ಮನೆ ಖರೀದಿ ಅಥವಾ ಕಟ್ಟೋದು ಬಹುತೇಕರ ಬದುಕಿನ ಬಹುದೊಡ್ಡ ಕನಸು. ಆದ್ರೆ, ಇದು ಅಷ್ಟು ಸುಲಭದ ಕೆಲಸ ಕೂಡ ಅಲ್ಲ. ಬ್ಯಾಂಕ್ ಗೃಹಸಾಲ ನೀಡಿದ್ರೂ ಡೌನ್ ಪೇಮೆಂಟ್ ನೀಡಲು ಒಂದಿಷ್ಟು ಹಣ ಕೈಯಲ್ಲಿರೋದು ಅಗತ್ಯ. ಆದ್ರೆ, ಅಷ್ಟು ಹಣ ಉಳಿತಾಯ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್.
Business Desk:ಸ್ವಂತ ಗೂಡು ಕಟ್ಟಿಕೊಳ್ಳಬೇಕೆಂಬ ಕನಸು ಯಾರಿಗೆ ತಾನೇ ಇರಲ್ಲ ಹೇಳಿ? ಆದ್ರೆ ಮನೆ ಖರೀದಿಸೋದು ಅಥವಾ ಕಟ್ಟೋದು ಅಷ್ಟು ಸುಲಭದ ಮಾತೇನಲ್ಲ. ಸಾಕಷ್ಟು ಹಣ ಬೇಕಾಗುತ್ತದೆ. ಈಗಂತೂ ಬ್ಯಾಂಕ್ ಗಳು ಗೃಹಸಾಲವನ್ನು ಸುಲಭವಾಗಿ ನೀಡುತ್ತವೆ. ಆದರೆ, ಗೃಹಸಾಲ ಕೂಡ ಪೂರ್ಣ ಪ್ರಮಾಣದಲ್ಲಿ ಸಿಗೋದಿಲ್ಲ. ಒಂದಿಷ್ಟು ಮೊತ್ತವನ್ನು ಡೌನ್ ಪೇಮೆಂಟ್ ರೂಪದಲ್ಲಿ ನೀಡಬೇಕಾಗುತ್ತದೆ. ಹೀಗಾಗಿ ಮನೆ ಖರೀದಿಸೋವಾಗ ಡೌನ್ ಪೇಮೆಂಟ್ ನೀಡಲು ನಿಮ್ಮ ಬಳಿ ಒಂದಿಷ್ಟು ಉಳಿತಾಯದ ಹಣ ಇರೋದು ಅಗತ್ಯ. ಆದರೆ, ಅಷ್ಟು ದೊಡ್ಡ ಮೊತ್ತದ ಹಣವನ್ನು ಉಳಿತಾಯ ಮಾಡೋದು ಹೇಗೆ ಎಂಬ ಚಿಂತೆ ಅನೇಕರನ್ನು ಕಾಡುತ್ತಿರುತ್ತದೆ. ಮನೆ ಖರೀದಿಸಬೇಕು ಎಂದು ಯೋಚಿಸಿದ ತಕ್ಷಣ ಒಮ್ಮೆಗೆ ಅಷ್ಟು ದೊಡ್ಡ ಮೊತ್ತದ ಹಣ ಸಂಗ್ರಹಿಸೋದು ನಿಜಕ್ಕೂ ಕಷ್ಟದ ಕೆಲಸ. ಆದರೆ, ಕೆಲವು ವರ್ಷಗಳು ಮುಂಚಿತವಾಗಿ ಈ ಬಗ್ಗೆ ಯೋಚಿಸಿ, ಯೋಜನೆ ರೂಪಿಸಿದ್ರೆ ಡೌನ್ ಪೇಮೆಂಟ್ ಗೆ ಬೇಕಾಗುವಷ್ಟು ಹಣವನ್ನುಉಳಿತಾಯ ಮಾಡೋದು ಕಷ್ಟದ ಕೆಲಸವೇನಲ್ಲ. ಹಾಗಾದ್ರೆ ಉಳಿತಾಯ ಮಾಡೋದು ಹೇಗೆ?
