
ಬೆಂಗಳೂರು(ಜು.10): ಸ್ಟಾರ್ಟ್‌ಅಪ್‌ಗಳಿಗೆ ಅಗತ್ಯ ಸಾಲ ಸೌಲಭ್ಯವನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಪ್ರತ್ಯೇಕ ಬ್ಯಾಂಕ್ ಶಾಖೆಯನ್ನು ಕೋರಮಂಗಲದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆರಂಭಿಸುತ್ತಿದ್ದು, ಈ ಸಂಬಂಧ ಬ್ಯಾಂಕ್ ನ ಅಧಿಕಾರಿಗಳು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ) ಶುಕ್ರವಾರ ಒಡಂಬಡಿಕೆ ಮಾಡಿಕೊಂಡಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ ಕಾರ್ಮಕ್ರಮದಲ್ಲಿ ಕೆಡಿಇಎಂ ಪರವಾಗಿ ಸಿಇಒ ಸಂಜೀವ್ ಗುಪ್ತ ಹಾಗೂ ಎಸ್‌ಬಿಐ ಪರವಾಗಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಸ್.ರಾಧಾಕೃಷ್ಣನ್ ಸಹಿ ಹಾಕಿ, ಒಪ್ಪಂದ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಸ್ಟಾರ್ಟಪ್‌ಗೆ ಒಳ್ಳೆಯ ವಾತಾವರಣ: ಗುಜರಾತ್, ಕರ್ನಾಟಕ ಅತ್ಯುತ್ತಮ
ಈ ವೇಳೆ ಉಪಸ್ಥಿತರಿದ್ದ ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಬೆಂಗಳೂರಿನ ಕೋರಮಂಗಲದಲ್ಲಿ ಎಸ್‌ಬಿಐ ನಿಂದ ಸ್ಟಾರ್ಟ್‌ಅಪ್‌ಗಳಿಗೆ ನೆರವಾಗಲು ಪ್ರತ್ಯೇಕ ಶಾಖೆ ತೆರೆಯುತ್ತಿದೆ. ಇದನ್ನು ಆಗಸ್ಟ್ ತಿಂಗಳಲ್ಲಿ ಕಾರ್ಯಾರಂಭವಾಗಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ ಸೌಲಭ್ಯವನ್ನು ಖಾತರಿ ಪಡಿಸಲು ರೂಪಿಸಿರುವ ಸಿಜಿಟಿಎಸ್‌ಎಂಇ ಯೋಜನೆಯಡಿ ಒಂದು ಸಂಸ್ಥೆಗೆ 2 ಕೋಟಿ ರು. ವರೆಗೂ ಸಾಲ ಸಿಗುತ್ತಿದೆ. ಇದನ್ನು ಬಳಸಿಕೊಂಡು, ರಾಜ್ಯದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ನೆರವು ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ನವೋದ್ಯಮಗಳ ಶೇ.30ರಷ್ಟು ಆದಾಯ ಸಂಶೋಧನೆಗಿರಲಿ: ಸಚಿವ ಅಶ್ವತ್ಥ್ ನಾರಾಯಣ
ರಾಜ್ಯದಲ್ಲಿ 13 ಸಾವಿರ ಸ್ಟಾರ್ಟ್‌ಅಪ್‌ಗಳಿದ್ದು, ಕೆಲವು ಸಂಸ್ಥೆಗಳಿಗೆ ಹಣಕಾಸು ನಿಧಿಯ ಕೊರತೆ ಇದೆ. ಈ ಸಮಸ್ಯೆ ಪರಿಹರಿಸಿ, ಸುಗಮ ಸಾಲ ಸಿಗುವಂತೆ ಮಾಡಲು ಈ ವ್ಯವಸ್ಥೆ ಮಾಡಲಾಗುತ್ತಿದೆ. ಎಸ್‌ಬಿಐ ಮುಂದಿನ ಆರು ತಿಂಗಳಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಕ್ಲಸ್ಟರ್ ಗಳಲ್ಲಿ ಕೆಡಿಇಎಂ ಜತೆಗೂಡಿ ಸ್ಟಾರ್ಚ್‌ಅಪ್‌ಗಳಿಗಾಗಿ ಪ್ರತ್ಯೇಕ ಡೆಸ್ಕ್ ಆರಂಭಿಸಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ‘ಎಲಿವೇಟ್’ ಉಪಕ್ರಮದಡಿ ವಿಜೇತವಾಗಿರುವ 750 ಸ್ಟಾರ್ಟ್‌ಅಪ್ ಕಂಪನಿಗಳಿಗೆ ಈ ಒಪ್ಪಂದದಿಂದ ಅನುಕೂಲವಾಗಲಿದೆ. ಹೊಸದಾಗಿ 250ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಸುಲಭವಾಗಿ ಸಾಲ ಸಿಗಲಿದೆ. ಇದರಿಂದ ಉದ್ಯಮಶೀಲತೆಯ ಬೆಳವಣಿಗೆ ನಿರಾತಂಕವಾಗಿ ಸಾಗಲಿದೆ. ಈ ಮೂಲಕ ಎಸ್‌ಬಿಐ, ಮಂಗಳೂರಿನಲ್ಲಿ ಕೇಂದ್ರಸ್ಥಾನ ಹೊಂದಿರುವ ಫಿನ್‌ಟೆಕ್ ಇನ್ನೋವೇಷನ್ ಹಬ್‌ನಲ್ಲಿ ಸಹಭಾಗಿತ್ವ ಹೊಂದಲಿದೆ ಎಂದು ಹೇಳಿದರು. ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ರಾಣಾ ಆಶುತೋಷ್ ಕುಮಾರ್ ಸಿಂಗ್, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಸಿಇಒ ಸಂಜೀವ್ ಗುಪ್ತ, ಎಸ್‌ಬಿಐ ಬೆಂಗಳೂರು ವೃತ್ತದ ಪ್ರಧಾನ ವ್ಯವಸ್ಥಾಪಕ ನಂದಕಿಶೋರ್ ಉಪಸ್ಥಿತರಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.