ಆಹಾರ ಸಂಸ್ಕರಣಾ ಘಟಕಗಳಿಗೂ ಪ್ರೋತ್ಸಾಹಧನ!

Published : Apr 01, 2021, 09:05 AM IST
ಆಹಾರ ಸಂಸ್ಕರಣಾ ಘಟಕಗಳಿಗೂ ಪ್ರೋತ್ಸಾಹಧನ!

ಸಾರಾಂಶ

ಆಹಾರ ಸಂಸ್ಕರಣಾ ಘಟಕಗಳಿಗೂ ಪ್ರೋತ್ಸಾಹಧನ| ಕೇಂದ್ರದಿಂದ ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆ ಘೋಷಣೆ| 10900 ಕೋಟಿ ನೆರವು| ರೈತರ ಆದಾಯ ಹೆಚ್ಚಳಕ್ಕೂ ಅನುಕೂಲ| ಇದರಿಂದ ದೇಶದ ಆಹಾರ ಸಂಸ್ಕರಣೆ ವಲಯ ‘ಗ್ಲೋಬಲ್‌’| ಆತ್ಮನಿರ್ಭರ ಭಾರತ ಕನಸಿಗೆ ಪೂರಕವಾಗಿ ಮತ್ತೊಂದು ಯೋಜನೆ

ನವದೆಹಲಿ(ಏ.01): ಆತ್ಮನಿರ್ಭರ ಭಾರತ ಮಂತ್ರ ಜಪಿಸುತ್ತಿರುವ ಕೇಂದ್ರ ಸರ್ಕಾರ ಮೊಬೈಲ್‌, ಟೆಲಿಕಾಂ ಉಪಕರಣ, ಕಂಪ್ಯೂಟರ್‌ ಹಾರ್ಡ್‌ವೇರ್‌ ಸೇರಿದಂತೆ ಈಗಾಗಲೇ 6 ವಲಯಗಳಿಗೆ ಘೋಷಣೆ ಮಾಡಿದ್ದ ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆಯನ್ನು ಇದೀಗ ಆಹಾರ ಸಂಸ್ಕರಣೆ ವಲಯಕ್ಕೂ ವಿಸ್ತರಣೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅಂಗೀಕಾರ ನೀಡಲಾಗಿದೆ. ಯೋಜನೆಗೆ 10900 ಕೋಟಿ ರು. ಅನುದಾನ ಮೀಸಲಿಡಲಾಗಿದ್ದು, 2.5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಜಾಗತಿಕ ಮಟ್ಟದಲ್ಲಿ ಆಹಾರ ಉತ್ಪನ್ನಕ್ಕೆ ಭಾರೀ ಬೇಡಿಕೆ ಇದೆ. ಹೀಗಾಗಿ ರಫ್ತು ಉತ್ತೇಜಿಸುವುದರ ಜತೆಗೆ ಗ್ರಾಹಕರಿಗೆ ವಿಶಾಲ ಶ್ರೇಣಿಯ ಮೌಲ್ಯವರ್ಧಿತ ಉತ್ಪನ್ನಗಳು ಲಭ್ಯವಾಗುವಂತೆ ಈ ಯೋಜನೆ ನೋಡಿಕೊಳ್ಳುತ್ತದೆ. ಭಾರತದ ಸಂಸ್ಕರಿತ ಆಹಾರ ಉತ್ಪನ್ನಗಳ ಮೌಲ್ಯ 33,494 ಕೋಟಿ ರು.ಗೆ ಏರಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಬಜೆಟ್‌ನಲ್ಲಿ 12ರಿಂದ 13 ವಲಯಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆ ಘೋಷಿಸಲಾಗಿತ್ತು. ಈಗಾಗಲೇ 6 ವಲಯಗಳಿಗೆ ಅದನ್ನು ಪ್ರಕಟಿಸಲಾಗಿದೆ. ಇದೀಗ ಆಹಾರ ಸಂಸ್ಕರಣೆ ವಲಯಕ್ಕೂ ಘೋಷಿಸಲಾಗಿದೆ ಎಂದು ವಾರ್ತಾ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಏನಿದು ಯೋಜನೆ?:

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಆಹಾರ ಬ್ರ್ಯಾಂಡ್‌ಗಳಿಗೆ ನೆರವಾಗಲು ಹಾಗೂ ಭಾರತದ ನೈಸರ್ಗಿಕ ಸಂಪನ್ಮೂಲಕ್ಕೆ ಅನುಗುಣವಾಗಿ ಜಾಗತಿಕ ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪನೆಗೆ ನೆರವಾಗುವುದು ಯೋಜನೆಯ ಉದ್ದೇಶ. ಸರ್ಕಾರ ಸೂಚಿಸುವ ನಿರ್ದಿಷ್ಟಪ್ರಮಾಣದ ಬಂಡವಾಳ ಹೂಡುವ ಕಂಪನಿಗಳಿಗೆ ಪ್ರೋತ್ಸಾಹ ಧನ ಸಿಗುತ್ತದೆ. ಈ ಯೋಜನೆಯಿಂದ ಕೃಷಿಯಿಂದ ಹೊರಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ. ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ. ತನ್ಮೂಲಕ ರೈತರಿಗೆ ಹೆಚ್ಚಿನ ಆದಾಯ ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಪ್ರೋತ್ಸಾಹಧನವನ್ನು ಆರು ವರ್ಷಗಳ ಕಾಲ ನೀಡಲಾಗುತ್ತದೆ. 2021-22ರಿಂದ 2026-27ರವರೆಗೆ ಒಟ್ಟು ಆರು ವರ್ಷಗಳ ಕಾಲ ಯೋಜನೆ ಚಾಲ್ತಿಯಲ್ಲಿರುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