ಕೇಂದ್ರ ಬಜೆಟ್‌ 2025: ವಾಡಿ-ಗದಗ್‌ ರೈಲ್ವೆಗೆ ಮೀಠಾ, ಯಾದಗಿರಿ-ಆಲಮಟ್ಟಿಗೆ ಖಠ್ಠಾ...!

Published : Feb 02, 2025, 06:00 AM IST
ಕೇಂದ್ರ ಬಜೆಟ್‌ 2025: ವಾಡಿ-ಗದಗ್‌ ರೈಲ್ವೆಗೆ ಮೀಠಾ, ಯಾದಗಿರಿ-ಆಲಮಟ್ಟಿಗೆ ಖಠ್ಠಾ...!

ಸಾರಾಂಶ

12 ಲಕ್ಷ ರು.ಗಳವರೆಗಿನ ತೆರಿಗೆ ವಿನಾಯ್ತಿ ಬಹುತೇಕ ಮಧ್ಯಮ ವರ್ಗದವರ ಖುಷಿಗೆ ಕಾರಣವಾಗಿದೆಯಲ್ಲದೆ, ರಾಜ್ಯದ ರೈಲ್ವೆ ವಲಯಕ್ಕೆ ಈ ಬಾರಿ 7,564 ಕೋಟಿ ರು.ಗಳ ಮೀಸಲಿಟ್ಟಿರುವುದು ಹೊಸ ಆಶಾಭಾವ ಮೂಡಿಸಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮೂಲಕ ಹೆಚ್ಚಿನ ಅನುಕೂಲ ನಿರೀಕ್ಷಿಸಿದಂತಿದೆ.

ಯಾದಗಿರಿ(ಫೆ.02):  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌-2025-26ನೇ ಸಾಲಿನ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಬಿಜೆಪಿ ಪಕ್ಷ ಇದನ್ನು ದೂರಗಾಮಿ, ಐತಿಹಾಸಿಕ ಬಜೆಟ್‌ ಎಂದು ಶ್ಲಾಘಿಸಿದರೆ, ಕನ್ನಡಿಗರಿಗೆ, ಅದರಲ್ಲೂ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ವಿಪಕ್ಷಗಳು ಟೀಕೆಗಿಳಿದಿವೆ.

12 ಲಕ್ಷ ರು.ಗಳವರೆಗಿನ ತೆರಿಗೆ ವಿನಾಯ್ತಿ ಬಹುತೇಕ ಮಧ್ಯಮ ವರ್ಗದವರ ಖುಷಿಗೆ ಕಾರಣವಾಗಿದೆಯಲ್ಲದೆ, ರಾಜ್ಯದ ರೈಲ್ವೆ ವಲಯಕ್ಕೆ ಈ ಬಾರಿ 7,564 ಕೋಟಿ ರು.ಗಳ ಮೀಸಲಿಟ್ಟಿರುವುದು ಹೊಸ ಆಶಾಭಾವ ಮೂಡಿಸಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮೂಲಕ ಹೆಚ್ಚಿನ ಅನುಕೂಲ ನಿರೀಕ್ಷಿಸಿದಂತಿದೆ.

Budget 2025: ನಿವೃತ್ತರು ಹಾಗೂ ಪಿಂಚಣಿ ಪಡೆಯೋರಿಗೆ ಬಜೆಟ್‌ನ ಲಾಭಗಳೇನು?

