Russia Ukraine Crisis:ಭಾರತದ ಅಡುಗೆಮನೆ ಮೇಲೂ ಪರಿಣಾಮ ಬೀರಲಿದೆ ಈ ಸಂಘರ್ಷ! ಯಾವೆಲ್ಲ ಕ್ಷೇತ್ರಕ್ಕಿದೆ ಈ ರಾಷ್ಟ್ರಗಳ ನಂಟು?

By Suvarna News  |  First Published Feb 24, 2022, 4:04 PM IST

*ಭಾರತದ ಆರ್ಥಿಕತೆ ಮೇಲೆ ಪರೋಕ್ಷ ಪರಿಣಾಮ
*ಭಾರತಕ್ಕೆ ಶೇ.90ರಷ್ಟು ಸೂರ್ಯಕಾಂತಿ ಎಣ್ಣೆ ರಷ್ಯಾ ಹಾಗೂ ಉಕ್ರೇನ್ ನಿಂದ ಆಮದು
*ಅನಿಲ ಬೆಲೆ ಜೇಬು ಸುಡೋ ಸಾಧ್ಯತೆ
*ಔಷಧ ತಯಾರಿಕಾ ವಲಯಕ್ಕೂ ಆಘಾತ


Business Desk:ರಷ್ಯಾ (Russia)-ಉಕ್ರೇನ್(Ukraine) ಸಂಘರ್ಷ ಅಂತಾರಾಷ್ಟ್ರೀಯ (International) ಮಟ್ಟದಲ್ಲಿ ಅನೇಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಲಿದೆ. ರಷ್ಯಾದೊಂದಿಗೆ ಮಾತ್ರವಲ್ಲ ಉಕ್ರೇನ್ ಜೊತೆಗೂ ವ್ಯಾಪಾರ (Trade) ಸಂಬಂಧ ಹೊಂದಿರೋ ಕಾರಣ ಭಾರತದ (India) ಆರ್ಥಿಕತೆ (Economy) ಮೇಲೆ ಕೂಡ ಈ ಯುದ್ಧ ಪರಿಣಾಮ ಬೀರಲಿದೆ. ಅದ್ರಲ್ಲೂ ಭಾರತದ ಅಡುಗೆಮನೆ (Kitchen) ಮೇಲೆ ಈ ಯುದ್ಧ ನೇರ ಪರಿಣಾಮ ಬೀರಲಿದೆ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು (Economists). ಇದರ ಜೊತೆಗೆ ಔಷಧ ವಲಯ (pharma sector), ಕಚ್ಚಾ ತೈಲ ಬೆಲೆ (Crudeoil price) ಹಾಗೂ ಎಲ್ ಎನ್ ಜಿ (LNG) ಕೈಗಾರಿಕೆಗಳ ಮೇಲೂ ಈ ಯುದ್ಧ ಪರಿಣಾಮ ಬೀರಲಿದೆ. ಹಾಗಾದ್ರೆ ಈ ವಲಯಗಳ ಮೇಲೆ ರಷ್ಯಾ-ಉಕ್ರೇನ್ ಸಂಘರ್ಷ ಹೇಗೆ ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ.

ಗೃಹಿಣಿಯರಿಗೆ ತಲೆನೋವು: ರಷ್ಯಾ-ಉಕ್ರೇನ್ ಭೌಗೋಳಿಕವಾಗಿ ಭಾರತದಿಂದ ದೂರವಿರೋ ಕಾರಣ ಈ ಯುದ್ಧದಿಂದ ನಮಗೇನೂ ನಷ್ಟವಿಲ್ಲ ಎಂದು ಭಾರತೀಯರು ನಿರಾಳರಾಗಿರುವಂತೆ ಇಲ್ಲ. ಈ ಯುದ್ಧ ಪರೋಕ್ಷವಾಗಿ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಿ ನಮ್ಮೆಲ್ಲರ ಜೇಬಿಗೆ ಕತ್ತರಿ ಹಾಕೋ ಸಾಧ್ಯತೆಯಿದೆ. ಅದ್ರಲ್ಲೂ ಮುಖ್ಯವಾಗಿ ಗೃಹಿಣಿಯರಿಗೆ ಮುಂದಿನ ದಿನಗಳಲ್ಲಿ ದೊಡ್ಡ ತಲೆನೋವು ಎದುರಾಗೋ ಸಾಧ್ಯತೆಯಿದೆ. ಇದಕ್ಕೆ ಕಾರಣ ಸೂರ್ಯಕಾಂತಿ ಎಣ್ಣೆ (sunflower oil). ಹೌದು, ಭಾರತ ಶೇ.90ರಷ್ಟು ಸೂರ್ಯಕಾಂತಿ ಎಣ್ಣೆಯನ್ನು (sunflower oil) ರಷ್ಯಾ (Russia) ಹಾಗೂ ಉಕ್ರೇನ್ ನಿಂದ (Ukraine) ಆಮದು (Import) ಮಾಡಿಕೊಳ್ಳುತ್ತಿದೆ. 

