
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಭಾರತದ ಕೃಷಿ ರಫ್ತು ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಹಿಂದೆ ಭಾರತದಲ್ಲುಂಟಾಗಿದ್ದ ತೈಲ ಬಿಕ್ಕಟ್ಟು ಬಹುತೇಕ ಬಗೆಹರಿದು ಪರಿಸ್ಥಿತಿ ಸುಧಾರಿಸುತ್ತಿರುವಾಗಲೇ, ಇದೀಗ ದೇಶದ ಹೆಮ್ಮೆಯ 'ಬಾಸುಮತಿ ಅಕ್ಕಿ' ರಫ್ತಿಗೆ ಹೊಸದೊಂದು ಸಂಕಷ್ಟ ಎದುರಾಗಿದೆ. ಕೆಂಪು ಸಮುದ್ರ (Red Sea) ಮತ್ತು ಹೊರ್ಮುಜ್ ಜಲಸಂಧಿ (Strait of Hormuz) ಮಾರ್ಗಗಳಲ್ಲಿ ಮುಂದುವರಿದಿರುವ ಜಾಗತಿಕ ರಾಜಕೀಯ ಹಾಗೂ ಭದ್ರತಾ ಬಿಕ್ಕಟ್ಟು ಭಾರತದ ಅಕ್ಕಿ ವ್ಯಾಪಾರವನ್ನು ಸಂಕಷ್ಟಕ್ಕೆ ತಳ್ಳಿದೆ.
ಹೊರ್ಮುಜ್ ಜಲಸಂಧಿ ಮತ್ತು ಬಾಬ್ ಅಲ್-ಮಂದಾಬ್ ಜಲಮಾರ್ಗಗಳಲ್ಲಿ ಭದ್ರತಾ ಬೆದರಿಕೆಗಳು ಹೆಚ್ಚಾಗಿರುವುದರಿಂದ ಸದ್ಯ ಹಡಗುಗಳ ಸಂಚಾರ ಅತ್ಯಂತ ಅಪಾಯಕಾರಿಯಾಗಿದೆ. ಸಮುದ್ರ ಮಾರ್ಗದ ನಿರ್ಬಂಧಗಳಿಂದಾಗಿ ಭಾರತದಿಂದ ಇರಾನ್‌ನತ್ತ ಹೊರಟಿದ್ದ ಹಡಗೊಂದು ಬರೋಬ್ಬರಿ ಒಂದು ತಿಂಗಳ ಕಾಲ ಸಮುದ್ರದಲ್ಲೇ ಸಿಲುಕಿ, ಇತ್ತೀಚೆಗೆ ಗುಜರಾತ್‌ನ ಜಾಮ್‌ನಗರ ಬಂದರಿಗೆ ವಾಪಸ್ ಬಂದಿದೆ. ಇದಲ್ಲದೆ ಪ್ರಮುಖ ಮೂರು ಹಡಗುಗಳ ಬುಕಿಂಗ್ ರದ್ದಾಗಿದ್ದು, ರಫ್ತುದಾರರು ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಸ್ತುತ ಗುಜರಾತ್‌ನ ಪ್ರಮುಖ ಬಂದರುಗಳಾದ ಮುಂಡ್ರಾ ಮತ್ತು ಕಾಂಡ್ಲಾದ ಕಂಟೇನರ್ ಪ್ರೈಟ್ ಸ್ಟೇಷನ್ (CFS) ಗಳಲ್ಲಿ ಸುಮಾರು 5 ಲಕ್ಷ ಮೆಟ್ರಿಕ್ ಟನ್ ಬಾಸುಮತಿ ಮತ್ತು ಇತರ ಅಕ್ಕಿ ಗಲ್ಫ್ ದೇಶಗಳಿಗೆ ರವಾನೆಯಾಗದೆ ಬಾಕಿ ಉಳಿದಿದೆ. ಇದರಲ್ಲಿ ಇರಾನ್ ದೇಶವೊಂದಕ್ಕೇ ರಫ್ತಾಗಬೇಕಿದ್ದ 3 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸೇರಿದೆ.
