* ಸ್ವಿಸ್ ಬ್ಯಾಂಕಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿಲ್ಲ, ಕುಸಿದಿದೆ: ಕೇಂದ್ರ
* ಸ್ವಿಸ್ ಬ್ಯಾಂಕಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿಲ್ಲ, ಕುಸಿದಿದೆ: ಕೇಂದ್ರ
* ‘ವರದಿಗಳ ಹಿನ್ನೆಲೆಯಲ್ಲಿ ಸ್ವಿಜರ್‌ಲೆಂಡ್‌ನಿಂದ ಮಾಹಿತಿ ಕೇಳಿದ್ದೇವೆ’
* ಎಷ್ಟು ಕುಸಿದಿದೆ ಎಂಬುದನ್ನು ತಿಳಿಸದ ಕೇಂದ್ರ ವಿತ್ತ ಸಚಿವಾಲಯ
ನವದೆಹಲಿ(ಜೂ.20): ತೆರಿಗೆ ವಂಚಕರ ಸ್ವರ್ಗವಾಗಿರುವ ಸ್ವಿಜರ್‌ಲೆಂಡ್‌ನ ಬ್ಯಾಂಕುಗಳಲ್ಲಿ ಕಳೆದೆರಡು ವರ್ಷದಲ್ಲಿ ಭಾರತೀಯರು ಇರಿಸಿರುವ ಹಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ವಾಸ್ತವವಾಗಿ ಕಳೆದೆರಡು ವರ್ಷಗಳಿಂದ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ ಕುಸಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ. ಆದರೂ ಈ ಅವಧಿಯಲ್ಲಿ ಭಾರತೀಯರ ಠೇವಣಿಯಲ್ಲಾದ ಏರಿಳಿತದ ಬಗ್ಗೆ ವರದಿ ನೀಡುವಂತೆ ಸ್ವಿಜರ್‌ಲೆಂಡ್‌ಗೆ ಕೇಳಿರುವುದಾಗಿ ತಿಳಿಸಿದೆ.
ಸ್ವಿಸ್ ಬ್ಯಾಂಕುಗಳಲ್ಲಿ 2019ರಿಂದ ಈಚೆಗೆ ಭಾರತೀಯರ ಠೇವಣಿ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದು, ಅದರ ಮೊತ್ತ 20,700 ಕೋಟಿ ರು.ಗೆ ತಲುಪಿದೆ. ಇದು ಕಳೆದ 13 ವರ್ಷಗಳಲ್ಲೇ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿದ್ದ ಗರಿಷ್ಠ ಠೇವಣಿಯಾಗಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.
undefined
ಸ್ವಿಸ್ ಬ್ಯಾಂಕಲ್ಲಿ ಭಾರತೀಯರ ಹಣ 20,700 ಕೋಟಿಗೆ ಏರಿಕೆ
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿತ್ತ ಸಚಿವಾಲಯ, ‘ವರದಿಗಳಲ್ಲಿ ಹೇಳಲಾದ ಅಂಕಿ ಅಂಶಗಳಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣದ ಪ್ರಮಾಣ ಜಾಸ್ತಿಯಾಗಿದೆ ಎಂಬ ಅಂಶ ಎಲ್ಲೂ ಇಲ್ಲ. ಮೇಲಾಗಿ, ಈ ಅಂಕಿ ಅಂಶಗಳಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು, ಎನ್‌ಆರ್‌ಐಗಳು ಹಾಗೂ ಇತರರು ಮೂರನೇ ದೇಶದ ಸಂಸ್ಥೆಗಳ ಮೂಲಕ ಇರಿಸಿರಬಹುದಾದ ಹಣದ ಮೊತ್ತದ ಉಲ್ಲೇಖವೂ ಇಲ್ಲ. 2019ರ ನಂತರ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ಗ್ರಾಹಕರ ಠೇವಣಿ ಪ್ರಮಾಣ ಕಡಿಮೆಯಾಗಿದೆ. ಬೇರೆ ಬೇರೆ ಹೂಡಿಕೆ ವಿಧಾನಗಳ ಮೂಲಕ ಇರಿಸಿರುವ ಹಣದ ಮೊತ್ತವೂ ಕಡಿಮೆಯಾಗಿದೆ. ಏರಿಕೆಯಾಗಿರುವುದು ಗ್ರಾಹಕರಿಂದ ಬ್ಯಾಂಕಿಗೆ ಬರಬೇಕಾದ ಬಾಂಡ್, ಷೇರು ಇತ್ಯಾದಿ ಇನ್ನಿತರ ಹಣಕಾಸು ಹೂಡಿಕೆಗಳ ಹಣವಾಗಿದೆ’ ಎಂದು ಸ್ಪಷ್ಟನೆ ನೀಡಿದೆ.
ಆದರೆ, ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಠೇವಣಿ ಎಷ್ಟುಕಡಿಮೆಯಾಗಿದೆ ಎಂಬುದನ್ನು ವಿತ್ತ ಸಚಿವಾಲಯ ತಿಳಿಸಿಲ್ಲ. ಭಾರತ ಹಾಗೂ ಸ್ವಿಜರ್‌ಲೆಂಡ್ ಮಧ್ಯೆ 2018ರಲ್ಲಿ ಮಾಹಿತಿ ಹಂಚಿಕೆ ಒಪ್ಪಂದ ಏರ್ಪಟ್ಟಿದ್ದು, ಅದರ ಪ್ರಕಾರ ಪ್ರತಿ ವರ್ಷ ಸ್ವಿಜರ್‌ಲೆಂಡ್ ಸರ್ಕಾರವು ತನ್ನ ದೇಶದ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ಮಾಹಿತಿಯನ್ನು ಭಾರತಕ್ಕೆ ನೀಡುತ್ತದೆ. ಅದರಂತೆ ಕೇಂದ್ರ ಸರ್ಕಾರ ಈಗ ಮತ್ತೆ ಮಾಹಿತಿ ಕೇಳಿದೆ.
ಸ್ವಿಸ್ ಬ್ಯಾಂಕ್ ಖಾತೆದಾರರ 2ನೇ ಪಟ್ಟಿ ಭಾರತಕ್ಕೆ ಕೈಗೆ!
ಮಾಧ್ಯಮ ವರದಿಗಳ ಪ್ರಕಾರ, ಸ್ವಿಜರ್‌ಲೆಂಡ್‌ನ ಬ್ಯಾಂಕುಗಳು ಅಲ್ಲಿನ ಕೇಂದ್ರೀಯ ಬ್ಯಾಂಕ್ ಎಸ್‌ಎನ್‌ಬಿಗೆ ಸಲ್ಲಿಸಿರುವ ಮಾಹಿತಿಯಂತೆ 2020ರಲ್ಲಿ ಭಾರತೀಯರ ಠೇವಣಿ 20,706 ಕೋಟಿ ರು.ಗೆ ಏರಿಕೆಯಾಗಿದೆ. ಇದು 2019ರಲ್ಲಿ 6625 ಕೋಟಿ ರು. ಇತ್ತು.