
ಮುಂಬೈ (ಫೆ.24): ಉಕ್ರೇನ್ (Ukraine) ಪೂರ್ವ ಪ್ರಾಂತ್ಯದಲ್ಲಿ ರಷ್ಯಾದ (Russia) ಮಿಲಿಟರಿ ಪಡೆ ನಡೆಸುತ್ತಿರೋ ಕಾರ್ಯಾಚರಣೆ ಇಂದು (ಫೆ.24) ಭಾರತದ ಷೇರು ಮಾರಕಟ್ಟೆಯಲ್ಲಿ ತಲ್ಲಣ ಸೃಷ್ಟಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (BSE)ಸೂಚ್ಯಂಕ ಸೆನ್ಸೆಕ್ಸ್ (Sensex) 2,702 ಪಾಯಿಂಟ್ಸ್ ಕುಸಿತ ಕಂಡಿದ್ದು, ದಿನದ ಅಂತ್ಯದಲ್ಲಿ 54,530ರಲ್ಲಿ ಮುಕ್ತಾಯ ಕಂಡಿದೆ. ಮತ್ತೊಂದೆಡೆ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (NSE) ಸೂಚ್ಯಂಕ ನಿಫ್ಟಿ (Nifty)ಕೂಡ 815.30 ಪಾಯಿಂಟ್ಸ್ ಇಳಿಕೆ ಕಂಡಿದ್ದು, 16,248ರಲ್ಲಿ ಮುಕ್ತಾಯಗೊಂಡಿದೆ.
ಇಂದು (ಫೆ.24) ಬೆಳಗ್ಗೆ ಭಾರತದ ಷೇರು ಮಾರುಕಟ್ಟೆ ವಹಿವಾಟು ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಹೂಡಿಕೆದಾರರು 7.5 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಹಣ ಕಳೆದುಕೊಂಡರು. ಕಳೆದ ಸೆಷನ್ ನಲ್ಲಿ 255.68ಲಕ್ಷ ಕೋಟಿ ರೂ.ಇದ್ದ ಹೂಡಿಕೆದಾರರ ಸಂಪತ್ತು 248.09 ಕೋಟಿ ರೂ. ಗೆ ಕುಸಿಯುತ್ತಿದ್ದಂತೆ ಬಿಎಸ್ ಇ ಲಿಸ್ಟೆಡ್ ಸಂಸ್ಥೆಗಳ ಮಾರ್ಕೆಟ್ ಕ್ಯಾಪ್ 7.59 ಲಕ್ಷ ಕೋಟಿ ರೂ.ಗೆ ಕುಸಿತ ಕಂಡಿತ್ತು.ಮುಂಬೈ ಷೇರುಪೇಟೆ (Mumbai Share market) ಸೂಚ್ಯಂಕ ಸೆನ್ಸೆಕ್ಸ್ (index Sensex) ಗುರುವಾರ (ಫೆ.24) 1850 ಪಾಯಿಂಟ್ಸ್ ಕುಸಿತದೊಂದಿಗೆ ವಹಿವಾಟು ಪ್ರಾರಂಭಿಸಿತ್ತು.ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (NSE) ಸೂಚ್ಯಂಕ ನಿಫ್ಟಿ (Nifty) ಕೂಡ 414 ಅಂಕಗಳ ಭಾರೀ ಕುಸಿತದೊಂದಿಗೆ 16,648 ರ ಕನಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಪ್ರಾರಂಭಿಸಿತ್ತು.ನಿಫ್ಟಿಯು ಸುಮಾರು ಶೇ. 4.78ರಷ್ಟು ಕೆಟ್ಟ ಕುಸಿತವನ್ನು ದಾಖಲಿಸಿದ್ದು, 200 ಡಿಎಂಎಗಿಂತ ಕೆಳ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿದೆ.