ಇನ್ನು, ಬ್ರಿಟಿಷ್‌ ಕಾಲದಲ್ಲೇ ಸರ್ವೆ ನಡೆಸಿದ್ದ, ಬಹು ನಿರೀಕ್ಷಿತ ಯಾದಗಿರಿ-ಆಲಮಟ್ಟಿ ರೈಲ್ವೆ ಮಾರ್ಗದ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಚರ್ಚಿಸದಿರುವುದು ಹೋರಾಟಗಾರರ ಬೇಸರಕ್ಕೆ ಕಾರಣವಾದರೆ, ವಾಡಿ-ಗದಗ್‌ ರೈಲ್ವೆ ಮಾರ್ಗಕ್ಕೆ 549.45 ಕೋಟಿ ರು.ಗಳ ಅನುದಾನ ಘೋಷಿಸಿರುವುದು ಖುಷಿ ಮೂಡಿಸಿದೆ. ತೆರಿಗೆ ವಿಚಾರದಲ್ಲಿ ನೋಡೋದಾದರೆ ಮಧ್ಯಮ ವರ್ಗಕ್ಕೆ ಇದು ಒಳ್ಳೆಯ ಬಜೆಟ್‌ ಎಂದೂ ವಿಶ್ಲೇಷಿಲಾಗುತ್ತಿದೆ. ಕೇಂದ್ರ ಬಜೆಟ್‌ ಕುರಿತು, ಯಾದಗಿರಿ ಜಿಲ್ಲೆಯ ಜನಸಾಮಾನ್ಯರ, ರಾಜಕೀಯ ಗಣ್ಯರ, ವ್ಯಾಪಾರಸ್ಥರು ಮುಂತಾದವರು ಏನಂತಾರೆ ಅನ್ನೋದರ ಕುರಿತು ಸಂಗ್ರಹ ಇಲ್ಲಿದೆ.

*ಒಳ್ಳೆಯ ಬಜೆಟ್‌* : ಹಾಗೆ ನೋಡಿದರೆ ಜನಸಾಮಾನ್ಯರಿಗೆ ಇದು ಒಳ್ಳೆಯ ಬಜೆಟ್‌, ಈ ಹಿಂದೆಯೇ ಈ ಅಂಶಗಳನ್ನು ನಿರೀಕ್ಷಿಸಲಾಗಿತ್ತು. ಮಧ್ಯಮವರ್ಗದವರಿಗೆ 12 ಲಕ್ಷ ರು.ಗಳ ವರೆಗಿನ ತೆರಿಗೆ ವಿನಾಯ್ತಿ ಅನುಕೂಲ. ಸಣ್ಣ ಕೈಗಾರಿಕೆಗಳಿಗೆ, ಕೃಷಿ ವಲಯಕ್ಕೆ ಆದ್ಯತೆ ನೀಡಲಾಗಿದೆ. ವಾಡಿ- ಗದಗ್‌ ರೈಲ್ವೆ ಮಾರ್ಗಕ್ಕೆ 549 ಕೋಟಿ ಅನುದಾನ ಘೋಷಣೆ ಸ್ವಾಗತಾರ್ಹ. ಯಾದಗಿರಿ-ಆಲಮಟ್ಟಿ ಮಾರ್ಗದ ಬಗ್ಗೆ ಗಮನ ಹರಿಸಿದ್ದರೆ ಈ ಭಾಗದ ಅತ್ಯಂತ ಹಳೆಯ ಯೋಜನೆ ಜಾರಿಗೆ ಅನುಕೂಲವಾಗುತ್ತಿತ್ತು. : ಶಶಿಧರ್‌ ಪಾಟೀಲ್‌, ಹಿರಿಯ ಲೆಕ್ಕ ಪರಿಶೋಧಕರು. ಯಾದಗಿರಿ.

*ವಿಕಲಚೇತನರ ನಿರಾಶಾದಾಯಕ* : ವಿಕಲಚೇತನರಿಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಮಾಸಾಶನವನ್ನು ಹೆಚ್ಚಿಸಬಹುದು ಎಂದು ನಿರೀಕ್ಷೆಯಲ್ಲಿದ್ದೆವು. ಆದರೆ, ಈ ವರ್ಷವು ಸಹ ಯಾವುದೇ ಘೋಷಣೆ ಮಾಡಿಲ್ಲ. ಹಲವಾರು ವರ್ಷಗಳಿಂದ ಹೋರಾಟ ಮಾಡಿದರೂ ಪ್ರತಿಫಲ ಸಿಕ್ಕಿಲ್ಲ. : ಸಂಗನಗೌಡ ಧನರಡ್ಡಿ ಕೊಡೇಕಲ್‌, ವಿಭಾಗೀಯ ಅಧ್ಯಕ್ಷ, ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟ.

