
ಮುಂಬೈ (ಮೇ 7, 2023): ಹೊಸ ಪಿಂಚಣಿ ಪದ್ಧತಿ ತೆಗೆದು ಹಾಕಿ ಹಳೆಯ ಪಿಂಚಣಿ ಪದ್ಧತಿ (ಒಪಿಎಸ್) ಜಾರಿಗೆ ತರುವುದನ್ನು ಮತ್ತೆ ವಿರೋಧಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಇಂಥ ಕ್ರಮಗಳು ರಾಜ್ಯಗಳ ಹಣಕಾಸು ಹೊರೆ ಹೆಚ್ಚಿಸುತ್ತವೆ ಎಂದು ಎಚ್ಚರಿಸಿದೆ. ಆರ್‌ಬಿಐ ಈ ಹಿಂದೆ ಎಚ್ಚರಿಕೆ ನೀಡಿದ ಹೊರತಾಗಿಯೂ ಇತ್ತೀಚೆಗೆ ಕಾಂಗ್ರೆಸ್ ಆಡಳಿತದ ರಾಜಸ್ಥಾನ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಜಾರ್ಖಂಡ್ ಹಾಗೂ ಆಪ್ ಆಡಳಿತದ ಪಂಜಾಬ್, ಹೊಸ ಪಿಂಚಣಿ ಪದ್ಧತಿಯ ಬದಲು ಹಳೆಯ ಪಿಂಚಣಿ ಪದ್ಧತಿ ಜಾರಿಗೆ ತಂದಿದ್ದವು.
ಈ ಬಗ್ಗೆ ತನ್ನ ‘ರಾಜ್ಯಗಳ ಹಣಕಾಸು ಸ್ಥಿತಿ: 2022-23 ಬಜೆಟ್‌ಗಳ ಅಧ್ಯಯನ’ ವರದಿಯಲ್ಲಿ ಪ್ರಸ್ತಾಪಿಸಿರುವ ಆರ್‌ಬಿಐ, ‘ಹಣಕಾಸು ಸ್ಥಿತಿ ಮೇಲೆ ಹಳೆಯ ಪಿಂಚಣಿ ಪದ್ಧತಿ ಜಾರಿಗೊಳಿಸುವುದು ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ಕಟ್ಟಲಾಗದೇ ಇರುವ ಸಾಲದ ಪ್ರಮಾಣ ಹೆಚ್ಚಿಸಲಿದೆ. ಹಣಕಾಸು ಸಂಪನ್ಮೂಲಗಳಲ್ಲಿ ವಾರ್ಷಿಕ ಉಳಿತಾಯ ಇಲ್ಲವಾಗಿಸಲಿದೆ’ ಎಂದು ಆತಂಕ ವ್ಯಕ್ತಪಡಿಸಿದೆ.
ಇದನ್ನು ಓದಿ: ವೃದ್ಧನ ಮೃತದೇಹ 2 ವರ್ಷ ಫ್ರೀಜರ್‌ನಲ್ಲಿಟ್ಟ: ಪಿಂಚಣಿ ಹಣವನ್ನು ಶಾಪಿಂಗ್‌ಗೆ ಬಳಸ್ತಿದ್ದ ಪಾಪಿ!
ಹಳೆಯ ಪಿಂಚಣಿ ಪದ್ಧತಿ ತೆಗೆದು ಹಾಕಿ ರಾಷ್ಟ್ರೀಯ ಪಿಂಚಣಿ ಪದ್ಧತಿಯನ್ನು ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಇದರಲ್ಲಿ ಮೂಲ ವೇತನದ ಶೇ.10 ಭಾಗವನ್ನು ತನ್ನ ಪಾಲಿನ ರೂಪದಲ್ಲಿ ಪಿಂಚಣಿಗೆಂದು ಕೇಂದ್ರ ಸರ್ಕಾರ ಹಾಗೂ ಶೇ.14ಷ್ಟು ತಮ್ಮ ಪಾಲನ್ನು ರಾಜ್ಯಗಳು ನೀಡುತ್ತವೆ. ಇನ್ನು ಹಳೆಯ ಪಿಂಚಣಿ ಪದ್ಧತಿ ಪ್ರಕಾರ ನಿವೃತ್ತಿ ಅವಧಿಯ ವೇತನದ ಶೇ.50ರಷ್ಟನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ಜತೆಗೆ ವರ್ಷದಿಂದ ವರ್ಷಕ್ಕೆ ಡಿಎ ಹೆಚ್ಚಳ ಸೌಲಭ್ಯವೂ ಇದಕ್ಕೆ ಲಭಿಸಲಿದೆ.
ಇದನ್ನೂ ಓದಿ: ಅಟಲ್ ಪಿಂಚಣಿ ಯೋಜನೆ ನೋಂದಣಿಯಲ್ಲಿ ಶೇ.20ರಷ್ಟು ಏರಿಕೆ; 5.2 ಕೋಟಿಗಿಂತಲೂ ಅಧಿಕ ಜನರು ಸೇರ್ಪಡೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.