ಷೇರು ಮಾರುಕಟ್ಟೆಯ ಇಡೀ ದಿನದ ವಹಿವಾಟಿನಲ್ಲಿ ಒಂದೇ ಒಂದು ಷೇರು ಕೂಡ ಗಳಿಕೆ ದಾಖಲಿಸಿಲ್ಲ.ಆದ್ರೆ ಕೆಲವು ಷೇರುಗಳು ಕಡಿಮೆ ದರದಲ್ಲಿ ಹೂಡಿಕೆದಾರರನ್ನು ಆಹ್ವಾನಿಸಿದವು ಆ ಮೂಲಕ ಶೀಘ್ರವಾಗಿ ಖರೀದಿಯಲ್ಲಿ ವೇಗ ಗಳಿಸಿದವು. ಪಿಎಸ್ ಯು ಬ್ಯಾಂಕು ಹಾಗೂ ರಿಯಾಲ್ಟಿ ವಲಯದ ಷೇರುಗಳು ಹೆಚ್ಚಿನ ಮಾರಾಟ ದಾಖಲಿಸಿದವು. ದಿನದ ಅಂತ್ಯದಲ್ಲಿ ಎಫ್ ಡಿಸಿ, ಸ್ಟಾರ್ ಸಿಮೆಂಟ್, ರಾಡಿಕೋ, ಸುಪ್ರಜಿತ್, ಸುವಿನ್ ಫಾರ್ಮ್ಯಾಸ್ಯುಟಿಕಲ್ಸ್, ಹಾಗೂ ಟ್ರೆಂಟ್ ಕಂಪನಿ ಷೇರುಗಳು ಸ್ವಲ್ಪ ಮಟ್ಟಿಗೆ ಏರಿಕೆ ದಾಖಲಿಸಿವೆ.
ಫೆ.24ರ ಬೆಳಗ್ಗೆ 6 ಗಂಟೆಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದರು. ಇದ್ರಿಂದ ಹೂಡಿಕೆದಾರರು ಸಹಜವಾಗಿಯೇ ಹೆಚ್ಚು ಜಾಗೃತರಾದರು ಪರಿಣಾಮ ಅಪಾಯಕಾರಿ ಕ್ಷೇತ್ರಗಳಲ್ಲಿನ ಹೂಡಿಕೆಯನ್ನು ಅತ್ಯಂತ ಸುರಕ್ಷಿತವಾದ ಚಿನ್ನ, ಬೆಳ್ಳಿ ಹಾಗೂ ಕಚ್ಚಾ ತೈಲಕ್ಕೆ ಸಂಬಂಧಿಸಿದ ಷೇರುಗಳಿಗೆ ವರ್ಗಾಯಿಸಿದರು. ಇದ್ರಿಂದ ಭಾರತದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಷೇರುಮಾರುಕಟ್ಟೆಯಲ್ಲಿ ಕೂಡ ಕುಸಿತ ಕಂಡುಬಂದಿದೆ.
ಮಾರುಕಟ್ಟೆಯ ಪ್ರಾರಂಭದಲ್ಲಿ ಸುಮಾರು 270 ಷೇರುಗಳು ಏರಿಕೆ ಕಂಡಿದ್ರೆ, 1853 ಷೇರುಗಳು ಕುಸಿತ ದಾಖಲಿಸಿವೆ. ಇನ್ನು 79 ಷೇರುಗಳು ಬದಲಾಗದೆ ಉಳಿದಿವೆ. ಯುಪಿಎಲ್, ಟಾಟಾ ಮೋಟಾರ್ಸ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಐಸಿಐಸಿಐ ಬ್ಯಾಂಕ್ ನಿಫ್ಟಿಯಲ್ಲಿ ಹೆಚ್ಚು ನಷ್ಟ ಅನುಭವಿಸಿವೆ.ನೆಸ್ಲೆ ಮಾತ್ರ ಅತ್ಯಲ್ಪ ಲಾಭ ಗಳಿಸಿದೆ.
ಗಗನಕ್ಕೇರಿದ ಕಚ್ಚಾ ತೈಲ ಬೆಲೆ
ರಷ್ಯಾ-ಉಕ್ರೇನ್ ಸಂಘರ್ಷ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಗುರುವಾರ ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು,ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 105 ಡಾಲರ್ ಏರಿಕೆಯಾಗಿದೆ.2014ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹೆಚ್ಚಳ ಕಂಡುಬಂದಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿದೆ.ಅಂತಾರಾಷ್ಟ್ರೀಯ (International) ಮಾರುಕಟ್ಟೆಯಲ್ಲಿ ಚಿನ್ನದ (Gold) ಬೆಲೆಯಲ್ಲಿ ಕೂಡ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ.
ಚಿನ್ನದ ಬೆಲೆ ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ (ಫೆ.24) ಚಿನ್ನದ ಬೆಲೆಯಲ್ಲಿ ಶೇ.1.1 ಹೆಚ್ಚಳ ಕಂಡುಬಂದಿದ್ದು, ಪ್ರತಿ ಔನ್ಸ್ ಗೆ 1,932 ಡಾಲರ್ ಏರಿಕೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.