1.ಆದಷ್ಟು ಬೇಗ ಉಳಿತಾಯ ಆರಂಭಿಸಿ: ನೀವು ಮನೆ ಖರೀದಿಸುವ ಪ್ಲ್ಯಾನ್ ಮಾಡಿದ ತಕ್ಷಣ ಹಣ ಉಳಿಸಲು ಪ್ರಾರಂಭಿಸಿದ್ರೆ ಮತ್ತಷ್ಟು ವರ್ಷಗಳು ಕಾಯಬೇಕಾಗುತ್ತದೆ. ಅದರ ಬದಲು ನಿಮಗೆ ಉದ್ಯೋಗ ಸಿಕ್ಕ ತಕ್ಷಣದಿಂದಲೇ ಒಂದಿಷ್ಟು ಉಳಿತಾಯ ಮಾಡಲು ಪ್ರಾರಂಭಿಸಿದ್ರೆ ಮನೆ ಖರೀದಿಸುವ ನಿಮ್ಮ ಕನಸು ಆದಷ್ಟು ಬೇಗನೆ ಸಾಕಾರಗೊಳ್ಳುತ್ತದೆ. ನಿಮಗೆ ಮನೆ ಖರೀದಿಸುವ ಯೋಚನೆ ಆ ಸಮಯದಲ್ಲಿ ಇರದೇ ಇದ್ದರೂ ಉಳಿತಾಯ ಮಾಡಲು ಪ್ರಾರಂಭಿಸಿ. ಪ್ರಾರಂಭದಲ್ಲಿ ಸಣ್ಣ ಮೊತ್ತದಿಂದ ಉಳಿತಾಯ ಆರಂಭಿಸಿ, ನಂತರದ ದಿನಗಳಲ್ಲಿ ಉಳಿತಾಯದ ಮೊತ್ತವನ್ನು ಕ್ರಮೇಣ ಹೆಚ್ಚಿಸಿಕೊಳ್ಳಿ.
ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ; LIC, SBIಯಲ್ಲಿನ ನಿಮ್ಮ ಹೂಡಿಕೆಗೂ ಅಪಾಯ ಇದೆಯಾ?
2.ಬಜೆಟ್ ಸಿದ್ಧಪಡಿಸಿ: ಖರ್ಚು-ಉಳಿತಾಯಕ್ಕೆ ಸಂಬಂಧಿಸಿ ಬಜೆಟ್ ಸಿದ್ಧಪಡಿಸೋದು ಅಗತ್ಯ. ಪ್ರತಿ ತಿಂಗಳ ನಿಮ್ಮ ಆದಾಯವನ್ನು ಹೇಗೆ ವ್ಯಯಿಸಬೇಕು ಎಂಬ ಬಗ್ಗೆ ಸೂಕ್ತವಾಗಿ ಯೋಜನೆ ರೂಪಿಸಿದಾಗ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಖರ್ಚಿನ ಮೇಲೆ ಹಿಡಿತ ಸಾಧಿಸಲು ಕೂಡ ಬಜೆಟ್ ನೆರವು ನೀಡುತ್ತದೆ. ಎಲ್ಲಿ ಖರ್ಚು ಕಡಿತಗೊಳಿಸಬಹುದು ಎಂಬುದು ನಿಮಗೆ ತಿಳಿಯುತ್ತದೆ. ಹೀಗೆ ಖರ್ಚನ್ನು ಕಡಿಮೆಗೊಳಿಸಿದಾಗ ಉಳಿತಾಯ ಮಾಡಲು ಜಾಸ್ತಿ ಮೊತ್ತದ ಹಣ ಲಭಿಸುತ್ತದೆ.
