
ಮುಂಬೈ (ಜೂ.13): ಪ್ರತಿಷ್ಟಿತ ಫೋರ್ಬ್ಸ್ ನಿಯತಕಾಲಿಕ 2023ನೇ ಸಾಲಿನ 'ದಿ ಗ್ಲೋಬಲ್ 2000' ಪಟ್ಟಿ ಬಿಡುಗಡೆ ಮಾಡಿದ್ದು, ಭಾರತೀಯ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಈ ಬಾರಿಯೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಅಗ್ರಸ್ಥಾನದಲ್ಲಿದೆ. ಆದಾಯ, ಲಾಭ ಹಾಗೂ ಮಾರುಕಟ್ಟೆ ಮೌಲ್ಯದಲ್ಲಿ ರಿಲಯನ್ಸ್ ಹಿಂದಿನಂತೆ ಈ ಬಾರಿ ಕೂಡ ಭಾರತದ ಅತೀದೊಡ್ಡ ಕಾರ್ಪೋರೇಟ್ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇನ್ನು 'ದಿ ಗ್ಲೋಬಲ್ 2000' ಪಟ್ಟಿಯಲ್ಲಿ ಜಾಗತಿಕ ಮಟ್ಟದಲ್ಲಿ ರಿಲಯನ್ಸ್ 45ನೇ ಸ್ಥಾನದಲ್ಲಿದೆ. ವಿಶೇಷವೆಂದ್ರೆ ಈ ಪಟ್ಟಿಯಲ್ಲಿ ರಿಲಯನ್ಸ್ ಜನಪ್ರಿಯ ಜಾಗತಿಕ ಕಾರ್ಪೋರೇಟ್ ಸಂಸ್ಥೆಗಳಾದ ಜರ್ಮನಿಯ ಬಿಎಂಡಬ್ಲ್ಯು ಗ್ರೂಪ್, ಸ್ವಿರ್ಜಲೆಂಡ್ ನ ನೆಸ್ಲೆ, ಚೀನಾದ ಅಲಿಬಾಬಾ ಗ್ರೂಪ್, ಅಮೆರಿಕದ ಪ್ರೊಕ್ಟರ್ ಹಾಗೂ ಗ್ಯಾಂಬ್ಲೆ ಮತ್ತು ಜಪಾನಿನ ಸೋನಿಗಿಂತ ಮುಂದಿದೆ. ಇನ್ನು ಈ ಪ್ರತಿಷ್ಠಿತ ಪಟ್ಟಿಯಲ್ಲಿ ರಿಲಯನ್ಸ್ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ ಕೂಡ. 2022ನೇ ಸಾಲಿನ ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 53ನೇ ಸ್ಥಾನದಲ್ಲಿತ್ತು, ಆದರೆ, 2023ನೆ ಸಾಲಿನಲ್ಲಿ 45ನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ 'ದಿ ಗ್ಲೋಬಲ್ 2000' ಪಟ್ಟಿಯಲ್ಲಿ ರಿಲಯನ್ಸ್ ಸ್ಥಾನದಲ್ಲಿ ಏರಿಕೆ ಕಂಡುಬಂದಿದೆ.
ರಿಲಯನ್ಸ್ ಹೊರತುಪಡಿಸಿ 2023ನೇ ಸಾಲಿನ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ಪ್ರಮುಖ ಭಾರತೀಯ ಸಂಸ್ಥೆಗಳೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) 77ನೇ ಸ್ಥಾನ, ಎಚ್ ಡಿಎಫ್ ಸಿ ಬ್ಯಾಂಕ್ 128ನೇ ಸ್ಥಾನ ಹಾಗೂ ಐಸಿಐಸಿಐ ಬ್ಯಾಂಕ್ 163ನೇ ಸ್ಥಾನ. ಅಮೆರಿಕ ಮೂಲದ ಜೆಪಿ ಮೋರ್ಗಾನ್ ಸಂಸ್ಥೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ.
