ಬೆಳ್ತಂಗಡಿ: ಅಗ್ರಿಲೀಫ್‌ಗೆ ದಾಖಲೆಯ ಹೂಡಿಕೆ, ಎರಡೇ ವರ್ಷದಲ್ಲಿ 100 ಕೋಟಿ ವ್ಯವಹಾರದ ಗುರಿ, ಅವಿನಾಶ್ ರಾವ್

By Girish Goudar  |  First Published Dec 4, 2024, 1:04 PM IST

ಅಗ್ರಿಲೀಫ್ ಸಂಸ್ಥೆಯ ಹೊಸ ಮೈಲಿಗಲ್ಲಾಗಿದ್ದು, ಅಮೇರಿಕ, ಯೂರೋಪ್, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳತ್ತ ಸಂಸ್ಥೆಯ ವಿಸ್ತರಣಾ ಯೋಜನೆಗಳಿಗೆ ಸಹಕಾರಿಯಾಗುವ ಜತೆಗೆ ಅಲ್ಲಿ ಸ್ಥಾಪಿತ ಮಾರುಕಟ್ಟೆಯನ್ನು ಹೊಂದಲು ನೆರವಾಗಲಿದೆ. ಅಡಿಕೆ ಹಾಳೆತಟ್ಟೆ ರಫ್ತು ಸಂಸ್ಥೆಯೊಂದಕ್ಕೆ ಈ ಪ್ರಮಾಣದ ಹೂಡಿಕೆ ಹರಿದುಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲು ಎನ್ನುವುದು ಗಮನಾರ್ಹ: ಸಂಸ್ಥೆಯ ಸಂಸ್ಥಾಪಕ ಅವಿನಾಶ್ ರಾವ್ 


ಬೆಳ್ತಂಗಡಿ(ಡಿ.04): ಹಾಳೆತಟ್ಟೆ ಉತ್ಪಾದನೆ ಮತ್ತು ರಫ್ತು ಚಟುವಟಿಕೆಯಲ್ಲಿ ದೇಶದ ನಂ.1 ಸಂಸ್ಥೆಯಾಗಿರುವ "ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್"ನ ಅಭಿವೃದ್ಧಿಗಾಥೆ ಹಾಗೂ ವಿಶ್ವಾಸಾರ್ಹತೆಯನ್ನು ಪರಿಗಣಿಸಿ ಕ್ಯಾಪಿಟಲ್-ಎ ಮತ್ತು ಸಮರ್ಷ್ ಕ್ಯಾಪಿಟಲ್ ಎಂಬ ಎರಡು ಬಂಡವಾಳ ಹೂಡಿಕೆ ಸಂಸ್ಥೆಗಳು ದಾಖಲೆಯ 16 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿವೆ ಎಂದು ಸಂಸ್ಥೆಯ ಸಂಸ್ಥಾಪಕ (ಸಿಇಒ) ಅವಿನಾಶ್ ರಾವ್ ತಿಳಿಸಿದ್ದಾರೆ. 

ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಸಂಸ್ಥೆಯ ಸಂಸ್ಥಾಪಕ (ಸಿಇಒ) ಅವಿನಾಶ್ ರಾವ್ ಅವರು, ಇದು ಅಗ್ರಿಲೀಫ್ ಸಂಸ್ಥೆಯ ಹೊಸ ಮೈಲಿಗಲ್ಲಾಗಿದ್ದು, ಅಮೇರಿಕ, ಯೂರೋಪ್, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳತ್ತ ಸಂಸ್ಥೆಯ ವಿಸ್ತರಣಾ ಯೋಜನೆಗಳಿಗೆ ಸಹಕಾರಿಯಾಗುವ ಜತೆಗೆ ಅಲ್ಲಿ ಸ್ಥಾಪಿತ ಮಾರುಕಟ್ಟೆಯನ್ನು ಹೊಂದಲು ನೆರವಾಗಲಿದೆ. ಅಡಿಕೆ ಹಾಳೆತಟ್ಟೆ ರಫ್ತು ಸಂಸ್ಥೆಯೊಂದಕ್ಕೆ ಈ ಪ್ರಮಾಣದ ಹೂಡಿಕೆ ಹರಿದುಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲು ಎನ್ನುವುದು ಗಮನಾರ್ಹ ಎಂದು ಹೇಳಿದ್ದಾರೆ. 

