
ನವದೆಹಲಿ(ಜೂ.23): ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್ ಹಾಗೂ 10 ಅಂಕಿಗಳ ಕಾಯಂ ಖಾತಾ ಸಂಖ್ಯೆ (ಪ್ಯಾನ್)ಗಳನ್ನು ಪರಸ್ಪರ ಜೋಡಣೆ ಮಾಡುವುದಕ್ಕೆ ಹಲವು ಬಾರಿ ಗಡುವು ನೀಡಿದರೂ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಆಧಾರ್- ಪ್ಯಾನ್ ಲಿಂಕ್‌ಗೆ ಜೂ.30ರ ಗಡುವು ನೀಡಿರುವ ಸರ್ಕಾರ, ಆ ಕಾಲಮಿತಿಯೊಳಗೆ ಜೋಡಣೆ ಮಾಡದವರಿಗೆ ಸಂಬಳ ಸಿಗದಂತೆ ಮಾಡಲು ಹೊರಟಿದೆ.
ಮಾಸಾಂತ್ಯದೊಳಗೆ ನೌಕರರ ಆಧಾರ್- ಪ್ಯಾನ್ ಲಿಂಕ್ ಆಗಬೇಕು. ಆ ಪ್ರಕ್ರಿಯೆ ಪೂರ್ಣಗೊಳಿಸಲು ಯಾವುದೇ ನೌಕರ ವಿಫಲನಾದರೆ, ಆತನಿಗೆ ಮುಂದಿನ ತಿಂಗಳಿನಿಂದ ವೇತನ ಕೊಡಬೇಡಿ ಎಂದು ಕಂಪನಿಗಳಿಗೆ ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಜೂ.30ರೊಳಗೆ ಆಧಾರ್ ಜತೆ ಪ್ಯಾನ್ ನಂಬರ್ ಜೋಡಣೆ ಮಾಡದಿದ್ದರೆ, ಆ ನಂತರ ಪ್ಯಾನ್ ಸಂಖ್ಯೆ ನಿಷ್ಕಿ್ರಯವಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಅಡಿಯ 41ನೇ ಪರಿಚ್ಛೇದದಡಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.
ತೆರಿಗೆ ವಂಚನೆ ಹಾಗೂ ಅಕ್ರಮಗಳನ್ನು ತಡೆಗಟ್ಟಲು 10 ಅಂಕಿಗಳ ಪ್ಯಾನ್ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆ ಬಳಸುತ್ತಿದೆ. ಪ್ಯಾನ್ ಹೊಂದಿರುವ ಯಾವುದೇ ವ್ಯಕ್ತಿ ನಡೆಸುವ ಹಣಕಾಸು ವ್ಯವಹಾರಗಳನ್ನು ಪತ್ತೆ ಹಚ್ಚಬಹುದಾಗಿದೆ. ಆ ಪ್ರಕ್ರಿಯೆಯನ್ನು ಇನ್ನಷ್ಟುಸದೃಢಗೊಳಿಸಲು ಪ್ಯಾನ್ ಜತೆ ಆಧಾರ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದಕ್ಕೆ ಕಳೆದ ವರ್ಷವೇ ಅಂತಿಮ ಗಡುವು ಇತ್ತಾದರೂ, ಕೊರೋನಾ ಉಪಟಳದ ಹಿನ್ನೆಲೆಯಲ್ಲಿ ಅದನ್ನು ತೆರಿಗೆ ಇಲಾಖೆ ವಿಸ್ತರಿಸಿತ್ತು.
ಪ್ಯಾನ್- ಆಧಾರ್ ಜೋಡಣೆಗೆ ತೆರಿಗೆ ಇಲಾಖೆ ಈ ರೀತಿ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಭವಿಷ್ಯ ನಿಧಿಯ ಏಕರೂಪದ ಖಾತಾ ಸಂಖ್ಯೆ (ಪಿಎಫ್ ಯುಎಎನ್) ಜತೆ ಆಧಾರ್ ಸಂಖ್ಯೆಯನ್ನು ನೌಕರರು ಲಿಂಕ್ ಮಾಡಬೇಕು. ಮಾಡದಿದ್ದವರಿಗೆ ಸೆ.1ರಿಂದ ಕಂಪನಿಗಳು ತಮ್ಮ ಪಾಲಿನ ಭವಿಷ್ಯ ನಿಧಿಯನ್ನು ಸಂದಾಯ ಮಾಡಬಾರದು ಎಂದು ಈಗಾಗಲೇ ಸೂಚನೆ ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.