
ಮುಂಬೈ(ಆ.21): ಮುಖೇಶ್ ಅಂಬಾನಿ ಸಾರಥ್ಯದ ರಿಲಯನ್ಸ್ ಇಂಡಸ್ಟ್ರೀಸ್, ಷೇರು ಮಾರುಕಟ್ಟೆಯ ಮೌಲ್ಯದಲ್ಲಿ ಅಗ್ರ ಸ್ಥಾನಕ್ಕೇರಿದೆ.
ಷೇರು ಮಾರುಕಟ್ಟೆಯ ಮೌಲ್ಯದಲ್ಲಿ ಅಗ್ರ ಸ್ಥಾನಕ್ಕೇರಲು ಕಳೆದ ಕೆಲವು ದಿನಗಳಿಂದ ರಿಲಯನ್ಸ್ ಹಾಗೂ ಟಾಟಾ ಸಮೂಹದ ಟಿಸಿಎಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೂ ಟಿಸಿಎಸ್ ಅನ್ನು ಹಿಂದಿಕ್ಕಿದ ಆರ್‌ಐಎಲ್, ಭಾರತದ ಅತಿ ದೊಡ್ಡ ಮಾರುಕಟ್ಟೆ ಬಂಡವಾಳದ ಕಂಪನಿಯಾಗಿ ಹೊರಹೊಮ್ಮಿದೆ.
ಬಿಎಸ್‌ಇನಲ್ಲಿ ಸೋಮವಾರ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯವು 7,82,636 ಕೋಟಿ ರೂ.ಗಳಿಗೆ ಏರಿತು. ಇದೇ ವೇಳೆ ದೇಶದ ಐಟಿ ದಿಗ್ಗಜ ಟಿಸಿಎಸ್ ಮಾರುಕಟ್ಟೆ ಮೌಲ್ಯವು 7,69,696 ಕೋಟಿ ರೂ.ಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿಯಿತು.
ಆರ್‌ಐಎಲ್ ಷೇರು ದರ ಸೋಮವಾರ ಕಳೆದ 52 ವಾರಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ, ಅಂದರೆ 1,238 ರೂ.ಗೆ ಏರಿಕೆ ಕಂಡಿತು. ಕಳೆದ ಆಗಸ್ಟ್ 16ರಂದು ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿತ್ತು.
ಈ ವರ್ಷದ ಏಪ್ರಿಲ್‌ನಲ್ಲಿ ಟಿಸಿಎಸ್ ಮೊಟ್ಟ ಮೊದಲ ಬಾರಿಗೆ 100 ಶತಕೋಟಿ ಡಾಲರ್ ಮೌಲ್ಯದ ಮೊದಲ ಐಟಿ ಕಂಪನಿಯಾಗಿ ದಾಖಲೆ ನಿರ್ಮಿಸಿತ್ತು. ರಿಲಯನ್ಸ್ ಇಂಡಸ್ಟ್ರೀಸ್ 2007ರಲ್ಲಿ ಮೊದಲ ಸಲ 100 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತ್ತು. ಷೇರುಗಳ ಪ್ರತಿ ದಿನದ ದರಗಳಿಗೆ ಅನುಗುಣವಾಗಿ ಅವುಗಳ ಮಾರುಕಟ್ಟೆ ಮೌಲ್ಯ ಬದಲಾಗುತ್ತಿರುತ್ತದೆ.
ಷೇರು ಪೇಟೆಯಲ್ಲಿ ನೋಂದಾಯಿತ ಕಂಪನಿಯೊಂದರ ಒಟ್ಟು ಷೇರುಗಳ ಮೌಲ್ಯವೇ ಮಾರುಕಟ್ಟೆ ಮೌಲ್ಯವಾಗಿದ್ದು, ಇದನ್ನು ಸಾಮಾನ್ಯವಾಗಿ ಮಾರ್ಕೆಟ್ ಕ್ಯಾಪ್ ಎಂದು ಕರೆಯುತ್ತಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.