ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ

By Kannadaprabha NewsFirst Published Dec 4, 2020, 10:55 AM IST
Highlights

ಎಚ್‌ಡಿ ಎಫ್ ಸಿ ಬ್ಯಾಂಕ್ ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ ... ಆರ್‌ಬಿಐ ಕೆಲವೊಂದು ನಿರ್ಬಂಧವನ್ನು ವಿಧಿಸಿದೆ.. ಏನದು

ಮುಂಬೈ/ ನವದೆಹಲಿ (ಡಿ.04):  ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಎಂಬ ಹೆಗ್ಗಳಿಕೆ ಪಡೆದಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೊಸ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸದಂತೆ ಹಾಗೂ ಹೊಸ ಡಿಜಿಟಲ್‌ ಬ್ಯಾಂಕಿಂಗ್‌ ಚಟುವಟಿಕೆಗಳನ್ನು ಆರಂಭಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ತಾತ್ಕಾಲಿಕ ತಡೆ ನೀಡಿದೆ. ಆರ್‌ಬಿಐ  ಈ ನಿರ್ಬಂಧ ವಿಧಿಸಿದ್ದು, ಗುರುವಾರ ಈ ಕುರಿತು ಷೇರು ಮಾರುಕಟ್ಟೆಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾಹಿತಿ ನೀಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕಿನ ಇಂಟರ್ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಹಾಗೂ ಇತರ ಪಾವತಿಗಳೂ ಸೇರಿದಂತೆ ಡಿಜಿಟಲ್‌ ಬ್ಯಾಂಕಿಂಗ್‌ ಚಾನಲ್‌ಗಳಲ್ಲಿ ಇತ್ತೀಚೆಗೆ ಇದ್ದಕ್ಕಿದ್ದಂತೆ ಸೇವೆ ಸ್ಥಗಿತಗೊಂಡಿದ್ದ ಕಾರಣಕ್ಕೆ ಹಾಗೂ ಆ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಕ್ರಮ ಕೈಗೊಂಡಿದೆ. ಬ್ಯಾಂಕೊಂದರ ವಿರುದ್ಧ ಇಂತಹ ಕಾರಣಕ್ಕೆ ಈ ರೀತಿಯ ನಿರ್ಬಂಧವನ್ನು ಆರ್‌ಬಿಐ ಹೇರುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ನ.21ರಂದು ಉಂಟಾಗಿದ್ದ ಸೇವೆ ಸ್ಥಗಿತದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಕ್ರಮ ಕೈಗೊಂಡಿದ್ದು, ವಿದ್ಯುತ್‌ ನಿಲುಗಡೆಯಿಂದ ಹಾಗಾಗಿತ್ತು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಸ್ಪಷ್ಟನೆ ನೀಡಿದೆ.

ಚಿನ್ನದ ದರ ಮತ್ತೆ ಏರಿಕೆ, ಗ್ರಾಹಕರಿಗೆ ಕಹಿ: ಇಲ್ಲಿದೆ ಇಂದಿನ ಗೋಲ್ಡ್ ರೇಟ್! ...

ಎಚ್‌ಡಿಎಫ್‌ಸಿ ಬಾಂಕ್‌ ‘ಡಿಜಿಟಲ್‌ 2.0’ ಹೆಸರಿನಲ್ಲಿ ಹೊಸ ಚಟುವಟಿಕೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಂಡಿತ್ತು. ಅದಕ್ಕೀಗ ತಾತ್ಕಾಲಿಕ ತಡೆ ಬಿದ್ದಿದ್ದು, ನಿರ್ಬಂಧ ಎಲ್ಲಿಯವರೆಗೆ ಇರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 3ರಿಂದ 6 ತಿಂಗಳವರೆಗೆ ನಿರ್ಬಂಧ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಆರ್‌ಬಿಐನ ನಿರ್ಬಂಧದಿಂದ ಹಾಲಿ ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಹಾಗೂ ಡಿಜಿಟಲ್‌ ಬ್ಯಾಂಕಿಂಗ್‌ ಸೌಕರ್ಯಗಳ ಬಳಕೆದಾರರಿಗೆ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಹೇಳಿಕೊಂಡಿದೆ.

click me!