Tap to resize

Latest Videos

undefined

Russia Ukraine Crisis:ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 100 ಡಾಲರ್ ಏರಿಕೆ; ಗಗನಕ್ಕೇರಿದ ಚಿನ್ನದ ದರ; ಭಾರತದ ಮೇಲೇನು ಪರಿಣಾಮ?

ಭಾರತದಲ್ಲಿ ಅಡುಗೆಗೆ ಬಳಸೋ ತೈಲಗಳಲ್ಲಿ ಸೂರ್ಯಕಾಂತಿ ಎಣ್ಣೆ ಪ್ರಮುಖ ಸ್ಥಾನ ಗಳಿಸಿದೆ. ಈಗಾಗಲೇ ಅಡುಗೆ ಎಣ್ಣೆ ಬೆಲೆಯೇರಿಕೆಯಿಂದ ತತ್ತರಿಸಿರೋ ಗೃಹಿಣಿಯರಿಗೆ ಈಗ ಮತ್ತೊಮ್ಮೆ ಶಾಕ್ ಎದುರಾಗಲಿದೆ. ತಾಳೆ ಎಣ್ಣೆ ಬಳಿಕ ಭಾರತ ಆಮದು ಮಾಡಿಕೊಳ್ಳೋ ಎರಡನೇ ಅತೀದೊಡ್ಡ ಪ್ರಮಾಣದ ಅಡುಗೆಎಣ್ಣೆ ಸೂರ್ಯಕಾಂತಿ ಎಣ್ಣೆ. 2021ರಲ್ಲಿ ಭಾರತ 1.89 ಮಿಲಿಯನ್ ಟನ್ಸ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಇದ್ರಲ್ಲಿ ಶೇ.70ರಷ್ಟನ್ನು ಉಕ್ರೇನ್ ನಿಂದಲೇ ಆಮದು ಮಾಡಿಕೊಳ್ಳಲಾಗಿದೆ. ಶೇ.20ರಷ್ಟನ್ನು ರಷ್ಯಾ ಹಾಗೂ ಉಳಿದ ಶೇ.10ರಷ್ಟನ್ನು ಅರ್ಜೆಂಟೈನಾದಿಂದ ಭಾರತ ಆಮದು ಮಾಡಿಕೊಂಡಿದೆ.

ಪ್ರತಿ ತಿಂಗಳು ಭಾರತ ಸುಮಾರು 2ಲಕ್ಷ ಟನ್ ಸೂರ್ಯಕಾಂತಿ ಬೀಜದ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಕೆಲವೊಮ್ಮೆ ಈ ಪ್ರಮಾಣ ತಿಂಗಳಿಗೆ ಮೂರು ಲಕ್ಷ ಟನ್ ಗಳಿಗೆ ತಲುಪುತ್ತದೆ ಕೂಡ. ರಷ್ಯಾದೊಂದಿಗಿನ ಬಿಕ್ಕಟ್ಟು ಕಾವು ಪಡೆದುಕೊಳ್ಳುತ್ತಿದ್ದಂತೆ ಉಕ್ರೇನ್ ಫೆಬ್ರವರಿಯಲ್ಲಿ ಒಂದೇಒಂದು ಶಿಪ್ ಸೂರ್ಯಕಾಂತಿ ಎಣ್ಣೆಯನ್ನು ಭಾರತಕ್ಕೆ  ಕಳುಹಿಸಿಲ್ಲ. ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಸಾಮಾನ್ಯವಾಗಿ ಉಕ್ರೇನ್ ನಿಂದ 1.5ನಿಂದ 2 ಮಿಲಿಯನ್ ಟನ್ ಗಳಷ್ಟು ಸೂರ್ಯಕಾಂತಿ ಎಣ್ಣೆ ಭಾರತಕ್ಕೆ ಆಮದು ಆಗುತ್ತಿತ್ತು. ಆದ್ರೆ ಈ ವರ್ಷ ಆಗಿಲ್ಲ. ಪರಿಸ್ಥಿತಿ 2-3 ವಾರಗಳ ಕಾಲ  ಹೀಗೆ ಮುಂದುವರಿದ್ರೆ ಭಾರತದ ಮಾರುಕಟ್ಟೆಯಲ್ಲಿ ಒತ್ತಡ ಸೃಷ್ಟಿಯಾಗೋದು ಖಚಿತ ಎನ್ನುತ್ತಾರೆ ಭಾರತೀಯ ವನಸ್ಪತಿ ತೈಲ ಉತ್ಪಾದಕರ ಸಂಘಟನೆ ಅಧ್ಯಕ್ಷ ಸುಧಾಕರ್ ದೇಸಾಯಿ.