*ತೆರಿಗೆ ವಿನಾಯ್ತಿ ಖುಷಿ* : ಈ ಬಜೆಟ್‌ನಲ್ಲಿ ಮಧ್ಯಮವರ್ಗದವರಿಗೆ ಆದಾಯ ತೆರಿಗೆಯಲ್ಲಿ ರಿಯಾಯಿತಿ ನೀಡಿದ್ದು, ಖುಷಿಯ ವಿಚಾರ. ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳಿಗೆ ಈ ಬಜೆಟ್‌ನಲ್ಲಿ ಉತ್ತೇಜನ ನೀಡಲಾಗಿದೆ. ಪ್ರಮುಖವಾಗಿ ತೆರಿಗೆ ಮುಕ್ತ ಆದಾಯದ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹಿಂದಿನ ಬಜೆಟ್‌ಗಿಂತ ಇದು ಉತ್ತಮವಾಗಿದೆ. ಶಿವಶಂಕರ್‌ ಧನ್ನೂರ, ಗ್ರಾ.ಪಂ. ಮಾಜಿ ಸದಸ್ಯರು, ಬೂದಿಹಾಳ.

*ಸಮಾಧಾನಕರ ಬಜೆಟ್* : ಕೇಂದ್ರದ ಬಜೆಟ್ ಮೈಕ್ರೋ ಆಧಾರಿತ ಉದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಂಡಿಸಿರುವಂತಾಗಿದ್ದು, ಉದ್ಯಮಿದಾರರಿಗೆ ಅನೂಕೂಲಕರವಾಗಲಿದೆ. ವ್ಯಾಪಾರ-ವಹಿವಾಟುಗಳ ಮೇಲಿನ ತೆರಿಗೆಯ ಪ್ರಮಾಣವನ್ನು ಇನ್ನಷ್ಟೂ ತಗ್ಗಿಸಬಹುದೆಂಬ ನಿರೀಕ್ಷೆ ಇತ್ತಾದರೂ, ಈ ಬಜೆಟ್ ಸಮಾಧಾನಕರವಾಗಿದೆ. : ಸಂಗಣ್ಣ ಬಿಜಾಪುರ, ವ್ಯಾಪಾರಸ್ಥರು, ಕೊಡೇಕಲ್‌

*ಬಿಹಾರ್‌ ಬಜೆಟ್‌* : ಕೇಂದ್ರ ಬಜೆಟ್‌ ಬಿಹಾರ ಚನಾವಣೆಯ ಪ್ರಣಾಳಿಕೆಯಂತಾಗಿದ್ದು, ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ರಾಜ್ಯಕ್ಕೆ ಯಾವುದೇ ಹೊಸ ಯೋಜನೆಯನ್ನು ಅಳಡಿಸಿಕೊಂಡಿಲ್ಲ. ಇದರಿಂದ ಕನ್ನಡಿಗರ ನಿರೀಕ್ಷೆಗಳು ಹುಸಿಯಾಗಿವೆ. ಹಿಂದುಳಿದ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ರುಪಾಯಿಗಳನ್ನು ಹಂಚಿಕೆ ಮಾಡುವಂತೆ ಎಐಸಿಸಿ ವರಿಷ್ಠರಾದ ಮಲ್ಲಕಾರ್ಜುನ ಖರ್ಗೆ ಅವರು ಹಣಕಾಸು ಸಚಿವರಿಗೆ ಮನವಿ ಮಾಡಿದ್ದರು. ಅವರು ಇದಕ್ಕೆ ಸ್ಪಂದಿಸದೆ ಹಿಂದುಳಿದ ಭಾಗವನ್ನು ಕಡೆಗಣಿಸಿದ್ದಾರೆ. : ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು, ಶಾಸಕರು, ಯಾದಗಿರಿ.