ಭಾರತದ ಬಾಸುಮತಿ ಅಕ್ಕಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳೇ ಅತಿ ದೊಡ್ಡ ಮಾರುಕಟ್ಟೆಯಾಗಿವೆ. ಸೌದಿ ಅರೇಬಿಯಾ ಭಾರತದಿಂದ ವಾರ್ಷಿಕವಾಗಿ ಸುಮಾರು 12 ಲಕ್ಷ ಮೆಟ್ರಿಕ್ ಟನ್ ಬಾಸುಮತಿ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತದ ನಂಬರ್ ಒನ್ ಗ್ರಾಹಕನಾಗಿದೆ. ಇರಾನ್ ಕಳೆದ ಹಣಕಾಸು ವರ್ಷದಲ್ಲಿ ಸುಮಾರು 8 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಸುವ ಮೂಲಕ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಈ ಎರಡೂ ದೇಶಗಳು ಸೇರಿ ಭಾರತದ ಒಟ್ಟು ವಾರ್ಷಿಕ ಬಾಸುಮತಿ ರಫ್ತಿನ ಪೈಕಿ 20 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತವೆ. ಆದರೆ ಪ್ರಸ್ತುತ ಜಲಮಾರ್ಗಗಳು ಬಂದ್ ಆಗಿರುವುದರಿಂದ ಜಾಗತಿಕ ಆಹಾರ ಸರಬರಾಜು ಜಾಲದ ಮೇಲೆ ತೀವ್ರ ಪರಿಣಾಮ ಬೀರಿದೆ.
ಕೆಂಪು ಸಮುದ್ರದ ಬಿಕ್ಕಟ್ಟಿನಿಂದಾಗಿ ಹಡಗುಗಳು ಸುದೀರ್ಘ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಸಮುದ್ರ ಸಾಗಣೆ ವೆಚ್ಚ (Freight Rates) ಮತ್ತು ಮರೈನ್ ಇನ್ಶೂರೆನ್ಸ್ (ವಿಮಾ ದರಗಳು) ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ರಫ್ತು ವೆಚ್ಚವನ್ನು ಅಪಾರವಾಗಿ ಹೆಚ್ಚಿಸಿವೆ. ಪರಿಣಾಮವಾಗಿ ಮಧ್ಯಪ್ರಾಚ್ಯ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಭಾರತೀಯ ಅಕ್ಕಿ ಅತ್ಯಂತ ದುಬಾರಿಯಾಗುತ್ತಿದೆ.
ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಭಾರತವು ಶೇಕಡಾ 45 ರಷ್ಟು ಸಿಂಹಪಾಲು ಹೊಂದಿದ್ದು, ಪಾಕಿಸ್ತಾನ ಮತ್ತು ಥೈಲ್ಯಾಂಡ್‌ನಂತಹ ದೇಶಗಳೊಂದಿಗೆ ಪೈಪೋಟಿ ನಡೆಸುತ್ತಾ 140ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ. ಆದರೆ ಈ ಬಿಕ್ಕಟ್ಟಿನಿಂದಾಗಿ 2026ರ ಹಣಕಾಸು ವರ್ಷದಲ್ಲಿ (FY-26) ಭಾರತದ ಒಟ್ಟು ಅಕ್ಕಿ ರಫ್ತು ಮೌಲ್ಯವು ವಾರ್ಷಿಕವಾಗಿ ಶೇ. 7.5 ರಷ್ಟು ಕುಸಿತ ಕಂಡು 11.53 ಬಿಲಿಯನ್ ಡಾಲರ್‌ಗೆ ತಲುಪಿದೆ.
