
ವಿಶ್ವದ ಆರ್ಥಿಕ ವ್ಯವಸ್ಥೆ ಮತ್ತು ಹೂಡಿಕೆದಾರರ ಭವಿಷ್ಯದ ಬಗ್ಗೆ 'ರಿಚ್ ಡ್ಯಾಡ್ ಪೂರ್ ಡ್ಯಾಡ್' ಲೇಖಕ ರಾಬರ್ಟ್ ಕಿಯೋಸಾಕಿ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರ ತೀವ್ರಗೊಳ್ಳುವ ಅಪಾಯವಿದೆ, ನಿಮ್ಮನ್ನು ಕಾಪಾಡುವುದು ಬಂಗಾರ ಮತ್ತು ಬೆಳ್ಳಿ ಮಾತ್ರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಖ್ಯಾತ ಆರ್ಥಿಕ ವಿಶ್ಲೇಷಕ ರಾಬರ್ಟ್ ಕಿಯೋಸಾಕಿ, ಬ್ಯಾಂಕ್‌ಗಳಲ್ಲಿ ಹಣ ಇಡುವುದು ಮತ್ತು ಸಂಬಳವನ್ನೇ ನಂಬಿ ಬದುಕುವುದು ತಪ್ಪು ಎನ್ನುತ್ತಾರೆ. ಸರ್ಕಾರಗಳು ಹೆಚ್ಚು ಹೆಚ್ಚು ನೋಟುಗಳನ್ನು ಮುದ್ರಿಸುವುದರಿಂದ ಹಣದ ಮೌಲ್ಯ ಕಡಿಮೆಯಾಗುತ್ತಿದೆ. ಹಾಗಾಗಿ, ರೂಪಾಯಿ ಅಥವಾ ಡಾಲರ್‌ಗಿಂತ ಬಂಗಾರ ಮತ್ತು ಬೆಳ್ಳಿಯಂತಹ ನಿಜವಾದ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ಅವರು ಸಲಹೆ ನೀಡಿದ್ದಾರೆ.
ರಾಬರ್ಟ್ ಕಿಯೋಸಾಕಿ ತಮ್ಮ ಮಾತನ್ನು ಒಂದು ಉದಾಹರಣೆ ಮೂಲಕ ವಿವರಿಸಿದ್ದಾರೆ. ಅವರು ಇತ್ತೀಚೆಗೆ 4.5 ಮಿಲಿಯನ್ ಡಾಲರ್ (ಸುಮಾರು ₹40 ಕೋಟಿ) ಮೌಲ್ಯದ ಮನೆಯೊಂದನ್ನು ಖರೀದಿಸಿದ್ದಾರೆ. ವಿಶೇಷವೆಂದರೆ, ಇದಕ್ಕಾಗಿ ಅವರು ಬ್ಯಾಂಕ್ ಹಣ ಬಳಸಿಲ್ಲ. ಬದಲಿಗೆ, ಹಿಂದೆ ಕೇವಲ 4.5 ಲಕ್ಷ ಡಾಲರ್‌ಗೆ ಖರೀದಿಸಿದ್ದ ಚಿನ್ನದ ನಾಣ್ಯಗಳನ್ನು ಬಳಸಿ, ಇಂದು ಅದರ 10 ಪಟ್ಟು ಮೌಲ್ಯದ ಮನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಲಾಭಕ್ಕೆ ಚಿನ್ನದ ಮೌಲ್ಯ ಏರಿಕೆಯೇ ಕಾರಣ ಎಂದು ಕಿಯೋಸಾಕಿ ಹೇಳುತ್ತಾರೆ. ಇಂದು ಒಂದು ಔನ್ಸ್ ಬೆಳ್ಳಿಗೆ 45 ಡಾಲರ್ ಮತ್ತು ಬಂಗಾರಕ್ಕೆ 3,500 ಡಾಲರ್ ಇದೆ. ಆದರೆ, ತಾನು ಒಂದು ಔನ್ಸ್ ಬೆಳ್ಳಿಗೆ ಕೇವಲ 1 ಡಾಲರ್ ಇದ್ದಾಗಿನಿಂದಲೇ ಖರೀದಿಸಲು ಶುರುಮಾಡಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ಹಣದುಬ್ಬರವನ್ನು ಎದುರಿಸುವ ಶಕ್ತಿ ಬಂಗಾರ ಮತ್ತು ಬೆಳ್ಳಿಗೆ ಮಾತ್ರ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.
ಕಳೆದ 10 ವರ್ಷಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರಿವೆ. 2016ರಲ್ಲಿ 10 ಗ್ರಾಂ ಬಂಗಾರ ₹30,000ದ ಆಸುಪಾಸಿನಲ್ಲಿದ್ದರೆ, 2026ರ ವೇಳೆಗೆ ₹1,60,000 ತಲುಪಿದೆ. ಅಂದರೆ ಸುಮಾರು 400% ಆದಾಯ. ಅದೇ ರೀತಿ, 2016ರಲ್ಲಿ ₹42,000 ಇದ್ದ 1 ಕೆಜಿ ಬೆಳ್ಳಿ ಬೆಲೆ, 2026ರ ವೇಳೆಗೆ ₹2,60,000 ಮುಟ್ಟಿದೆ. ಇದು ಸುಮಾರು 500% ಲಾಭವನ್ನು ಸೂಚಿಸುತ್ತದೆ.
ಪ್ರಸ್ತುತ ಬೆಂಗಳೂರಿನಲ್ಲಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 1,56,770 ರುಪಾಯಿ ಇದೆ. ಅದೇ ರೀತಿ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆ 1,43,700 ರುಪಾಯಿಗಳಾಗಿದೆ. ಇನ್ನು 1 ಕೆಜಿ ಬೆಳ್ಳಿಯ ಬೆಲೆ ₹2,60,000 ಮುಟ್ಟಿದೆ. ಈ ಬೆಲೆಗಳ ಮೇಲೆ 3% ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್‌ಗಳು ಹೆಚ್ಚುವರಿಯಾಗಿ ಅನ್ವಯವಾಗುತ್ತವೆ. ಹೀಗಾಗಿ, ಕಾಗದದ ಹಣಕ್ಕಿಂತ ಚಿನ್ನ, ಬೆಳ್ಳಿಯಂತಹ ಆಸ್ತಿಗಳೇ ಉತ್ತಮ ಎನ್ನುವುದು ಕಿಯೋಸಾಕಿ ಮಾತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.