ನೀವು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು ವಿತ್ ಡ್ರಾ ಮಾಡ್ತೀರಾ? ಹಾಗಾದ್ರೆ ಈ ಮಾಹಿತಿ ಗೊತ್ತಿರಲಿ

By Suvarna NewsFirst Published Nov 11, 2022, 6:08 PM IST
Highlights

ಇಂದು ಬಹುತೇಕರ ಬಳಿ ಕ್ರೆಡಿಟ್ ಕಾರ್ಡ್ ಇದೆ. ಆನ್ ಲೈನ್ ಪಾವತಿಗೆ ಮಾತ್ರವಲ್ಲ, ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಕೂಡ ಕ್ರೆಡಿಟ್ ಕಾರ್ಡ್ ಬಳಸಬಹುದು. ಹಾಗಾದ್ರೆ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ಗರಿಷ್ಠ ಎಷ್ಟು ಮೊತ್ತದ ಹಣ ವಿತ್ ಡ್ರಾ ಮಾಡಬಹುದು? ಅದಕ್ಕೆಷ್ಟು ಶುಲ್ಕ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ. 
 

Business Desk:ಇಂದು ನಗದುರಹಿತ ವಹಿವಾಟು ಹೆಚ್ಚು ಜನಪ್ರಿಯವಾಗಿದೆ. ಪರ್ಸ್ ನಲ್ಲಿ ನಗದು ಹಿಡಿದುಕೊಂಡು ತಿರುಗುವ ಕಾಲ ಈಗ ಮುಗಿದಿದೆ.  ಪರ್ಸ್ ನಲ್ಲಿ ನಗದಿನ ಜಾಗವನ್ನು ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ ಗಳು ತುಂಬಿವೆ. ಕ್ರೆಡಿಟ್ ಕಾರ್ಡ್ ಬಳಕೆಯಿಂದ ಪ್ರಯೋಜನವಿದೆಯಾದರೂ ಎಚ್ಚರ ತಪ್ಪಿದ್ರೆ ಜೇಬಿಗೆ ದೊಡ್ಡ ಹೊರೆಯಾಗುವ ಸಾಧ್ಯತೆಯೂ ಇರುತ್ತದೆ. ಇಂದು ಆನ್ ಲೈನ್ ವ್ಯವಹಾರ ಹೆಚ್ಚಿರುವ ಹಿನ್ನೆಲೆಯಲ್ಲಿ ಬಹುತೇಕರು ನಿತ್ಯದ ವ್ಯವಹಾರಗಳಿಗೆ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಇಂದು ಬಹುತೇಕ ಎಲ್ಲ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತವೆ. ಎಸ್ ಬಿಐ ಕೂಡ ಇದಕ್ಕೆ ಹೊರತಾಗಿಲ್ಲ. ಇನ್ನು ನೀವು ಕೂಡ ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ರೆ ಕೆಲವೊಂದು ವಿಚಾರಗಳನ್ನು ತಿಳಿದಿರೋದು ಅಗತ್ಯ. ಮುಖ್ಯವಾಗಿ ಕ್ರೆಡಿಟ್ ಕಾರ್ಡ್ ಶುಲ್ಕ, ಪಾವತಿ ಅಥವಾ ವಿತ್ ಡ್ರಾ ಮಿತಿ, ಬಡ್ಡಿ ಸೇರಿದಂತೆ ಕೆಲವೊಂದು ಮಾಹಿತಿಗಳನ್ನು ಹೊಂದಿರೋದು ಅಗತ್ಯ. ಅಲ್ಲದೆ, ಆನ್ ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್ ಪಿನ್ ಜನರೇಟ್ ಮಾಡೋದು ಹೇಗೆ ಎಂಬ ಮಾಹಿತಿ ಹೊಂದಿರೋದು ಉತ್ತಮ. 

ನಗದು ವಿತ್ ಡ್ರಾ  ಮಾಡಿದ್ರೆ ಶುಲ್ಕ
ನೀವು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂ ಮೂಲಕ ನಗದು ವಿತ್ ಡ್ರಾ ಮಾಡಿದ್ರೆ ಆ ಮೊತ್ತದ ಮೇಲೆ ಶುಲ್ಕವನ್ನು ಬ್ಯಾಂಕ್ ವಿಧಿಸುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿ ಸ್ಥಳೀಯವಾಗಿ ವಿತ್ ಡ್ರಾ ಮಾಡಿದ್ರೆ ಶೇ.2.5 ಅಥವಾ 500ರೂ.ಇವೆರಡರಲ್ಲಿ ಯಾವುದು ದೊಡ್ಡ ಮೊತ್ತವೋ ಅದನ್ನು ದಂಡವಾಗಿ ವಿಧಿಸಲಾಗುತ್ತದೆ. ಇನ್ನು ಅಂತಾರಾಷ್ಟ್ರೀಯ ವಹಿವಾಟಿಗೂ ಇಷ್ಟೇ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಈ ವಿತ್ ಡ್ರಾಗಳ ಮೇಲೆ ಮಾಸಿಕ ಶೇ.3.5 ಹಾಗೂ ವಾರ್ಷಿಕ ಶೇ.42ರಷ್ಟು ಸೇವಾ ಶುಲ್ಕ ವಿಧಿಸಲಾಗುತ್ತದೆ. ಇದು ನೀವು ಎಟಿಎಂನಿಂದ ನಗದು ವಿತ್ ಡ್ರಾ ಮಾಡಿದ ದಿನಾಂಕದಿಂದ ಸಂಪೂರ್ಣ ಮೊತ್ತದ ಸೆಟ್ಲಮೆಂಟ್ ಅಥವಾ ಮರುಪಾವತಿ ದಿನಾಂಕದ ತನಕ ಅನ್ವಯಿಸುತ್ತದೆ. 

