
ನವದೆಹಲಿ(ಆ.7): ಕನಿಷ್ಠ ಠೇವಣಿ ಮೊತ್ತಕ್ಕೆ ವಿಧಿಸಲಾಗಿರುವ ದಂಡದ ಕುರಿತು ಜನರ ಆಕ್ರೋಶ ಮನಗಂಡ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಈ ಕುರಿತು ಪ್ರಕಟಣೆ ಹೊರಡಿಸಿದ್ದು, ತನ್ನ ಒಟ್ಟು ಉಳಿತಾಯ ಖಾತೆಗಳಲ್ಲಿ ಶೇ. 40 ರಷ್ಟು ಖಾತೆಗಳನ್ನು ಕನಿಷ್ಠ ಠೇವಣಿಯಿಂದ ಹೊರಗಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಇದೇ ವೇಳೆ ಎಲ್ಲಾ ಉಳಿತಾಯ ಖಾತೆಗಳಿಗೂ ಕನಿಷ್ಠ ಠೇವಣಿಯನ್ನೂ ಕೂಡ ಶೇ. 40ರಷ್ಟು ಇಳಿಕೆ ಮಾಡಲಾಗಿದೆ ಎಂದು ಎಸ್‌ಬಿಐ ಮಾಹಿತಿ ನೀಡಿದೆ. ಕಳೆದ ಏಪ್ರೀಲ್‌ನಲ್ಲೇ ಕನಿಷ್ಠ ಠೇವಣಿ ಮೊತ್ತವನ್ನು ಇಳಿಕೆ ಮಾಡಲಾಗಿದ್ದು, ಅದಾಗ್ಯೂ 2,433 ಕೋಟಿ ರೂ. ದಂಡ ಸಂಗ್ರಹವಾಗಿದೆ ಎಂದು ತಿಳಿಸಿದೆ.
ಎಸ್‌ಬಿಐ ಖಾತೆಗಳನ್ನು ಗ್ರಾಮೀಣ, ಅರೆ ನಗರ, ನಗರ ಮತ್ತು ಮೆಟ್ರೋ ಎಂದು ನಾಲ್ಕು ವರ್ಗೀಕರಣ ಮಾಡಲಾಗಿದ್ದು, ಎಲ್ಲಾ ಪ್ರಕಾರದ ಖಾತೆಗಳಿಗೂ ಬೇರೆ ಬೇರೆ ರೂಪದ ಕನಿಷ್ಠ ಠೇವಣಿ ಮೊತ್ತ ನಿಗದಿ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಇನ್ನು ಎಸ್‌ಬಿಐ ವರ್ಗೀಕರಣದಂತೆ ಕನಿಷ್ಠ ಠೇವಣಿ ಮೊತ್ತ ನೋಡುವುದಾದರೆ
ಮೆಟ್ರೋ-3000 ರೂ.
ನಗರ-2000 ರೂ.
ಅರೆ ನಗರ-2000 ರೂ
ಗ್ರಾಮೀಣ-1000 ರೂ.
ಇನ್ನು ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ದಂಡದ ಮೊತ್ತವನ್ನು ಶೇ. 70 ರಷ್ಟು ಮತ್ತು ಅರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ75 ರಷ್ಟು ದಂಡದ ಮೊತ್ತವನ್ನು ಕಡಿತ ಮಾಡಲಾಗಿದೆ. ಅಲ್ಲದೇ ತಿಂಗಳಿಗೆ ಕೇವಲ 5 ರೂ. ದಿಂದ 15 ರೂ ವರೆಗೆ ಮಾತ್ರ ದಂಡ ಹಾಕಲಾಗುತ್ತದೆ ಎಂದು ಎಸ್‌ಬಿಐ ಮೂಲಗಳು ಸ್ಪಷ್ಟಪಡಿಸಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.