*ಸಾಲ ಮಾಡಿ ತುಪ್ಪಾ ತಿನ್ನೋ ಬಜೆಟ್ ಅಂತೂ ಅಲ್ಲ* : ಕೇಂದ್ರ ಸರ್ಕಾರದ ಬಜೆಟ್‌ ಹೊರೆಯಿಲ್ಲದ ಬಜೆಟ್, ಸಾಲ ಮಾಡಿ ತುಪ್ಪ ತಿನ್ನುವ ಬಜೆಟ್‌ ಅಂತೂ ಇದಲ್ಲ. ಮಧ್ಯಮವರ್ಗದ ಜನರಿಗೆ 12 ಲಕ್ಷ ರು.ಗಳ ತೆರಿಗೆ ವಿನಾಯ್ತಿ, ಐಐಟಿಗಳ ಅಪ್‌ಗ್ರೇಡ್‌, ಎಸ್ಸಿ/ಎಸ್ಟಿ ಮಹಿಳೆಯರಿಗೆ ಸಾಲ, 8 ಕೋಟಿ ಮಕ್ಕಳು ಹಾಗೂ 1 ಕೋಟಿ ತಾಯಂದಿರರಿಗೆ ಪೋಷಣ್‌ ಅಭಿಯಾನ್‌ ವಿಸ್ತರಣೆ, 100 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಆದ್ಯತೆ ಸ್ವಾಗತಾರ್ಹ. ಒಟ್ನಲ್ಲಿ ಒಳ್ಳೆಯ ಬಜೆಟ್‌ : ಶರಣಗೌಡ ಕಂದಕೂರ, ಶಾಸಕರು, ಗುರುಮಠಕಲ್‌.

*ದೂರಗಾಮಿ ಮುನ್ನೋಟದ ಬಜೆಟ್‌* : ವಿಕಸಿತ ಭಾರತದ ಸಾಕಾರಕ್ಕಾಗಿ ಮುನ್ನೋಟದ ಬಜೆಟ್ ಇದಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಒಟ್ಟು ಬಜೆಟ್ ಗಾತ್ರದಲ್ಲಿ ಶೇ 20ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕಾಗಿ ತೆಗೆದಿರಿಸಲಾಗಿದೆ. 11 ಲಕ್ಷ ಕೋಟಿ ವರೆಗಿನ ಮೊತ್ತವನ್ನು ಅಭಿವೃದ್ಧಿಯ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗುತ್ತಿದೆ. : ಬಸವರಾಜ ವಿಭೂತಿಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷರು, ಯಾದಗಿರಿ.

*ಅಭಿವೃದ್ಧಿ ಹೊಂದಿದ ದೇಶಕ್ಕೆ ಪೂರಕ ಬಜೆಟ್‌* : 2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡಲು ಪೂರಕವಾದ ಬಜೆಟ್ ಇದಾಗಿದೆ. ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತವನ್ನು ಬೆಳೆಸುವ ಆಶಯವನ್ನು ಪ್ರಧಾನ ಮಂತ್ರಿಗಳು ಎರಡು ವರ್ಷಗಳ ಹಿಂದೆಯೇ ವ್ಯಕ್ತಪಡಿಸಿದ್ದರು. ಅದನ್ನು ಪೂರೈಸುವ ನಿಟ್ಟಿನಲ್ಲಿ ಪೂರಕವಾದ ಭರವಸೆಯ ಬಜೆಟ್ ಇದಾಗಿದೆ. : ಮಹೇಶರಡ್ಡಿ ಮುದ್ನಾಳ್‌, ಬಿಜೆಪಿ ಯುವ ಮುಖಂಡರು.

*ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಿದ ಬಜೆಟ್* : ಬಡವರು, ಮಧ್ಯಮ ವರ್ಗದವರಿಗೆ ಅತಿ ಹೆಚ್ಚಿನ ಅನುಕೂಲತೆಗಳನ್ನು ಮಾಡಿಕೊಟ್ಟಿರುವ ಈ ಬಜೆಟ್‌ ರಾಷ್ಟ್ರದ ಜನತೆಗೆ ಖುಷಿ ತಂದಿದೆ. ಪರಿಶಿಷ್ಟ ಜಾತಿ ವರ್ಗಗಳಿಗೆ, ಕಾರ್ಖಾನೆ, ಸ್ಟಾರ್ಟಪ್‌ಗಳನ್ನು ಮಾಡುವವರಿಗೆ 20,000 ಕೋಟಿ ರೂ. ಸಾಲವಾಗಿ ಕೊಡುವ, ಅನುದಾನ ಕೊಡುವ ಪ್ರಸ್ತಾವ ಸ್ವಾಗತಾರ್ಹ. : ಕು. ಲಲಿತಾ ಅನಪುರ, ಯಾದಗಿರಿ ನಗರಸಭೆ ಅಧ್ಯಕ್ಷರು ಹಾಗೂ ರಾಜ್ಯ ಕಾರ್ಯದರ್ಶಿ.

