
ನವದೆಹಲಿ (ಜು.14): ಕರ್ನಾಟಕ ಮೂಲದ ಹಾಗೂ ಸದ್ಯ ಸಂಪೂರ್ಣವಾಗಿ ಪುಣೆಯಲ್ಲಿ ನೆಲೆಸಿರುವ ಕೈಗಾರಿಕೋದ್ಯಮಿ ಕಲ್ಯಾಣಿ ಕುಟುಂಬದ ದಶಕಗಳಷ್ಟು ಹಳೆಯದಾದ ಹಾಗೂ ಅಂದಾಜು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಮತ್ತು ಆಸ್ತಿ ಹಂಚಿಕೆ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಹೆಜ್ಜೆ ಇಟ್ಟಿದೆ. ಉಭಯ ಕಡೆಯವರ ನಡುವೆ ರಾಜಿ ಸಂಧಾನ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರನ್ನು ಮಧ್ಯಸ್ಥಗಾರರನ್ನಾಗಿ (Mediator) ಕೋರ್ಟ್ ನೇಮಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ.
ಮಧ್ಯಸ್ಥಿಕೆ ಪ್ರಕ್ರಿಯೆಯು ಮಂಗಳವಾರದಿಂದಲೇ ಆರಂಭವಾಗುವಂತೆ ಮಾಡಲು, ಜು.14ರಂದೇ ನ್ಯಾಯಮೂರ್ತಿ ರಾವ್ ಅವರನ್ನು ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ಉಭಯ ಪಕ್ಷಗಳಿಗೂ ಸೂಚಿಸಿದೆ. ಇದೇ ವೇಳೆ, ಮುಂಬೈ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದ್ದು, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಈ ಶತಕೋಟಿ ಆಸ್ತಿಯ ಕಾನೂನು ಹೋರಾಟವು ಪ್ರಮುಖವಾಗಿ ಹಿರಿಯ ಕೈಗಾರಿಕೋದ್ಯಮಿ ಹಾಗೂ ‘ಭಾರತ್ ಫೋರ್ಜ್’ ಕಂಪನಿಯ ಚೇರ್ಮನ್ ಬಾಬಾ ಕಲ್ಯಾಣಿ ಮತ್ತು ಅವರ ಸಹೋದರಿ ಸುಗಂಧಾ ಹಿರೇಮಠ್ ನಡುವೆ ನಡೆಯುತ್ತಿದೆ. ಕಲ್ಯಾಣಿ ಕುಟುಂಬದ ಪೂರ್ವಜರ ಆಸ್ತಿ, ಷೇರು ಮಾರುಕಟ್ಟೆಯಲ್ಲಿ ನೋಂದಾಯಿತವಾಗಿರುವ ಕಲ್ಯಾಣಿ ಗ್ರೂಪ್‌ನ ಪ್ರಮುಖ ಕಂಪನಿಗಳ ಪ್ರವರ್ತಕರ (Promoter) ಪಾಲು ಹಾಗೂ ಇತರೆ ಕುಟುಂಬ ಆಸ್ತಿಗಳ ಹಂಚಿಕೆಗಾಗಿ ಈ ಇಬ್ಬರ ನಡುವೆ ಸುದೀರ್ಘ ಕಾನೂನು ಸಮರ ಜಾರಿಯಲ್ಲಿದೆ.
ಮಧ್ಯಸ್ಥಿಕೆಗೆ ಮತ್ತೊಂದು ಅವಕಾಶ ನೀಡುವಂತೆ ಉಭಯ ಕಡೆಯವರ ಮನವೊಲಿಸಿದ ಸಿಜೆಐ ಸೂರ್ಯ ಕಾಂತ್, "ಈ ಹಿಂದೆ ನಡೆದ ಸಂಧಾನ ಪ್ರಯತ್ನಗಳು ವಿಫಲವಾಗಿದ್ದರೂ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿರುವುದರಿಂದ ಈ ಬಾರಿ ಸಕಾರಾತ್ಮಕ ಬದಲಾವಣೆ ಸಾಧ್ಯವಿದೆ" ಎಂದು ಅಭಿಪ್ರಾಯಪಟ್ಟರು.
ವಿಚಾರಣೆ ವೇಳೆ ಪೀಠವು, "ನೀವು ಈ ಹಿಂದೆ ಸಂಧಾನ ಪ್ರಕ್ರಿಯೆಗೆ ಒಪ್ಪದಿದ್ದರೂ, ಸುಪ್ರೀಂ ಕೋರ್ಟ್‌ನ ಮೊದಲ ನ್ಯಾಯಾಲಯವೇ (Court No. 1) ವಿನಂತಿಸಿದಾಗ ನೀವು ಅದನ್ನು ಗೌರವಿಸುವುದಿಲ್ಲವೇ? ಉಭಯ ಕಡೆಯ ಪ್ರಮುಖರು ಮುಂದೆ ಬಂದು ಪರಸ್ಪರ ಸಹಕರಿಸಿದಾಗ ಮಾತ್ರ ಇಂತಹ ಸಂಧಾನಗಳು ಯಶಸ್ವಿಯಾಗುತ್ತವೆ. ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಹಗೆತನದ ಧೋರಣೆ ಇರಬಾರದು" ಎಂದು ಕಿವಿಮಾತು ಹೇಳಿತು.
ಪ್ರಕರಣದಲ್ಲಿ ಬಾಬಾ ಕಲ್ಯಾಣಿ ಮತ್ತು ಇತರ ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲರಾದ ಎ.ಎಂ. ಸಿಂಘ್ವಿ ಹಾಗೂ ಆರ್ಯಮಾ ಸುಂದರಂ ಹಾಜರಾಗಿದ್ದರೆ, ಸುಗಂಧಾ ಹಿರೇಮಠ್ ಪರವಾಗಿ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು.
