
ನವದೆಹಲಿ(ಸೆ.02): ಕೋವಿಡ್ ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ನಷ್ಟದಿಂದ ಜನರು ಚೇತರಿಸಿಕೊಳ್ಳುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಬುಧವಾರ ಅಡುಗೆ ಅನಿಲ ದರ (ಎಲ್‌ಪಿಜಿ) ಏರಿಕೆಯ ಶಾಕ್ ನೀಡಿದೆ. 14.2 ಕೆ.ಜಿ. ತೂಕದ ಸಿಲಿಂಡರ್ ದರವನ್ನು 25 ರು. ಏರಿಸಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಎಲ್‌ಪಿಜಿ ದರ 887 ರು.ಗೆ ಏರಿದೆ.
ಕಳೆದ 2 ತಿಂಗಳಲ್ಲಿ ಇದು 3ನೇ ದರ ಏರಿಕೆಯಾಗಿದೆ. ಈ ಹಿಂದೆ ಜುಲೈ 1 ಮತ್ತು ಆಗಸ್ಟ್‌ನಲ್ಲಿ ಒಂದು ಬಾರಿ ತಲಾ 25 ರು.ನಂತೆ ಹೆಚ್ಚಿಸಲಾಗಿತ್ತು. ಇದರಿಂದಾಗಿ ಕೇವಲ 2 ತಿಂಗಳ ಅಂತರದಲ್ಲಿ ಸಿಲಿಂಡರ್ ದರ 75 ರು.ನಷ್ಟುಏರಿದಂತಾಗಿದೆ. ಇನ್ನು ಜನವರಿ 1ರಿಂದ ಈವರೆಗೆ 190 ರು. ಏರಿಸಿದಂತಾಗಿದೆ.
ಅಘೋಷಿತವಾಗಿ ಸರ್ಕಾರವು ಎಲ್‌ಪಿಜಿ ಸಬ್ಸಿಡಿಯನ್ನು ತೆಗೆದು ಹಾಕಿದ್ದು, ಮೇ 2020ರಿಂದಲೇ ಯಾರಿಗೂ ಸಬ್ಸಿಡಿ ಬಂದಿಲ್ಲ. ಕಾಗದದ ಮೇಲಷ್ಟೇ ‘ಸಬ್ಸಿಡಿ ಸಹಿತ ಸಿಲಿಂಡರ್’ ಎಂದು ನಮೂದಿಸುತ್ತಿದೆ. ಕೇಂದ್ರ ಸರ್ಕಾರದ ಈ ಧೋರಣೆ ಹಾಗೂ ಸತತ ಬೆಲೆ ಏರಿಕೆಯು ಜನಾಕ್ರೋಶಕ್ಕೆ ಕಾರಣವಾಗಿದೆ. ಜನರು ದರ ಏರಿಕೆ ಬಗ್ಗೆ ಹಿಡಿಶಾಪ ಹಾಕುವಂತಾಗಿದೆ. ದರ ಏರಿಕೆಯನ್ನು ಕಾಂಗ್ರೆಸ್, ಎನ್‌ಡಿಎದ ಮಿತ್ರ ಪಕ್ಷ ಜೆಡಿಯು ಟೀಕಿಸಿವೆ.
ಕೋಲ್ಕತಾದಲ್ಲಿ ಎಲ್‌ಪಿಜಿ ದರ 911 ರು. ಇದ್ದು ದೇಶದ ಮೆಟ್ರೋ ನಗರಗಳಲ್ಲೇ ಅತ್ಯಧಿಕವಾಗಿದೆ. ಇದೇ ವೇಳೆ 19 ಕೇಜಿ ವಾಣಿಜ್ಯಿಕ ಸಿಲಿಂಡರ್ ದರವನ್ನು 75 ರು. ನಷ್ಟುಏರಿಸಲಾಗಿದ್ದು, ದಿಲ್ಲಿಯಲ್ಲಿ ದರ 1693 ರು.ಗೆ ಏರಿದೆ.
7 ವರ್ಷದಲ್ಲಿ ಡಬಲ್:
ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು 2014ರ ಮಾ.1ರಂದು ಎಲ್‌ಪಿಜಿ ದರ 410.5 ರು. ಇತ್ತು. 7 ವರ್ಷದಲ್ಲಿ ದರ ಡಬಲ್‌ಗಿಂತ ಹೆಚ್ಚಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.