ಅನಿಲ ಬೆಲೆ ಜೇಬು ಸುಡೋ ಸಾಧ್ಯತೆ: ಭಾರತದ ಅರ್ಧಕ್ಕಿಂತಲೂ ಹೆಚ್ಚಿನ ಅನಿಲ (Natural Gas)ಬೇಡಿಕೆಯನ್ನು ದ್ರವೀಕೃತ ನೈಸರ್ಗಿಕ ಅನಿಲ (LNG) ರೂಪದಲ್ಲಿ  ಉಕ್ರೇನ್ ಪೂರೈಸುತ್ತಿದೆ. ಭಾರತದ ಅನಿಲ ಬೇಡಿಕೆಯ ಒಂದು ಸಣ್ಣ ಪ್ರಮಾಣವನ್ನಷ್ಟೇ ರಷ್ಯಾ ಪೂರೈಸುತ್ತಿದೆ. ಹೀಗಾಗಿ ರಷ್ಯಾ-ಉಕ್ರೇನ್ ಸಂಘರ್ಷ ಭಾರತದಲ್ಲಿ ನೈಸರ್ಗಿಕ ಅನಿಲ ಪೂರೈಕೆ ಮೇಲೆ ನೇರ ಪರಿಣಾಮ ಬೀರಲಿದೆ. ಅಡುಗೆ ಅನಿಲ ಬೆಲೆಯೇರಿಕೆಯಿಂದ ಈಗಾಗಲೇ ಜನಸಾಮಾನ್ಯರು ತತ್ತರಿಸಿದ್ದಾರೆ. ಯುದ್ಧ ಪರಿಸ್ಥಿತಿ ಹೀಗೆ ಮುಂದುವರಿದ್ರೆ ಅಡುಗೆ ಅನಿಲ ಬೆಲೆ ಮತ್ತೆ ಗಗನಕ್ಕೇರೋ ಸಾಧ್ಯತೆಯಿದೆ.

Russia Ukraine Crisis: ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೋಗಬೇಕಿದ್ದ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್!

ಔಷಧ ತಯಾರಿಕಾ ವಲಯಕ್ಕೆ ಆಘಾತ: ಉಕ್ರೇನ್ ಗೆ ಭಾರತದ ರಫ್ತಿನಲ್ಲಿ ಫಾರ್ಮಾಸ್ಯುಟಿಕಲ್ ಉತ್ಪನ್ನಗಳ ಪ್ರಮಾಣ ಹೆಚ್ಚಿದೆ. ಉಕ್ರೇನ್ ಗೆ ಔಷಧ ಉತ್ಪನ್ನಗಳನ್ನು ರಫ್ತು ಮಾಡೋ ಮೂರನೇ ದೊಡ್ಡ ರಾಷ್ಟ್ರ ಭಾರತ. ಜರ್ಮನಿ ಹಾಗೂ ಫ್ರಾನ್ಸ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. ರಾಂಬಾಕ್ಸಿ, ಸನ್ ಗ್ರೂಪ್ ಹಾಗೂ ಡಾ.ರೆಡ್ಡಿ ಲ್ಯಾಬೋರೇಟರಿಗಳು ಉಕ್ರೇನ್ ನಲ್ಲಿ ಪ್ರತಿನಿಧಿಗಳ ಕಚೇರಿಯನ್ನು ಕೂಡ ಹೊಂದಿವೆ. ಹೀಗಾಗಿ ಭಾರತದ ಔಷಧ ಕಂಪನಿಗಳ ವ್ಯವಹಾರದ ಮೇಲೂ ಈ ಯುದ್ಧ ಪರಿಣಾಮ ಬೀರಲಿದೆ. 

click me!