Latest Videos

ಗ್ರಾಹಕರೇ ಎಚ್ಚರ, ಮಿತಿಗಿಂತ ಹೆಚ್ಚು ಹಣ ಡೆಪಾಸಿಟ್ ಮಾಡಿದ್ರೆ ದಂಡ ವಿಧಿಸುತ್ತೆ ಆದಾಯ ತೆರಿಗೆ ಇಲಾಖೆ

ಹೊಸ ಹೂಡಿಕೆಗಳ ಮೂಲಕ ಅಗ್ರಿಲೀಫ್ ಸಂಸ್ಥೆ ತನ್ನ ಜಾಗತಿಕ ಗುರುತನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಪ್ರಮಾಣ ಹಿಗ್ಗಿಸುವ ಜತೆಗೆ ಹವಾಮಾನ ಬದಲಾವಣೆಯ ಸವಾಲಿನ ಸನ್ನಿವೇಶದಲ್ಲಿ ಪರಿಸರ ಸ್ನೇಹಿ ಹಾಳೆತಟ್ಟೆ ಹಾಗೂ ಇತರೆ ಕೃಷಿ ಉತ್ಪನ್ನಗಳ ಉದ್ಯಮದಲ್ಲಿ ದಾಪುಗಾಲಿಡುತ್ತಿದೆ. ಮುಂದಿನ 2 ವರ್ಷಗಳಲ್ಲಿ ರೂ. 100 ಕೋಟಿ ವ್ಯವಹಾರ ನಡೆಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

undefined

ನವೀನ ಆವಿಷ್ಕಾರಗಳೊಂದಿಗೆ ಗ್ರಾಮೀಣ ಭಾಗದಲ್ಲಿ ಛಾಪು ಮೂಡಿಸುತ್ತಿರುವ ಅಗ್ರಿಲೀಫ್ ಸಂಸ್ಥೆ, ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿರುವುದು ಹೂಡಿಕೆದಾರರ ಆಕರ್ಷಣೆಗೆ ಪಾತ್ರವಾಗಿದೆ. ಹೊಸ ಹೊಸ ಉತ್ಪನ್ನಗಳ ಮೂಲಕ ಕೃಷಿಕರನ್ನು ಮತ್ತಷ್ಟು ಪ್ರೋತ್ಸಾಹಿಸಲಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ, 2025ರಲ್ಲಿ ಅಂದಾಜು 3 ಕೋಟಿ ಹಾಳೆ ಸಂಗ್ರಹಣೆಯಾಗಲಿದ್ದು, ದಿನವೊಂದಕ್ಕೆ 3 ಲಕ್ಷ ಹಾಳೆತಟ್ಟೆಗಳನ್ನು ತಯಾರಿ ಮಾಡುವ ಗುರಿ ಇದೆ ಎಂದು ಸಂಸ್ಥೆಯ ಸಹಸಂಸ್ಥಾಪಕ ಅತಿಶಯ ಜೈನ್ ವಿವರಿಸಿದ್ದಾರೆ.

ಕ್ಯಾಪಿಟಲ್-ಎ ಸಂಸ್ಥೆಯು 2021ರಲ್ಲಿ ಹೆಸರಾಂತ  ಉದ್ಯಮಿ ಮತ್ತು ಏಂಜೆಲ್ ಹೂಡಿಕೆದಾರರಾದ ಅಂಕಿತ್ ಕೆಡಿಯಾ ಅವರಿಂದ ಸ್ಥಾಪನೆಯಾಯಿತು. ಕ್ಯಾಪಿಟಲ್-ಎ ಸಂಸ್ಥೆಯು ಸ್ಟಾರ್ಟ್‌ಅಪ್‌ಗಳ ಪ್ರಗತಿ ಮತ್ತು ಹವಾಮಾನ, ಡೀಪ್‌ಟೆಕ್, ಫಿನ್‌ಟೆಕ್  ಮತ್ತು ಇತರ ಟೆಕ್-ಸಕ್ರಿಯಗೊಳಿಸುವಿಕೆ ಸೇರಿದಂತೆ ವಿವಿಧ ವಲಯಗಳು ನಡೆಸುವ ವ್ಯವಹಾರಗಳು, ಪರಿಸರ ಸುಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಸ್ಪಷ್ಟವಾದ ಗಮನವನ್ನು ಹೊಂದಿದೆ. ಹಾಗೆಯೇ, ರೂ. 400 ಕೋಟಿ ಮೊತ್ತವನ್ನು ಈಗಾಗಲೇ ಜಿರಾಫ್, ರೂಟರ್, ಬಾಂಬ್ರೂ, ರಿಸ್ಕ್‌ಕೋವ್ರಿ ಮತ್ತು ಟ್ಯಾನ್90  ಸೇರಿದಂತೆ  20 ನವೀನ ಸ್ಟಾರ್ಟ್‌ಅಪ್‌ಗಳಿಗೆ ಮತ್ತು ತನ್ನ ಪೋರ್ಟ್ಫೋಲಿಯೊ ಕಂಪನಿಗಳಿಗೆ ದೀರ್ಘಾವಧಿಯ ಮೌಲ್ಯವನ್ನು ಹೆಚ್ಚಿಸುವ ಕಾರ್ಯ ಮುಂದುವರಿಸಿದೆ ಎಂದು ಹೇಳಿದ್ದಾರೆ. 