ತಲೆ ಓಡಿಸಿದ್ರೆ ಹೀಗೂ ಹಣ ಗಳಿಸಬಹುದು, ಏನೇನೋ ಚಿಂತಿಸುವ ಅಗತ್ಯವಿಲ್ಲ

ಎಷ್ಟು ಮೊತ್ತ ವಿತ್ ಡ್ರಾ ಮಾಡಬಹುದು?
ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು ವಿತ್ ಡ್ರಾದ ಮಿತಿ ಕ್ರೆಡಿಟ್ ಕಾರ್ಡ್ ಮಿತಿಯನ್ನು ಅವಲಂಬಿಸಿರುತ್ತದೆ. ಅಂದರೆ ಕ್ರೆಡಿಟ್ ಕಾರ್ಡ್ ಮಿತಿಯ ಶೇ.20-ಶೇ.80ರ ನಡುವೆ ನಗದು ವಿತ್ ಡ್ರಾ ಮಿತಿಯಿರುತ್ತದೆ. ಹೀಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ 2ಲಕ್ಷ ರೂ. ಆಗಿದ್ರೆ ನೀವು ಅದರ ಶೇ.80ರಷ್ಟನ್ನು ಅಂದ್ರೆ 1,60,000 ರೂ. ವಿತ್ ಡ್ರಾ ಮಾಡಬಹುದು. ಎಸ್ ಬಿಐ ಸಾಮಾನ್ಯವಾಗಿ ಶೇ.80ರಷ್ಟು ನಗದು ವಿತ್ ಡ್ರಾ ಮಿತಿ ನೀಡುತ್ತದೆ. 

ಎಟಿಎಂನಲ್ಲಿ ನಗದು ವಿತ್ ಡ್ರಾ ಹೇಗೆ?
ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಎಟಿಎಂ ಮಷಿನ್ ಗೆ ಹಾಕಿ. ಆ ಬಳಿಕ ಪಿನ್ ಹಾಗೂ ನಿಮಗೆ ಬೇಕಾದ ಹಣದ ಮೊತ್ತ ನಮೂದಿಸಿ. ಆ ನಂತರ ಹಣ ಹಾಗೂ ರಶೀದಿ ಪಡೆಯಿರಿ. 

Health Insurance ಖರೀದಿಸುವ ಮುನ್ನ ಎಚ್ಚರ, ಏನೇನು ಕವರ್ ಆಗುತ್ತೆ ಅನ್ನೋದು ನೋಡ್ಕಳ್ಳಿ

ಆನ್ ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್ ಪಿನ್ ಜನರೇಟ್ ಹೇಗೆ?
ಹಂತ 1: ಎಸ್ ಬಿಐ ವೆಬ್ ಸೈಟ್ sbicard.com ಭೇಟಿ ನೀಡಿ.
ಹಂತ 2: ಎಡ ಭಾಗದ ಮೆನುವಿನಲ್ಲಿ  My Account ಆಯ್ಕೆ ಮಾಡಿ. 
ಹಂತ 3:ನೀವು ಪಿನ್ ಜನರೇಟ್ ಮಾಡಲು ಬಯಸುವ ಕ್ರೆಡಿಟ್ ಕಾರ್ಡ್ಆಯ್ಕೆ ಮಾಡಿ.
ಹಂತ 4:ಎಸ್ ಎಂಎಸ್ ಮೂಲಕ ಒಟಿಪಿ ನಿಮ್ಮ ಮೊಬೈಲ್ ಗೆ ಬರುತ್ತದೆ.
ಹಂತ 5: ಒಟಿಪಿ ನಮೂದಿಸಿ ನೀವು ಬಳಕೆ ಮಾಡಲು ಇಚ್ಛಿಸುವ ಪಿನ್ ನಮೂದಿಸಿ.
ಹಂತ 6: Submit ಮೇಲೆ ಕ್ಲಿಕ್ ಮಾಡಿ. ನಿಮ್ಮ ಪಿನ್ ಜನರೇಟ್ ಆಗುತ್ತದೆ. 

click me!