"ಭತ್ತದ ಖರೀದಿ, ಗಿರಣಿ ಸಂಸ್ಕರಣೆ, ಪ್ಯಾಕಿಂಗ್ ಮತ್ತು ಸಾಗಣೆಗಾಗಿ ರಫ್ತುದಾರರು ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ್ದಾರೆ. ಈಗ ಬಂದರುಗಳಲ್ಲಿ ಸರಕುಗಳು ವಾರಗಟ್ಟಲೆ ನಿಂತಿರುವುದರಿಂದ ಹಣದ ಹರಿವು (Liquidity) ಸಂಪೂರ್ಣ ಸ್ಥಗಿತಗೊಂಡಿದೆ. ಬ್ಯಾಂಕ್‌ಗಳ ಬಡ್ಡಿ ಹೊರೆ ಹೆಚ್ಚಾಗುತ್ತಿದ್ದು, ರಫ್ತುದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೀಘ್ರದಲ್ಲೇ ಈ ಜಲಮಾರ್ಗಗಳಲ್ಲಿ ಶಾಂತಿ ಮರುಕಳಿಸದಿದ್ದರೆ ಭಾರತದ ಕೃಷಿ ಕ್ಷೇತ್ರ ಮತ್ತು ರಫ್ತುದಾರರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ," ಎಂದು ಬಾಸುಮತಿ ಅಕ್ಕಿ ಗಿರಣಿ ಮಾಲೀಕರು ಮತ್ತು ರಫ್ತುದಾರರ ಸಂಘದ (BRMEA) ಪದಾಧಿಕಾರಿಗಳಾದ ಬಾಲಕೃಷ್ಣನ್ ಮತ್ತು ರಂಜಿತ್ ಸಿಂಗ್ ಜೋಸನ್ ಕಳವಳ ವ್ಯಕ್ತಪಡಿಸಿದ್ದಾರೆ.
ಗಮನಾರ್ಹ ಅಂಶವೆಂದರೆ, FY-26 ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಪ್ರಾದೇಶಿಕ ಉದ್ವಿಗ್ನತೆ ತಾತ್ಕಾಲಿಕವಾಗಿ ಸಡಿಲಗೊಂಡಾಗ ಭಾರತದ ಅಕ್ಕಿ ರಫ್ತು ಶೇ. 4 ಕ್ಕಿಂತ ಹೆಚ್ಚಾಗಿ $3.03 ಬಿಲಿಯನ್ ತಲುಪಿತ್ತು. ಜೂನ್ ಒಂದೇ ತಿಂಗಳಿನಲ್ಲಿ $1 ಬಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ರಫ್ತು ನಡೆದಿತ್ತಾದರೂ, ಈಗಿನ ಬಿಕ್ಕಟ್ಟು ಮತ್ತೆ ಪರಿಸ್ಥಿತಿಯನ್ನು ಆತಂಕಕ್ಕೆ ತಳ್ಳಿದೆ.
ರಾಜ್ಯ ಸರ್ಕಾರದ ಸರಣಿ ಮನವಿಗಳನ್ನು ಪುರಸ್ಕರಿಸಿರುವ ಕೇಂದ್ರ ಸರ್ಕಾರವು, 2025-26 ರ ರಬಿ ಋತುವಿನಲ್ಲಿ ತೆಲಂಗಾಣದ ಅಕ್ಕಿ ಖರೀದಿ ಗುರಿಯನ್ನು 35 ಲಕ್ಷ ಮೆಟ್ರಿಕ್ ಟನ್‌ನಿಂದ (LMT) 43 ಲಕ್ಷ ಮೆಟ್ರಿಕ್ ಟನ್‌ಗೆ (ಅಂದರೆ 8 ಲಕ್ಷ ಮೆಟ್ರಿಕ್ ಟನ್‌ನಷ್ಟು) ಹೆಚ್ಚಿಸಲು ನಿರ್ಧರಿಸಿದೆ. ಈ ಕುರಿತು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಅಧಿಕೃತ ಪತ್ರ ಬರೆದಿದೆ.
