
ನವದೆಹಲಿ(ಸೆ.02): ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ ಎಂಬುದನ್ನು ಸಾಬೀತುಪಡಿಸುವ ಮತ್ತಷ್ಟುಅಂಶಗಳು ಬುಧವಾರ ಹೊರಬಿದ್ದಿದೆ. ಆಗಸ್ಟ್ ತಿಂಗಳಿನಲ್ಲಿ 1.12 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದರೊಂದಿಗೆ ಸತತ 2ನೇ ತಿಂಗಳು ಕೂಡಾ ಜಿಎಸ್‌ಟಿ ಸಂಗ್ರಹ ಪ್ರಮಾಣ 1 ಲಕ್ಷ ಕೋಟಿ ರು.ಗಿಂತ ಹೆಚ್ಚಿದೆ. ಇನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಿಎಸ್‌ಟಿ ಪ್ರಮಾಣದಲ್ಲಿ ಶೇ.30ರಷ್ಟುಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಹಣಕಾಸು ಸಚಿವಾಲಯ ‘ಆಗಸ್ಟ್‌ನಲ್ಲಿ ಒಟ್ಟಾರೆ 1,12,020 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರದ ಜಿಎಸ್‌ಟಿ 20522 ಕೋಟಿ ರು., ರಾಜ್ಯಗಳ ಜಿಎಸ್‌ಟಿ 26605 ಕೋಟಿ ರು. ಮತ್ತು ಸಮಗ್ರ ಜಿಎಸ್‌ಟಿ ಪ್ರಮಾಣ 56,247 ಕೋಟಿ ರು., ಸೆಸ್ ರೂಪದಲ್ಲಿ 8646 ಕೋಟಿ ರು.’ ಎಂದು ಹೇಳಿದೆ.
2020ರ ಆಗಸ್ಟ್‌ನಲ್ಲಿ 86449 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಸಂಗ್ರಹದಲ್ಲಿ ಶೇ.30ರಷ್ಟುಏರಿಕೆಯಾಗಿದೆ. ಆದರೆ 2021ರ ಜುಲೈ ತಿಂಗಳಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿದೆ. ಜುಲೈನಲ್ಲಿ 1.16 ಲಕ್ಷ ಕೋಟಿ ಸಂಗ್ರಹವಾಗಿತ್ತು.
ಟಾಪ್ 3 ರಾಜ್ಯಗಳು
ಮಹಾರಾಷ್ಟ್ರ 15175 ಕೋಟಿ ರು.
ಗುಜರಾತ್ 7556 ಕೋಟಿ ರು.
ಕರ್ನಾಟಕ 7429 ಕೋಟಿ ರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.