
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ರೆಪೋ ದರ (Repo Rate )ದಲ್ಲಿ ಇಳಿಕೆ ಮಾಡಿ ಮಧ್ಯಮ ವರ್ಗದ ಜನರಿಗೆ ನೆಮ್ಮದಿ ನೀಡಿದೆ. ಅನೇಕ ವರ್ಷಗಳ ನಂತ್ರ ರೆಪೋ ದರದಲ್ಲಿ ಇಳಿಕೆಯಾಗಿದೆ. ಆರ್ ಬಿಐ ರೆಪೋ ದರವನ್ನು ಶೇಕಡಾ 0.25ರಷ್ಟು ಇಳಿಕೆ ಮಾಡಿದೆ. ಈಗ ರೆಪೋ ದರ 6.50ರಿಂದ 6.25ಕ್ಕೆ ಇಳಿದಿದೆ. ಈಗ ಬ್ಯಾಂಕ್ (Bank) ಮೇಲೆ ಜವಾಬ್ದಾರಿ ಇದ್ದು, ಅವು ಶೀಘ್ರವೇ ಬಡ್ಡಿ ದರ ಇಳಿಕೆಯ ಘೋಷಣೆ ಮಾಡಲಿವೆ. ಬ್ಯಾಂಕ್ ಬಡ್ಡಿ ದರ ಇಳಿಕೆ ಮಾಡ್ತಿದ್ದಂತೆ ನಿಮ್ಮ ವೈಯಕ್ತಿಕ ಸಾಲ, ಗೃಹ ಸಾಲ, ಕಾರ್ ಸಾಲದ ಇಎಂಐ ಕಡಿಮೆ ಆಗಲಿದೆ. ಒಂದಿಷ್ಟು ಹಣ ತಿಂಗಳ ಸಂಬಳದಲ್ಲಿ ಉಳಿಯಲಿದೆ. ಆರ್ ಬಿಐ ರೆಪೋ ದರ ಇಳಿಕೆ ಮಾಡ್ತಿದ್ದಂತೆ ನಿಮ್ಮ ಇಎಂಐ ಹೇಗೆ ಕಡಿಮೆ ಆಗಲಿದೆ, ಯಾರ ಇಎಂಐ ಕಡಿಮೆ ಆಗಲಿದೆ ಹಾಗೆ ನೀವು ಇಎಂಐ ಕಡಿಮೆ ಮಾಡಿಕೊಳ್ಳೋಕೆ ಬ್ಯಾಂಕ್ ಗೆ ಹೋಗ್ಬೇಕಾ ಎಂಬೆಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.
ರೆಪೋ ದರ ಇಳಿಕೆಯಾದ್ರೆ ಇಎಂಐ ಕಡಿಮೆ ಆಗೋದು ಹೇಗೆ? : ಬ್ಯಾಂಕ್ ಗಳು ಎರಡು ವಿಧದಲ್ಲಿ ಬ್ಯಾಂಕ್ ಸಾಲವನ್ನು ನೀಡುತ್ವೆ. ಮೊದಲನೇಯದಾಗಿ ಬ್ಯಾಂಕುಗಳು ಗ್ರಾಹಕರಿಗೆ ಸ್ಥಿರ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಅಂದ್ರೆ ನಿಮ್ಮ ಸಾಲದ ಅವಧಿ ಶುರುವಾದಾಗಿನಿಂದ ಮುಗಿಯುವವರೆಗೂ ನೀವು ಒಂದೇ ರೀತಿಯ ಇಎಂಐ ಪಾವತಿ ಮಾಡ್ಬೇಕು. ರೆಪೋ ದರದಲ್ಲಿ ಇಳಿಕೆ ಆಗ್ಲಿ ಇಲ್ಲ ಏರಿಕೆ ಆಗ್ಲಿ ನಿಮ್ಮ ಇಎಂಐ ಮೇಲೆ ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇನ್ನು ಎರಡನೇಯದು ಫ್ಲೋಟರ್ ದರದಲ್ಲಿ ಸಾಲ ಪಡೆಯುವುದು. ನೀವು ಫ್ಲೋಟರ್ ದರದಲ್ಲಿ ಸಾಲ ಪಡೆದಿದ್ದರೆ, ರೆಪೋ ದರದ ಏರಿಕೆ ಹಾಗೂ ಇಳಿಕೆಯಾದಾಗ ನಿಮ್ಮ ಇಎಂಐನಲ್ಲಿ ಬದಲಾವಣೆಯಾಗುತ್ತದೆ. ರೆಪೋ ದರದಲ್ಲಿ ಇಳಿಕೆಯಾದ ಮೇಲೆ ಬ್ಯಾಂಕ್ ಗಳು ನಿಮ್ಮ ಸಾಲದ ಇಎಂಐ ಕಡಿಮೆ ಮಾಡ್ಬಹುದು ಇಲ್ಲವೆ ಅವಧಿಯನ್ನು ಕಡಿಮೆ ಮಾಡ್ಬಹುದು.