ಸಮರ್ಷ್ ಕ್ಯಾಪಿಟಲ್  ಸಣ್ಣ ಮತ್ತು ಮಧ್ಯಮ ಉದ್ಯಮಗಳೊಂದಿಗೆ (SME) ಪಾಲುದಾರಿಕೆಯನ್ನು ಕೇಂದ್ರೀಕರಿಸುವ ಮೂಲಕ  ವ್ಯಾಪಾರ ವಿಸ್ತರಣೆ ಮತ್ತು ಲಾಭದಾಯಕ ವೇಗವರ್ಧನೆಗೆ ಬಂಡವಾಳವನ್ನು ಒದಗಿಸುತ್ತಿದೆ. ಈ ಸಂಸ್ಥೆಯ ಹೂಡಿಕೆ ಪ್ರಬಂಧವು “ಭಾರತದ  ಉತ್ಪಾದನೆ ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳು” ಎಂಬ ನಂಬಿಕೆಯ ಮೇಲೆ  ಕೇಂದ್ರೀಕೃತವಾಗಿದೆ. ಸಮರ್ಷ್ ಕ್ಯಾಪಿಟಲ್‌ ಸಂಸ್ಥೆಯು 50 ಮಿಲಿಯನ್ ಡಾಲರ್‌ ಮೊತ್ತವನ್ನು, ಭವಿಷ್ಯದ ಕಡೆಗೆ ತಮ್ಮ ಪ್ರಯಾಣದಲ್ಲಿ ಕೈಜೋಡಿಸುವ ಸಂಸ್ಥೆಗಳಿಗೆ ನೆರವು ನೀಡುವುದರ ಮೂಲಕ ಉತ್ತೇಜಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ. 

ʻʻಕ್ಯಾಪಿಟಲ್-ಎ ಮತ್ತು ಸಮರ್ಷ್ ಕ್ಯಾಪಿಟಲ್ ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಹಲವು ಹಂತಗಳಲ್ಲಿ ಸಮಾಲೋಚನೆ ನಡೆಸಲಾಗಿತ್ತು. ಪ್ರತಿಷ್ಠಿತ ಸಾಂಸ್ಥಿಕ ಹೂಡಿಕೆ ಬಂದಿರುವುದು ಹೆಮ್ಮೆಯ ವಿಷಯ. ಸಂಸ್ಥೆಯ ಕಾರ್ಯವೈಖರಿ, ವಿಶ್ವಾಸಾರ್ಹತೆ ಹಾಗೂ ವಿದೇಶಗಳಿಗೆ ಹೆಚ್ಚುತ್ತಿರುವ ರಫ್ತು ಪ್ರಮಾಣ ಗಮನಿಸಿ ಹೂಡಿಕೆ ಮಾಡಿದ್ದಾರೆ. ಅಗ್ರಿಲೀಫ್ ಸಂಸ್ಥೆ ವಿದೇಶಗಳಲ್ಲಿ ಹಾಗೂ ಭಾರತದಲ್ಲಿ ಹಲವೆಡೆ ಕಚೇರಿಗಳನ್ನು ತೆರೆಯುವ ಉದ್ದೇಶ ಹೊಂದಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವಿನಾಶ್ ರಾವ್ ತಿಳಿಸಿದ್ದಾರೆ. 