ಮೂಲತಃ ಉತ್ತರ ಕರ್ನಾಟಕ ಮೂಲದ ವೀರಶೈವ ಜಂಗಮ ಕಲ್ಯಾಣಿ ಕುಟುಂಬದ ಹಿಂದೂ ಅವಿಭಕ್ತ ಕುಟುಂಬದ (HUF) ಆಸ್ತಿಗಳಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಕಲ್ಯಾಣಿ ಗ್ರೂಪ್‌ನ ಪ್ರಮುಖ ಕಂಪನಿಯಾದ ಭಾರತ್ ಫೋರ್ಜ್ ಸೇರಿದಂತೆ ಹಲವು ಲಿಸ್ಟೆಡ್ ಕಂಪನಿಗಳ ಪ್ರವರ್ತಕರ ಹಿತಾಸಕ್ತಿಗಳು, ಹೂಡಿಕೆಗಳು ಮತ್ತು ಕುಟುಂಬದ ಒಡೆತನದ ಸ್ಥಿರಾಸ್ತಿಗಳು ಸೇರಿವೆ.
ಈ ಕಾನೂನು ಹೋರಾಟದಲ್ಲಿ ಒಡಹುಟ್ಟಿದವರಾದ ಬಾಬಾ ಕಲ್ಯಾಣಿ (77 ವರ್ಷ), ಸುಗಂಧಾ ಹಿರೇಮಠ್ (74 ವರ್ಷ) ಮತ್ತು ಗೌರಿಶಂಕರ್ ಕಲ್ಯಾಣಿ (72 ವರ್ಷ) ಹಾಗೂ ಅವರ ಕುಟುಂಬದ ಇತರ ಸದಸ್ಯರು ಭಾಗಿಯಾಗಿದ್ದಾರೆ. ಅವರ ಪೋಷಕರಾದ ಡಾ. ನೀಲಕಂಠ ಕಲ್ಯಾಣಿ ಮತ್ತು ಸುಲೋಚನಾ ಕಲ್ಯಾಣಿ ಅವರ ವಿಲ್ ಹಾಗೂ ಕುಟುಂಬದ ಆಸ್ತಿ ಹಂಚಿಕೆ ಒಪ್ಪಂದಗಳ ಜಾರಿಗೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ಬಾಕಿ ಇವೆ. ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯು 1994 ರ ಕುಟುಂಬ ಒಪ್ಪಂದದ ಅನುಷ್ಠಾನಕ್ಕೆ ಸಂಬಂಧಿಸಿದ ದಾವೆಯಾಗಿದೆ.
ಕಳೆದ ಮೇ ತಿಂಗಳಲ್ಲಿ ಮುಂಬೈ ಹೈಕೋರ್ಟ್, ಒಂದು ಕಡೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಈ ಪ್ರಕರಣವನ್ನು ಸಂಧಾನ ಪ್ರಕ್ರಿಯೆಗೆ ಒಪ್ಪಿಸಲು ನಿರಾಕರಿಸಿತ್ತು. ಭಾರತೀಯ ಕಾನೂನಿನ ಪ್ರಕಾರ ಸಂಧಾನ ಎಂಬುದು ಉಭಯ ಪಕ್ಷಗಳ ಪರಸ್ಪರ ಒಪ್ಪಿಗೆಯ ಮೇಲೆ ಆಧಾರಿತವಾಗಿರುತ್ತದೆ. ಕೇವಲ ಕುಟುಂಬದ ಸದಸ್ಯರ ನಡುವಿನ ವಿವಾದ ಎಂಬ ಕಾರಣಕ್ಕೆ ಇದನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು. ಆದರೆ, ಪ್ರಕರಣದಲ್ಲಿ ಭಾಗಿಯಾಗಿರುವವರೆಲ್ಲರೂ ಹಿರಿಯ ನಾಗರಿಕರಾಗಿರುವುದರಿಂದ ಈ ದೀರ್ಘಾವಧಿಯ ಮೊಕದ್ದಮೆಗೆ ಶೀಘ್ರ ಪರಿಹಾರ ಸಿಗಬೇಕು ಎಂದೂ ಹೈಕೋರ್ಟ್ ಒತ್ತಿ ಹೇಳಿತ್ತು.
ಇದಕ್ಕೂ ಮುನ್ನ ಪುಣೆಯಲ್ಲಿ ನಡೆದಿದ್ದ ರಾಜಿಸಂಧಾನದ ಪ್ರಯತ್ನಗಳು ವಿಫಲವಾಗಿದ್ದವು. ತದನಂತರ ಸುಗಂಧಾ ಹಿರೇಮಠ್ ಅವರು ಸಮಗ್ರ ಕುಟುಂಬ ಒಪ್ಪಂದಕ್ಕಾಗಿ ಮುಂಬೈ ಹೈಕೋರ್ಟ್‌ನಲ್ಲಿ ಮಧ್ಯಸ್ಥಿಕೆ ಕೋರಿದ್ದರು. ಈಗ ಸುಪ್ರೀಂ ಕೋರ್ಟ್ ಅತ್ಯುನ್ನತ ಮಟ್ಟದಲ್ಲಿ ನಿವೃತ್ತ ನ್ಯಾಯಮೂರ್ತಿಗಳನ್ನು ಸಂಧಾನಕಾರರನ್ನಾಗಿ ನೇಮಿಸಿರುವುದರಿಂದ ಈ ಬೃಹತ್ ಆಸ್ತಿ ವಿವಾದ ಇತ್ಯರ್ಥದ ಹಾದಿ ಹಿಡಿಯುವ ನಿರೀಕ್ಷೆಯಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.