ವಿಶ್ವ ಶ್ರೀಮಂತರ ಪಟ್ಟಿ ಪ್ರಕಟ: ಅಂಬಾನಿ ನಂ.9, ಅದಾನಿಗೆ 24ನೇ ಸ್ಥಾನಕ್ಕೆ
ಮಾರಾಟ, ಲಾಭ, ಆಸ್ತಿ ಹಾಗೂ ಮಾರುಕಟ್ಟೆ ಮೌಲ್ಯ....ಈ ನಾಲ್ಕು ಮಾನದಂಡಗಳನ್ನು ಬಳಸಿಕೊಂಡು 'ದಿ ಗ್ಲೋಬಲ್ 2000' ವಿಶ್ವದ ದೊಡ್ಡ ಕಂಪನಿಗಳಿಗೆ ರ‍್ಯಾಂಕಿಂಗ್ ನೀಡುತ್ತದೆ. ಇನ್ನು ಈ ರ‍್ಯಾಂಕಿಂಗ್ ನೀಡಲು ಫೋರ್ಬ್ಸ್ 2023ರ ಮೇ 5ಕ್ಕೆ ಲಭ್ಯವಿರುವ 12 ತಿಂಗಳ ಹಣಕಾಸಿನ ಮಾಹಿತಿಗಳನ್ನು ಬಳಸಿಕೊಳ್ಳುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಭಾರತದ ಅತ್ಯುತ್ತಮ ಉದ್ಯೋಗದಾತ ಸಂಸ್ಥೆ ಎಂದು ಕೂಡ ಗುರುತಿಸಲಾಗಿದ್ದು, 2022ನೇ ಸಾಲಿನಲ್ಲಿ ಜಾಗತಿಕ ಮಟ್ಟದಲ್ಲಿ ಟಾಪ್ 20ರಲ್ಲಿ ಸ್ಥಾನ ಪಡೆದಿದೆ. ಈ ರ‍್ಯಾಂಕಿಂಗ್ ಅನ್ನು ದೊಡ್ಡ ಮಟ್ಟದ ಸಮೀಕ್ಷೆಯನ್ನು ಆಧರಿಸಿ ಮಾಡಲಾಗುತ್ತದೆ. ಇದರಲ್ಲಿ ಉದ್ಯೋಗಿಗಳು ಅನೇಕ ವಿಚಾರಗಳಿಗೆ ಸಂಬಂಧಿಸಿ ತಮ್ಮ ಉದ್ಯೋಗದಾತ ಸಂಸ್ಥೆಗೆ ರೇಟಿಂಗ್ ನೀಡುತ್ತಾರೆ.
1958ರಲ್ಲಿ ಧೀರೂಬಾಯಿ ಅಂಬಾನಿ ರಿಲಯನ್ಸ್ ಸಂಸ್ಥೆಯನ್ನು ಪ್ರಾರಂಭಿಸಿದರು. ಧೀರೂಬಾಯಿ ಅಂಬಾನಿ ಹಾಗೂ ಕೋಕಿಲಾಬೆನ್ ಅವರ ಪ್ರಥಮ ಪುತ್ರನಾಗಿರುವ ಮುಖೇಶ್ ಅಂಬಾನಿ ತಂದೆ ಕಟ್ಟಿದ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಮತ್ತಷ್ಟು ಸಂಪತ್ತು ಹಾಗೂ ಜನಪ್ರಿಯತೆ ಎರಡನ್ನೂ ಗಳಿಸಿದ್ದಾರೆ. 2002ರಿಂದ ರಿಲಯನ್ಸ್ ಸಂಸ್ಥೆಯ ನಿರ್ವಹಣೆ ಜವಾಬ್ದಾರಿಯನ್ನು ಮುಖೇಶ್ ಅಂಬಾನಿ ವಹಿಸಿಕೊಂಡಿದ್ದರು. 2023ನೇ ಸಾಲಿನ ಫೋರ್ಬ್ಸ್ 37ನೇ ವಾರ್ಷಿಕ ಜಾಗತಿಕ ಬಿಲಿಯನರ್ಸ್ ಪಟ್ಟಿ ಪ್ರಕಾರ 66 ವರ್ಷದ ಮುಖೇಶ್ ಅಂಬಾನಿ 83.4 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿದ್ದು, ಭಾರತದ ನಂ.1 ಹಾಗೂ ವಿಶ್ವದ 9ನೇ ಅತೀ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.
ಗುಜರಾತ್‌ನಲ್ಲಿ ಅದಾನಿ ಗ್ರೂಪ್‌ನ ಘಟಕ ಸ್ಥಗಿತ: ಸಂಪನ್ಮೂಲ ಕ್ರೋಢೀಕರಿಸಲು ಕಸರತ್ತು
ಕಳೆದ ಹತ್ತು ವರ್ಷಗಳಲ್ಲಿ ಮುಖೇಶ್ ಅಂಬಾನಿ ಅವರ ಆದಾಯದಲ್ಲಿ ಭಾರೀ ಏರಿಕೆಯಾಗಿದೆ. ಫೋರ್ಬ್ಸ್ ಮಾಹಿತಿ ಪ್ರಕಾರ 2014ರಲ್ಲಿ ಮುಖೇಶ್ ಅಂಬಾನಿ ಆದಾಯ 18.6 ಬಿಲಿಯನ್ ಡಾಲರ್ ಆಗಿತ್ತು. ಕಳೆದ ಐದು ವರ್ಷಗಳಲ್ಲಿ ರಿಲಯನ್ಸ್ ಷೇರುಗಳು ಶೇ.155ರಷ್ಟು ಬೆಳವಣಿಗೆ ದಾಖಲಿಸಿವೆ. ಆ ಮೂಲಕ ದೊಡ್ಡ ಮಾರ್ಜಿನ್ ನಲ್ಲಿ ಮಾರುಕಟ್ಟೆ ರಿಟರ್ನ್ ಹೊಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.