
ವಾಷಿಂಗ್ಟನ್(ಏ.01): ಕಳೆದ ವರ್ಷದ ಭೀಕರ ಕುಸಿತದಿಂದ ಭಾರತದ ಆರ್ಥಿಕತೆ ಚೇತರಿಸಿಕೊಂಡ ರೀತಿಗೆ ವಿಶ್ವಬ್ಯಾಂಕ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, 2021-22ನೇ ಸಾಲಿನಲ್ಲಿ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ದರ ಶೇ.12.5ರಷ್ಟುಹೆಚ್ಚಬಹುದು ಎಂದು ಭವಿಷ್ಯ ನುಡಿದಿದೆ. ಆದರೆ, ಅಪಾಯ ಇನ್ನೂ ಮುಗಿದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ.
‘ಕಳೆದ ವರ್ಷದ ಕರಾಳ ಸ್ಥಿತಿಯಿಂದ ಭಾರತ ಚೇತರಿಸಿಕೊಂಡಿರುವ ರೀತಿ ಅದ್ಭುತವಾಗಿದೆ. ಒಂದು ವರ್ಷದ ಹಿಂದಿನ ಚಿತ್ರಣವನ್ನು ಗಮನಿಸಿದರೆ ಆಗಿನ ಆರ್ಥಿಕ ಕುಸಿತ ಎಷ್ಟುಆಳವಾಗಿತ್ತು. ದೇಶದ ಆರ್ಥಿಕ ಚಟುವಟಿಕೆಗಳು ಶೇ.30ರಿಂದ 40ರಷ್ಟುಇಳಿಮುಖವಾಗಿದ್ದವು. ಲಸಿಕೆಯ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಕೊರೋನಾದ ಪ್ರಭಾವ ಅನಿಶ್ಚಿತವಾಗಿತ್ತು. ಆದರೆ, ಈಗ ನೋಡಿ, ಆರ್ಥಿಕತೆ ಹೇಗೆ ಪುಟಿದೆದ್ದಿದೆ. ಬಹುತೇಕ ಎಲ್ಲ ಚಟುವಟಿಕೆಗಳೂ ಪುನಾರಂಭವಾಗಿವೆ. ಲಸಿಕೆ ಅಭಿಯಾನ ನಡೆಯುತ್ತಿದೆ. ಲಸಿಕೆ ಉತ್ಪಾದನೆಯಲ್ಲಿ ಜಗತ್ತಿಗೇ ಭಾರತ ಮುಂಚೂಣಿಯಲ್ಲಿದೆ’ ಎಂದು ವಿಶ್ವ ಬ್ಯಾಂಕ್‌ನ ದಕ್ಷಿಣ ಏಷ್ಯಾ ಪ್ರದೇಶದ ಮುಖ್ಯ ಅರ್ಥಶಾಸ್ತ್ರಜ್ಞ ಹ್ಯಾನ್ಸ್ ಟಿಮ್ಮರ್ ಹೇಳಿದ್ದಾರೆ.
2021-22ನೇ ಸಾಲಿನಲ್ಲಿ ಭಾರತದ ನೈಜ ಜಿಡಿಪಿ ಬೆಳವಣಿಗೆಯ ದರ ಶೇ.7.5ರಿಂದ ಶೇ.12.5ರವರೆಗೂ ಇರಬಹುದು. ಕಳೆದ ವರ್ಷ ಕೊರೋನಾ ಆರಂಭವಾಗುವುದಕ್ಕೂ ಮೊದಲೇ ದೇಶದ ಆರ್ಥಿಕತೆ ಹಿಂಜರಿಕೆಯಲ್ಲಿತ್ತು. 2017ರಲ್ಲಿ ಗರಿಷ್ಠ ಶೇ.8.3ಕ್ಕೆ ತಲುಪಿದ ಮೇಲೆ ಅದು ಸುಮಾರು ಶೇ.4ರಷ್ಟುಕುಸಿದಿತ್ತು. ಮೊದಲೆರಡು ವರ್ಷ ಬೆಳವಣಿಗೆಯೇ ಇರಲಿಲ್ಲ. ನಂತರದ ಎರಡು ವರ್ಷ ಕುಸಿತವಾಗಿತ್ತು. ಆದರೆ, ಈಗ ಅದ್ಭುತವಾಗಿ ಪುಟಿದೆದ್ದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸವಾಲು ಇನ್ನೂ ಇವೆ:
ಆದರೆ, ಸವಾಲುಗಳು ಇನ್ನೂ ಇವೆ. ಆರ್ಥಿಕತೆಗಿರುವ ಅಪಾಯ ಈಗಲೂ ಮುಗಿದಿಲ್ಲ. ಕೊರೋನಾ ವಿಷಯದಲ್ಲಿ ಹಾಗೂ ಆರ್ಥಿಕತೆ ಪುನಃ ಚೇತರಿಸಿಕೊಳ್ಳುವ ವಿಷಯದಲ್ಲಿ ಸಾಗಬೇಕಾದ ದಾರಿ ದೀರ್ಘವಿದೆ. ಎಲ್ಲ ಭಾರತೀಯರಿಗೂ ಲಸಿಕೆ ನೀಡುವುದು ಸಣ್ಣ ಸವಾಲಲ್ಲ. ಬಹಳ ಜನರು ಈ ಸವಾಲನ್ನು ಕೀಳಂದಾಜು ಮಾಡುತ್ತಿದ್ದಾರೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇಷ್ಟಾಗಿಯೂ ಭಾರತದ ಆರ್ಥಿಕತೆ ನಾವೆಲ್ಲ ಅಂದುಕೊಂಡಿದ್ದಕ್ಕಿಂತಲೂ ಬೇಗ ಚೇತರಿಸಿಕೊಂಡಿದೆ. ಮುಂದೆ ಇನ್ನೇನೂ ಸಮಸ್ಯೆಯಾಗದೆ ಇದ್ದರೆ ಮತ್ತು ಜಾಗತಿಕ ಆರ್ಥಿಕ ವಿದ್ಯಮಾನಗಳು ಪೂರಕವಾಗಿದ್ದರೆ ದೇಶದಲ್ಲಿ ಬಡತನದ ಇಳಿಕೆಯ ಪ್ರಮಾಣ ಕೊರೋನಾ ಪೂರ್ವದ ಅವಧಿಗೆ ಶೀಘ್ರದಲ್ಲೇ ತಲುಪಲಿದೆ ಎಂದೂ ಟಿಮ್ಮರ್ ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.