Breaking: ಮನೆ ಕಟ್ಟುವವರಿಗೆ ಗುಡ್‌ನ್ಯೂಸ್ ನೀಡಿದ ಆರ್‌ಬಿಐ, ರೇಪೋ ರೇಟ್ 25 ಬೇಸಿಸ್
ಇಎಂಐ ಅಥವಾ ಮರುಪಾವತಿ ಅವಧಿ ಕಡಿಮೆ ಮಾಡಲು ನೀವೇನು ಮಾಡ್ಬೇಕು? : ಆರ್ ಬಿಐ ರೆಪೋ ದರದಲ್ಲಿ ಇಳಿಕೆ ಮಾಡಿದೆ. ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿಯನ್ನು ಶೀಘ್ರವೇ ಕಡಿಮೆ ಮಾಡಲಿವೆ. ಸಾಲ ಪಡೆದ ನೀವು ಏನು ಮಾಡ್ಬೇಕು? ಇಎಂಐ ಕಡಿಮೆ ಮಾಡಿಸಲು ನೀವು ಬ್ಯಾಂಕ್ ಗೆ ಹೋಗ್ಬೇಕಾಗಿಲ್ಲ. ಸಾಲ ಪಡೆಯುವ ವೇಳೆ ಅರ್ಜಿಯಲ್ಲಿ ರೆಪೋ ದರ ಬದಲಾವಣೆ ಅನುಸಾರ ಎಂಬುದಕ್ಕೆ ಒಪ್ಪಿಗೆ ನೀಡಿದ್ರೆ ಬ್ಯಾಂಕ್ ತಾನಾಗಿಯೇ ಇಎಂಐ ಕಡಿಮೆ ಮಾಡುತ್ತದೆ. ನೀವು ಅರ್ಜಿ ಸಲ್ಲಿಸುವ ವೇಳೆ ಮರುಪಾವತಿ ಅವಧಿಗೆ ಒಪ್ಪಿಗೆ ನೀಡಿದ್ದರೆ, ಅವಧಿ ಬದಲಾಗಲಿದೆ. ನಿಮಗೆ ಮರುಪಾವತಿ ಅವಧಿಯಲ್ಲಿ ಬದಲಾವಣೆ ಬೇಡ, ಇಎಂಐ ಬದಲಾಗಬೇಕು ಎಂದಾದಲ್ಲಿ ಮಾತ್ರ ನೀವು ಬ್ಯಾಂಕ್ ಗೆ ಹೋಗ್ಬೇಕಾಗುತ್ತದೆ. ಅದೇ ರೀತಿ ಇಎಂಐ ಬದಲಾವಣೆ ಬೇಡ, ಅವಧಿ ಬದಲಾಗಬೇಕು ಎನ್ನುವವರು ಕೂಡ ಬ್ಯಾಂಕ್ ಗೆ ಹೋಗ್ಬೇಕು. ಅಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಇನ್ಫೋಸಿಸ್ ಉದ್ಯೋಗಿಗಳಿಗೆ ಗುಡ್ ನ್ಯೂಸ್, ತಿಂಗಳ ಸ್ಯಾಲರಿ ಹೆಚ್ಚಿಸಿ ಐಟಿ ಕಂಪನಿ ದಾಖಲೆ
ಯಾವಾಗ ಬ್ಯಾಂಕ್ ಲೋನ್ ಪಡೆಯೋದು ಉತ್ತಮ? : ನೀವು ಸಾಲ ಪಡೆಯುವ ಪ್ಲಾನ್ ಮಾಡಿದ್ರೆ, ರೆಪೋ ದರ ಇಳಿದಿದೆ ಎನ್ನುವ ಕಾರಣಕ್ಕೆ ತಕ್ಷಣ ಸಾಲ ಪಡೆಯಬೇಡಿ. ಬ್ಯಾಂಕ್ ಗಳು ಬಡ್ಡಿ ದರ ಇಳಿಕೆ ಮಾಡುವವರೆಗೂ ಕಾದುನೋಡಿ. ಯಾವ ಬ್ಯಾಂಕ್ ಎಷ್ಟು ಬಡ್ಡಿ ಇಳಿಕೆ ಮಾಡ್ತಿದೆ ಎಂಬುದನ್ನು ತುಲನೆ ಮಾಡಿ, ನಂತ್ರ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಬ್ಯಾಂಕ್ ನಿಂದ ಸಾಲ ಪಡೆಯಿರಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.