
ನವದೆಹಲಿ[ಸೆ.18]: ಕಳೆದ 4 ದಶಕಗಳಿಂದ ಉತ್ತರಪ್ರದೇಶದ ಮುಖ್ಯಮಂತ್ರಿಗಳು ಮತ್ತು ಸಚಿವರ ವೇತನ ಮತ್ತು ಭತ್ಯೆಗೆ ಸಂಬಂಧಿತ ತೆರಿಗೆಯನ್ನು ರಾಜ್ಯ ಸರ್ಕಾರವೇ ಭರಿಸುತ್ತಾ ಬಂದಿತ್ತು ಇತ್ತೀಚೆಗೆ ವರದಿಯಾಗಿತ್ತು. ಅದರ ಬೆನ್ನಲ್ಲೇ, ಯುಪಿ ಮಾತ್ರವಲ್ಲದೇ ಮಧ್ಯಪ್ರದೇಶ, ಛತ್ತೀಸ್‌ಗಢ, ಹರ್ಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಕೂಡ ತಮ್ಮ ಬೊಕ್ಕಸದಿಂದ ಮುಖ್ಯಮಂತ್ರಿಗಳು ಹಾಗೂ ಸಚಿವರ ಆದಾಯ ತೆರಿಗೆಯನ್ನು ಪಾವತಿಸುತ್ತಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳು 1966ರಿಂದ ಮುಖ್ಯಮಂತ್ರಿಗಳು ಹಾಗೂ ಸಚಿವರ ಆದಾಯ ತೆರಿಗೆಯನ್ನು ಪಾವತಿಸುತ್ತಿವೆ. ಇನ್ನು ಉತ್ತರಾಖಂಡದಲ್ಲಿ 2000ನೇ ಇಸವಿಯಿಂದ ಮುಖ್ಯಮಂತ್ರಿಗಳು ಹಾಗೂ ಸಚಿವರ ಆದಾಯ ತೆರಿಗೆಯನ್ನು ಸರ್ಕಾರದಿಂದಲೇ ಭರಸಲಾಗುತ್ತಿದೆ.
ಮಧ್ಯಪ್ರದೇಶದಲ್ಲಿ 1994ರಿಂದ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ. ಹಲವು ಸಚಿವರು ಉತ್ತಮ ಆರ್ಥಿಕ ಹಿನ್ನೆಲೆ ಹೊಂದಿರದ ಕಾರಣಕ್ಕೆ 1981ರಿಂದ ಉತ್ತರ ಪ್ರದೇಶ ಸರ್ಕಾರವೇ ಸಚಿವ ಸಂಪುಟ ಸದಸ್ಯರ ಆದಾಯ ತೆರಿಗೆ ಪಾವತಿಸುತ್ತಾ ಬಂದಿತ್ತು. ತೀವ್ರ ಟೀಕೆಯ ಬಳಿಕ ಯೋಗಿ ಆದಿತ್ಯನಾಥ್ ಈ ಪದ್ದತಿಗೆ ಇತಿಶ್ರಿ ಹಾಡಿದ್ದರು.
ಅದೇ ರೀತಿ ಪಂಜಾಬ್‌ನಲ್ಲಿ 2018 ಮಾಚ್‌ರ್ 18ರವರೆಗೂ ಸಚಿವರ ವೇತನ ಹಾಗೂ ಭತ್ಯೆಯ ಮೇಲಿನ ತೆರಿಗೆಯನ್ನು ಸರ್ಕಾರವೇ ಪಾವತಿಸುತ್ತಿತ್ತು. ಆದರೆ, ಈ ಪದ್ಧತಿಗೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕಡಿವಾಣ ಹಾಕಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.