೂಡ ಗ್ರೋವರ್ ಮಾಹಿತಿ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅಶ್ನೀರ್ ಗ್ರೋವರ್, ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋನ ಮೊದಲ ಆವೃತ್ತಿಯಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡ ಬಳಿಕ ಗ್ರೋವರ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.
ಮಾರ್ಚ್ 15ರಂದು ಮಾಡಿದ ಟ್ವೀಟ್ ನಲ್ಲಿ ಗ್ರೋವರ್ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿ ಯಶಸ್ಸು ಗಳಿಸಿರುವ ಪತ್ನಿ ಮಾಧುರಿ ಜೈನ್ ಗ್ರೋವರ್ ಅವರನ್ನು ಹೊಗಳಿದ್ದಾರೆ. 'ಮಾಧುರಿ ಜೈನ್ ಗ್ರೋವರ್ ದೇಶದ ಅತ್ಯಧಿಕ ತೆರಿಗೆ ಪಾವತಿದಾರರಲ್ಲಿ ಒಬ್ಬರು. ಈ ಆರ್ಥಿಕ ಸಾಲಿನಲ್ಲಿ ಆಕೆ 2.84 ಕೋಟಿ ರೂ. ಅಡ್ವಾನ್ಸ್ ತೆರಿಗೆ ಪಾವತಿಸಿದ್ದಾರೆ. ಈ ಒಂದು ವರ್ಷದಲ್ಲಿ ಎಲ್ಲವೂ ಇಳಿಕೆಯ ಹಾದಿಯಲ್ಲಿರುವಾಗ ಆಕೆ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡುವ ಮೂಲಕ ಯಶಸ್ಸು ಗಳಿಸಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಎಲ್ಲರಿಗೂ ವಂದನೆಗಳು' ಎಂದು ಗ್ರೋವರ್ ಟ್ವೀಟ್ ಮಾಡಿದ್ದಾರೆ.
Madhuri Jain Grover is one of the highest female tax payers in the country. She’s paid ₹2.84 crores of advance tax this financial year. She is killing it with her start up investments - in a year where the space in general is falling apart. Kudos to all honest tax payer pic.twitter.com/cRkeRRfgqx
— Ashneer Grover (@Ashneer_Grover)ಗ್ರೋವರ್ ಪತ್ನಿಯನ್ನು ಅತ್ಯಧಿಕ ತೆರಿಗೆ ಪಾವತಿಸುವ ದೇಶದ ಮಹಿಳೆಯರಲ್ಲಿ ಒಬ್ಬರು ಎಂದು ಹೊಗಳುತ್ತಿರೋದು ಇದೇ ಮೊದಲಲ್ಲ. ಕಳೆದ ವರ್ಷ ಕೂಡ ಆಕೆಯನ್ನು ಅತ್ಯಧಿಕ ತೆರಿಗೆ ಪಾವತಿ ಮಾಡಿದ ಮಹಿಳೆಯರಲ್ಲಿ ಒಬ್ಬರು ಎಂದು ಗ್ರೋವರ್ ಹೇಳಿದ್ದರು. ಕಳೆದ ವರ್ಷ ಮಾಧುರಿ ಗ್ರೋವರ್ 1.15 ಕೋಟಿ ರೂ. ಅಡ್ವಾನ್ಸ್ ತೆರಿಗೆ ಪಾವತಿಸಿದ್ದರು ಎಂಬ ಮಾಹಿತಿ ನೀಡಿದ್ದ ಗ್ರೋವರ್, ಇತರ ಹೂಡಿಕೆದಾರರಿಗೆ ಅವರು ಭಾರತದಲ್ಲಿ ಎಷ್ಟು ತೆರಿಗೆ ಪಾವತಿಸಿದ್ದಾರೆ ಎಂದು ಪ್ರಶ್ನಿಸಿದ್ದರು. ತುಂಬಾ ಜನ ತೆರಿಗೆ ಪಾವತಿಸಿಲ್ಲ. ಬಹುತೇಕರು ಸಿಂಗಾಪುರ ಅಥವಾ ದುಬೈಯಲ್ಲಿದ್ದುಕೊಂಡು ಶೂನ್ಯ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಗ್ರೋವರ್ ಆರೋಪಿಸಿದ್ದರು.
ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಬ್ಯುಸಿನೆಸ್ ರಿಯಾಲ್ಟಿ ಶೋ ಶಾರ್ಕ್ ಟ್ಯಾಂಕ್ ಇಂಡಿಯಾ ಒಂದನೇ ಆವೃತ್ತಿಯಲ್ಲಿ ಅಶ್ನೀರ್ ಗ್ರೋವರ್ ತೀರ್ಪುಗಾರರಾಗಿದ್ದರು. ಈ ಶೋ ಮೂಲಕ ಗ್ರೋವರ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು ಕೂಡ.
ಹೊಸ ಫೋಟೋ ಬಳಸಿ: 15 ಕೆ.ಜಿ.ತೆಳ್ಳಗಾದ ಫೋಟೋ ಪೋಸ್ಟ್ ಮಾಡಿದ ಅಶ್ನೀರ್ ಗ್ರೋವರ್
ಕಳೆದ ವರ್ಷ ಭಾರತ್ ಪೇ ಅಶ್ನೀರ್ ಗ್ರೋವರ್ ಹಾಗೂ ಅವರ ಪತ್ನಿ ವಿರುದ್ಧ ಹಣಕಾಸಿನ ವಂಚನೆ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗ್ರೋವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇನ್ನು 2022ರ ಡಿಸೆಂಬರ್ ನಲ್ಲಿ ಭಾರತ್ ಪೇ ಮಾಜಿ ಎಂಡಿ ಅಶ್ನೀರ್ ಗ್ರೋವರ್ ಹಾಗೂ ಅವರ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ವಂಚನೆ ಹಾಗೂ ಹಣದ ದುರುಪಯೋಗ ಆರೋಪ ಮಾಡಿತ್ತು. 88.67 ಕೋಟಿ ರೂ. ಪರಿಹಾರ ನೀಡುವಂತೆಯೂ ಕೋರಿತ್ತು.