ಠಕ್ಕರ್ ಕೊಟ್ಟಿದ್ದ ಜಿಯೋ, ಏರ್‌ಟೆಲ್‌ಗೆ 1095GB ಡೇಟಾ ಪ್ಲಾನ್‌ ಘೋಷಿಸಿ ಶಾಕ್ ನೀಡಿದ BSNL

2019ರಲ್ಲಿ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ಅವರು 2019ರಲ್ಲಿ ಅಗ್ರಿಲೀಫ್ ಸಂಸ್ಥೆಯನ್ನು ಆರಂಭಿಸಿದರು. ಪ್ಲಾಸ್ಟಿಕ್, ಪೇಪರ್ ಪ್ಲೇಟ್ ಗಳಿಗೆ ಪರ್ಯಾಯವಾಗಿ ಹಾಳೆತಟ್ಟೆಗಳು ಶೇ.100ರಷ್ಟು ನೈಸರ್ಗಿಕವಾಗಿದೆ. ಗ್ರಾಮೀಣ ಭಾಗದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ರೋಬೋಟಿಕ್ಸ್ ಗಳನ್ನೊಳಗೊಂಡ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರತಿ ಉತ್ಪನ್ನದಲ್ಲೂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. 3 ಲಕ್ಷ ಹಾಳೆತಟ್ಟೆಯ ದೈನಂದಿನ ಉತ್ಪಾದನಾ ಗುರಿಯ ಜತೆಗೆ ಇದು ಗ್ರಾಮೀಣ ಪ್ರದೇಶದಲ್ಲಿ ಅಂದಾಜು 1,000 ಉದ್ಯೋಗ ಸೃಷ್ಟಿಸುವ ಮೂಲಕ ಸ್ಥಳೀಯ ಜನ-ಸಮುದಾಯಗಳನ್ನು ಬೆಂಬಲಿಸುತ್ತಾ ಬಂದಿದೆ.
ಹೊಸ ಉತ್ಪನ್ನಗಳ ಪ್ರಾರಂಭ ನಮ್ಮ ವಿಸ್ತರಣಾ ಯೋಜನೆಯ ಭಾಗ ಎಂದಿರುವ ಅವಿನಾಶ್ ರಾವ್, ಸ್ಥಳೀಯ ಅಡಿಕೆ ಬೆಳೆಗಾರರಿಗೆ ಹೆಚ್ಚುವರಿ ಆದಾಯದ ಮೂಲ ಒದಗಿಸುವ ಜತೆಗೆ ಶೂನ್ಯ-ತ್ಯಾಜ್ಯ, ಸುಸ್ಥಿರವಾದ, ಸಮುದಾಯ-ಕೇಂದ್ರಿತ ಭದ್ರ ಭವಿಷ್ಯವನ್ನು ರೂಪಿಸುವ ಬದ್ಧತೆಯನ್ನು ಸಂಸ್ಥೆ ಮುಂದುವರಿಸಲಿದೆ ಎಂದು ಹೇಳಿದ್ದಾರೆ.

ದಿಲ್ಲಿ To ಹಳ್ಳಿ

ಹಳ್ಳಿಯಿಂದ ತೆರಳಿ ನಗರ, ಮಹಾನಗರಗಳಲ್ಲಿ ಉದ್ಯೋಗ ಮಾಡುತ್ತಿರುವ, ಹಳ್ಳಿಗೆ ವಾಪಸಾಗಲು ಬಯಸುವ ಪ್ರತಿಭಾವಂತರಿಗೆ ಅಗ್ರಿಲೀಫ್ ಸಂಸ್ಥೆ ಉದ್ಯೋಗ ನೀಡುತ್ತಿದೆ. ಇತ್ತೀಚಿಗೆ, ಇದೇ ಮಾದರಿಯಲ್ಲಿ ಹಲವು ನೇಮಕಾತಿಗಳನ್ನು ಮಾಡಲಾಗಿದೆ. ವಿದೇಶದಲ್ಲಿ ಕೆಲಸ ಮಾಡಿದ್ದವರೂ ಈ ಸಂಸ್ಥೆ ಸೇರಿಕೊಂಡಿದ್ದಾರೆ. ದಿಲ್ಲಿ, ಬೆಂಗಳೂರಿನಲ್ಲಿದ್ದವರೂ ಬಂದಿದ್ದಾರೆ. ಸಂಸ್ಥೆ ವಿಸ್ತರಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸ ಕಚೇರಿಯೊಂದನ್ನು ಆರಂಭಿಸಲಾಗುತ್ತಿದ್ದು, ಅಲ್ಲಿಗೂ ಹೊಸ ನೇಮಕಾತಿಗಳನ್ನು ಮಾಡಲಾಗುತ್ತಿದೆ. ನಿಡ್ಲೆಯ ಕೇಂದ್ರ ಕಚೇರಿಯ ಕಾರ್ಖಾನೆಯಲ್ಲೂ ವಿಸ್ತರಣಾ ಕಟ್ಟಡ ಸದ್ಯದಲ್ಲೇ ಉದ್ಘಾಟನೆಯಾಗಲಿದೆ.

click me!