*ಕಲ್ಯಾಣ ಕರ್ನಾಟಕದ ನಿರೀಕ್ಷೆಗಳು ಹುಸಿ* : ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣ ಅಸಡ್ಡೆ ತೋರಿಸಿದೆ. ಕಲ್ಯಾಣ ಕರ್ನಾಟಕದ 7 ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ₹5000 ಕೋಟಿ ಅನುದಾನ ನೀಡಬೇಕಾಗಿತ್ತು. ಆದರೆ, ಕಲ್ಯಾಣ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿಲ್ಲ. : ಟಿ. ಎನ್‌. ಭೀಮುನಾಯಕ್‌, ಕರವೇ ಜಿಲ್ಲಾಧ್ಯಕ್ಷರು, ಯಾದಗಿರಿ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಒಟ್ಟು ಬಜೆಟ್ ಗಾತ್ರದಲ್ಲಿ ಶೇ.20ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕಾಗಿ ತೆಗೆದಿರಿಸಲಾಗಿದೆ. 11 ಲಕ್ಷ ಕೋಟಿವರೆಗಿನ ಮೊತ್ತವನ್ನು ಅಭಿವೃದ್ಧಿಯ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗುತ್ತಿದೆ. ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. : ಕರಣ ಸುಬೇದಾರ, ಬಿಜೆಪಿ ಯುವ ಮುಖಂಡರು, ಶಹಾಪುರ.

*ಪ್ರಗತಿಗೆ ಹಾದಿ* : ರೈತರು, ಮಧ್ಯಮ ವರ್ಗ, ಸಣ್ಣ ಉದ್ಯಮ, ಮೆಡಿಕಲ್, ದೇಶದ ಮಧ್ಯಮವರ್ಗ, ವೇತನದಾರರು, ಯುವಜನತೆ, ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ/ಪಂಗಡ ಹಾಗೂ ನವೋದ್ಯಮಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಇಂದು ಮಂಡನೆಯಾದ ಬಜೆಟ್ ಸರ್ವಸ್ಪರ್ಷಿಯಾಗಿದ್ದು, ಆತ್ಮನಿರ್ಭರ ಭಾರತದ ಶಕ್ತಿಯೊಂದಿಗೆ ವಿಕಸಿತ ಭಾರತ ನಿರ್ಮಾಣಕ್ಕಾಗಿ ಮಂಡನೆಯಾದ ಈ ಬಜೆಟ್ ದೇಶದ ಪ್ರಗತಿಗೆ ಹಾದಿಯಾಗಲಿದೆ. : ಡಾ. ಶರಣಭೂಪಾಲರೆಡ್ಡಿ ನಾಯ್ಕಲ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರು, ಯಾದಗಿರಿ.

*ಜನಸ್ನೇಹಿ ಬಜೆಟ್‌* : ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗಾಗಿ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಔಷಧಿ ಸಿಗುವುದಾಗಿ ಇಂದು ಬಜೆಟ್‌ ನಲ್ಲಿ ಮಂಡಿಸಿರುವ ಹಾಗೂ ಪ್ರತಿಯೊಂದೂ ಗ್ರಾಮೀಣಾ ಭಾಗದಲ್ಲೂ ಇಂಡಿಯನ್‌ ಪೋಸ್ಟ್ ಬ್ಯಾಂಕ್‌ ತೆರೆಯಲು ನಿರ್ಧರಿಸಿದೆ ಹಾಗೂ ಕಿಸಾನ್‌ ಕಾರ್ಡ್‌ ಲೋನ್‌ ರೈತರಿಗೆ 3ಲಕ್ಷದಿಂದ 5 ಲಕ್ಷದವರೆಗೆ ಏರಿಸಲಾಗಿದೆ ಇದು ಅತ್ಯಂತ ಜನಸ್ಪೇಹಿ ಬಡವರ ಮತ್ತು ರೈತರ ಶಿಕ್ಷಣ,ಆರೋಗ್ಯ, ರಕ್ಷಣಾ ವಲಯ,ತಂತ್ರಜ್ಞಾನ, ಗ್ರಾಮೀಣ ವಲಯದ ಬಜೆಟ್‌ ಯಾಗಿದೆ : ಗುರು ಕಾಮಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯಾದಗಿರಿ..