ಇದರೊಂದಿಗೆ, ಸೆಪ್ಟೆಂಬರ್ 30, 2026 ರೊಳಗೆ ರಾಜ್ಯದಲ್ಲಿ ವಾಹನ ಸ್ಥಳ ಟ್ರ್ಯಾಕಿಂಗ್ ವ್ಯವಸ್ಥೆಯನ್ನು (VLTS) ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಕೇಂದ್ರ ಸೂಚಿಸಿದೆ. ಖರೀದಿ ಗುರಿ ಹೆಚ್ಚಿಸಿರುವ ನಿರ್ಧಾರಕ್ಕೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದು, ಇದು ತೆಲಂಗಾಣದ ರೈತರಿಗೆ ವರದಾನವಾಗಲಿದೆ ಎಂದಿದ್ದಾರೆ.
ಪ್ರಸಿದ್ಧ ಜರ್ನಲ್ 'ನೇಚರ್ ಫುಡ್' (Nature Food) ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಭಾರತದ ನೀರಾವರಿ ಭತ್ತದ ಗದ್ದೆಗಳು ವಿಶ್ವದಲ್ಲೇ ಅತಿ ಹೆಚ್ಚು ಮೀಥೇನ್ ಅನಿಲವನ್ನು ಹೊರಸೂಸುವ ಪ್ರದೇಶಗಳ ಪಟ್ಟಿಗೆ ಸೇರಿವೆ. 1960 ರ ದಶಕದಿಂದ ವಿಶ್ವಾದ್ಯಂತ ಭತ್ತದ ಗದ್ದೆಗಳಿಂದ ಹೊರಹೊಮ್ಮುವ ಹಸಿರುಮನೆ ಅನಿಲಗಳ (GHG) ಪ್ರಮಾಣ ದ್ವಿಗುಣಗೊಂಡಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ. 2011-2020 ರ ದಶಕದಲ್ಲಿ, ಜಾಗತಿಕ ಭತ್ತದ ಗದ್ದೆಗಳು ಪ್ರತಿ ವರ್ಷ ಸರಾಸರಿ 1.1 ಶತಕೋಟಿ ಟನ್ ಇಂಗಾಲದ ಡೈಆಕ್ಸೈಡ್-ಸಮಾನ (CO2-e) ಹೊರಸೂಸುವಿಕೆಯನ್ನು ಉತ್ಪಾದಿಸಿವೆ. ಇದು 1961-1980 ರ ಅವಧಿಗೆ ಹೋಲಿಸಿದರೆ ಶೇ. 90.4 ರಷ್ಟು ಹೆಚ್ಚಾಗಿದೆ.
ಈ ಹೊರಸೂಸುವಿಕೆಯ ಅರ್ಧದಷ್ಟು ಹೆಚ್ಚಳಕ್ಕೆ ಮಣ್ಣಿನ ಸಾವಯವ ಇಂಗಾಲದ ನಷ್ಟವೇ ಕಾರಣವಾಗಿದೆ. ಅಲ್ಲದೆ ಭತ್ತದ ಕೃಷಿಯ ವಿಸ್ತರಣೆ, ಅತಿಯಾದ ರಾಸಾಯನಿಕ ಬಳಕೆಯ ತೀವ್ರ ಕೃಷಿ ಪದ್ಧತಿಗಳು ಇದಕ್ಕೆ ಕಾರಣವಾಗಿವೆ. ನೀರಿನ ಸಮರ್ಪಕ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾತ್ರವೇ ಭತ್ತದ ಇಂಗಾಲದ ಹೆಜ್ಜೆಗುರುತನ್ನು (Carbon Footprint) ಕಡಿಮೆ ಮಾಡಲು ಸಾಧ್ಯ ಎಂದು ಸಂಶೋಧಕರು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.