3.ಸರ್ಕಾರಿ ಯೋಜನೆಗಳನ್ನು ಗಮನಿಸಿ: ಮೊದಲ ಬಾರಿಗೆ ಮನೆ ಖರೀದಿಸೋರಿಗೆ ನೆರವು ನೀಡಲು ಸರ್ಕಾರದ ಅನೇಕ ಯೋಜನೆಗಳಿವೆ. ಈ ಯೋಜನೆಗಳ ಪ್ರಯೋಜನ ಪಡೆಯುವ ಮೂಲಕ ಡೌನ್ ಪೇಮೆಂಟ್ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿಕೊಳ್ಳಬಹುದು. ಉದಾಹರಣೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅರ್ಹ ಮನೆ ಖರೀದಿದಾರರಿಗೆ ಗೃಹಸಾಲದ ಸಬ್ಸಿಡಿ ನೀಡುತ್ತದೆ. ನಗರ ಪ್ರದೇಶದ ಮಧ್ಯಮ ವರ್ಗದ ವ್ಯಕ್ತಿ ಕೂಡ ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು. ಇನ್ನು ಕೆಲವು ಬ್ಯಾಂಕ್ ಗಳು ಮೊದಲ ಬಾರಿಗೆ ಮನೆ ಖರೀದಿಸೋರಿಗೆ ವಿಶೇಷ ಗೃಹ ಹಣಕಾಸಿನ ಯೋಜನೆಗಳನ್ನು ಹೊಂದಿದ್ದು, ಕಡಿಮೆ ಡೌನ್ ಪೇಮೆಂಟ್ ಸೌಲಭ್ಯ ಕಲ್ಪಿಸಿವೆ.
4.ಹಣಕಾಸು ಸಲಹೆ ಪಡೆಯಿರಿ: ನೀವು ಯಾವಾಗ ಮನೆ ಖರೀದಿಸುತ್ತೀರಿ? ಎಷ್ಟು ಮೊತ್ತದ ಹಣವನ್ನು ಡೌನ್ ಪೇಮೆಂಟ್ ಗೆ ಸಂಗ್ರಹಿಸಬೇಕು ಎಂಬ ಬಗ್ಗೆ ಹಣಕಾಸು ತಜ್ಞರ ಸಲಹೆ ಪಡೆಯಿರಿ. ಅವರು ನಿಮಗೆ ಎಷ್ಟು ಮೊತ್ತದ ಹಣ ಉಳಿತಾಯ ಮಾಡಬೇಕು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಹಾಗೆಯೇ ವಿವಿಧ ಬ್ಯಾಂಕ್ ಗಳ ಗೃಹಸಾಲದ ಬಗ್ಗೆ ಮಾಹಿತಿ ನೀಡುವ ಜೊತೆಗೆ ನಿಮಗೆ ಯಾವುದು ಸೂಕ್ತ ಎಂದು ತಿಳಿಸುತ್ತಾರೆ.
ಎಲ್ಐಸಿ ಹೊಸ ಬಿಮಾ ಬಚತ್ ಪ್ಲ್ಯಾನ್; ತಿಂಗಳಿಗೆ 1,791ರೂ. ಹೂಡಿಕೆ ಮಾಡಿದ್ರೆ 5ಲಕ್ಷ ರೂ. ರಿಟರ್ನ್
5.ಜಂಟಿ ಗೃಹಸಾಲ ಪಡೆಯಿರಿ: ಗೃಹಸಾಲವನ್ನು ಜಂಟಿಯಾಗಿ ಪಡೆಯುವ ಮೂಲಕ ಕೂಡ ನೀವು ಡೌನ್ ಪೇಮೆಂಟ್ ಹೊರೆ ತಗ್ಗಿಸಿಕೊಳ್ಳಬಹುದು. ಪತಿ ಹಾಗೂ ಪತ್ನಿ ಜಂಟಿಯಾಗಿ ಗೃಹಸಾಲ ಪಡೆಯೋದ್ರಿಂದ ಅನೇಕ ಪ್ರಯೋಜನಗಳು ಕೂಡ ಇವೆ. ನಿಮ್ಮ ಸಾಲದ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಇದು ನೆರವು ನೀಡುತ್ತದೆ. ಜೊತೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಕೂಡ ಇದು ನೆರವು ನೀಡುತ್ತದೆ.