ಮಧ್ಯಮ ವರ್ಗದ- ವೇತನದಾರರಿಗೆ ತೆರಿಗೆ ವಿನಾಯಿತಿ* : ಮಧ್ಯಮ ವರ್ಗದ- ವೇತನದಾರರಿಗೆ ಮೊದಲು 7 ಲಕ್ಷಕ್ಕೆ ತೆರಿಗೆ ಕಟ್ಟಬೇಕಿತ್ತು. ಈಗ 12 ಲಕ್ಷದ ವರೆಗೆ ಯಾರಿಗೂ ತೆರಿಗೆ ಇರುವುದಿಲ್ಲ. ಪತ್ರಕರ್ತರೂ ಸೇರಿದಂತೆ ತಿಂಗಳುಗೆ 1 ಲಕ್ಷದ ವರೆಗೆ ಸಂಬಳ ಪಡೆಯುವವರಿಗೆ ವಿನಾಯಿತಿ ಸಿಕ್ಕಿದೆ. 18 ಲಕ್ಷ ಆದಾಯ ಇರುವವರಿಗೆ 70,000 ರೂ ಮಾತ್ರ ತೆರಿಗೆ. 25 ಲಕ್ಷದ ವರೆಗೆ ವೇತನದವರಿಗೆ 1.20 ಲಕ್ಷ ತೆರಿಗೆ ಬರುತ್ತದೆ. : ಹನುಮಂತ ಇಟಗಿ, ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ನಗರಸಭೆ ಸದಸ್ಯರು, ಯಾದಗಿರಿ.

Budget 2025: ಇದು ಜನರ ಜೇಬಿಗೆ ಹಣ ತುಂಬಿಸುವ ಬಜೆಟ್: ಪ್ರಧಾನಿ ಮೋದಿ

ಜನವಿರೋಧಿ ಬಜೆಟ್‌ : ಜನವಿರೋಧಿ ಬಜೆಟ್ ಆಗಿದೆ. ಬಡ ಹಾಗೂ ಮಧ್ಯಮ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಇದೊಂದು ಉದ್ಯಮಿಗಳ ಪರವಾದ ಬಜೆಟ್ ಆಗಿದೆ. ದೇಶದಲ್ಲಿ ಯಾದಗಿರಿ ಜಿಲ್ಲೆ ಸೇರಿದಂತೆ 117 ಮಹತ್ವಾಕಾಂಕ್ಷೆ ಜಿಲ್ಲೆಗಳನ್ನು ಕೇಂದ್ರ ಸರಕಾರವೇ ಹಲವು ವರ್ಷಗಳಿಂದ ಘೋಷಣೆ ಮಾಡಿದೆ. ಆದರೆ, ಈ ಹಿಂದುಳಿದ ಜಿಲ್ಲೆಗಳ ಪ್ರಗತಿಗೆ ಯಾವುದೇ ರೀತಿಯಿಂದ ಅನುದಾನ ಮೀಸಲು ಇಟ್ಟಿಲ್ಲ. : ಭೀಮಣ್ಣ ಮೇಟಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು. ಯಾದಗಿರಿ.

ಇದು ಒಳ್ಳೆಯ ಬಜೆಟ್‌, ತೆರಿಗೆ ವಿನಾಯ್ತಿ ಮಧ್ಯಮವರ್ಗದವರಿಗೆ ಖುಷಿ ಮೂಡಿಸಿದೆ. 100 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಫುಡ್‌ ಪ್ರೋಸೆಸಿಂಗ್‌ ಹಾಗೂ ಅಭಿವೃದ್ಧಿಗೆ ಆದ್ಯತೆ ಇಲ್ಲಿನ ಕೃಷಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ. : ದಿನೇಶ ಜೈನ್‌, ಅಧ್ಯಕ್ಷರು, ಚೇಂಬರ್‌ ಆಫ್‌ ಕಾಮರ್ಸ್‌, ಯಾದಗಿರಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ
Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?